Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜಿಲ್ಲೆಯ ಮತದಾರರ ಪರಿಷ್ಕರಣೆಯ ಅಂತಿಮ ಪಟ್ಟಿ ಪ್ರಕಟ

ಮಂಡ್ಯ ಜಿಲ್ಲೆಯಲ್ಲಿ ಮತದರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023 ಪೂರ್ಣಗೊಂಡಿದ್ದು, ಜನವರಿ 5 ರಂದು ಅಂತಿಮ ಮತದಾರರ ಪಟ್ಟಿ ಪ್ರಚುರಪಡಿಸಲಾಗಿದ್ದು, ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ರಾಜಕೀಯ ಪಕ್ಷಗಳ ಸಭೆ ನಡೆಸಿ ಮಾತನಾಡಿದ ಅವರು, ಕರಡು ಮತದಾರರ ಪಟ್ಟಿಯನ್ನು ನವೆಂಬರ್ 9 ರಂದು ಪ್ರಕಟಿಸಲಾಗಿತ್ತು, ಅದರಂತೆ ಜಿಲ್ಲೆಯಲ್ಲಿ 7,35,082 ಪುರುಷ ಮತದಾರರು, 7,42,747 ಮಹಿಳಾ ಮತದಾರರು, ತೃತೀಯ ಲಿಂಗಿಗಳು- 122 ಸೇರಿದಂತೆ ಒಟ್ಟು 14,77,951 ಮತದಾರರಿದ್ದರು ಎಂದರು.

ಜಿಲ್ಲೆಯಲ್ಲಿ 14,86,025 ಮತದಾರರು

ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ನಂತರ ಜಿಲ್ಲೆಯಲ್ಲಿ 14,86,025 ಮತದಾರರಿದ್ದರು. ಜಿಲ್ಲೆಯಲ್ಲಿ ವಿಶೇಷ ಪರಿಷ್ಕರಣೆಯಲ್ಲಿ ನಮೂನೆ-6, 7 ಮತ್ತು 8 ಸ್ವೀಕರಿಸಿ ಮನೆ ಮನೆ ಸಮೀಕ್ಷೆ ನಡೆಸಿ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1,798 ಮತಗಟ್ಟೆಗಳಿದ್ದು, 7,37,850 ಪುರುಷ ಮತದಾರರು, 7,48,051 ಮಹಿಳಾ ಮತದಾರರು, ತೃತೀಯ ಲಿಂಗಿಗಳು- 124 ಸೇರಿದಂತೆ ಒಟ್ಟು 14,86,025 ಮತದಾರರು ಜಿಲ್ಲೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ಪುರುಷರು-631, ಮಹಿಳೆಯರು-23 ಒಟ್ಟು 654 ಸೇವಾ ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದರು.

17 ವರ್ಷ ತುಂಬಿದವರು ಅರ್ಜಿ ಸಲ್ಲಿಸಬಹುದು

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು 17 ವರ್ಷ ತುಂಬಿದವರಿಂದ ನಮೂನೆ-6 ರಲ್ಲಿ 1,177 ಅರ್ಜಿಗಳನ್ನು ಸ್ವೀಕರಸಲಾಗಿದೆ. 2023 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವ 1,177 ಮತದಾರರಿಗೆ 18 ವರ್ಷ ತುಂಬಲಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ನಡೆಯುವ 2023 ರ ಏಪ್ರಿಲ್‌ನಲ್ಲಿ 447, 2023 ರ ಜುಲೈನಲ್ಲಿ 429 ಹಾಗೂ 2023 ರ ಅಕ್ಟೋಬರ್‌ನಲ್ಲಿ-301 ಇವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗುವುದು ಎಂದರು.

ವಿಶೇಷ ಅಭಿಯಾನ

ಜಿಲ್ಲೆಯಲ್ಲಿ ಅರ್ಹ ಮತದಾರರು ಮತದಾನ ಮಾಡುವುದರಿಂದ ವಂಚಿತರಾಗಬಾರದು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ವಿಶೇಷ ಅಭಿಯಾನವನ್ನು ನಡೆಸಲಾಗುವುದು. ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ನಮೂನೆ-6 ರಲ್ಲಿ ಅರ್ಜಿ ಸ್ವೀಕರಿಸಲಾಗುವುದು ಎಂದರು.

ಬೂತ್ ಲೆವಲ್ ಏಜೆಂಟ್‌ಗಳನ್ನು ನೇಮಕ ಮಾಡಿ

ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ತಮ್ಮ ಪಕ್ಷದಿಂದ ಬೂತ್ ಲೆವಲ್ ಏಜೆಂಟ್‌ಗಳನ್ನು ನೇಮಕ ಮಾಡಿ ವಿವರವನ್ನು ಸಲ್ಲಿಸಬೇಕು. ಇದರಿಂದ ಬೂತ್ ಲೆವಲ್‌ನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು. ಮತದಾರ ಪಟ್ಟಿಯಿಂದ ಯಾವುದೇ ಹೆಸರನ್ನು ಸ್ವಯಂ ಪ್ರೇರಿತವಾಗಿ ಕೈಬಿಟ್ಟಿಲ್ಲ. ಮರಣ ಹೊಂದಿದವರು ಹಾಗೂ ಮತದಾರರೇ ಖುದ್ದು ಬೇರೆ ಸ್ಥಳಗಳಿಗೆ ಸ್ಥಳಾಂತರವಾಗಿ ಅರ್ಜಿ ಸಲ್ಲಿಸಿದ್ದಾರೆ, ಅವುಗಳನ್ನು ಪರಿಶೀಲಿಸಿ ಕೈಬಿಡಲಾಗಿದೆ ಎಂದರು.

ಜಿ.ಪಂ, ತಾ.ಪಂ.ಸದಸ್ಯರ ಸಂಖ್ಯೆ ಪ್ರಕಟ 

ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿ ಕ್ಷೇತ್ರಗಳ ಸದಸ್ಯರ ನಿಗಧಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ, ಗಡಿ ನಿರ್ಣಾಯಿಸಿ ಜನವರಿ 2 ರಂದು‌ ಕರ್ನಾಟಕ ಪಂಚಾಯತ್ ರಾಜ್ ಸೀಮಾ ಆಯೋಗವು ಮಂಡ್ಯ ಜಿಲ್ಲೆಯ ವಿಶೇಷ ರಾಜ್ಯ ಪತ್ರವನ್ನು ಪ್ರಕಟಿಸಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ : ನಾಗಮಂಗಲ -4, ಶ್ರೀರಂಗಪಟ್ಟಣ, ಪಾಂಡವಪುರ ತಲಾ -5, ಕೆ.ಆರ್ ಪೇಟೆ-6, ಮಳವಳ್ಳಿ-7, ಮದ್ದೂರು- 7, ಮಂಡ್ಯ-7 ಒಟ್ಟು 40 ಸದಸ್ಯರ ಸಂಖ್ಯೆ ಇದೆ.

ತಾಲೂಕು ಪಂಚಾಯತಿ : ನಾಗಮಂಗಲ -16, ಶ್ರೀರಂಗಪಟ್ಟಣ, ಪಾಂಡವಪುರ -17, ಕೆ.ಆರ್ ಪೇಟೆ-20, ಮಳವಳ್ಳಿ-22, ಮದ್ದೂರು- 23 ಮಂಡ್ಯ-24 ಒಟ್ಟು 137 ಸದಸ್ಯರ ಸಂಖ್ಯೆ ಇದೆ.

ರಾಜ್ಯ ಪತ್ರವನ್ನು ಜಿಲ್ಲಾಧಿಕಾರಿ, ಉಪ ವಿಭಾಗಧಿಕಾರಿಗಳ ಕಛೇರಿ ಹಾಗೂ ತಾಲ್ಲೂಕು ಕಛೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಚುನಾವಣಾ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ ಜನವರಿ 16ರ ಸಂಜೆ 5 ಗಂಟೆಯೊಳಗೆ http://rdpr.Karnataka.gov.in/rdc/public/ ವೆಬ್-ಸೈಟ್ ಮೂಲಕ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!