Thursday, September 19, 2024

ಪ್ರಾಯೋಗಿಕ ಆವೃತ್ತಿ

ದೇಹದಾನದ ಮೂಲಕ ಆದರ್ಶವಾದ ಸತ್ಯಕ್ಕ…

✍️ ಅರ್ನಾಕಲಿ ಸಲೀಂ


  • ”ಗೆದ್ದೇ ಗೆಲ್ಲುವೆನು ಒಂದು ದಿನ” ಎಂಬ ಪುಸ್ತಕ ಹೊರ ತಂದಿದ್ದ ಲೇಖಕಿ

  • ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅನುಪಮ ಅವರ ಸಹೋದರಿ ಸತ್ಯಭಾಮ

”ಗೆದ್ದೇ ಗೆಲ್ಲುವೆನು ಒಂದು ದಿನ” ಎಂಬ ಪುಸ್ತಕವನ್ನು ಪ್ರಕಟಿಸಿ, ಆ ಗೆಲುವಿನ ಕನಸಿನ ಹಿಂದಿನ ನೋವು, ನರಳಾಟವನ್ನು, ಆ ನೋವಿನಲ್ಲು ಮತ್ತೊಬ್ಬರಿಗೆ ಸ್ಪೂರ್ತಿಯಾಗುವ, ಮಾರ್ಗದರ್ಶನವಾಗುವ ಮಾಹಿತಿಗಳನ್ನು ನೀಡಿ ಸದಾ ಉತ್ಸಾಹದ ಬುಗ್ಗೆಯಾಗಿ, ಸಂತಸದ ಚಿಲುಮೆಯಾಗಿ ಪರಿಚಿತರೆಲ್ಲರ ಮುದ್ದಿನ ಮುಗ್ಧ ಸತ್ಯಕ್ಕಳಾಗಿ ಅಪಾರ ಬಂಧು ಬಳಗ ಸಂಪಾದಿಸಿಕೊಂಡಿದ್ದ ಮಂಡ್ಯದ ಸತ್ಯಕ್ಕ, ಸತ್ಯಭಾಮ ನಿಸರ್ಗ ಕೊನೆಗೂ ಇಹದ ಬದುಕಿಗೆ ವಿದಾಯ ಹೇಳಿ ನಮ್ಮನ್ನು ಸಹ ನೋವಿಗೆ ದೂಡಿದ್ದಾರೆ. ಸತ್ಯಕ್ಕ ನಿಮಗಿದೋ ನಮ್ಮ ಭಾವಪೂರ್ಣ ಶ್ರದ್ಧಾಂಜಲಿ, ಭಾಷ್ಪಾಂಜಲಿ.

ಸತ್ಯಕ್ಕ ಮೊದಲಿಗೆ ನನಗೆ ಪರಿಚಯವಾಗಿದ್ದೆ ಫೇಸ್ ಬುಕ್ ಮೂಲಕ, ನನ್ನ ಚಿರಪರಿಚಿತ ಸಾಧಕರಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅನುಪಮ ಅವರ ಸಹೋದರಿ ಎಂಬುದೇ ನನಗೆ ಗೊತ್ತಿರಲಿಲ್ಲ

ಹಲವು ವರ್ಷದ ನಂತರ ಇವರನ್ನು ಭೇಟಿ ಮಾಡಲು ಉದ್ದೇಶಿಸಿ, ಇವರು ಎಲ್ಲಿ ಸಿಗಬಹುದೆಂದು ಆರೋಗ್ಯ ಇಲಾಖೆಯಲ್ಲೇ ಇದ್ದ ಅನುಪಮ ಅಕ್ಕನನ್ನು ಕೇಳಿದಾಗ ಮದ್ದೂರು ತಾಲ್ಲೂಕಿನ ಕೊಪ್ಪದಲ್ಲಿ ಲ್ಯಾಬೋರೇಟರಿ ಇದ್ದು ಅಲ್ಲಿ ಸಿಗುವರೆಂದು ತಿಳಿಯಿತು. ಆಗ ನಾನು ಮಂಡ್ಯ ಡಿಎಚ್ಓ ಕಚೇರಿಯ ಮಲೇರಿಯಾ ವಿಭಾಗದಲ್ಲಿ ಜಿಲ್ಲಾ ಮೇಲ್ವಿಚಾರಕನಾಗಿದ್ದೆ. ಕರ್ತವ್ಯ ನಿಮಿತ್ತ ಕೊಪ್ಪ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದಾಗ ಅಲ್ಲೇ ಎದುರಲ್ಲೇ ಇದ್ದ ಸತ್ಯಕ್ಕನವರ ಲ್ಯಾಬ್ ಗೂ ಹೋಗಿ ಮುಖತಃ ಭೇಟಿ ಮಾಡಿದೆ. ನಂತರ ಅವರೊಂದಿಗೆ ಹೆಚ್ಚು ಮಾತನಾಡುವ ಅವಕಾಶವೂ ದೊರೆಯಿತು. ಕೊಪ್ಪ ಕೌಡ್ಲೆ ಬೆಕ್ಕಳಲೆ ಭಾಗಕ್ಕೆ ಹೋದಾಗಲೆಲ್ಲ ಸತ್ಯಕ್ಕನವರ ಲ್ಯಾಬ್ ಗೆ ಹೋಗಿ ಬರುತ್ತಿದ್ದೆ.

ಎಲ್ಲರ ಪ್ರೀತಿಯ ಸತ್ಯಕ್ಕನಿಗೆ ಕಾಡಿದ ಕ್ಯಾನ್ಸರ್, ಗೆದ್ದೇ ಗೆಲ್ಲುವೆನು ಒಂದು ದಿನ ಎಂಬ ಭರವಸೆಯನ್ನು ಅವರಿಂದಲೇ ಮೂಡಿಸಿ ಅವರನ್ನು ನಮ್ಮಿಂದ ದೂರ ಸೆಳೆದಿದೆ. ಸತ್ಯಕ್ಕನ ಕ್ಯಾನ್ಸರ್ ಬದುಕಿನ ನೋವಿನ ಹೋರಾಟದ ಅನುಭವದ ಮಾತುಗಳು ಕಣ್ಣೀರು ತರಿಸಿದ್ದು ಉಂಟು.

ಆರೋಗ್ಯ ಕ್ಷೇತ್ರದಲ್ಲಿ ವೃತ್ತಿ ನಿರ್ವಹಿಸಿ, ಆರೋಗ್ಯದ ಮಹತ್ವ ಅರಿತಿದ್ದ ಸತ್ಯಕ್ಕ ಆರೋಗ್ಯದ ಅಧ್ಯಯನದ ಉದ್ದೇಶದಿಂದ ತಮ್ಮ ದೇಹವನ್ನು ಮಂಡ್ಯ ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸುವ ನಿರ್ಧಾರ ಮಾಡಿದ್ದರು. ಅಂತೆಯೇ ಅವರ ಕುಟುಂಬದವರು ಸತ್ಯಕ್ಕನ ಹೋರಾಟದ ದೇಹವನ್ನು ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸಲು ಕ್ರಮ ವಹಿಸಿದ್ದಾರೆ.

ಸತ್ಯಕ್ಕ ನೀವಿನ್ನು ನಮಗೆ ನೆನಪು ಮಾತ್ರ. ಹೋಗಿ ಬನ್ನಿ, ನಿಮಗಿದೋ ನಮ್ಮ ಅಶ್ರುತರ್ಪಣ…

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!