Thursday, September 19, 2024

ಪ್ರಾಯೋಗಿಕ ಆವೃತ್ತಿ

ರೈತರ ಸಮಸ್ಯೆಗಳಿಗೆ ಮುಖ್ಯಮಂತ್ರಿ ಬಳಿ ಪರಿಹಾರ ಒದಗಿಸಲು ಸಚಿವರಿಗೆ ಒತ್ತಾಯ

ಕಬ್ಬಿಗೆ ವೈಜ್ಞಾನಿಕ ಬೆಲೆ, ಹಾಲಿಗೆ ಪ್ರೋತ್ಸಾಹ ಬೆಲೆ, ಮೈಷುಗರ್‌ ಕಾರ್ಖಾನೆಗೆ ಎಥೆನಾಲ್‌ ಘಟಕ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿಯವರ ಬಳಿ ಚರ್ಚಿಸಿ ಪರಿಹಾರ ಒದಗಿಸಬೇಕೆಂದು ಸಚಿವರಾದ ಕೆ‌.ಗೋಪಾಲಯ್ಯ ಹಾಗೂ ನಾರಾಯಣಗೌಡರಿಗೆ ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಹಾಗೂ ಮಧು ಮಾದೇಗೌಡ ಪತ್ರ ನೀಡಿದ್ದಾರೆ‌.

ಜಿಲ್ಲೆಯ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿದೆ.ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಗೆ ಆಗಮಿಸುತ್ತಿದ್ದು, ಸಚಿವರಾದ ಗೋಪಾಲಯ್ಯ ಹಾಗೂ ನಾರಾಯಣ ಗೌಡ ರೈತರ ಸಂಕಷ್ಟದ ಬಗ್ಗೆ ವಿವರಿಸಿ ಪರಿಹರಿಸಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

  • ಸಕ್ಕರೆ ಕಾರ್ಖಾನೆಗಳಿಗೆ ಪೂರೈಸುವ ಪ್ರತಿ ಟನ್ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ಆಹೋರಾತ್ರಿ ಧರಣಿ ನಡೆಸುತ್ತಿರುವ ರೈತರೊಂದಿಗೆ ಸನ್ಮಾನ್ಯ ಮುಖ್ಯಮಂತ್ರಿಗಳು ಶೀಘ್ರ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕು.
  • ಮಂಡ್ಯ ಜಿಲ್ಲೆಯಲ್ಲಿ ಸುಮಾರು 1.02 ಲಕ್ಷ ರೈತ ಕುಟುಂಬಗಳು ಪ್ರತಿನಿತ್ಯ ಹಾಲು ಒಕ್ಕೂಟಕ್ಕೆ ಹಾಲು ಪೂರೈಸುತ್ತಿದ್ದು 5 ತಿಂಗಳಿನಿಂದ ಬಾಕಿ ಇರುವ ರೂ. 55 ಕೋಟಿ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಿಕೊಡಬೇಕು.
  • ಚರ್ಮಗಂಟು ರೋಗದಿಂದ ಜಾನುವಾರುಗಳನ್ನು ಕಳೆದುಕೊಂಡ ಮಾಲೀಕರಿಗೆ ಪರಿಹಾರ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಿಕೊಡಬೇಕು. ಅಲ್ಲದೆ, ಜಾನುವಾರುಗಳಿಗೆ ಲಸಿಕೆ ಹಾಕಿದ ಪ್ರಗತಿ ಶೇ 52 ರಷ್ಟಿದ್ದು, ಲಸಿಕೆ ಹಾಕುವ ಪ್ರಕ್ರಿಯೆಗೆ ವೇಗ ನೀಡಬೇಕು. ಅಗತ್ಯ ಔಷಧವನ್ನು ಒದಗಿಸಬೇಕು.
  • ಮೈಷುಗರ್ ಕಾರ್ಖಾನೆ ಲಾಭದಾಯಕವಾಗಿ ನಡೆಯುವ ದೃಷ್ಟಿಯಿಂದ ಎಥೆನಾಲ್ ಘಟಕವನ್ನು ಆರಂಭಿಸಬೇಕು.
  • ಮೈಷುಗರ್ ಕಾರ್ಖಾನೆ ಪುನಶ್ಚೇತನಕ್ಕೆ ಬಜೆಟ್‌ನಲ್ಲಿ ಘೋಷಿಸಿರುವಂತೆ ರೂ. 50 ಕೋಟಿ ಅನುದಾನದಲ್ಲಿ ರೂ.30 ಕೋಟಿ ಬಿಡುಗಡೆ ಮಾಡಿದ್ದು, ಬಾಕಿ ಇರುವ ರೂ.20 ಕೋಟಿ ಅನುದಾನವನ್ನು
    ತಕ್ಷಣ ಬಿಡುಗಡೆ ಮಾಡಬೇಕು.
  • ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯಡಿ ಹಸಿರು ಪಟ್ಟಿಯಲ್ಲಿದ್ದು ಅರ್ಹತೆ ಹೊಂದಿರುವ ರೈತರಿಗೆ ಕೂಡಲೇ ಅನುದಾನ ಬಿಡುಗಡೆ ಮಾಡಿಕೊಡಬೇಕು.
  • ಇತ್ತೀಚೆಗೆ ಸುರಿದ ಮಳೆಯಿಂದ ಹಾನಿಯಾದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಹಾಗೂ ಗುಂಡಿಗಳನ್ನು ಮುಚ್ಚಲು ವಿಶೇಷ ಅನುದಾನವನ್ನು ಮಂಜೂರು ಮಾಡಿ ಬಿಡುಗಡೆ ಮಾಡಿಕೊಡುವುದು.
  • ಬಡಜನರ ಹಸಿವು ನೀಗಲೆಂದು ತೆರೆದಿರುವ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣಾ ಬಾಕಿ ಬಿಲ್ ಮೊತ್ತ ಸುಮಾರು ರೂ. 60 ಲಕ್ಷದಷ್ಟಿದ್ದು ತಕ್ಷಣ ಪಾವತಿಸಬೇಕು. ಯಾವುದೇ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್‌ಗಳು ಮುಚ್ಚದೇ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಶಾಸಕರಾದ ದಿನೇಶ್ ಗೂಳಿಗೌಡ ಹಾಗೂ ಮಧು ಜಿ.ಮಾದೇಗೌಡ ಅವರು ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!