Thursday, November 19, 2026

ಪ್ರಾಯೋಗಿಕ ಆವೃತ್ತಿ

ನಿಮ್ಮ ಮಕ್ಕಳು ಅತ್ಯಾಚಾರಿಗಳಾಗದಂತೆ ಎಚ್ಚರ ವಹಿಸಿ : ಒಡನಾಡಿ ಸ್ಟ್ಯಾನ್ಲಿ

ಪ್ರತಿಯೊಬ್ಬ ತಾಯಿಯೂ ತಮ್ಮ ಗಂಡು ಮಕ್ಕಳಿಗೆ ಸಮಾಜದ ಪ್ರತಿಯೊಬ್ಬ ಹೆಣ್ಣನ್ನು ಗೌರವಿಸುವ, ಅವರು ಘನತೆಯಿಂದ ಬದುಕುವ ಅವಕಾಶ ಕಲ್ಪಿಸಿಕೊಡಲು ಸಾಧ್ಯವಾಗುವಂತೆ ಉತ್ತಮ ಸಂಸ್ಕಾರಗಳನ್ನು ಕಲಿಸಬೇಕೆಂದು ಮೈಸೂರಿನ ಒಡನಾಡಿ ಸಂಸ್ಥೆಯ ಸಂಸ್ಥಾಪಕ ಸ್ಟ್ಯಾನ್ಲಿ ಸಲಹೆ ನೀಡಿದರು.

ಮಂಡ್ಯ ನಗರದ ಸರ್ಕಾರಿ ಬಾಲಕಿಯ ಕಾಲೇಜು(ಕಲ್ಲು ಕಟ್ಟಡ)ನಲ್ಲಿ ”ಅತ್ಯಾಚಾರ ವಿರೋಧಿ ಆಂದೋಲನ ಹಕ್ಕೊತ್ತಾಯ” ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಳೆದ 32 ವರ್ಷಗಳಿಂದ ಮಕ್ಕಳು ಮಹಿಳೆಯರ ಮೇಲೆ ದೌರ್ಜನ್ಯಗಳನ್ನು ಕಡಿಮೆ ಮಾಡುವುದಕ್ಕೋಸ್ಕರ ಒಡನಾಡಿ ಸಂಸ್ಥೆಯಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ದಿನೇ ದಿನೇ ದೌರ್ಜನ್ಯಗಳ ಸಂಖ್ಯೆ ಏರುತ್ತಲೇ ಸಾಗುತ್ತಿದೆ. ಸುತ್ತಮುತ್ತಲಿನ ಪರಿಚಿತರೇ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳಲ್ಲಿ ಭಾಗಿಯಾಗಿರುತ್ತಾರೆ. ಹಾಗಾಗಿ ಇಂತಹವರ ಬಗ್ಗೆ ಎಚ್ಚರಿಕೆ ವಹಿಸುವಂತೆ ಮಕ್ಕಳಿಗೆ ತಿಳಿಹೇಳಬೇಕೆಂದರು.

ಮನುಷ್ಯತ್ವ ಕಳೆದು ಕೊಂಡ ಮನುಷ್ಯ 

ಇಂದು ಎಲ್ಲಾ ರೀತಿಯಲ್ಲೂ ಮನುಷ್ಯ ಅಭಿವೃದ್ದಿ ಸಾಧಿಸುತ್ತಿದ್ದರೂ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರದ ವಿಚಾರದಲ್ಲಿ ಮೃಗದಂತೆ ವರ್ತಿಸುತ್ತಿದ್ದಾನೆ. ವೈಯಕ್ತಿಕ ವಾಂಛೆಗಳಿಗಾಗಿ ಹೆಣ್ಣು ಮಕ್ಕಳನ್ನು ಕಾಡುವ ಇಂತಹ ಮೃಗೀಯ ವರ್ತನೆಗಳು ಹೆಚ್ಚಾಗುತ್ತಲೆ ಇರುವುದು ಆತಂಕಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

nudikarnataka.com

ಪೋಕ್ಸೊ ಬಂದ ನಂತರ ಕೊಲೆಗಳ ಸಂಖ್ಯೆ ಹೆಚ್ಚಳ

16 ವರ್ಷದೊಳಗಿನ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರತಿಬಂಧಕ ಕಾಯ್ದೆ (ಪೋಕ್ಸೊ) ಬಂದ ನಂತರ, ಕೊಲೆ ಪ್ರಕರಣಗಳು ಹೆಚ್ಚಾಗಿವೆ ಎಂದು ಆತಂಕ ವ್ಯಕ್ತಪಡಿಸಿ ಅವರು, ಅದಕ್ಕೂ ಮುನ್ನಾ ಅತ್ಯಾಚಾರಗಳಷ್ಟೆ ನಡೆಯುತ್ತಿದ್ದವು, ಆದರೆ ಪೋಕ್ಸೊ ಜಾರಿಗೆ ಬಂದ ನಂತರ ಅತ್ಯಾಚಾರದ ಜೊತೆಗೆ ಕೊಲೆಗಳು ಹೆಚ್ಚಾಗಿ ನಡೆಯುತ್ತಿವೆ. ಅಲ್ಲದೇ ವಿಕೃತ ಅತ್ಯಾಚಾರಗಳು ಹೆಚ್ಚಾಗಿವೆ, ಇವು ಮನುಷ್ಯನ ಮೃಗತ್ವವನ್ನು ಎತ್ತಿ ತೋರಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಅತ್ಯಾಚಾರ ವಿರುದ್ದ ಒಕ್ಕೂರಲಿನ ಧ್ವನಿ ಅಗತ್ಯ

ಮಹಿಳೆಯರ ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳು ಎಲ್ಲೇ ಸಂಭವಿಸಿದರೂ ಒಕ್ಕೂರಲಿನಿಂದ ಹೋರಾಟ ನಡೆಸಲು ಎಲ್ಲಾ ಮುಂದಾಗಬೇಕು, ಆಗ ಮಾತ್ರ ಇಂತಹ ದೌರ್ಜನ್ಯಗಳಿಗೆ ತಡೆ ಹಾಕಬಹುದು, ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರವನ್ನು ಜಾತಿ ಹಾಗೂ ಧರ್ಮದ ಕಣ್ಣಿನಿಂದ ನೋಡಬಾರದು, ಹೆಣ್ಣನ್ನು ಹೆಣ್ಣಾಗಿ ನೋಡುವ ಮನುಷ್ಯತ್ವವನ್ನು ಬೆಳೆಸಿಕೊಳ್ಳಬೇಕೆಂದರು.

ಇದನ್ನೂ ಓದಿರಿ : ಅಪರಾಧ ಪ್ರಕರಣಗಳಿಂದ ಮಂಡ್ಯದ ಘನತೆಗೆ ಕುಂದು : ಡಾ.ವಿಜಯಾ

ಅತ್ಯಾಚಾರಿ ಆತ ಪಾದ್ರಿಯಾಗಿರಲಿ, ಮುಲ್ಲಾನಾಗಿರಲಿ, ಶರಣನಾಗಿರಲಿ ಅದನ್ನು ಖಂಡಿಸಬೇಕು. ಆಗ ಮಾತ್ರ ಸಮಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಅಪರಾಧಿಗಳನ್ನು ಶಿಕ್ಷಿಸುವಂತೆ ಒಂದು ಕಡೆ ಹೋರಾಟ ನಡೆದರೆ, ಮತ್ತೊಂದು ಕಡೆ ಆತನನ್ನು ಹೇಗೆ ರಕ್ಷಿಸಬೇಕೆಂಬುದರ ಬಗ್ಗೆ ಮತ್ತೊಂದು ಗುಂಪು ಹೋರಾಟ ನಡೆಸುತ್ತದೆ ಇದು ನಾಚಿಕೆಗೇಡು ಎಂದು ಕಿಡಿಕಾರಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ