Friday, September 20, 2024

ಪ್ರಾಯೋಗಿಕ ಆವೃತ್ತಿ

ಕಣ್ಣೀರು ಮತ್ತು ಸುಳ್ಳಿನ ಆಟ ನಡೆಯದು: ಪಿ.ಎಂ.ನರೇಂದ್ರಸ್ವಾಮಿ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಣ್ಣೀರು ಮತ್ತು ಸುಳ್ಳಿನ ಆಟ ನಡೆಯದು. ಕಳೆದ ಚುನಾವಣೆಯಲ್ಲಿ ಯಾರು ಯಾವ ಸುಳ್ಳು ಹೇಳಿದ್ದಾರೆಂದು ಈಗಾಗಲೇ ಕ್ಷೇತ್ರದ ಜನರಿಗೆ ತಿಳಿದಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವದಿಸಬೇಕೆಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಮನವಿ ಮಾಡಿದರು.

ಮಳವಳ್ಳಿ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನರೇ ತೀರ್ಮಾನಿಸಲಿ

ಅಧಿಕಾರ ಪಡೆದರೆ ಸಾಧನೆಯ ಗುರುತನ್ನು ಉಳಿಸುವಂತೆ ಯೋಜನೆಗಳನ್ನು ತಂದು ಕ್ಷೇತ್ರವನ್ನು ಅಭಿವೃದ್ದಿಗೊಳಿಸಬೇಕು. ಇಲ್ಲದಿದ್ದರೇ ಏನು ಪ್ರಯೋಜನವಾಗುವುದಿಲ್ಲ. ಕಳೆದ 5 ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಯಾವ ರೀತಿ ಅಧೋಗತಿಗೆ ಇಳಿದಿದೆ ಎಂಬುದನ್ನು ಜನರು ನೆನೆಪಿಸಿಕೊಳ್ಳಲಿ. ನೀರಾವರಿ ಯೋಜನೆಗಳು ಹಳ್ಳ ಹಿಡಿದಿರುವ ಬಗ್ಗೆ ಜನರೇ ತೀರ್ಮಾನ ಮಾಡಲಿ ಎಂದರು.

ನನ್ನ ಹತ್ತು ವರ್ಷಗಳ ಅವಧಿಯಲ್ಲಿ ಹಲವಾರು ಯೋಜನೆಗಳನ್ನು ತಂದು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ದಿಗೊಳಿಸಿರುವ ಹೆಮ್ಮೆ ನನಗಿದೆ‌. ನಾನು ದುಡಿದ ದುಡಿಮೆ ಜನಸಾಮಾನ್ಯರ ಮನಸ್ಸಿನಲ್ಲಿದೆ ಎಂದ ಅವರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷ ಸಂಘಟನೆಗೆ ಮುಂದಾಗಬೇಕೆಂದು ಸಲಹೆ ನೀಡಿದರು.

ಉತ್ತಮರ ಆಯ್ಕೆ ಮಾಡಿ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸ್ವಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಿಸಲು ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷ ಸಂಘಟನೆಗೆ ಮುಂದಾಗಬೇಕು. ಕ್ಷೇತ್ರದ ಅಭಿವೃದ್ದಿಗಾಗಿ ಉತ್ತಮರನ್ನು ಆಯ್ಕೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದರು.

ಪಕ್ಷ ಗಟ್ಟಿಗೊಳಿಸಿ

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಕಾಂಗ್ರೆಸ್ ನಾಯಕರು ಸೋತರೂ, ಧೃತಿಗೆಡದೇ ಪಕ್ಷ ಸಂಘಟನೆ ಮಾಡಿದ್ದಾರೆ. ಪಕ್ಷ ಸಂಘಟನೆಯಲ್ಲಿ ಹಿಂದೆ ಬಿದ್ದಿಲ್ಲ ಎನ್ನುವುದಕ್ಕೆ ವಿಧಾನ ಪರಿಷತ್ ಚುನಾವಣೆಗಳು ಸಾಕ್ಷಿಯಾಗಿವೆ.

ಕಳೆದ ನಾಲ್ಕೂವರೆ ವರ್ಷದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಮಂಡ್ಯ ಜಿಲ್ಲಾದ್ಯಂತ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ಮುಂದಾಗಿದ್ದೇವೆ. ಮೈಸೂರು ಭಾಗದಲ್ಲಿ ಇನ್ನೂ ಹೆಚ್ಚಿನ ಪಕ್ಷ ಸಂಘಟನೆ ಅವಶ್ಯಕತೆ ಇರುವುದರಿಂದ ಕಾರ್ಯಕರ್ತರು ಮತ್ತು ಮುಖಂಡರು ಯಾವುದೇ ಭಿನ್ನಾಭಿಪ್ರಾಯಗಳಿಗೆ ಒಳಗಾಗದೇ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸಲು ಮುಂದಾಗಬೇಕೆಂದು ಕರೆ ನೀಡಿದರು.

ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಎಸ್‌ಸಿ,ಎಸ್‌ಟಿ ಘಟಕದ ಜಿಲ್ಲಾಧ್ಯಕ್ಷ ಸುರೇಶ್ ಕಂಠಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿಶ್ವಾಸ್, ಹಿರಿಯ ಕಾಂಗ್ರೆಸ್ ಮುಖಂಡ ಅಜ್ಜಹಳ್ಳಿ ರಾಮಕೃಷ್ಣ, ಟಿಎಪಿಸಿಎಂಎಸ್ ನಿರ್ದೇಶಕ ಬಸವೇಶ್ ಸೇರಿದಂತೆ ಶೆಟ್ಟಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಮುಖಂಡರು,ಕಾರ್ಯಕರ್ತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!