ಈ ಹಿಂದೆ ರಂಗಭೂಮಿಯಲ್ಲಿ ದೊಡ್ಡ ದೊಡ್ಡ ಕಲಾವಿರರನ್ನು ಹುಟ್ಟು ಹಾಕಿ, ಬೀದಿ ನಾಟಕದ ಮೂಲಕವು ಹೆಸರುಗಳಿಸಿದ್ದ ಮಂಡ್ಯ ಜಿಲ್ಲೆಯು ಇಂದು ಹೆಣ್ಣು ಭ್ರೂಣ ಹತ್ಯೆ, ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಿಗೆ ಕುಖ್ಯಾತಿಗೀಡಾಗುತ್ತಿರುವುದು ಜಿಲ್ಲೆಯ ಘನತೆಗೆ ಕುಂದು ತಂದಿದೆ ಎಂದು ಹಿರಿಯ ಪರ್ತಕರ್ತೆ, ಸ್ತ್ರೀವಾದಿ ಚಿಂತಕಿ ಡಾ.ವಿಜಯಾ ಕಳವಳ ವ್ಯಕ್ತಪಡಿಸಿದರು.
ಮಂಡ್ಯ ನಗರದ ಸರ್ಕಾರಿ ಬಾಲಕಿಯ ಕಾಲೇಜು(ಕಲ್ಲು ಕಟ್ಟಡ)ನಲ್ಲಿ ”ಅತ್ಯಾಚಾರ ವಿರೋಧಿ ಆಂದೋಲನ ಹಕ್ಕೊತ್ತಾಯ” ಸಮಾವೇಶವನ್ನು ಭಾರತ ಸಂವಿಧಾನದ ಪೀಠಿಕೆಯನ್ನು ಬಿಡುಗಡೆಗೊಳಿಸಿ ಉದ್ಘಾಟಿಸುವ ಮೂಲಕ ಅವರು ಮಾತನಾಡಿದರು.
ಪ್ರಗತಿಪರ ವಿಚಾರಧಾರೆಗಳನ್ನು ಹೊಂದಿದ್ದ ಹೆಚ್.ಎಲ್.ಕೇಶವಮೂರ್ತಿ ಹಾಗೂ ಬೆಸಗರಹಳ್ಳಿ ರಾಮಣ್ಣ ಅವರು ಜನಿಸಿದ ಈ ನೆಲೆವು ಕೆಟ್ಟದ್ದನ್ನು ತನ್ನ ಒಡಲಲ್ಲಿ ಸೇರಿಸಿಕೊಳ್ಳುತ್ತಿರುವುದು ಆಶ್ಚರ್ಯದ ಸಂಗತಿ. ಹೆಣ್ಣು ಭ್ರೂಣಹತ್ಯೆಯಲ್ಲಿ ರಾಜ್ಯದಲ್ಲಿಯೇ ಮಂಡ್ಯ ಜಿಲ್ಲೆಯೂ ಪ್ರಥಮ ಸ್ಥಾನದಲ್ಲಿರುವುದು ಆತಂಕವನ್ನುಂಟು ಮಾಡಿದೆ – ಹಿರಿಯ ಪರ್ತಕರ್ತೆ ಡಾ.ವಿಜಯಾ
ಗುಜರಾತಿನ ಬಿಲ್ಕಿಸ್ ಭಾನು ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಸನ್ನಡತೆಯ ಆಧಾರದ ಮೇಲೆ ಅಲ್ಲಿಯ ಸರ್ಕಾರ ಬಿಡುಗಡೆ ಮಾಡುತ್ತದೆ, ಅಂತಹ ಆರೋಪಿಗಳನ್ನು ಅವರ ಮನೆ ಹೆಂಗಸರು ಆರತಿ ಎತ್ತಿ ಮನೆಗೆ ಬರಮಾಡಿಕೊಳ್ಳುತ್ತಾರೆಂದರೆ ನಾಚಿಕೆಗೇಡು, ಇಂತಹ ಆರೋಪಿಗಳಿಗೆ ಆ ಮನೆಯ ಹೆಂಗಸರು ಮನಪೂರ್ತಿಯಾಗಿ ಆರತಿ ಎತ್ತಿರಲಾರರು, ಅವರು ಯಾರದೋ ಒತ್ತಾಯಕ್ಕೆ ಈ ಕೆಲಸ ಮಾಡಿರಬಹುದು ಎಂದು ಹೇಳಿದರು.

ಹೆಣ್ಣನ್ನು ಆಸ್ತಿಯನ್ನಾಗಿಸಿಕೊಂಡ ಪುರುಷ ಪ್ರಧಾನ ಸಮಾಜ
ಹೆಣ್ಣು ಮಕ್ಕಳನ್ನು ಪುರುಷ ಪ್ರಧಾನ ಸಮಾಜವು ಆಸ್ತಿ ಎಂದು ಪರಿಗಣಿಸಿದೆ, ಮೇಲ್ವರ್ಗದ ಹೆಣ್ಣು ಮಕ್ಕಳು ಅತ್ಯಾಚಾರವಾದರೆ ಕೆಳವರ್ಗದವರಿಗೆ ಏನು ಅನಿಸುವುದಿಲ್ಲ, ಹಾಗೇಯೇ ಹಿಂದೂ ಹೆಣ್ಣು ಮಕ್ಕಳು ಅತ್ಯಾಚಾರಕ್ಕೀಡಾದರೆ ಮುಸ್ಲಿಂರು, ಮುಸ್ಲಿಂ ಹೆಣ್ಣು ಮಕ್ಕಳು ಅತ್ಯಾಚಾರಕ್ಕೀಡಾದರೆ ಹಿಂದುಗಳು ನಮಗೂ ಅವರಿಗೂ ಏನೂ ಸಂಬಂಧವಿಲ್ಲದಂತೆ ವರ್ತಿಸುವುದು ನಾವು ಎಂತಹ ಅಧೋಗತಿಗೆ ಇಳಿದಿದ್ದೇವೆ ಎಂಬುದನ್ನು ತೋರಿಸುತ್ತದೆ. ಹೆಣ್ಣನ್ನು ಕೇವಲ ಹೆಣ್ಣನ್ನಾಗಿ ನೋಡಲು ಸಾಧ್ಯವಾಗದಂತಹ ಸ್ಥಿತಿಗೆ ಇಳಿದಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ : ನಿಮ್ಮ ಮಕ್ಕಳು ಅತ್ಯಾಚಾರಿಗಳಾಗದಂತೆ ಎಚ್ಚರ ವಹಿಸಿ : ಒಡನಾಡಿ ಸ್ಟ್ಯಾನ್ಲಿ
ಹೆಣ್ಣು ಮಗು ಜನಿಸಲು ಗಂಡೇ ಕಾರಣ ಎಂಬ ವೈಜ್ಞಾನಿಕ ಸತ್ಯವನ್ನು ನಮ್ಮ ಮಕ್ಕಳಿಗೆ ಹೇಳಿಕೊಡಲು ವಿಫಲರಾಗಿದ್ದೇವೆ, ಹೆಣ್ಣನ್ನು ಹೆಣ್ಣಾಗಿ ಗೌರವಿಸುವ ಗುಣವನ್ನು ನಾವು ಮಕ್ಕಳಿಗೆ ಕಲಿಸಬೇಕಾಗಿದೆ, ಹೆಣ್ಣಾಗಿರಲಿ, ಗಂಡಾಗಿರಲಿ ಮಕ್ಕಳಿಗೆ ಹೆಣ್ಣನ್ನು ಘನತೆಯಿಂದ ನಡೆಸಿಕೊಳ್ಳುವ ಸಂಸ್ಥಾರವನ್ನು ಹೇಳಿ ಕೊಡುವುದು ಇಂದಿನ ಅಗತ್ಯವಾಗಿ ಎಂದು ನುಡಿದರು.
ಸಭೆಯ ಅಧ್ಯಕ್ಷತೆಯನ್ನು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಚ್.ಪಿ.ತಮ್ಜೇಗೌಡ ವಹಿಸಿದ್ದರು. ಸಮಾವೇಶದಲ್ಲಿ ವೆಂ.ವನಜಾ, ಸ್ತ್ರೀವಾದಿ, ಬರಹಗಾರ್ತಿ ಕರ್ನಾಟಕ ಜನಶಕ್ತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಗೆ, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಗೌರಿ, ನಿವೃತ್ತ ಉಪನ್ಯಾಸಕ ಮಳವಳ್ಳಿಯ ಎಂ.ವಿ.ಕೃಷ್ಣ, ವಕೀಲ ಬಿ.ಟಿ.ವಿಶ್ವನಾಥ್, ಮಹಿಳಾ ಮುನ್ನಡೆಯ ಸುಷ್ಮಾ ಬೆಂಗಳೂರು, ಸಿಐಟಿಯು ಸಂಘಟನೆಯ ಸಿ.ಕುಮಾರಿ, ನೆಲದನಿ ಬಳಗದ ಲಂಕೇಶ್, ರಾಧಾ ವಿಕಸನ, ಕರ್ನಾಟಕ ಜನಶಕ್ತಿಯ ಸಿದ್ದರಾಜು, ಅರುಣೋದಯ ಕಲಾ ಬಳಗದ ಮಂಜುಳ, ಸಮತಾ ವೇದಿಕೆಯ ಸುಶೀಲಾ ಮೈಸೂರು, ಸಮರ್ಥನ ಬಳಗದ ನಾಗರೇವಕ್ಕ, ನಿವೃತ್ತ ಪ್ರಾಧ್ಯಾಪಕ ಡಾ.ಕಾಳಚನ್ನೇಗೌಡ, ಬೆಂಗಳೂರು ಮಾನಸ ಬಳಗದ ಪುಷ್ಪ, ಮಳವಳ್ಳಿಯ ಶಿಕ್ಷಕಿ ಕಿರಣ, ಮಹಿಳಾ ಮುನ್ನಡೆಯ ಶಿಲ್ಪ ,ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.




