Thursday, September 19, 2024

ಪ್ರಾಯೋಗಿಕ ಆವೃತ್ತಿ

ಚನ್ನಪಟ್ಟಣ | ದಲಿತನ ಶವ ಸಂಸ್ಕಾರಕ್ಕೆ ಸವರ್ಣೀಯರ ನಿರಾಕರಣೆ : ಪ್ರತಿಭಟನೆ

ದಲಿತ ಸಮುದಾಯದ ವ್ಯಕ್ತಿಯೊಬ್ಬರ ಅಂತ್ಯ ಸಂಸ್ಕಾರ ಮಾಡಲು ಕೆಲವು ಸವರ್ಣೀಯರು ಅವಕಾಶ ನೀಡದ ಕಾರಣ, ತಹಶೀಲ್ದಾರ್ ಕಚೇರಿ ಎದುರು ಮೃತದೇಹ ಇಟ್ಟು ದಲಿತರು ಪ್ರತಿಭಟನೆ ನಡೆಸಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ. 

ಚನ್ನಪಟ್ಟಣ ತಾಲೂಕಿನ ಕೋಡಂಬಹಳ್ಳಿ ಗ್ರಾಮದ ದಲಿತ ಸಮುದಾಯದ ಜಯಣ್ಣ(47) ಮೃತಪಟ್ಟವರು. ಅವರ ಮೃತದೇಹವನ್ನು ಕೆರೆಯ ಪಕ್ಕದ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರಕ್ಕೆಂದು ಹೋದಾಗ ಕೆಲವು ಸವರ್ಣೀಯರು ಅವಕಾಶ ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಶವವನ್ನು ಚನ್ನಪಟ್ಟಣಕ್ಕೆ ಕೊಂಡೊಯ್ದ ಕುಟುಂಬ ಸದಸ್ಯರು ಮತ್ತು ದಲಿತ ಮುಖಂಡರು ತಾಲೂಕು ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಚನ್ನಪಟ್ಟಣ ಪಿಎಸ್‌ಐ ಮಮತಾ ಮಾತನಾಡಿ, “ಸ್ಥಳೀಯ ಸವರ್ಣೀಯರು ಕೆರೆಯ ಪಕ್ಕದ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರಕ್ಕೆ ನಿರಾಕರಿಸಿದ ಕಾರಣ ತಾಲೂಕು ಕಚೇರಿ ಎದುರು ಅಂತ್ಯ ಸಂಸ್ಕಾರಕ್ಕೆ ಮುಂದಾದರು. ಈ ವೇಳೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದೆವು. ತಹಶೀಲ್ದಾರರು ಬಂದು ಮಾತನಾಡಿದ ಬಳಿಕ ಪ್ರತಿಭಟನೆ ಅಂತ್ಯಗೊಂಡಿತು” ಎಂದು ತಿಳಿಸಿದರು.

ತಹಶೀಲ್ದಾರ್‌ ಸುದರ್ಶನ್‌ ಮಾತನಾಡಿ, “ಕೋಡಂಬಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಶವ ಸಂಸ್ಕಾರಕ್ಕೆ 1 ಎಕರೆ 10ಗುಂಟೆ ಜಾಗ ನೀಡಲಾಗಿದೆ. ಆದರೆ, ದಲಿತ ಸಮುದಾಯದವರು ʼಹಿಂದಿನಿಂದ ಕೆರೆಯ ಪಕ್ಕದಲ್ಲೇ ಅಂತ್ಯ ಸಂಸ್ಕಾರ ಮಾಡುತ್ತಿದ್ದೇವೆ. ನಮಗೆ ಇದೇ ಸ್ಥಳದಲ್ಲಿ ಸ್ಮಶಾನ ಬೇಕುʼ ಎಂದು ಪಟ್ಟುಹಿಡಿದರು. ಹಾಗಾಗಿ ಕೆರೆಯ ಪಕ್ಕದಲ್ಲಿಯೇ ಸ್ಮಶಾನಕ್ಕೆ ಸರ್ವೆ ಮಾಡಿಕೊಟ್ಟಿದ್ದೇವೆ” ಎಂದು ಮಾಹಿತಿ ನೀಡಿದರು.

ಘಟನೆ ಹಿನ್ನೆಲೆ

ದಲಿತ ಸಮುದಾಯದ ವ್ಯಕ್ತಿಯೊಬ್ಬರ ಅಂತ್ಯ ಸಂಸ್ಕಾರ ಮಾಡಲು ಕೆಲವು ಸವರ್ಣೀಯರು ಅವಕಾಶ ನೀಡುತ್ತಿಲ್ಲ ಎಂದು ಸಮುದಾಯದ ಕೆಲವು ಯುವಕರು ಶವವನ್ನು ತಾಲೂಕು ಕಚೇರಿಯ ಆವರಣದಲ್ಲೇ ಅಂತ್ಯ ಸಂಸ್ಕಾರ ಮಾಡಲು ಗುಂಡಿ ತೆಗೆಯಲು ಪ್ರಯತ್ನಿಸಿದರು. ಅವರನ್ನು ಸ್ಥಳೀಯ ಪೊಲೀಸರು ತಡೆದರು. ಅಧಿಕಾರಿಗಳ ಮನವೊಲಿಕೆಗೆ ಮಣಿಯದ ಕುಟುಂಬಸ್ಥರು ರಾತ್ರಿಯಾದರೂ ಮೃತದೇಹವನ್ನು ಕಚೇರಿ ಬಳಿಯಿಂದ ತೆರವುಗೊಳಿಸಲಿಲ್ಲ.

“ಹಲವು ವರ್ಷಗಳಿಂದಲೂ ಗ್ರಾಮದ ಕೆರೆಯ ಪಕ್ಕದ ಸ್ಮಶಾನದಲ್ಲಿ ದಲಿತ ಸಮುದಾಯದವರು ಅಂತ್ಯಸಂಸ್ಕಾರ ನಡೆಸುತ್ತಿದ್ದರು. ಇತ್ತೀಚಿಗೆ ಕೆಲವು ಸವರ್ಣೀಯ ವ್ಯಕ್ತಿಗಳು ಆ ಜಾಗ ಒತ್ತುವರಿ ಮಾಡಿಕೊಂಡು ಶವ ಸಂಸ್ಕಾರಕ್ಕೆ ಅವಕಾಶ ನೀಡುತ್ತಿಲ್ಲ” ಎಂದು ಪ್ರತಿಭಟನಕಾರರು ಆರೋಪಿಸಿದರು.

“ಪ್ರತ್ಯೇಕ ಸ್ಮಶಾನ ಜಾಗ ಸಿಗುವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ” ಎಂದು ಕುಟುಂಸ್ಥರು ಮತ್ತು ಸಮುದಾಯದವರು ಪಟ್ಟು ಹಿಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!