Thursday, September 19, 2024

ಪ್ರಾಯೋಗಿಕ ಆವೃತ್ತಿ

‘ನಂದಿನಿ’ಗೆ ಅಮುಲ್ ಜೊತೆ ಕೈ ಜೋಡಿಸುವ ಅವಶ್ಯಕತೆಯಿಲ್ಲ: ಬಿ.ಆರ್.ರಾಮಚಂದ್ರು

ಸಹಕಾರಿ ತತ್ವದ ಮೇಲೆ ಸ್ಥಾಪನೆಯಾಗಿರುವ ಕೆಎಂಎಫ್ ‘ನಂದಿನಿ’ ಬ್ರಾಂಡ್ ಜಗದ್ವಿಖ್ಯಾತವಾಗಿದ್ದು, ಗುಜರಾತಿನ ಅಮುಲ್ ಜೊತೆ ಕೈ ಜೋಡಿಸುವ ಅಗತ್ಯವಿಲ್ಲ ಎಂದು ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ತಿಳಿಸಿದರು.

ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿ ಡಿ.30 ರಂದು ಮೆಗಾ ಡೈರಿ ಉದ್ಘಾಟಿಸಿದ್ದ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು, ಅಮುಲ್ ಜೊತೆ ನಂದಿನಿ ಕೈ ಜೋಡಿಸಿದರೆ ಹೆಚ್ಚು ಲಾಭವಾಗುತ್ತೆ ಎಂದು ಹೇಳಿದ್ದರು. ಅವರ ಈ ಹೇಳಿಕೆಗೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ನಾಯಕರು, ಸಂಘಟನೆಗಳ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಈ ಹಿನ್ನಲೆಯಲ್ಲಿ ನುಡಿ ಕರ್ನಾಟಕ.ಕಾಮ್ ಜೊತೆ ಮಾತಾಡಿದ ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ನಂದಿನಿ ಬ್ರಾಂಡ್ ನ ಸುಮಾರು 150 ಕ್ಕೂ ಹೆಚ್ಚು ಉತ್ಪನ್ನಗಳು ಗ್ರಾಹಕರ ಮನ ಸೆಳೆದು ಜಗದ್ವಿಖ್ಯಾತ ವಾಗಿದೆ.ಹಾಲು, ಹಾಲಿನ ಪುಡಿ, ಸಿಹಿ ತಿನಿಸುಗಳು, ಚಾಕೊಲೇಟ್ ಸೇರಿ ಒಟ್ಟು 158 ನಂದಿನಿ ಉತ್ಪನ್ನಗಳು ಮಾರುಕಟ್ಟೆಯಲ್ಲಿದ್ದು, ಸಂಸ್ಥೆಗೆ ಉತ್ತಮ ಲಾಭ ತರುತ್ತಿದೆ ಎಂದರು.

ವಾಸ್ತವ ಹೀಗಿರುವಾಗ ಅಮುಲ್ ಜೊತೆ ಕೈ ಜೋಡಿಸುವ ಅಗತ್ಯವೇ ಬರುವುದಿಲ್ಲ. ಬೃಹದಾಕಾರವಾಗಿ ಬೆಳೆದಿರುವ ನಂದಿನಿ ಉತ್ಪನ್ನಗಳು ದೇಶ-ವಿದೇಶಗಳಲ್ಲಿ ಚಿರಪರಿಚಿತವಾಗಿದೆ‌. ಸಹಕಾರ ತತ್ವದಡಿ ಕಾರ್ಯನಿರ್ವಹಿಸುತ್ತಾ ಹಾಲು ಉತ್ಪಾದಕರರಿಗೆ ಹಾಗೂ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಜೀವನಕ್ಕೆ ಉತ್ತಮ ಆರ್ಥಿಕ ಮೂಲವಾಗಿದೆ ಎಂದರು.

ಹಾಲು ಒಕ್ಕೂಟದಲ್ಲಿ ಪ್ರಸ್ತುತ 9 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಮೆಗಾ ಡೇರಿ ಸ್ಥಾಪನೆಯಿಂದ
ದಿನವಹಿ 10 ಲಕ್ಷ ಲೀಟರ್ ನಿಂದ 14 ಲಕ್ಷ ಲೀ. ಸಂಸ್ಕರಣಾ ಸಾಮರ್ಥ್ಯ ವಿಸ್ತರಣೆಯಾಗುತ್ತದೆ. ಪ್ರಸ್ತುತ 1289 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಈ ಪೈಕಿ 1276 ಸಂಘಗಳು ಸಕ್ರಿಯವಾಗಿವೆ. 576 ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳಿವೆ. ಇಂದು ಗ್ರಾಮೀಣ ಮಹಿಳೆಯರು,ಪುರುಷರು ಆರ್ಥಿಕವಾಗಿ ಸಬಲರಾಗಲು ಹೈನುಗಾರಿಕೆ ಕಾರಣವಾಗಿದ್ದು, ಮನ್ಮುಲ್ ಅವರ ಜೀವನಾಡಿಯಾಗಿದೆ ಎಂದು ತಿಳಿಸಿದರು.

2021-22 ನೇ ಸಾಲಿನಲ್ಲಿ ಒಟ್ಟು 1370 ಕೋಟಿ ವಹಿವಾಟು ನಡೆಸಿದ್ದು, 713 ಲಕ್ಷ ನಿವ್ವಳ ಲಾಭ ಗಳಿಸಿದೆ. ಹೀಗಿರುವಾಗ ‘ನಂದಿನಿ’ಗೆ ‘ಅಮುಲ್’ನೊಂದಿಗೆ ಜೋಡಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!