ಮಂಡ್ಯ ಜಿಲ್ಲೆಯ ಜನತೆ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಏಳು ಶಾಸಕರನ್ನು ಆಯ್ಕೆ ಮಾಡಿದರೂ,ಜಿಲ್ಲೆಯ ಅಭಿವೃದ್ಧಿ ಶೂನ್ಯವಾಗಿದೆ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು.
ಮಂಡ್ಯ ತಾಲ್ಲೂಕಿನ ಸೂನಗಹಳ್ಳಿ ಗ್ರಾಮದಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಗ್ರಾಮ ಪಂಚಾಯಿತಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಏಳು ಮಂದಿ ಶಾಸಕರನ್ನು ಗೆಲ್ಲಿಸಿದರೂ, ಆ ಪುಣ್ಯಾತ್ಮರಿಂದ ಮೈಷುಗರ್ ಕಾರ್ಖಾನೆ ಇದುವರೆಗೂ ಸಮರ್ಪಕವಾಗಿ ಪ್ರಾರಂಭವಾಗಿಲ್ಲ. ಜಿಲ್ಲೆಯಲ್ಲಿ ಸಚಿವರು,ಶಾಸಕರು ಇದ್ದಾರೆ. ಒಂದು ಗುಂಡಿ ಮುಚ್ಚಿಸಲು ಆಗಿಲ್ಲ.ಶಾಲಾ ಮಕ್ಕಳಿಗೆ ಬಟ್ಟೆ ಕೊಟ್ಟಿದ್ದರಾ, ಕೃಷಿ ಹೊಂಡಾ ನಿಂತು ಹೋಗಿದೆ.ದಲಿತರು, ಮಹಿಳೆಯರು, ರೈತರು ಯುವಕರಿಗೆ ಕೊಟ್ಟ ಆಶ್ವಾಸನೆ ಈಡೇರಿದೆಯೇ? ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
2023 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತವಾಗಿದ್ದು, ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದರು.

ಕಾಂಗ್ರೆಸ್ ನಿಂದ ಸಾಧ್ಯ
ಯುವಕರಿಗೆ- ಮಹಿಳೆಯರಿಗೆ ಉದ್ಯೋಗ, ರೈತರ, ಹಿಂದುಳಿದವರ, ಶೋಷಿತರ ಪರ ನಿಲ್ಲಬೇಕೆಂದರೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು.ಎಲ್ಲ ವರ್ಗದವರ ಕಲ್ಯಾಣ ಕಾಂಗ್ರೆಸ್ ಪಕ್ಷದ ಇಂದ ಮಾತ್ರ ಸಾಧ್ಯ. ನಾನು ಸಾರಿಗೆ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಂಡ್ಯ, ಮಳವಳ್ಳಿ, ನಾಗಮಂಗಲ ಇತರೆ ಕಡೆಗಳಲ್ಲಿ ಕೆಎಸ್ಆರ್ಟಿಸಿ ಕಛೇರಿ ಸೇರಿದಂತೆ ಹಲವಾರು ಕಛೇರಿಗಳನ್ನು ತೆರೆಯಲಾಗಿದೆ. ಜಿಲ್ಲೆಯ ಜನರ ಬಗ್ಗೆ ಅಪಾರವಾದ ಗೌರವವಿದೆ ಎಂದು ತಿಳಿಸಿದರು.
ನನ್ನನ್ನು ರಾಜಕೀಯವಾಗಿ ಬೆಳೆಸಿದ ಎಸ್.ಡಿ.ಜಯರಾಂ ಅವರ ಮಾರ್ಗದರ್ಶನದಲ್ಲಿ ನಾನು ಈ ಮಟ್ಟಕ್ಕೆ ಬೆಳೆದು ಬಂದಿದ್ದೇನೆ. ನಾನು ಎಂಎಲ್ಎ ಆದಾಗ ಅವರು ಇರಲಿಲ್ಲ. ಅವರಿಗೆ ನಾನು ಎಂಎಲ್ಎ ಆಗಬೇಕೆಂಬ ಕನಸಿತ್ತು.ಧರ್ಮಸಿಂಗ್ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಮಂಡ್ಯಕ್ಕೆ ಮೆಡಿಕಲ್ ಕಾಲೇಜು(ಮಿಮ್ಸ್) ಮಂಜೂರು ಮಾಡಿಸಿದೆ.ಅದಕ್ಕೆ ಸರಿಯಾಗಿ ಸುಣ್ಣಬಣ್ಣ ಹೊಡೆಸಿಲ್ಲ. ಜಿಲ್ಲೆಯ ಜನತೆಯ ಆರೋಗ್ಯ ದೃಷ್ಟಿಯಿಂದ ಮಂಡ್ಯ ಭಾಗದಲ್ಲೇ ಮಂಡ್ಯ ಮೆಡಿಕಲ್ ಕಾಲೇಜು ಮಂಜೂರು ಮಾಡಿಸುವಲ್ಲಿ ನನ್ನ ಪಾತ್ರವೂ ಹೆಚ್ಚಾಗಿದೆ ಎಂದರು. ಬದಲಾವಣೆ ಜಗದ ನಿಯಮ ಎಂದು ತಿಳಿದು ಕಾಂಗ್ರೆಸ್ ಬೆಂಬಲಿಸಬೇಕೆಂದು ಚಲುವರಾಯಸ್ವಾಮಿ ಮನವಿ ಮಾಡಿದರು.
ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆ ಮಾಡಿ ಕೊಟ್ಟಿದ್ದೀರಿ. ನಿಮ್ಮ ಜೊತೆ ಕೈಲಾದ ಮಟ್ಟಿಗೆ ಅಭಿವೃದ್ಧಿಗೆ ಶ್ರಮ ಹಾಕಿ ಸೇವೆ ಮಾಡಿಕೊಂಡು ಬಂದಿದ್ದೇನೆ.
2018ರಲ್ಲಿ ಪಕ್ಷ ಬದಲಾಯಿಸಿದೆ ಎಂದು ಸಿಟ್ಟಿನಿಂದ ಬೇರೆ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಅವರ ಗೆಲುವಿಗೆ ಕಾರಣರಾಗಿದ್ದೀರಿ. ನನ್ನ ನಿರ್ಧಾರ ತಪ್ಪು ಎನಿಸಿತು. ನನ್ನ ನಿರ್ಧಾರವನ್ನು ಕ್ಷಮಿಸಿ, ಈ ಭಾರಿಯ 2023ರ ವಿಧಾನ ಸಭಾ ಚುನಾವಣೆಯಲ್ಲಿ ನನ್ನನ್ನು ಆಶೀರ್ವದಿಸಿ, ನನ್ನ ಕೈಲಾದ ಮಟ್ಟಿಗೆ ಪ್ರಾಮಾಣಿಕವಾಗಿ ನಿಮ್ಮ ಕಷ್ಟ ಸುಖಗಳಲ್ಲಿ ಕುಟುಂಬದ ಮಗನಾಗಿ ಸ್ಪಂದಿಸುತ್ತೇನೆ. ನನ್ನೆಲ್ಲ ತಪ್ಪುಗಳನ್ನು ಕ್ಷಮಿಸಿ ಈ ಬಾರಿ ಆಶೀರ್ವಾದ ಮಾಡುವ ಮೂಲಕ ನಿಮ್ಮಗಳ ಸೇವೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಹಲವಾರು ಮಂದಿ ಜೆಡಿಎಸ್ ತೊರೆದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ರಮೇಶ್ ಮಿತ್ರ, ಮೈಶುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಎಂ.ಪುಟ್ಟೇಗೌಡ, ಡಾ.ಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್, ಸಿದ್ದರಾಜು, ಕೆ.ಹೆಚ್.ನಾಗರಾಜು, ಬೇಲೂರು ಸೋಮಶೇಖರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ತ್ಯಾಗರಾಜು, ಅಂಜನಾ ಶ್ರೀಕಾಂತ್, ಹೆಚ್.ಎನ್.ಅಂಕರಾಜು, ಭೂತನಹೊಸೂರು ರಾಜಣ್ಣ, ಜಯರಾಮ್ ಸೇರಿದಂತೆ ಇತರರಿದ್ದರು.




