Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಅಮುಲ್‌-ನಂದಿನಿ ವಿಲೀನಕ್ಕೆ ತೆರೆಮರೆಯ ಸಂಚು

ಅಮುಲ್‌ ಹಾಲಿನ ಕಂಪನಿ ಜೊತೆಗೆ ನಂದಿನಿ (ಕೆಎಂಎಫ್‌) ಕೆಲಸ ಮಾಡಿದರೆ ಹೆಚ್ಚಿನ ಲಾಭ ಮಾಡಬಹುದು ಎಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕೇಂದ್ರ ಸರ್ಕಾರ ಅಮುಲ್- ನಂದಿನಿಯನ್ನು ವಿಲೀನ ಮಾಡುವ ಸಂಚು ರೂಪಿಸುತ್ತಿದೆಯಾ? ಎಂಬ ಶಂಕೆ ಹಲವು ವಲಯಗಳಲ್ಲಿ ಮೂಡಿದೆ.

ಡಿಸೆಂಬರ್ 30ರಂದು ಮಂಡ್ಯದ ಗೆಜ್ಜಲಗೆರೆಯಲ್ಲಿ ಮೆಗಾ ಡೈರಿ ಉದ್ಘಾಟನೆ ಸಂದರ್ಭದಲ್ಲಿ ಅಮಿತ್‌ ಶಾ ಸಹಕಾರ ಕ್ಷೇತ್ರದಲ್ಲಿ ಕರ್ನಾಟಕ ಮಾಡಿರುವ ಸಾಧನೆಗಳ ಬಗ್ಗೆ ಪ್ರಶಂಸಿದರು. “ಗುಜರಾತ್‌ನಲ್ಲಿ ಸಹಕಾರ ಒಕ್ಕೂಟವು ಪ್ರಗತಿಯ ಹಾದಿಯಲ್ಲಿದೆ. ಹಾಗೆಯೇ 1975ರಿಂದಲೂ ಕೆಎಂಎಫ್‌ ಕೂಡ ಅಭಿವೃದ್ಧಿ ಹೊಂದುತ್ತಿದೆ. ಅಮುಲ್ ಹಾಗೂ ನಂದಿನಿ ಒಂದಾದರೆ ಕರ್ನಾಟಕದ ಹಾಲು ಉತ್ಪಾದಕರಿಗೆ ಇನ್ನಷ್ಟು ಅನುಕೂಲವಾಗುತ್ತದೆ. ಅದಕ್ಕೆ ಬೇಕಾಗಿರುವ ಎಲ್ಲ ಬೆಂಬಲವನ್ನು ಕೊಡುತ್ತೇವೆ” ಎಂದು ಹೇಳಿದ್ದರು.

ಕೆಎಂಎಫ್‌ (ನಂದಿನಿ) ರಾಜ್ಯದಲ್ಲಿಯೇ ಅತ್ಯಂತ ಲಾಭದಾಯಕ ಮತ್ತು ಮುಂಚೂಣಿಯಲ್ಲಿರುವ ಸಹಕಾರಿ ತತ್ವದಲ್ಲಿ ನಡೆಯುತ್ತಿರುವ ಸಂಸ್ಥೆ. ಗ್ರಾಮೀಣ ಭಾಗದ ಆರ್ಥಿಕ ಅಭಿವೃದ್ದಿಯಲ್ಲಿ ಕೆಎಂಎಫ್‌ ಮಹತ್ವದ ಪಾತ್ರ ವಹಿಸಿದೆ. ಇಂದಿಗೂ ಅದೆಷ್ಟೋ ಕುಟುಂಬಗಳು ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿವೆ.

ರೈತರು ಹಾಗೂ ಮಹಿಳೆಯರ ಕುಟುಂಬಗಳಿಗೆ ಆದಾಯ ಮೂಲವಾಗಿರುವ ಕೆಎಂಎಫ್‌ ಸಂಸ್ಥೆಯನ್ನು ಗುಜರಾತ್‌ನ ಹಾಲು ಉತ್ಪಾದಕ ‘ಅಮುಲ್’ ಸಂಸ್ಥೆಯೊಂದಿಗೆ ವಿಲೀನ ಮಾಡಬೇಕೆಂಬ ಯೋಚನೆ ಸರಿಯೇ? ಇದರಿಂದ ನಿಜವಾಗಲೂ ರೈತರಿಗೆ ಲಾಭವಾಗುತ್ತದಾ? ಸಹಕಾರಿ ತತ್ವಕ್ಕೆ ವಿಲೀನದಿಂದ ಧಕ್ಕೆ ಉಂಟಾಗಬಹುದೇ? ಹೀಗೆ ಹಲವು ಪ್ರಶ್ನೆಗಳು ಎದುರಾಗಿವೆ.

ರೈತ ಹೋರಾಟಗಾರ್ತಿ, ರೈತ ಮಹಿಳೆ ನಂದಿನಿ ಜಯರಾಮ್‌, “ಅಮುಲ್‌ ಮತ್ತು ಕೆಎಂಎಫ್‌ ವಿಲೀನ ಮಾಡುವುದರಿಂದ ರಾಜ್ಯದ ರೈತರಿಗೆ ಲಾಭವಾಗುವುದಕ್ಕಿಂತ ನಷ್ಟವೇ ಹೆಚ್ಚು. ವಿಲೀನವಾಗುವುದರಿಂದ ಜನಸಾಮಾನ್ಯ ಉತ್ಪಾದಕರ ಸಂಘಟನೆಯು ಬಂಡವಾಳಿಗರ ಉತ್ಪಾದಕರ ಸಂಘಟನೆಯೆಂದು ಹೆಸರು ಪಡೆಯುವ ಸಾಧ್ಯತೆಯಿದೆ. ಸಹಕಾರಿ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಹುನ್ನಾರ ತರೆಮರೆಯಲ್ಲಿ ನಡೆಯುತ್ತಿದೆ ಎಂಬ ಅನುಮಾನ ಶುರುವಾಗಿದೆ” ಎಂದರು.

“ಅಮುಲ್‌ ಜೊತೆ ಕೆಎಂಎಫ್‌ ವಿಲೀನವಾದರೆ ಲಾಭ ಹೆಚ್ಚಾಗುತ್ತದೆ, ಇದರಿಂದ ನಮ್ಮ ಆದಾಯ ದ್ವಿಗುಣಗೊಳ್ಳುತ್ತದೆ ಎಂಬ ನಂಬಿಕೆಯಲ್ಲಿ ಸಾಮನ್ಯ ಉತ್ಪಾದಕರು ಸಂತೋಷಪಡುತ್ತಾರೆ. ಇದರ ಪರಿಣಾಮ ಅವರಿಗೆ ಕೊನೆಯಲ್ಲಿ ಭಾಸವಾಗುತ್ತದೆ. ಆಹಾರ ಕ್ಷೇತ್ರಗಳಿಗೆ ಕಾರ್ಪೋರೇಟರ್‍‌ಗಳು ಇಳಿದಾಗ ಆಹಾರವನ್ನು ಆಹಾರವಾಗಿ ನೋಡದೇ ಲಾಭದಾಯಕ ‘ವಸ್ತು’ವಾಗಿ ನೋಡುತ್ತಾರೆ ಎನ್ನುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು” ಎಂದರು.

“ರೈಲ್ವೇ, ಎಲ್‌ಐಸಿ ಈಗಾಗಲೇ ಖಾಸಗೀಕರಣಕ್ಕೆ ತುತ್ತಾಗುತ್ತಿವೆ. ನಾಳೆ ನಂದಿನಿಯನ್ನು ವಿಲೀನ ಮಾಡುವುದಿಲ್ಲ ಎಂದು ತಳ್ಳಿಹಾಕಲು ಸಾಧ್ಯವಿಲ್ಲ. ವಿಕೇಂದ್ರಿಕರಣಕ್ಕೆ ಒತ್ತು ಕೊಡಿ ಇದರಿಂದ ರೈತರಿಗೆ ಮಾರುಕಟ್ಟೆಯ ಹಿಡಿತ ಸಿಗುತ್ತದೆ ಎಂಬ ಕೂಗಿನ ನಡುವೆಯೇ ಕೇಂದ್ರಿಕರಣದತ್ತ ಹೋಗುತ್ತಿರುವುದು ಆತಂಕಕಾರಿಯಾಗಿದೆ” ಎಂದರು.

“ದುರಂತವೇನೆಂದರೆ ಇಡೀ ವ್ಯವಸ್ಥೆಯಲ್ಲಿ ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ಎಲ್ಲಿಯೂ ಪಾರದರ್ಶಕತೆಯಿಲ್ಲ. ಇದರ ಬಗ್ಗೆ ಜನಪ್ರತಿನಿಧಿಗಳಿಗೆ ತಿಳಿದಿರುವುದಿಲ್ಲ. ಒಂದು ವೇಳೆ ಅವರಿಗೆ ತಿಳಿದಿದ್ದರೂ ಕುರ್ಚಿ ಭದ್ರ ಮಾಡುವುದಕ್ಕೆ ಹೋಗುತ್ತಾರೆಯೇ ವಿನಃ ಜನರ ಬದುಕಿನ ಬಗ್ಗೆ ಯೋಚಿಸುವುದಿಲ್ಲ. ಇದರಿಂದಾಗಿಯೇ ಒಪ್ಪಂದ, ವಿಲೀನ ಎಲ್ಲವೂ ಆಗಿ ಹೋದ ಮೇಲೆಯೇ ನಮ್ಮ ಗಮನಕ್ಕೆ ಬರುತ್ತದೆ“ ಎಂದು ಅಸಮಾಮಾಧಾನ ವ್ಯಕ್ತಪಡಿಸಿದರು.

“ಕಾರ್ಲೆಲ್‌ (ತಿರುಮಲ ಹಾಲು), ಆಕ್ಟಿಸ್‌ (ನೀಲಗಿರಿ ಹಾಲು) ಹೀಗೆ ಅನೇಕ ಕಂಪೆನಿಗಳು ಮಾರುಕಟ್ಟೆಯಲ್ಲಿ ಕೋಟಿ ಕೋಟಿ ಬಂಡವಾಳ ಹಾಕಿವೆ. ಇವುಗಳ ವಿರುದ್ದ ಬಲವಾಗಿ ನಿಲ್ಲಬೇಕಾದ ಪರಿಸ್ಥಿತಿಯಿದೆ. 2015ರಿಂದಲೂ ಹಾಲಿನ ಕ್ಷೇತ್ರದ ಹಿಡಿತವನ್ನು ಸಾಧಿಸಬೇಕೆಂದು ಸರ್ಕಾರಗಳು ಪ್ರಯತ್ನ ನಡೆಸುತ್ತಲೇ ಇವೆ (ಯಾವ ಸರ್ಕಾರಕ್ಕೂ ಧೈರ್ಯ ಬರಲಿಲ್ಲವಷ್ಟೇ). ಈ ಚುನಾವಣೆಯ ನಂತರ ಅದಕ್ಕೂ ಸರ್ಕಾರ ಕೈಹಾಕಬಹುದು” ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

“ನಮಗೆ ಲಾಭ ನಷ್ಟದ ವಿಚಾರ ಬೇಡ. ಭ್ರಷ್ಟಚಾರ ನಿಂತು ಆಡಳಿತ ಪಾರದರ್ಶಕತೆ ಉತ್ಪಾದಕರಿಗೆ ಸಿಗವಂತಾಗಬೇಕೆನ್ನುವುದು ನಮ್ಮ ಆಶಯವಾಗಿದೆ” ಎಂದರು

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಲಗಪುರ ನಾಗೇಂದ್ರ, “ಅಮುಲ್‌ ಮತ್ತು ನಂದಿನಿ ವಿಲೀನ ಮಾಡುವುದು ಸರಿಯಲ್ಲ. ಅವೆರಡೂ ಪ್ರತ್ಯೇಕವಾಗಿದ್ದರೆ ಒಳ್ಳೆಯದು. ನಂದಿನಿಗೂ, ಅಮುಲ್‌ಗೂ ಅದರದೇ ಆದ ಐಡೆಂಟಿಟಿ ಇದೆ. ಈ ರೀತಿ ವಿಲೀನ ಮಾಡುವುದರಿಂದ ಹಾಲಿನ ಕ್ಷೇತ್ರಕ್ಕೆ ಮಲ್ಟಿ ನ್ಯಾಷನಲ್ ಕಂಪೆನಿಗಳು ಪ್ರವೇಶಿಸುವ ಸಾಧ್ಯತೆಯಿದೆ” ಎಂದರು.

“ಕೆಎಂಎಫ್ ಸಹಕಾರಿ ತತ್ವದ ಮೇಲೆ ನಡೆಯುತ್ತಿದೆ. ಇಲ್ಲಿ ಮಹಿಳಾ ಉತ್ಪಾದಕರ ಸಂಘದಿಂದ ಹಿಡಿದು ಅನೇಕ ಸಂಘಗಳಿವೆ. ಅನೇಕ ಜನರು ಉದ್ಯೋಗ ಕಂಡುಕೊಂಡಿದ್ದಾರೆ. ವಿಲೀನದಿಂದ ಸಹಕಾರಿ ತತ್ವಕ್ಕೆ ಹಾನಿಯಾಗುವ ಸಾಧ್ಯತೆಯಿದೆ” ಎಂದು ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!