Thursday, September 19, 2024

ಪ್ರಾಯೋಗಿಕ ಆವೃತ್ತಿ

ನಾಯಿ ಕಡಿತ : ರೇಬಿಸ್ ನಿಂದ ಮೃತಪಟ್ಟವರು ಕರ್ನಾಟಕದಲ್ಲೇ ಹೆಚ್ಚು

ಈ ವರ್ಷ ರೇಬಿಸ್‌ನಿಂದ ದೇಶದಲ್ಲಿ 250 ಮಂದಿ ಸಾವನ್ನಪ್ಪಿದ್ದಾರೆ. ಆ ಪೈಕಿ ಕರ್ನಾಟಕದಲ್ಲಿಯೇ 32 ಸಾವುಗಳು ಸಂಭವಿಸಿದ್ದು, ರೇಬಿಸ್‌ನಿಂದ ಮೃತಪಟ್ಟವರ ಪಟ್ಟಿಯಲ್ಲಿ ರಾಜ್ಯ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಲೋಕಸಭೆಯಲ್ಲಿ ತಿಳಿಸಿದೆ. 

ಶುಕ್ರವಾರ ಲೋಕಸಭೆ ಕಲಾಪದ ವೇಳೆ, ರೇಬಿಸ್‌ಗೆ ಬಲಿಯಾದವರ ಕುರಿತು ಕೇಳಲಾದ ಪ್ರಶ್ನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಡಾ.ಭಾರತಿ ಪ್ರವೀಣ್ ಪವಾರ್ ಲಿಖಿತ ಉತ್ತರ ನೀಡಿದ್ದಾರೆ. “ನಾಯಿ ಕಡಿತದಿಂದ ಬರುವ ರೇಬಿಸ್‌ ರೋಗಕ್ಕೆ 18 ರಾಜ್ಯಗಳಲ್ಲಿ 250 ಮಂದಿ ಬಲಿಯಾಗಿದ್ದಾರೆ. ಕರ್ನಾಟಕದಲ್ಲಿ 32 ಸಾವುಗಳಾಗಿದ್ದು, ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 24 ಸಾವುಗಳು ಸಂಭವಿಸಿವೆ” ಎಂದು ಉತ್ತರದಲ್ಲಿ ಹೇಳಿದ್ದಾರೆ. 

ತಮಿಳುನಾಡು 22, ಕೇರಳ ಮತ್ತು ತೆಲಂಗಾಣದಿಂದ ತಲಾ 21, ಆಂಧ್ರ ಪ್ರದೇಶ ಮತ್ತು ಉತ್ತರ ಪ್ರದೇಶ ತಲಾ 19 ಸಾವುಗಳನ್ನು ಕಂಡಿವೆ. ದೆಹಲಿ ಮತ್ತು ಬಿಹಾರ ರಾಜ್ಯಗಳು ತಲಾ 18 ಸಾವುಗಳನ್ನು ವರದಿ ಮಾಡಿವೆ ಎಂದು ಸಚಿವರು ತಿಳಿಸಿದ್ದಾರೆ.

“ಕೇರಳದಲ್ಲಿ ಆಂಟಿ-ರೇಬೀಸ್ ಲಸಿಕೆ ತೆಗೆದುಕೊಂಡ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದರು. ಇದರಿಂದಾಗಿ, ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ಕೇರಳದಲ್ಲಿ ದೊಡ್ಡ ಚರ್ಚೆ ಉಂಟಾಗಿತ್ತು. ಆ ರಾಜ್ಯದಲ್ಲಿ ಸುಮಾರು 2 ಮಿಲಿಯನ್ ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. ಹೀಗಾಗಿ, ಕೇರಳಕ್ಕೆ ಕೇಂದ್ರ ಸರ್ಕಾರ ತಂಡವನ್ನು ಕಳುಹಿಸಿತ್ತು. ಕೇರಳ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ಎಲ್ಲ ಲಸಿಕೆಗಳು ಮತ್ತು ಇಮ್ಯುನೊಗ್ಲಾಬ್ಯುಲಿನ್ ಬ್ಯಾಚ್‌ಗಳನ್ನು ವಿತರಣೆಗೂ ಮೊದಲು, ಅವುಗಳ ಗುಣಮಟ್ಟ ಪರೀಕ್ಷಿಸಲಾಗಿದೆ” ಎಂದು ಸಚಿವರು ಹೇಳಿದ್ದಾರೆ.

ರೇಬಿಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಸಚಿವಾಲಯವು 12ನೇ ಪಂಚವಾರ್ಷಿಕ ಯೋಜನೆಯಿಂದ ರಾಷ್ಟ್ರೀಯ ರೇಬೀಸ್ ನಿಯಂತ್ರಣ ಅಭಿಯಾನ ಪ್ರಾರಂಭಿಸಿದೆ. ಅಭಿಯಾನವನ್ನು ದೇಶಾದ್ಯಂತ (ಅಂಡಮಾನ್, ನಿಕೋಬಾರ್ ದ್ವೀಪಗಳು ಮತ್ತು ಲಕ್ಷದ್ವೀಪ ಹೊರತುಪಡಿಸಿ) ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು.

“ರಾಷ್ಟ್ರೀಯ ಉಚಿತ ಔಷಧ ಯೋಜನೆಯಡಿ ನಾಯಿ ಕಡಿತಕ್ಕೆ ತುತ್ತಾದವರಿಗೆ ಆಂಟಿ-ರೇಬಿಸ್ ಲಸಿಕೆ, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ವೈದ್ಯರು, ಅಧಿಕಾರಿಗಳು ಮತ್ತು ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡುವ ಮೂಲಕ ಸಾಮರ್ಥ್ಯ ವೃದ್ಧಿ ಮತ್ತು ನಾಯಿ ಕಡಿತ ಪ್ರಕರಣಗಳನ್ನು ಎಚ್ಚರಿಕೆಯಿಂದ ನಿಭಾಯಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ” ಎಂದು ಸಚಿವರು ಹೇಳಿದ್ದಾರೆ. 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!