Thursday, September 19, 2024

ಪ್ರಾಯೋಗಿಕ ಆವೃತ್ತಿ

ಜನವರಿಯಲ್ಲಿ ಸಿಐಟಿಯು ಅಖಿಲ ಭಾರತ ಸಮ್ಮೇಳನ : ಎಸ್.ವರಲಕ್ಷ್ಮಿ

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು)ನ 17ನೇ ಅಖಿಲ ಭಾರತ ಸಮ್ಮೇಳನವು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 18 ರಿಂದ 22ರವರೆಗೆ ನಡೆಯುವ ಸಮ್ಮೇಳನವನ್ನು ಕರ್ನಾಟಕದಲ್ಲಿ 15 ವರ್ಷಗಳ ನಂತರ ಮತ್ತೊಮ್ಮೆ ಕರ್ನಾಟಕದಲ್ಲಿ ಸಂಘಟಿಸಲಾಗುತ್ತಿದೆ. ದೇಶದಲ್ಲಿ ಕಾರ್ಮಿಕ ರೈತ ಚಳುವಳಿಯನ್ನು ಭವಿಷ್ಯದಲ್ಲಿ ಬಲಪಡಿಸುವ ಭಾಗವಾಗಿ ಕರ್ನಾಟಕದಲ್ಲಿ ಸಂಘಟಿಸಲಾಗುವ ಸಿಐಟಿಯುನ ಅಖಿಲ ಭಾರತ ಸಮ್ಮೇಳನವು ಒಂದು ಮಹತ್ವದ ಹೆಜ್ಜೆಯಾಗಲಿದೆ ಎಂದು ನುಡಿದರು.

ಸ್ವಾಗತ ಸಮಿತಿ ರಚನೆ 

ಈ ಅಖಿಲ ಭಾರತ ಸಮ್ಮೇಳನದ ಯಶಸ್ವಿಗೆ ಕರ್ನಾಟಕದ ಎಲ್ಲಾ ದುಡಿಯುವ ವರ್ಗದ ಪರವಿರುವ ಗಣ್ಯರು ಹಾಗೂ ಹಿತೈಷಿಗಳನ್ನು ಒಳಗೊಂಡು ಈಗಾಗಲೇ ವಿಶಾಲ ತಳಹದಿಯ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಕರ್ನಾಟಕದ ಹೆಸರಾಂತ ವಕೀಲರು ಹಾಗೂ ನ್ಯಾಯಾಲಯದಲ್ಲಿ ಕಾರ್ಮಿಕ ಹಕ್ಕುಗಳ ರಕ್ಷಣೆಗಾಗಿ, ಹಲವು ದಶಕಗಳಿಂದ ವಕಾಲತ್ತು ಮಾಡುತ್ತಿರುವ ಹಿರಿಯ ನ್ಯಾಯವಾದಿ ಸುಬ್ಬಾರಾವ್‌ ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಹಾಗೂ ವಿಮಾ ನೌಕರರ ಸಂಘದ ಅಖಿಲ ಭಾರತ ಅಧ್ಯಕ್ಷರಾದ ಅಮಾನುಲ್ಲಾ ಖಾನ್ ಆಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ತಿಳಿಸಿದರು.

ಸಂಗೀತ ದಿಗ್ಗಜ ಹಂಸಲೇಖ ಅವರು ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರದ ಗಣ್ಯರು ಸ್ವಾಗತ ಸಮಿತಿಯಲ್ಲಿರುವುದು ನಮ್ಮೆಲ್ಲರಿಗೂ ಸ್ಫೂರ್ತಿಯ ಸಂಗತಿಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಕನಿಷ್ಠ ವೇತನ, ಉದ್ಯೋಗ ಭದ್ರತೆಗಾಗಿ ಹಾಗೂ ಅಮಾನವೀಯ ಗುತ್ತಿಗೆ ಪದ್ಧತಿ ರದ್ದತಿಗಾಗಿ, ಆಸಂಘಟಿತ ಮತ್ತು ಸ್ತ್ರೀನೌಕರರಿಗೆ ಸಾಮಾಜಿಕ ಭದ್ರತೆಗಾಗಿ ಲಕ್ಷಾಂತರ ಕಾರ್ಮಿಕರು ಸಿಐಟಿಯು – ನೇತೃತ್ವದಲ್ಲಿ ಯಶಸ್ವಿಯಾದ ಹೋರಾಟ ನಡೆಸಿದ್ದಾರೆ ಎಂದು ವಿವರಿಸಿದರು.

ಚೆಗುವಾರ ಪುತ್ರ ಸಮ್ಮೇಳನದಲ್ಲಿ ಭಾಗಿ 

ಕ್ಯೂಬಾದ ಕ್ರಾಂತಿಕಾರಿ ನಾಯಕ ಚೆಗುವಾರ ಅವರ ಮಗ ಹಾಗೂ ಮೊಮ್ಮಕ್ಕಳು ಈ ಸಿಐಟಿಯುನ ಅಖಿಲ ಭಾರತ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೇ ವಿಶ್ವಸಂಸ್ಥೆಯ ಅಂತರಾಷ್ಟೀಯ ಕಾರ್ಮಿಕ ಸಂಘಟನೆಯ ಮುಖ್ಯಸ್ಥರು ಈ  ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.  

ಸಮ್ಮೇಳನಕ್ಕಾಗಿ ಧನಸಹಾಯ ನೀಡಲು ಮನವಿ 

ಮಂಡ್ಯ ಜಿಲ್ಲೆಯ ಜನರ ಸಹಕಾರದೊಂದಿಗೆ ಜಿಲ್ಲಾ ಮಟ್ಟದ ಸಿದ್ಧತಾ ಸಮಿತಿ ರಚನೆಯಾಗಿದ್ದು ತಾಲ್ಲೂಕು ಮಟ್ಟದ ಮತ್ತು ಗ್ರಾಮ ಪಂಚಾಯತ್ ಮಟ್ಟದ ಸ್ಥಳೀಯ ಸಿದ್ಧತಾ ಸಮಿತಿಗಳನ್ನು ರಚಿಸುವ ಮೂಲಕ ಮನೆ ಮನೆ ಸಂಗ್ರಹ ಮತ್ತು ಬೀದಿ ಬದಿ ಸಂಗ್ರಹ ಹಮ್ಮಿಕೊಳ್ಳಲಾಗಿದೆ.

ಸಿಐಟಿಯು ಸಂಘಟನೆಗೆ ಸಂಯೋಜನೆ ಗೊಂಡಿರುವ ಪ್ರತಿಯೊಬ್ಬ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರು ಹಾಗೂ ಸಿಐಟಿಯು ಸಂಘಟನೆಯು ನಡೆಸುತ್ತಿರುವ ಎಲ್ಲಾ ಕಾರ್ಯಕ್ರಮ ಹಾಗೂ ಚಳವಳಿಯನ್ನು ಬೆಂಬಲಿಸುತ್ತಾ ಬಂದಿರುವ ಮಂಡ್ಯ ಜಿಲ್ಲೆಯ ನಾಗರೀಕ ಬಂಧುಗಳು, ಈ ಸಮ್ಮೇಳನ ಯಶಸ್ವಿಗೆ ಅಗತ್ಯವಾದ ಧನ ಸಹಾಯವನ್ನು ಉದಾರವಾಗಿ ನೀಡಿ ಸಮ್ಮೇಳನ ಯಶಸ್ವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಬಹಿರಂಗ ಸಭೆಗೆ ಲಕ್ಷಾಂತರ ಮಂದಿ 

ಸಮ್ಮೇಳನದ ಕೊನೆಯ ದಿನವಾದ ಜ.22ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಮಿಕರ ಬೃಹತ್ ಬಹಿರಂಗ ಸಭೆಯಲ್ಲಿ ಜಿಲ್ಲೆಯ ಅಂಗನವಾಡಿ, ಬಿಸಿಯೂಟ, ಪಂಚಾಯಿತಿ, ಆಶಾ, ಕಟ್ಟಡ ಕಾರ್ಮಿಕರು, ಬೀದಿ ಬದಿ, ಬೀಡಿ ಕಾರ್ಮಿಕರು, ಮನೆಕೆಲಸ ಕಾರ್ಮಿಕರು, ವಿಮಾ ರಂಗ ಹಾಗೂ ಸಂಘಟಿತ ಹಾಗೂ ಅಸಂಘಟಿತ ವಲಯದ – ಸುಮಾರು 6000 ಕಾರ್ಮಿಕರು ಮಂಡ್ಯ ಜಿಲ್ಲೆಯಿಂದ ಭಾಗವಹಿಸಲಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಒಟ್ಟು ಲಕ್ಷಾಂತರ ಮಂದಿ ಕಾರ್ಮಿಕರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ದೇಶದಲ್ಲಿ 60 ಲಕ್ಷ ಕ್ಕೂ ಹೆಚ್ಚು ಸದಸ್ಯತ್ವ

ಸೆಂಟರ್ ಆಫ್ ಇಂಡಿಯನ್ಶ ಟ್ರೇಡ್ ಯೂನಿಯನ್ (ಸಿಐಟಿಯು) ಸಂಘಟನೆಯು ಭಾರತ ದೇಶದ ದುಡಿಯುವ ಜನರನ್ನು ಪ್ರತಿನಿಧಿಸುವ ಅತಿ ದೊಡ್ಡ ಕೇಂದ್ರ ಸಂಘಟನೆಯಾಗಿದೆ. ಸಂಘಟಿತ ಅಸಂಘಟಿತ ಹಾಗೂ ಸೇವಾ ಕ್ಷೇತ್ರದಲ್ಲಿನ ಸುಮಾರು 60 ಲಕ್ಷಕ್ಕೂ ಅಧಿಕ ಸದಸ್ಯತ್ವವನ್ನು ಈ ಸಂಘಟನೆ ಹೊಂದಿದೆ ಎಂದು ತಿಳಿಸಿದರು.

ದುಡಿಯುವ ಜನರ ಜೀವನವನ್ನು ಉತ್ತಮ ಪಡಿಸಲು ಹಾಗೂ ಹಕ್ಕುಗಳನ್ನು ರಕ್ಷಿಸಲು ಮಾತ್ರವಲ್ಲದೆ ದೇಶದ ಆರ್ಥಿಕ ಸ್ವಾವಲಂಬನೆಯ ರಕ್ಷಣೆ, ಪ್ರಜೆಗಳ ಐಕ್ಯತೆ, ಸಾಮಾಜಿಕ ನ್ಯಾಯ, ದುಡಿಯುವ ಮಹಿಳೆಯರ ರಕ್ಷಣೆ, ವೈಜ್ಞಾನಿಕ ಮನೋಭಾವ ಬೆಳೆಸುವುದು ಸಿಐಟಿಯು ಉದ್ದೇಶಗಳಾಗಿವೆ ಎಂದರು.

ಸ್ವಾಭಾವಿಕ ನ್ಯಾಯದ ಆಧಾರದಲ್ಲಿ ಕೈಗಾರಿಕಾ ಸಂಬಂಧಗಳನ್ನು ನಿರ್ಮಿಸುವುದು, ಹಲವು ಚಟುವುಟಿಕೆಗಳನ್ನು ನಿರಂತರವಾಗಿ ಮುನ್ನಡೆಸುತ್ತಿದೆ. ತಮ್ಮೊಂದಿಗೆ ಸೇರ್ಪಡೆಯಾಗಿರುವ 7000ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು, ರಾಷ್ಟ್ರೀಯ ಮಟ್ಟದ ಫೆಡರೇಷನ್‌ಗಳು ಮಾತ್ರವಲ್ಲದೆ ಜಗತ್ತಿನ ಹಲವು ಪ್ರಗತಿಪರ ಕಾರ್ಮಿಕ ಸಂಘಟನೆಗಳೊಂದಿಗೆ ಸಮನ್ವಯತೆ ಹೊಂದಿದೆ ಎಂದರು.

ಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಎಂ.ಎಂ.ಶಿವಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಉಪಾಧ್ಯಕ್ಷರಾದ ಮಂಜುಳ ರಾಜ್, ಪ್ರಮೀಳ ಕುಮಾರಿ, ಕಾರ್ಯದರ್ಶಿಗಳಾದ ಚಂದ್ರಶೇಖರ್, ಎ.ಬಿ.ಶಶಿಕಲಾ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!