ಎಚ್.ಆರ್.ಕನ್ನಿಕಾ ಎಂಬ ಹೆಸರು ಮಂಡ್ಯ ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಬಹಳ ಚಿರಪರಿಚಿತ. ಕಳೆದ 27 ವರ್ಷಗಳಿಂದ ಮಂಡ್ಯದ ಗಾಂಧಿನಗರದಲ್ಲಿ ಕನ್ನಿಕಾಶಿಲ್ಪ ನವೋದಯ ಕೇಂದ್ರ ತೆರೆದು ನವೋದಯ, ಮೊರಾರ್ಜಿ, ಸೈನಿಕ, ಸಾಯಿ ಆಶ್ರಮ, ಕಿತ್ತೂರು ರಾಣಿ ಚೆನ್ನಮ್ಮ, ರಾಮಕೃಷ್ಣ ಆಶ್ರಮ ಹೀಗೆ ಮೊದಲಾದ ವಸತಿ ಶಾಲೆಯ ಪ್ರವೇಶ ಪರೀಕ್ಷೆ ಬಯಸುವ ನಗರ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕಡಿಮೆ ಶುಲ್ಕವನ್ನು ಪಡೆದು ತರಬೇತಿ ನೀಡುತ್ತಾ ಮಕ್ಕಳ ಪಾಲಿನ ಆಶಾಕಿರಣವಾಗಿರುವ ಕನ್ನಿಕಾ ಅವರು ಶಿಕ್ಷಣದ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ.
ಕನ್ನಿಕಾ ಅವರ ಸಾಹಿತ್ಯ ಮತ್ತು ಶೈಕ್ಷಣಿಕ ಸೇವೆ ಪರಿಗಣಿಸಿ ಅವರನ್ನು ಮಂಡ್ಯ ನಗರ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಜಿಲ್ಲೆಯ ಪಾಲಿಗೆ ಹೆಮ್ಮೆಯ ವಿಷಯವಾಗಿದೆ.
ಎಲ್.ಕಮಲ ಹಾಗೂ ಹೆಚ್.ಬಿ.ರಾಮಕೃಷ್ಣ ಹೊಸಕೆರೆ ದಂಪತಿಗಳ ಪುತ್ರಿಯಾದ ಇವರು ಜನಿಸಿದ್ದು 21-4-1980 ರಲ್ಲಿ. ಮಂಡ್ಯದ ಕಾರ್ಮೆಲ್ ಕಾನ್ವೆಂಟ್ ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆದು, ನಂತರ ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಪದವಿ ಪಡೆದರು.
1-4-1996ರಲ್ಲಿ ಕನ್ನಿಕಾಶಿಲ್ಪ ನವೋದಯ ತರಬೇತಿ ಸಂಸ್ಥೆಯನ್ನು ಪಾರಂಭಿಸಿದರು. ಜೊತೆ ಜೊತೆಗೆ ಎಂ.ಎ(ಸಮಾಜಶಾಸ್ತ್ರ), ಮುಂದುವರಿಸಿದರು. ಎಂ.ಎಸ್ಸಿ(ಗಣಿತ), ಎಂ.ಎ(ಕನ್ನಡ), ಪದವಿಯನ್ನು ಪಡೆದಿದ್ದಾರೆ. ಎಂ.ಎಸ್ಸಿ(ಗಣಿತ) ಎಂ.ಎ(ಸಮಾಜಶಾಸ್ತ್ರ)ದಲ್ಲಿ ವಿಶ್ವವಿದ್ಯಾನಿಯದ ರ್ಯಾಂಕ್ ವಿಜೇತರು. ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ರೂಪಿಸಿದ ಹಿರಿಮೆ ಇವರದ್ದು. 2020 ರಲ್ಲಿ ನವೋದಯ ಶಾಲಾ ಪ್ರವೇಶ ಪರೀಕ್ಷೆಯಲ್ಲಿ ಇವರ ಸಂಸ್ಥೆ ಅತೀ ಹೆಚ್ಚು ಫಲಿತಾಂಶ ನೀಡಿರುವುದರಿಂದ ‘ಕರ್ನಾಟಕ ಬುಕ್ ಆಫ್ ರೆಕಾರ್ಡ್’ ಸಂಸ್ಥೆ ಇವರ ಹೆಸರನ್ನು ದಾಖಲಿಸಿದೆ.
ಸಾಹಿತ್ಯ ಸೇವೆ
‘ಮುನ್ನಡೆ’, ‘ಮೌನದಿಂಬಿರಿ’, ಸ್ನೇಹದ ಹಣತೆ’ ಇವರ ಕವನ ಸಂಕಲನವಾಗಿದೆ. ‘ಮಂಡ್ಯ ಜಿಲ್ಲೆಯ ಜನಪದ ಪರಿಕರಗಳು’ ಇವರ ವಿಶೇಷ ಕೃತಿ.ಮಕ್ಕಳಲ್ಲಿ ಸಾಹಿತ್ಯ ಪ್ರಜ್ಞೆಯನ್ನು ಬೆಳೆಸುವುದರ ಸಲುವಾಗಿ ಹತ್ತು ವರ್ಷದ ವಿದ್ಯಾರ್ಥಿಗಳಿಂದ ಸ್ವರಚಿಸಿದ ನೀತಿ ಕಥೆಗಳ ‘ಚಿಣ್ಣರ ಚಿಲಿಪಿಲಿ’ ಲೋಕಾರ್ಪಣೆಗೆ ಸಿದ್ಧವಾಗಿದೆ. ಇವರ ‘ಮುನ್ನಡೆ’ ಕವನ ಸಂಕಲನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಹತ್ತು ಸಾವಿರ ರೂ.ಗಳ ಬಹುಮಾನ ಸಿಕ್ಕಿದೆ.ಇವರು ಬರೆದ ‘ತರಕಾರಿ ಮುದುಕಿ’ ಎಂಬ ಕಥೆಯು ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಆಯ್ಕೆಯಾದ 26 ಕಥೆಗಳಲ್ಲಿ ಒಂದಾಗಿ ಆಯ್ಕೆಯಾಗಿದೆ.
‘ಕನ್ನಡ’ ಎಂಬ ಪದವನ್ನು ಪೋಸ್ಟ್ ಕಾರ್ಡ್ ನಲ್ಲಿ ಎರಡು ಸಾವಿರ ಸಲ ಬರೆದು ‘ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ದಾಖಲಾಗಿದ್ದಾರೆ. ಇವರ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಅಲ್ಲದೆ ವಿಕಲ ಚೇತನರ ಬಗ್ಗೆ ವಿಶೇಷ ಕಾಳಜಿ ಇರುವ ಕನ್ನಿಕಾರವರು, ಆ.ರಾ.ಬಾಲಕೃಷ್ಣ ಆನಸೋಸಲು ಅವರ ‘ಕಾಡುಮಲ್ಲಿಗೆ’ ಕೃತಿಯು ಹೊರಬರಲು ಎಲ್ಲಾ ರೀತಿಯ ಖರ್ಚುವೆಚ್ಚಗಳನ್ನು ಭರಿಸಿ ಅವರನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿದ್ದಾರೆ.
ಅಲ್ಲದೆ ವಿಶೇಷ ಚೇತನರ ಕವಿಗೋಷ್ಠಿ ಮತ್ತು ಮಕ್ಕಳ ಗೋಷ್ಠಿಯನ್ನು ಆಯೋಜಿಸಿಕೊಂಡು ಬಂದಿರುತ್ತಾರೆ. ‘ಕನ್ನಡ’ ಭಾಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಅಂಕ ವೀರ ಪ್ರಶಸ್ತಿಯನ್ನು ಸಹ ನೀಡುತ್ತಾ ಕನ್ನಿಕಾರವರು ಬಡತನದ ರೇಖೆಯಲ್ಲಿ ಕೆಳಗಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರೆಸಲು ಆರ್ಥಿಕವಾಗಿ ಸಹಾಯ ಹಸ್ತವನ್ನು ನೀಡುತ್ತಾ ಬಂದಿರುತ್ತಾರೆ. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ನಲ್ಲಿ ಅತೀ ಹೆಚ್ಚು ಅಂಕ ಪಡೆದ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಸಹಾ ಪ್ರೋತ್ಸಾಹ ಧನವನ್ನು ನೀಡಿ ಅವರು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕೆ ಕಾರಣರಾಗಿದ್ದಾರೆ.
ಇವರ ಶೈಕ್ಷಣಿಕ, ಸಾಹಿತ್ಯಿಕ, ಸಾಮಾಜಿಕ ಸೇವೆಗಾಗಿ ರಾಜ್ಯ ಸರ್ಕಾರವು 2022ನೇ ಸಾಲಿನ ಕಿತ್ತೂರು ರಾಜ್ಯ ಚೆನ್ನಮ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಲ್ಲದೆ ಜಿಲ್ಲಾಡಳಿತದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರ ಮಟ್ಟದ ಕುಸುಮಾಂಜಲಿ, ರಾಹುಲ್ ಗಾಂಧಿ ಮತ್ತು ರಾಜೀವ್ ಗಾಂಧಿ ಯಂಗ್ ಅಚೀವ್ಮೆಂಟ್ ಅವಾರ್ಡ್, ಡಾ. ರಾಧಾಕೃಷ್ಣ ಶಿಕ್ಷಣ ರತ್ನ ಪ್ರಶಸ್ತಿ ಮತ್ತು ರಾಜ್ಯ ಮಟ್ಟದಲ್ಲಿ ಶಿಕ್ಷಣ ರತ್ನ, ಶ್ರೀಗಂಧ ಕಲಾಕೇಸರಿ, ಬುದ್ಧಶಾಂತಿ, ಆದರ್ಶ ಶೃಂಗ, ಕರ್ನಾಟಕ ವಿಭೂಷಣ, ವಿವೇಕಾನಂದ ಸದ್ಭಾವನಾ ಪ್ರಶಸ್ತಿಗಳು ಸಂದಿದೆ.




