ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿ ಜಿ.ಪಂ.ಮಾಜಿ ಸದಸ್ಯ ಗುರುಚರಣ್ ಒಬ್ಬರೇ ಎಂದು ಜನರು ಅಂದು ಕೊಳ್ಳುತ್ತಿರುವ ಸಮಯದಲ್ಲಿ ಸದ್ದಿಲ್ಲದೆ ನಾವೂ ಕೂಡ ಕೈ ಟಿಕೆಟ್ ಆಕಾಂಕ್ಷಿಗಳೆಂದು ಮತ್ತಿಬ್ಬರು ನಾಮಪತ್ರ ಸಲ್ಲಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಮಾಜಿ ಬಿ.ರಾಮಕೃಷ್ಣ ಹಾಗೂ ಕಾಂಗ್ರೆಸ್ ಮುಖಂಡ ಶಂಕರೇಗೌಡ ಅವರಿಬ್ಬರೂ ಸಹ ಅರ್ಜಿ ಹಾಕಿದ್ದು ಕುತೂಹಲ ಮೂಡಿಸಿದೆ.
ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗುರುಚರಣ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ಹಿಂದೆ ಘೋಷಣೆ ಮಾಡಿದ್ದರು. ಆದರೆ ಕಾಂಗ್ರೆಸ್ ಟಿಕೆಟ್ ಗೆ ಅರ್ಜಿ ಸಲ್ಲಿಸಿ ವಿಧಾನ ಪರಿಷತ್ ಸದಸ್ಯ ಬಿ.ರಾಮಕೃಷ್ಣ ಕೂಡ ಅರ್ಜಿ ಸಲ್ಲಿಸಿರುವುದು ಹಲವರ ಹುಬ್ಬೇರಿಸಿದೆ.
ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಆಪ್ತರಾದ ಬಿ.ರಾಮಕೃಷ್ಣ ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ದಿನೇಶ್ ಗೂಳಿಗೌಡರಿಗೆ ಸ್ಥಾನ ಬಿಟ್ಟು ಕೊಟ್ಟಿದ್ದರು. ಈಗ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿ ಅರ್ಜಿ ಸಲ್ಲಿಸುವ ಮೂಲಕ ಗುರುಚರಣ್ ಅವರ ಜೊತೆ ಟಿಕೆಟ್ ಗಾಗಿ ಗುದ್ದಾಟ ನಡೆಸಿದ್ದಾರೆ. ಹಾಗೆಯೇ ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ ವಳಗೆರಹಳ್ಳಿಯ ದಿವಂಗತ ವಿ.ಸಿ.ಬೋರೇಗೌಡರ ಕುಟುಂಬದ ಕುಡಿ ವಿ.ಸಿ.ಶಂಕರೇಗೌಡ ಕೂಡ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಹೋದರ ಎಸ್.ಎಂ.ಶಂಕರ್ ಅವರ ಪುತ್ರ ಗುರುಚರಣ್, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ ಹಾಗೂ ವಿ.ಸಿ.ಶಂಕರೇಗೌಡ ಈ ಮೂವರ ಪೈಕಿ ಮದ್ದೂರು ಕ್ಷೇತ್ರದ ಟಿಕೆಟ್ ಯಾರಿಗೆ ದಕ್ಕಲಿದೆ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ.




