ಡಿ.19 ರಂದು ಕರ್ನಾಟಕ ರಾಜ್ಯ ರೈತಸಂಘ ಕರೆ ನೀಡಿದ್ದ ಮಂಡ್ಯ ನಗರ ಬಂದ್ ಭಾರೀ ಯಶಸ್ವಿಯಾಯಿತು. ನಿನ್ನೆ ಸೇರಿದ್ದ ರೈತರು, ವಿದ್ಯಾರ್ಥಿಗಳು, ಜನಸಾಮಾನ್ಯರ ಹೋರಾಟ ನೋಡಿದಾಗ, 1980-1990 ದಶಕದಲ್ಲಿ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿದ್ದ ರೈತ ಹೋರಾಟ ನೆನೆಪಿಗೆ ಬಂದಿತು.

ಟನ್ ಕಬ್ಬಿಗೆ 4500 ರೂ ಬೆಲೆ ನಿಗದಿ,ಹಾಲಿನ ಬೆಲೆ 40 ರೂ ಹೆಚ್ಚಳ ಸೇರಿದಂತೆ ಹತ್ತಾರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕಳೆದ 43 ದಿನಗಳಿಂದ ನಡೆಯುತ್ತಿರುವ ರೈತಸಂಘದ ಹೋರಾಟಕ್ಕೆ ಸರ್ಕಾರ ಮನ್ನಣೆ ನೀಡದ ಹಿನ್ನಲೆಯಲ್ಲಿ ಡಿ.19 ರಂದು ಕರೆ ನೀಡಿದ್ದ ಮಂಡ್ಯ ನಗರ ಬಂದ್ ಅಭೂತಪೂರ್ವ ಯಶಸ್ಸು ಕಂಡಿತು. ಅಲ್ಲಿ ಸೇರಿದ ಜನಸ್ತೋಮ ಹಲವು ವರ್ಷಗಳ ಹಿಂದಿನ ರೈತಸಂಘದ ಹೋರಾಟವನ್ನು ನೆನಪಿಸಿತು. ಮಂಡ್ಯದಲ್ಲಿ ನಡೆಯುತ್ತಿರುವ ಹೋರಾಟ 43 ದಿನಗಳನ್ನು ದಾಟಿದರೂ, ಅದು ಇನ್ನೂ ತನ್ನ ಗಟ್ಟಿತನವನ್ನು ಉಳಿಸಿಕೊಂಡು ಮುಂದೆ ಸಾಗುತ್ತಿದೆ.

ಮಂಡ್ಯ ಜಿಲ್ಲೆ ರೈತ ಹೋರಾಟದ ನೆಲೆಯಾಗಿದ್ದು ಬಂದ್, ಹರತಾಳ, ಪ್ರತಿಭಟನೆಗಳ ಮೂಲಕ ರೈತರಿಗೆ ನ್ಯಾಯ ಕೊಡಿಸುವ ರೈತಸಂಘದ ಹೋರಾಟ ರಾಜ್ಯಾದ್ಯಂತ ಹೆಸರುವಾಸಿಯಾಗಿತ್ತು. ಡಿ.19 ರ ಮಂಡ್ಯ ಬಂದ್ ಮತ್ತೆ ಇದನ್ನು ಹಲವು ವರ್ಷಗಳ ನಂತರ ನೆನಪಿಸಿತು ಎಂದರೆ ತಪ್ಪಾಗದು.
ಬಂದ್ ಯಶಸ್ವಿ
ರೈತರ ಬೇಡಿಕೆಗಳ ಈಡೇರಿಸದ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಭಾಗವಾಗಿ ನಡೆದ ಬಂದ್ ಗೆ ನಾಗರೀಕರು ಸ್ಪಂದಿಸಿ ಉತ್ತಮ ಬೆಂಬಲ ನೀಡಿದರು. ವಿದ್ಯಾರ್ಥಿಗಳು, ಜನಪರ ಸಂಘಟನೆಗಳು ಸಾಥ್ ನೀಡಿದವು. ಎಲ್ಲೆಡೆ ಹಸಿರು ಟವೆಲ್ ಗಳು ಹಾರಾಡುತ್ತಿದ್ದು, ಮಂಡ್ಯವನ್ನು ಹಸಿರುಮಯವಾಗಿಸಿತ್ತು.
ರೈತರಿಲ್ಲದ ಒಂದು ದೇಶವನ್ನು ಕಲ್ಪನೆ ಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಎಂದರಿತ ಮಂಡ್ಯದ ವರ್ತಕರು ತಾವೇ ಸ್ವಯಂ ಪ್ರೇರಿತರಾಗಿ ಅಂಗಡಿಗಳ ಬಾಗಿಲು ಹಾಕಿ ಬಂದ್ ಗೆ ಸಹಕಾರ ನೀಡಿದರು. ಹಲವು ಕಾಲೇಜುಗಳಲ್ಲಿ ಓದುತ್ತಿರುವ ರೈತಾಪಿ ವರ್ಗದ ಯುವಕರು-ಯುವತಿಯರು ತರಗತಿ ಬಿಟ್ಟು ಅನ್ನದಾತನ ಪರ ನಿಂತು ಘೋಷಣೆ ಕೂಗಿದರು.

ಎತ್ತಿನಗಾಡಿಗಳು, ಟ್ರಾಕ್ಟರ್ ಗಳು ರಸ್ತೆಗೆ ಇಳಿದಿದ್ದವು. ಪ್ರೊ.ನಂಜುಂಡಸ್ವಾಮಿ, ಕೆ.ಎಸ್.ಪುಟ್ಟಣ್ಣಯ್ಯನವರ ಭಾವಚಿತ್ರ ಹಿಡಿದು ರೈತ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿದರು. ಲಾರಿ ಮಾಲೀಕರು, ಅಕ್ಕಿಗಿರಣಿ ಮಾಲೀಕರು, ಪ್ರಗತಿಪರ, ಕನ್ನಡ ಸಂಘಟನೆಗಳು ಬಂದ್ ನಲ್ಲಿ ಕೈಜೋಡಿಸಿದ್ದು ಹೋರಾಟ ಬಲವಾಗುವಂತೆ ಮಾಡಿತು.
ರೈತ ಕಾರ್ಯಕರ್ತರು ಪಟಾಪಟಿ ಚಡ್ಡಿ ಮೆರವಣಿಗೆ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು,ರೈತ ಮಹಿಳೆಯರು ಬಾರುಕೋಲು ಹಿಡಿದು ಸರ್ಕಾರಕ್ಕೆ ಚಾಟಿ ಬೀಸಿದ್ದು,ಗತಕಾಲದ ರೈತ ಚಳುವಳಿ ಜ್ಞಾಪಿಸಿತು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 4 ಗಂಟೆಗೂ ಹೆಚ್ಚು ಕಾಲ ವಾಹನಗಳ ಓಡಾಟ ಇರಲಿಲ್ಲವೆಂದರೆ ರೈತಸಂಘದ ಹೋರಾಟ ಯಾವ ಮಟ್ಟದಲ್ಲಿತ್ತು ಎಂಬುದು ಗೊತ್ತಾಗುತ್ತದೆ.
ನವೋತ್ಸಾಹಿಗಳ ರೈತಸಂಘ
ಪ್ರಸ್ತುತ ರೈತಸಂಘದಲ್ಲಿ ದೊಡ್ಡ ಸಂಖ್ಯೆಯಲ್ಲಿ ಉತ್ಸಾಹಿ ಯುವಕರು, ಮುಖಂಡರ ದಂಡೇ ಜಮೆಯಾಗುತ್ತಿದೆ. ರೈತನಾಯಕ, ಹೋರಾಟಗಾರ ಕೆ.ಎಸ್.ಪುಟ್ಟಣ್ಣಯ್ಯ ಅವರ ನಿಧನದ ನಂತರ ರೈತಸಂಘ ಸಂಘಟನೆಯಲ್ಲಿ ಸ್ವಲ್ಪ ಹಿನ್ನಡೆ ಕಂಡಿತ್ತು.

ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಸಕ್ರಿಯವಾಗಿ ಹೋರಾಟದಲ್ಲಿ ಪಾಲ್ಗೊಂಡಿದ್ದರೆ ರೈತಸಂಘ ಮತ್ತಷ್ಟು ಬಲಿಷ್ಠವಾಗುತ್ತಿತ್ತು. ವರ್ಷಗಳ ಹಿಂದಷ್ಟೇ ರೈತಸಂಘಕ್ಕೆ ಸೇರಿ ಸಂಘಟನಾ ಕಾರ್ಯದರ್ಶಿ ಆಗಿರುವ ಎಚ್.ಸಿ.ಮಧುಚಂದನ್, ರಾಜ್ಯ ಸಮಿತಿ ಸದಸ್ಯ ಪ್ರಸನ್ನ ಎನ್.ಗೌಡ ಅವರಂತಹ ಯುವ ನಾಯಕರ ಜೊತೆ ಹಲವು ದಶಕಗಳಿಂದ ರೈತಸಂಘದಲ್ಲಿ ಹೋರಾಟ ಮಾಡಿ ಮಾಗಿರುವ ಹಿರಿಯರಾದ ಚಾಮರಸ ಮಾಲಿ ಪಾಟೀಲ್, ಬಡಗಲಪುರ ನಾಗೇಂದ್ರ, ಕೆಂಪೂಗೌಡ, ಸುನೀತಾ ಪುಟ್ಟಣ್ಣಯ್ಯ, ಚಂದ್ರಶೇಖರ್ ಸೇರಿದಂತೆ ಹಲವು ಹಿರಿಯರ ಮಾರ್ಗದರ್ಶನದಲ್ಲಿ ರೈತಸಂಘ ಮತ್ತೆ ಗತಕಾಲದ ಇತಿಹಾಸ ಸೃಷ್ಟಿಸಲು ಹೊರಟಿರುವುದು ರೈತ ಚಳವಳಿಗೆ ಹೊಸ ಹುರುಪು ಮೂಡಿಸಿರುವುದಂತೂ ಸುಳ್ಳಲ್ಲ.




