Friday, September 20, 2024

ಪ್ರಾಯೋಗಿಕ ಆವೃತ್ತಿ

ನಾನೂ ರೌಡಿ ಶೀಟರ್, ನನಗೂ ಸ್ಥಾನ ಕೊಡುವಿರಾ : ಫ್ಲೆಕ್ಸ್‌ ಹಿಡಿದು ನಿಂತ ಪಾನಿಪುರಿ ಮಂಜ

ಕಾಂಗ್ರೆಸ್ ಗೆ ಬಿಜೆಪಿಯನ್ನು ರಾಜಕೀಯವಾಗಿ ಮಣಿಸಲು ಹಬ್ಬದೂಟ ಸಿಕ್ಕಿದಂಗಿದೆ. ಬಿಜೆಪಿ ಪಕ್ಷವೂ ಕಳೆದ ಕೆಲವು ತಿಂಗಳುಗಳಿಂದ ಹಲವಾರು ಟೀಕೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರಿಯಾಗುತ್ತಲೇ, ಮುಜುಗರ ಉಂಟಾಗುವ ಸಂಗತಿಗಳೇ ಜರುಗುತ್ತಿದೆ. ಇದು ದಿನೇ ದಿನೇ ಹೆಚ್ಚುತ್ತಲೇ ಇದೆ. 

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ನಡುವೆಯೇ ರೌಡಿ ಶೀಟರ್​ ಪಾಲಿಟಿಕ್ಸ್ ಸುದ್ದಿಯಾಗ ತೊಡಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ ರೌಡಿ ಶೀಟರ್‌ಗಳು ಸೇರ್ಪಡೆಯಾಗಿದ್ದು, ಪೇಸಿಎಂ ಅಭಿಯಾನದ ಯಶಸ್ಸಿನ ಬಳಿಕದ ಇದು ಕಾಂಗ್ರೆಸ್‌ಗೆ ಹೊಸ ಅಸ್ತ್ರವಾಗಿ ಸಿಕ್ಕಿದೆ.

ರೌಡಿ ಶೀಟರ್​ ಪಾಲಿಟಿಕ್ಸ್ ಭಾರೀ ವಿವಾದವಾಗಿರುವ ನಡುವೆಯೇ ಮೈಸೂರಿನಲ್ಲಿ ರೌಡಿ ಶೀಟರ್‌ ಆಗಿ ಗುರುತಿಸಿಕೊಂಡಿರುವ ಮಂಜು ಅಲಿಯಾಸ್ ಪಾನಿಪುರಿ ಮಂಜ ಎಂಬವ ‘ಬಿಜೆಪಿಗರೇ, ನಾನೂ ರೌಡಿ ಶೀಟರ್, ನನಗೂ ನಿಮ್ಮ ಪಕ್ಷದಲ್ಲಿ ಸ್ಥಾನ ಕೊಡುವಿರಾ?’ ಎಂದು ಸಾರ್ವಜನಿಕವಾಗಿ ಫ್ಲೆಕ್ಸ್  ಹಿಡಿದು ನಿಂತುಕೊಂಡು ಎಲ್ಲರ ಗಮನ ಸೆಳೆದಿದ್ದಾನೆ. ಜೊತೆಗೆ, ಬಿಜೆಪಿಗೆ ಮುಜುಗರ ಉಂಟು ಮಾಡಿದ್ದಾನೆ.

ಮಂಜು ಅಲಿಯಾಸ್ ಪಾನಿಪುರಿ ಮಂಜ ಎನ್ನುವ ರೌಡಿ ಶೀಟರ್ ನ್ಯಾಯಾಲಯದ ಮುಂಭಾಗದ ಗಾಂಧಿ ಪುತ್ಥಳಿ ಎದುರು ಶನಿವಾರ ಸಾರ್ವಜನಿಕರ ಗಮನ ಸೆಳೆದರು.

ಪಾನಿಪುರಿ ಮಂಜ ಹಿಡಿದಿದ್ದ ಬ್ಯಾನರ್‌ನಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ, ಸಿದ್ಧಗಂಗಾ ಸ್ವಾಮೀಜಿ, ಕನಕದಾಸ, ವಾಲ್ಮೀಕಿ, ಅಂಬೇಡ್ಕರ್ ಚಿತ್ರ ಕಂಡುಬಂದಿದೆ. ಗಣೇಶ ನಗರದ ನಿವಾಸಿಯಾಗಿರುವ ಈತ, 2013ರಲ್ಲಿ ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದ ಎಂದು ತಿಳಿದುಬಂದಿದೆ.

ಉದಯಗಿರಿ ಪೊಲೀಸರು ಮಂಜನ ಮೇಲೆ ರೌಡಿ ಶೀಟರ್ ಖಾತೆ ತೆರೆದಿದ್ದು, ಸದ್ಯ ಈತನನ್ನು ಕೆ ಆರ್ ಠಾಣೆ ಪೊಲೀಸರು ವಶಕ್ಕೆ ಪಡೆದರು. ಬಳಿಕ ಹೆಚ್ಚಿನ ವಿಚಾರಣೆ ಸಂಬಂಧ ಉದಯಗಿರಿ ಠಾಣೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಹೆಸರು ಬದಲಾಯಿಸಿ ಅದಾಗಲೇ ಬಿಜೆಪಿ ಸೇರಿದ್ದ ಇನ್ನೊಬ್ಬ ರೌಡಿ ಶೀಟರ್‌!

ಒಟ್ಟು 26 ಪ್ರಕರಣಗಳಲ್ಲಿ ರೌಡಿ ಶೀಟರ್ ಎಂದು ಗುರುತಿಸಿಕೊಂಡಿದ್ದವನೋರ್ವ, ಹೆಸರು ಬದಲಿಸಿ ಕಳೆದ ಮೇ ತಿಂಗಳಲ್ಲೇ ಬಿಜೆಪಿ ಸೇರಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಇದು ಸ್ವತಃ ಬಿಜೆಪಿಯವರಿಗೇ ಗೊತ್ತಿಲ್ಲ ಎಂಬುದು ವಿಶೇಷ!

ರೌಡಿಶೀಟರ್ ಬೆತ್ತನಗೆರೆ ಶಂಕರ ಎಂಬಾತ ತನ್ನ ಹೆಸರನ್ನು ‘ನಲ್ಲೂರು ಶಂಕರೇ ಗೌಡರು’ ಎಂದು ಬದಲಿಸಿಕೊಂಡು ಕಳೆದ ಮೇ ತಿಂಗಳಿನಲ್ಲಿಯೇ ಸೇರಿದ್ದ ವಿಷಯ ಈಗ ಹೊರಗೆ ಬಂದಿದೆ.

ಸಂಸದ ಪ್ರತಾಪ್ ಸಿಂಹ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಸಮ್ಮುಖದಲ್ಲಿಯೇ ಮೈಸೂರಿನಲ್ಲಿ ಬಿಜೆಪಿ ಸೇರಿದ್ದ ಎಂದು ತಿಳಿದುಬಂದಿದೆ. ಅಲ್ಲದೇ, ಕಳೆದ ರಾಮನವಮಿ ಉತ್ಸವದ ವೇಳೆ, ಬ್ಯಾನರ್ ಹಾಕಿ, ‘ಅಂತರಸಂತೆ ಜಿಲ್ಲಾ ಪಂಚಾಯಿತಿಯ ಬಿಜೆಪಿ ಮುಖಂಡ ಹಾಗೂ ಸಮಾಜ ಸೇವಕ’ ಎಂಬ ಪದನಾಮವನ್ನು ಹಾಕಿಕೊಂಡಿದ್ದ. ಈ ಮಧ್ಯೆ, ಬಿಜೆಪಿ ನಾಯಕರ ಜೊತೆಗಿದ್ದಾಗಿನ ಫೋಟೋಗಳು ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.

ರೌಡಿ ಶೀಟರ್ ಬೆತ್ತನಗೆರೆ ಶಂಕರನ ಮೇಲೆ ನೆಲಮಂಗಲ, ಮಾದನಾಯಕನಹಳ್ಳಿ ಹಾಗೂ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ. ಈತನ ಮೇಲೆ ಒಟ್ಟು 26 ಪ್ರಕರಣಗಳು ದಾಖಲಾಗಿದ್ದವು. ಸದ್ಯ ಇನ್ನು ಮೂರು ಕೊಲೆ ಪ್ರಕರಣಗಳು ಈತನ ಮೇಲಿವೆ. 26ರಲ್ಲಿ 23 ಪ್ರಕರಣಗಳಲ್ಲಿ ಖುಲಾಸೆಗೊಂಡಿರುವುದಾಗಿ ತಿಳಿದುಬಂದಿದೆ.

ಈ ಎಲ್ಲ ಬೆಳವಣಿಗೆಗಳು ಬೆಳಕಿಗೆ ಬಂದದ್ದು ಬೆಂಗಳೂರಿನಲ್ಲಿ ಕುಖ್ಯಾತ ರೌಡಿ ಶೀಟರ್‌ ಸೈಲೆಂಟ್‌ ಸುನೀಲ ಬಿಜೆಪಿ ನಾಯಕರ ಜೊತೆ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡ ಬಳಿಕ. ಈಗ ಇದುವೇ ಬಿಜೆಪಿಯ ವಿರುದ್ಧ ಕಾಂಗ್ರೆಸ್‌ ‘ರೌಡಿ ಶೀಟರ್‌ ಪಾಲಿಟಿಕ್ಸ್‌’ ನಡೆಸಲು ಅಸ್ತ್ರವಾಗಿ ದೊರಕಿದೆ.

ಕಾಂಗ್ರೆಸ್ ಹೊಸ ಅಭಿಯಾನವೊಂದನ್ನು ಆರಂಭಿಸಿ, ಇದನ್ನೇ ಆಧಾರವಾಗಿಟ್ಟುಕೊಂಡಿದೆ. ಬಿಜೆಪಿಗೆ ಕೌಂಟರ್‌ ನೀಡಲು ‘ಕಮಲ ಅಭ್ಯರ್ಥಿಗಳ ಪಟ್ಟಿ ಸೋರಿಕೆ’ ಮಾಡುವ ಮೂಲಕ ಕಾಂಗ್ರೆಸ್ ವಿನೂತನ ಅಭಿಯಾನ ಆರಂಭಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!