Friday, September 20, 2024

ಪ್ರಾಯೋಗಿಕ ಆವೃತ್ತಿ

ಕರಿಯರದೊ.. ಬಿಳಿಯರದೊ.. ಸಾಮ್ರಾಜ್ಯ ಯಾವುದಾದರೇನೂ ಸುಲಿಗೆ ರೈತರಿಗೆ…

ಕರಿಯರದೊ ಬಿಳಿಯರದೊ ಯಾರದಾದರೆ ಏನು?
ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ
ವಿಜಯನಗರವೊ? ಮೊಗಲರಾಳ್ವಿಕೆಯೊ? ಇಂಗ್ಲೀಷರೊ?
ಎಲ್ಲರೂ ಜಿಗಣೆಗಳೆ ನನ್ನ ನೆತ್ತರಿಗೆ
ಕತ್ತಿ ಪರದೇಶಿಯಾದರೆ ಮಾತ್ರ ನೋವೆ?
ನಮ್ಮವರೆ ಹದಹಾಕಿ ತಿವಿದರದು ಹೂವೆ?

– ಕುವೆಂಪು

ಈ ಕವಿತೆಯೂ ಇಂದಿನ ಭಾರತದ ರಾಜಕೀಯ ಪರಿಸ್ಥಿತಿಯನ್ನು ಹೆಚ್ಚು ವಾಸ್ತವಿಕವಾಗಿ ಪ್ರತಿಧ್ವನಿಸುವಂತಿದೆ. ಒಂದೆಡೆ ದೇಶದ ರೈತರ ರಕ್ತವನ್ನು ಜಿಗಣಿಯಂತೆ ನಮ್ಮ ಸರ್ಕಾರಗಳೇ ಇರುತ್ತಿದೆ, ರೈತ ವಿರೋಧಿ ಕಾಯ್ದೆ ಕಟ್ಟಳೆಗಳನ್ನು ಮಾಡಿ ಬಂಡವಾಳಶಾಹಿಗಳ ಪರವಾಗಿ ಆಡಳಿತ ನಡೆಸುತ್ತಿವೆ, ರೈತರ ಸ್ಥಿತಿಗತಿಗಳನ್ನು ಅಂದಿನ ದಿನಗಳಲ್ಲಿ ಗ್ರಹಿಸಿದ್ದ ಪುಟ್ಟಪ್ಪನವರು ”ಸಾಮ್ರಾಜ್ಯ ಯಾವುದಾದರೇನು..ಸುಲಿಗೆ ರೈತರಿಗೆ” ಎಂಬ ಎಚ್ಚರವನ್ನು ಸಾರಿ ಹೇಳಿದ್ದರು.

ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಡಿಸೆಂಬರ್ 29,1904ರಂದು ಜನಿಸಿ, ನವೆಂಬರ್ 11, 1994 ರಲ್ಲಿ ನಿಧನ  ಹೊಂದಿದರು. ಅವರು ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ ‘ಯುಗದ ಕವಿ ಜಗದ ಕವಿ’ ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು.

ಡಿ.29ರಂದು ರಾಷ್ಟ್ರಕವಿ ಕುವೆಂಪು ಅವರು ಜನ್ಮದಿನ. ಇದರ ಅಂಗವಾಗಿ ಕುಪ್ಪಳ್ಳಿ ವೆಂಕಟ್ಟಪ್ಪ ಪುಟ್ಟಪ್ಪ ಅವರ ವೈಚಾರಿಕ ವಿಚಾರಗಳನ್ನು ನುಡಿ ಕರ್ನಾಟಕ.ಕಾಮ್  ಓದುಗರ ಮುಂದಿಡುವ ಪ್ರಯತ್ನ ಮಾಡಿದೆ. 

ಸಮಾಜದ ಮೇಲೆ ಕುವೆಂಪು ಪ್ರಭಾವ ಅಪಾರ 

ಕುವೆಂಪು ಕನ್ನಡ ಜನತೆಯ ಮೇಲೆ ಬೀರಿರುವ ಪ್ರಭಾವ ಬಹಳ ದೊಡ್ಡದು. ಅಕ್ಷರ ಗೊತ್ತಿರುವವರ ಮೇಲೆ ಒಂದು ರೀತಿಯ ಪ್ರಭಾವವಾದರೆ, ಗೊತ್ತಿಲ್ಲದವರ ಮೇಲೆ ಇನ್ನೊಂದು ರೀತಿಯಲ್ಲಿ. ಅವರ ಕವಿತೆಗಳನ್ನು ಹಾಡಿದವರು ನೂರಾರು ಜನ. ಅವರ ಕವಿತೆಯೊಂದು ನಾಡಗೀತೆಯಾಗಿ ಕಿವಿಯ ಮೇಲೆ ಬೀಳುತ್ತಲೇ ಇರುತ್ತದೆ. ಅವರ ಪ್ರೇಮಗೀತೆಗಳು ಎಷ್ಟು ಮಧುರ ಕಂಠಗಳನ್ನು ಹಾದು ಬಂದಿವೆ.

ಅವರ ರಾಮಾಯಣ ದರ್ಶನ ಗಮಕಿಗಳ ಮೂಲಕ ಅಕ್ಷರ ಗೊತ್ತಿಲ್ಲದವರ ಬಳಿಗೆ ಹೋಗಿವೆ. ಅವರ ಕಾದಂಬರಿಗಳು, ನಾಟಕಗಳು, ಕಥೆಗಳು ರಂಗದ ಮೇಲೆ, ಸಿನಿಮಾ ಪರದೆಯ ಮೇಲೆ ಕಾಣಿಸಿಕೊಂಡು ಜನರನ್ನು ತಲುಪಿವೆ. ವಿದ್ವತ್ ವಲಯದ ಮೇಲೆ ಕುವೆಂಪು ಬರಹಗಳು, ಚಿಂತನೆಗಳು, ವೈಚಾರಿಕ ನೋಟಗಳು ಬೀರಿರುವ ಪ್ರಭಾವವೂ ದೊಡ್ಡದೇ.

ವೈಚಾರಿಕ ಎಚ್ಚರ ಮೂಡಿಸಿದವರು

ಇದೆಲ್ಲದರ ಜೊತೆಗೆ ಕುವೆಂಪು ಕರ್ನಾಟಕದಲ್ಲಿ ವೈಚಾರಿಕ ಎಚ್ಚರವನ್ನು ಮೂಡಿಸಿದವರು. ‘ಗುಡಿ ಮಸೀದಿ ಚರ್ಚುಗಳನ್ನು ಬಿಟ್ಟು ಬನ್ನಿ’ ಎಂದು ಜನರನ್ನು ಕರೆದವರು. ಮೌಢ್ಯಗಳನ್ನು ತೊರೆಯಲು ಹೇಳಿದವರು. ಯಾರ ಅಂಕುಶದ ಕೆಳಗೂ ಬದುಕನ್ನು ಕಟ್ಟಿಕೊಳ್ಳಬಾರದು; ಮುಕ್ತ ಮನಸ್ಸಿನಿಂದ ಯೋಚಿಸಬೇಕೆಂದು ತರುಣರಿಗೆ ಕಿವಿ ಮಾತು ಹೇಳಿದವರು. ಪುರೋಹಿತಶಾಹಿಯ ವಿರುದ್ಧ ಕುವೆಂಪು ನಡೆಸಿದ ಹೋರಾಟ ಬಹಳ ದೊಡ್ಡದು. ಪುರೋಹಿತರ ಮಂತ್ರಗಳಿಗೆ ಬದಲಾಗಿ ಕನ್ನಡದಲ್ಲಿ ತಿಳಿಯುವ ಮಾತುಗಳನ್ನು ಹೇಳಿದರು.

ಪುರೋಹಿತರನ್ನು ದೂರವಿಟ್ಟು ವಿವಾಹಗಳು ನಡೆಯಬೇಕೆಂದರು

ಜನರಿಗೆ ತಿಳಿಯುವ ಭಾಷೆಯಲ್ಲಿ ಹೇಳಿ, ಪುರೋಹಿತರನ್ನು ದೂರವಿಟ್ಟು ವಿವಾಹಗಳು ನಡೆಯಬೇಕೆಂದು ಹೇಳಿದವರು. ಗಂಡು-ಹೆಣ್ಣಿನ ಒಪ್ಪಿಗೆಯ ಮೇರೆಗೆ, ಸಮಾನತೆಯ ತತ್ವವನ್ನು ಆಧರಿಸಿ ಮದುವೆಗಳು ನಡೆಯಬೇಕಾದದ್ದು ಅತ್ಯಗತ್ಯ.

ಮದುವೆಯ ಹೆಸರಿನಲ್ಲಿ ಮೌಢ್ಯವನ್ನು ಹೆಚ್ಚಿಸಬಾರದು, ಅದ್ಧೂರಿಯ ಅನಗತ್ಯ ವೆಚ್ಚಗಳನ್ನು ಮಾಡಬಾರದು ಎಂದು ತಿಳಿಸಿಕೊಟ್ಟವರು. ಅತ್ಯಂತ ಸರಳ ರೀತಿಯಲ್ಲಿ ತಮ್ಮ ಮಕ್ಕಳ ಮದುವೆಯನ್ನು ಮಾಡಿ ತಮ್ಮ ವಿಚಾರಗಳನ್ನು ಆಚರಿಸಿ ದಾರಿ ತೋರಿಸಿದವರು. ಇವತ್ತಿಗೂ ನಮ್ಮ ಸಮಾಜದಲ್ಲಿ ಉಳಿದುಬಂದಿರುವ ಅನೇಕ ಮೌಢ್ಯಗಳನ್ನು ಎತ್ತಿತೋರಿಸಿದ ಕುವೆಂಪು ವೈಜ್ಞಾನಿಕ ಮನೋಭಾವ ಬೆಳೆಯಬೇಕೆಂದು ಹಂಬಲಿಸಿದರು.

ಈ ವಿಚಾರಗಳನ್ನು ಜನರಿಗೆ ತಲುಪಿಸುವುದು ಸಾಧ್ಯವಾಗಿದ್ದರೆ, ನಮ್ಮ ಸಮಾಜ ಬೇರೊಂದು ದಿಕ್ಕಿನಲ್ಲಿ ನಡೆಯುತ್ತಿತ್ತು. ನಿಜವಾದ ಸುಧಾರಣೆಯಾಗುತ್ತಿತ್ತು. ಅವರ ವಿಚಾರಗಳನ್ನು ಜನಮನದಲ್ಲಿ ಉಳಿಸಿಕೊಳ್ಳುವಂತೆ ನೋಡಿಕೊಳ್ಳಬೇಕಾಗಿತ್ತು.

ಅದ್ಧೂರಿಯ ಮದುವೆಗಳು, ಎಲ್ಲ ರೀತಿಯ ಮೌಢ್ಯಗಳು, ಪುರೋಹಿತಶಾಹಿಯ ಹಿಡಿತದಲ್ಲಿರುವ ಸಾವಿರಾರು ಸಂಗತಿಗಳಿಂದ ಕರ್ನಾಟಕ ಮುಕ್ತವಾಗಿಲ್ಲ. ಅಷ್ಟೇಕೆ ಶಿವಮೊಗ್ಗ ಜಿಲ್ಲೆಯಾಗಲೀ, ತೀರ್ಥಹಳ್ಳಿ ತಾಲ್ಲೂಕಾಗಲೀ, ಕುಪ್ಪಳಿಯ ಸುತ್ತಮುತ್ತಲ ಗ್ರಾಮಗಳಾಗಲೀ ಮುಕ್ತವಾಗಿಲ್ಲ. ಕುವೆಂಪು ಅವರ ಪರಮ ಭಕ್ತರೆಂದು ಹೆಳಿಕೊಳ್ಳುವವರೂ ಇಂಥ ದುಷ್ಟಶಕ್ತಿಗಳಿಂದ ಬಿಡುಗಡೆ ಪಡೆದಿಲ್ಲ. ಕುವೆಂಪು ಹೆಸರಿನಲ್ಲಿ ಎಷ್ಟೊಂದು ಸಂಘಟನೆಗಳಿವೆ, ಪ್ರತಿಷ್ಠಾನಗಳಿವೆ, ಎಷ್ಟೊಂದು ಚಟುವಟಿಕೆಗಳು ನಡೆಯುತ್ತಿವೆ. ಆದರೂ ಕುವೆಂಪು ಅವರ ವೈಚಾರಿಕ ಚಿಂತನೆ ಯಾಕೆ ಮೂಲೆಗುಂಪಾಯಿತು? ಎಂಬುದನ್ನು ಯೋಚಿಸಬೇಕಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!