ಮಂಡ್ಯ ನಗರದಲ್ಲಿ ಮಳೆಯಿಂದಾಗಿ ಪ್ರಮುಖ ಸಂಪರ್ಕ ರಸ್ತೆಗಳು ಗುಂಡಿ ಬಿದ್ದಿರುವ ಹಿನ್ನಲೆಯಲ್ಲಿ ಇಂದು ಬಿಜೆಪಿ ಯುವ ನಾಯಕ ಅಶೋಕ್ ಜಯರಾಮ್ ಗುಂಡಿ ಮುಚ್ಚಿಸುವ ಅಭಿಯಾನ ಆರಂಭಿಸಿದರು.
ಮಂಡ್ಯ ನಗರದ ಹೊಸಹಳ್ಳಿಯಲ್ಲಿ ಗುಂಡಿ ಬಿದ್ದ ರಸ್ತೆಗಳಿಗೆ ವೆಟ್ ಮಿಕ್ಸ್ ಹಾಕಿ ಗುಂಡಿ ಮುಚ್ಚುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ್ ಜಯರಾಮ್, ಅತಿ ಹೆಚ್ಚು ಮಳೆಯಿಂದಾಗಿ ನಗರದ ಎಲ್ಲಾ ಬಹುತೇಕ ರಸ್ತೆಗಳು ಗುಂಡಿ ಬಿದ್ದಿವೆ. ಇದರಿಂದ ಸಾರ್ವಜನಿಕರು ರಸ್ತೆಗಳಲ್ಲಿ ಓಡಾಡಲು ತೀವ್ರ ತೊಂದರೆಯಾಗಿದೆ. ಈ ಹಿನ್ನಲೆಯಲ್ಲಿ ನಾವು ಬಿಜೆಪಿ ನಗರ ಘಟಕದ ವತಿಯಿಂದ ಇಂದು ರಸ್ತೆ ಗುಂಡಿ ಮುಚ್ಚಿಸುತ್ತಿದ್ದೇವೆ. ಈ ಅಭಿಯಾನವನ್ನು ಇಡೀ ನಗರದಾದ್ಯಂತ ಮಾಡಲು ಪಣ ತೊಟ್ಟಿದ್ದೇವೆ. ನಮ್ಮ ಈ ಪ್ರಯತ್ನಕ್ಕೆ ಜನರು ಕೂಡ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ರಾಜಕೀಯವಾಗಿ ಯಾರದು ಸರಿ, ಯಾರದು ತಪ್ಪು ಎಂದು ನಾನು ಈ ಸಂದರ್ಭದಲ್ಲಿ ಮಾತನಾಡಲು ಹೋಗುವುದಿಲ್ಲ. ಯಾವುದೇ ಸಾರ್ವಜನಿಕ ಸಮಸ್ಯೆಗಳು ಬಂದಾಗ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎನ್ನುವ ಸಂಕಲ್ಪದಿಂದ ಈ ಕೆಲಸಕ್ಕೆ ಕೈ ಹಾಕಿದ್ದೇವೆ ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ವಿವೇಕ್ ಮಾತನಾಡಿ, ಇಂದು ಹೊಸಹಳ್ಳಿ ವೃತ್ತದಿಂದ ಬಿಸಿಲು ಮಾರಮ್ಮ ದೇವಸ್ಥಾನ, ಮಾರಿಗುಡಿಯವರೆಗೆ ಗುಂಡಿ ಬಿದ್ದ ರಸ್ತೆಗಳನ್ನು ವೆಟ್ ಮಿಕ್ಸ್ ಹಾಕಿ ಮುಚ್ಚಲಾಗುತ್ತಿದೆ ಎಂದರು.
ಹೊಸಹಳ್ಳಿ ಶಿವು ಮಾತನಾಡಿ, ಮಂಡ್ಯ ನಗರಸಭೆ, ಲೋಕೋಪಯೋಗಿ ಇಲಾಖೆ ಮಾಡಬೇಕಾದ ಕೆಲಸವನ್ನು ಅಶೋಕ್ ಜಯರಾಮ್ ಮಾಡಿಸುತ್ತಿದ್ದಾರೆ. ಅಧಿಕಾರಿಗಳಿಗೆ ನಾಚಿಕೆಯಾಗಬೇಕು. ಶೀಘ್ರವಾಗಿ ರಸ್ತೆ ಸರಿ ಮಾಡದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.




