Friday, November 20, 2026

ಪ್ರಾಯೋಗಿಕ ಆವೃತ್ತಿ

ಪೌರ ಸೇನಾನಿಗಳಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು: ಬಿ.ಎಸ್.ಶಿವಣ್ಣ

ನಾಗರಿಕ ಸಮಾಜದ ಕೊಳಕನ್ನು ಸ್ವಚ್ಛ ಮಾಡುವ ಪೌರ ಸೇನಾನಿಗಳ ಋಣದಲ್ಲಿ ನಾವಿದ್ದೇವೆ. ಅವರ ಋಣ ತೀರಿಸಬೇಕಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವರಿಗೆ ಪ್ರತ್ಯೇಕ ಮೀಸಲಾತಿಯನ್ನು ಕಲ್ಪಿಸಬೇಕು ಎಂದು ಡಾ.ರಾಮ ಮನೋಹರ ಲೋಹಿಯಾ ವಿಚಾರ ವೇದಿಕೆಯ ಅಧ್ಯಕ್ಷ ದಡದಪುರ ಬಿ.ಎಸ್.ಶಿವಣ್ಣ ತಿಳಿಸಿದರು.

ಮಳವಳ್ಳಿ ಪಟ್ಟಣದ ಬಸವಲಿಂಗಪ್ಪ ನಗರದಲ್ಲಿ ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ವತಿಯಿಂದ ಮಳವಳ್ಳಿ ತಾಲ್ಲೂಕಿನ ಎಲ್ಲಾ ಪೌರ ಸೇನಾನಿಗಳಿಗೆ ತಲಾ ಒಂದು ಲಕ್ಷ ರೂ. ವೆಚ್ಚದ ಉಚಿತ ಎಲ್ಐಸಿ ಬಾಂಡ್ ವಿತರಿಸಿ ಅವರ ಮಾತನಾಡಿದರು.

ಸಮಾಜದ ಆರೋಗ್ಯ ಕಾಪಾಡುವ ಪೌರ ಸೇನಾನಿಗಳು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಸಮಾಜದ ಕೊಳಕನ್ನು ಸ್ವಚ್ಛ ಮಾಡುತ್ತಾರೆ. ಪೌರ ಸೇನಾನಿಗಳು ನಿಜವಾದ ದೇವರು. ಪ್ರಧಾನಿ ನರೇಂದ್ರ ಮೋದಿ ಅವರು,ಚುನಾವಣೆ ಸಂದರ್ಭದಲ್ಲಿ ಪೌರ ಕಾರ್ಮಿಕರ ಪಾದಪೂಜೆ ಮಾಡುವ ಬದಲು ಪೌರಕಾರ್ಮಿಕರಿಗೆ ಪ್ರತ್ಯೇಕ ಮೀಸಲಾತಿಯನ್ನು ನೀಡಬೇಕು. ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪೌರಕಾರ್ಮಿಕ ಸೇನಾನಿಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿ ಅವರು ಆರಿಸಿ ಬರುವಂತೆ ಮಾಡಿದಾಗ ಮಾತ್ರ ಬಸವಣ್ಣನವರ ಸಮ ಸಮಾಜದ ನಿರ್ಮಾಣದ ಕನಸು ನನಸಾಗುತ್ತದೆ ಎಂದರು.

ವೃತ್ತಿ ಕಾಯಂ ಆಗಲಿ

ಸಮಾಜದ ಕೊಳಕನ್ನು ಸ್ವಚ್ಛ ಮಾಡುವ ಪೌರ ಸೇನಾನಿಗಳು ದೇವತಾ ಮನುಷ್ಯರು. ಎಲ್ಲಾ ಧರ್ಮಗಳಿಗಿಂತ ಮಾನವ ಧರ್ಮ ದೊಡ್ಡದು. ಹಾಗಾಗಿ ಪೌರಕಾರ್ಮಿಕರಿಗೆ ಪ್ರತ್ಯೇಕ ಮನೆ, ಜಮೀನು, ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಬೇಕು. ದೇವರಾಜ ಅರಸು ಅವರು ಸಿಎಂ ಆಗಿದ್ದಾಗ ತಲೆಯ ಮೇಲೆ ಮಲ ಹೊರುವ ಪದ್ದತಿ ನಿಷೇಧ ಮಾಡಿದರು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಗುತ್ತಿಗೆ ಪದ್ಧತಿ ರದ್ದು ಮಾಡಿ, ನೇರ ಪಾವತಿ ವ್ಯವಸ್ಥೆ ಜಾರಿಗೆ ತಂದರು. ಸರ್ಕಾರಗಳು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಸಮಾಜದ ಆರೋಗ್ಯವನ್ನು ಕಾಪಾಡುವ ಪೌರಕಾರ್ಮಿಕರ ವೃತ್ತಿಯನ್ನು ಖಾಯಂ ಮಾಡಬೇಕು ಎಂದರು.

ಉಚಿತ ಶಿಕ್ಷಣ ನೀಡಲಿ

ಪೌರ ಕಾರ್ಮಿಕರ ಮಕ್ಕಳಿಗೆ ಒಂದನೇ ತರಗತಿಯಿಂದ ಪದವಿವರೆಗೂ ಉಚಿತ ಶಿಕ್ಷಣ ನೀಡಬೇಕು. ಕೇಂದ್ರೀಯ ವಿದ್ಯಾಲಯ, ಐಐಟಿ ಗಳಲ್ಲಿ ಪೌರಕಾರ್ಮಿಕರ ಮಕ್ಕಳಿಗೆ ಮೀಸಲಾತಿ ಕಲ್ಪಿಸಬೇಕು. ಮೆಡಿಕಲ್, ಇಂಜಿನಿಯರಿಂಗ್, ಐಐಟಿ ಮತ್ತಿತರ ಪದವಿವರೆಗೆ ಉಚಿತ ಶಿಕ್ಷಣ ನೀಡಲು ಅವಕಾಶ ಕಲ್ಪಿಸಬೇಕು. ಆಗ ನಿಜವಾದ ಶಿಕ್ಷಣ ಕ್ರಾಂತಿ ಆಗುತ್ತದೆ. ನಮ್ಮ ವೇದಿಕೆ ವತಿಯಿಂದ 16,200 ಮಕ್ಕಳಿಗೆ ಆರೋಗ್ಯ ಕಿಟ್ ವಿತರಿಸಲಾಗಿದೆ. ಕೊರೊನಾ ಸಂದರ್ಭದಲ್ಲಿ ಬಡವರು, ಅಂಗವಿಕಲರು ಸೇರಿದಂತೆ 200 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಗಿದೆ. 1000 ಮನೆಗಳಿಗೆ ಗ್ಯಾಸ್ ಸಂಪರ್ಕ ಹಾಗೂ ಶೌಚಾಲಯ ನಿರ್ಮಾಣ ಮಾಡಿಕೊಡಲಾಗಿದೆ ಎಂದರು.

ಪವಿತ್ರವಾದ ಕೆಲಸ

ಮಾಜಿ ಮಹಾಪೌರ ನಾರಾಯಣ್ ಮಾತನಾಡಿ , ಸಮಾಜದ ಕಟ್ಟಕಡೆಯ ಜನರಾದ ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಸಮಾಜದ ಆರೋಗ್ಯವನ್ನು ಕಾಪಾಡುವ ಮೂಲಕ ತಮ್ಮ ಜೀವನವನ್ನು, ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಸ್ವಚ್ಚಗೊಳಿಸುವ ಕಾಯಕದಲ್ಲಿ ತೊಡಗಿರುವ ಪೌರ ಕಾರ್ಮಿಕರು ಸರಾಸರಿ ವಯಸ್ಸು ಕೇವಲ 50 ವರ್ಷವಾಗಿದೆ. ಇಂತಹ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ರಾಮ ಮನೋಹರ ವಿಚಾರ ವೇದಿಕೆ ವತಿಯಿಂದ ಎಲ್ಐಸಿ ಬಾಂಡ್ ವಿತರಣೆ ಮಾಡುತ್ತಿರುವುದು ಪವಿತ್ರವಾದ ಕೆಲಸ ಎಂದರು.

ವಕೀಲ ಶತಬಿಷ್ ಮಾತನಾಡಿ, ನಮ್ಮ ತಂದೆಯವರು ಮಾಡುತ್ತಿರುವ ಸಮಾಜ ಸೇವೆಯನ್ನು ನಾನೂ ಕೂಡ ಮುಂದುವರೆಸಿಕೊಂಡು ಹೋಗುತ್ತೇನೆ.ಬಡವರ ಕಾನೂನು ಸಮಸ್ಯೆಗಳನ್ನು ಉಚಿತವಾಗಿ ಬಗೆಹರಿಸಿಕೊಡುತ್ತೇನೆ ಎಂದರು.

ವೇದಿಕೆಯಲ್ಲಿ ಟಿ. ಮಾರ, ಮಂಜು ಪಿ, ಮಾರಮ್ಮ, ಶಿವಣ್ಣ, ಕಾಂತರಾಜು ,ಟಿ.ಎಂ ಪ್ರಕಾಶ್ ಸೇರಿದಂತೆ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ