Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಗಳೂರು | ಸಿಕ್ಕ ₹10 ಲಕ್ಷ ದಲ್ಲಿ ₹3 ಲಕ್ಷ ಪಾಲು ಪಡೆದಿದ್ದ ‘ಅನಾಮಿಕ’

ಮಂಗಳೂರಿನಾದ್ಯಂತ ಈಗ ಕುಡುಕನೋರ್ವನಿಗೆ ರಸ್ತೆಯಲ್ಲಿ ಸಿಕ್ಕ ‘ಬೇನಾಮಿ ಹತ್ತು ಲಕ್ಷ’ ರೂಪಾಯಿಯದ್ದೇ ಸುದ್ದಿ. ಇದೇ ವಿಚಾರವಾಗಿ ಮತ್ತೊಂದು ಹೊಸ ಬೆಳವಣಿಗೆ ನಡೆದಿದೆ.

‘ನನಗೇನೂ ಕೊಡುವುದಿಲ್ಲವೇ? ಎಂದು ಕೇಳಿಕೊಂಡು ಕುಡುಕನಿಂದ ಪಾಲು ಪಡೆದುಕೊಂಡು ಹೋಗಿದ್ದ ‘ಅನಾಮಿಕ’ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ‘ಬೇನಾಮಿ ಹಣ’ ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನಿಗೆ ಸಿಕ್ಕ ಪಾಲು ಎಷ್ಟು ಗೊತ್ತಾ? ಬರೋಬ್ಬರಿ ಮೂರು ಲಕ್ಷ ರೂಪಾಯಿ.

ಹೌದು. ಈ ಮಾಹಿತಿಯನ್ನು ಸ್ವತಃ ಮಂಗಳೂರು ಪೊಲೀಸ್ ಕಮಿಷನರ್ ಅವರೇ ಮಾಧ್ಯಮಗಳಿಗೆ ನೀಡಿದ್ದಾರೆ.

‘ಬೇನಾಮಿ ಹಣ’ದ ಬಗ್ಗೆ ಡಿ.7(ಬುಧವಾರ)ರಂದು ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಮೂಲಕ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್, “ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪಂಪ್‌ವೆಲ್‌ನಲ್ಲಿ ನ.26 ರಂದು ಬಾಕ್ಸ್ ಮತ್ತು ಕವರ್‍‌ನಲ್ಲಿ ಶಿವರಾಜ್‌ಗೆ ಹಣ ಸಿಕ್ಕಿದೆ. ಸಿಕ್ಕಿದ್ದ ಹಣದ ಕಟ್ಟಿನಲ್ಲಿ ಸ್ಪಷ್ಟವಾಗಿ ಎಷ್ಟು ಹಣ ಇತ್ತು ಅಂತ ಯಾರಿಗೂ ಗೊತ್ತಿಲ್ಲ. ಹಣ ಸಿಕ್ಕಿದ್ದ ಶಿವರಾಜ್, ಖಾಸಗಿ ಬಸ್‌ಗಳ ಕ್ಲೀನಿಂಗ್, ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ. ಕುಡಿದು ಮಲಗೋದು ಆತನ ದಿನ ನಿತ್ಯದ ಕೆಲಸ ಎಂದು ಆತನನ್ನು ವಿಚಾರಿಸಿದಾಗ ತಿಳಿದುಬಂದಿದೆ. ಅಂದು ಹಣ ಸಿಕ್ಕಿದ ಸಂದರ್ಭದಲ್ಲಿ ಇದ್ದದ್ದು ತುಕಾರಾಮ್ ಎಂಬವರು. ಶಿವರಾಜ್, ತುಕಾರಾಮ್ ಅವರಿಗೆ ₹50 ಸಾವಿರದ ಆರು ಕಟ್ಟು ಹಣ ನೀಡಿದ್ದಾನೆ. ಅಂದರೆ ಒಟ್ಟು ಮೂರು ಲಕ್ಷ ರೂಪಾಯಿ ನೀಡಿದ್ದಾನೆ. ಅದನ್ನು ತೆಗೆದುಕೊಂಡು ಅವರು ಹೋಗಿದ್ದರು” ಎಂದು ಮಾಹಿತಿ ನೀಡಿದ್ದಾರೆ.

“ಆ ಹಣದಲ್ಲಿ ತುಕಾರಾಮ್‌ ₹500 ರೂಪಾಯಿ ಮಾತ್ರ ಖರ್ಚು ಮಾಡಿದ್ದಾರೆ. ಹಣ ಸಿಕ್ಕಿದ ವಿಚಾರ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಈ ಸುದ್ದಿ ಗೊತ್ತಾಗಿ ತುಕಾರಾಮ್ ಆ ಹಣವನ್ನು ಮತ್ತೆ ಠಾಣೆಗೆ ಒಪ್ಪಿಸಿದ್ದಾರೆ. ತುಕಾರಾಮ್ ಮತ್ತು ಆತನ ಮನೆಯವರು ಎರಡು ಲಕ್ಷದ ತೊಂಬತ್ತೊಂಬತ್ತು ಸಾವಿರದ ಐನೂರು ರೂಪಾಯಿ ಮರಳಿಸಿದ್ದಾರೆ. ಪೊಲೀಸರು ಆ ದಿನ ಶಿವರಾಜ್‌ನನ್ನು ಪರಿಶೀಲನೆ ಮಾಡಿದಾಗ ₹49,500 ಹಣ ಸಿಕ್ಕಿದೆ. ಸದ್ಯ ಮೂರೂವರೆ ಲಕ್ಷ ರೂಪಾಯಿ ಹಣವನ್ನು ನಮ್ಮ ಸುಪರ್ದಿಗೆ ಪಡೆದಿದ್ದೇವೆ” ಎಂದು ಕಮಿಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ.

“ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲನೆ ಮಾಡುತ್ತಿದ್ದೇವೆ. ಹಣ ಕಳೆದುಕೊಂಡವರು ಇದ್ದರೆ ಮುಂದೆ ಬನ್ನಿ” ಎಂದು ಸಲಹೆ ನೀಡಿರುವ ಕಮಿಷನರ್, “ಹಣ ಕಳಕೊಂಡವರು ಪೊಲೀಸ್ ಠಾಣೆಗೆ ಬಂದು ತಮ್ಮದೇ ಹಣ ಅಂತ ಸಾಬೀತು ಮಾಡಬೇಕು. ಈ ಸಂಬಂಧ ಶಿವರಾಜ್ ಮತ್ತು ತುಕಾರಾಮ್ ಮೇಲೆ ಪ್ರಕರಣ ದಾಖಲಿಸುವುದಿಲ್ಲ. ಇನ್ನು ಯಾರಾದರೂ ಶಿವರಾಜ್‌ನಿಂದ ಹಣ ಕೊಂಡು ಹೋಗಿದ್ದರೆ ಠಾಣೆಗೆ ಬಂದು ಹಣ ಒಪ್ಪಿಸಬೇಕು. ಒಂದು ವೇಳೆ ಯಾರಾದರೂ ಹಣ ತೆಗೆದುಕೊಂಡು ಹೋಗಿ ಮತ್ತೆ ಕೊಡದಿದ್ದರೆ ಪ್ರಕರಣ ದಾಖಲು ಮಾಡುತ್ತೇವೆ ಎಂದು ಕಮಿಷನರ್‌ ಶಶಿಕುಮಾರ್ ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.

ವಾರಸುದಾರ ಇಲ್ಲದ ಹಣದ ಪ್ರಕರಣ

ಇನ್ನು ಘಟನೆಯಲ್ಲಿ ಪೊಲೀಸರ ಪಾತ್ರದ ಬಗ್ಗೆ ಮಾತನಾಡಿರುವ ಎನ್ ಶಶಿಕುಮಾರ್, “ಕಂಕನಾಡಿ ಪೊಲೀಸರು ಆ ದಿನ ಡೈರಿ ಎಂಟ್ರಿ‌ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಯಾರಾದರೂ ಬಂದು ಹಣ ಕೇಳಿದರೆ, ಠಾಣೆಯಲ್ಲೇ ಕೊಡೋಣ ಎಂದೆನಿಸಿ ಹಣವನ್ನು ಠಾಣೆಯಲ್ಲಿ ಇಟ್ಟಿದ್ದರು. ಪೊಲೀಸರು ಈ ಪ್ರಕರಣದಲ್ಲಿ ತಡವಾಗಿ ವರದಿ ಮಾಡಿದ ಬಗ್ಗೆ ವರದಿ ತರಿಸುತ್ತೇನೆ. ಈ ವಿಚಾರದಲ್ಲಿ ಕರ್ನಾಟಕ ಪೊಲೀಸ್ ಕಾಯಿದೆಯ 75ನೇ ನಿಯಮದ ಅಡಿಯಲ್ಲಿ ವಾರಸುದಾರ ಇಲ್ಲದ ಪ್ರಕರಣ ದಾಖಲಿಸಿಕೊಂಡಿದ್ದೇವೆ” ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.

ಪತಿಯ ಕೈಯ್ಯಲ್ಲಿದ್ದ ಹಣದ ಕಟ್ಟನ್ನು ನೋಡಿ ಗಾಬರಿಯಾಗಿತ್ತು

“ತುಕಾರಾಮ್ ಅವರು ನನ್ನ ಪತಿ. ಮೀನು ತರಲೆಂದು ಪಂಪ್‌ವೆಲ್‌ಗೆ ಹೋಗಿದ್ದರು. ಮರಳಿ ಬರುವ ಸಂದರ್ಭದಲ್ಲಿ ಹಣದೊಂದಿಗೆ ಮರಳಿದ್ದರು. ನಮ್ಮ‌ ಜೀವಮಾನದಲ್ಲಿ ಅಷ್ಟು ಹಣ ನೋಡಿರಲಿಲ್ಲ. ಅವರು ಹಣ ತಂದಾಗ ಗಾಬರಿಯಾಗಿತ್ತು. ಆ ಕಟ್ಟಿನಲ್ಲಿದ್ದ ಹಣವನ್ನು ಲೆಕ್ಕ ಕೂಡ ಮಾಡಿರಲಿಲ್ಲ. ಯಾರಿಗೂ ತಿಳಿಸದೆ ಹಾಗೆಯೇ ಮನೆಯಲ್ಲಿಟ್ಟಿದೆ. ನಿನ್ನೆ ಮಗನ ಮೊಬೈಲ್‌ನಲ್ಲಿ ಹಾಗೂ ಬಳಿಕ ಮಾಧ್ಯಮಗಳಲ್ಲಿ ಹರಿದಾಡಿದ ಸುದ್ದಿ ನೋಡಿ ಭಯವಾಯಿತು‌.

ಪೊಲೀಸ್ ಕೇಸು ಅದು ಇದು ಆಗುವುದು ಬೇಡ ಎಂದು ನಿನ್ನೆ(ಡಿ.6)ರ ರಾತ್ರಿ 8 ಗಂಟೆಗೆ ಮನೆಗೆ ತಂದ ಹಣವನ್ನು ಪೊಲೀಸ್ ಠಾಣೆಗೆ ನೀಡಿದ್ದೇವೆ. ಆ ಹಣದಲ್ಲಿ ₹500 ರೂಪಾಯಿಯನ್ನು ಪತಿ ಖರ್ಚು ಮಾಡಿದ್ದಾರೆ” ಎಂದು ಮೂರು ಲಕ್ಷ ಪಡೆದುಕೊಂಡು ಹೋಗಿದ್ದ ತುಕಾರಾಮ್ ಅವರ ಪತ್ನಿ, ಉಜ್ಜೋಡಿ ಗೋರಿಗುಡ್ಡೆಯ ನಿವಾಸಿ ಪ್ರೇಮಾ ‘ಬೇನಾಮಿ ಹಣ’ದ ಬಗ್ಗೆ ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!