Thursday, September 19, 2024

ಪ್ರಾಯೋಗಿಕ ಆವೃತ್ತಿ

ಶಾಲಾ ಮಕ್ಕಳ ”ಸೈಕಲ್ ಗೆ ಬ್ರೇಕ್” ಹಾಕಿದ ಸರ್ಕಾರ : ತೆರೆಮರೆಗೆ ಸರಿದ ಜನಪರ ಯೋಜನೆ

✍️ ಶ್ವೇತಕುಮಾರಿ

2006-07ರಲ್ಲಿ ಮೊದಲ ಬಾರಿಗೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಣೆ ಮಾಡಲಾಗಿತ್ತು. ಕೊರೊನಾ ಕಾರಣದಿಂದಾಗಿ 2019ರ ನಂತರ ಎರಡು ವರ್ಷಗಳ ಕಾಲ ಸೈಕಲ್ ವಿತರಣೆಗೆ ಬ್ರೇಕ್‌ ಹಾಕಲಾಗಿತ್ತು. ಈ ವರ್ಷವೂ ವಿದ್ಯಾರ್ಥಿಗಳ ಪಾಲಿಗೆ ಸೈಕಲ್ ಕನಸಾಗುವ ಸಾಧ್ಯತೆಯೇ ಹೆಚ್ಚಿದೆ

ಗ್ರಾಮೀಣ ಭಾಗದಲ್ಲಿ ಐದಾರು ಹಳ್ಳಿಗಳಿಗೆ ಒಂದು ಸರ್ಕಾರಿ ಪ್ರೌಢಶಾಲೆ ಇರುತ್ತದೆ. ಶಾಲೆಗೆ ಬರಲು ಗ್ರಾಮೀಣ ಭಾಗದ ಮಕ್ಕಳು ಪ್ರತಿನಿತ್ಯ ಐದಾರು ಕಿಲೋ ಮೀಟರ್ ನಡೆದು ಸಾಗುತ್ತಾರೆ. ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ಶಿಕ್ಷಣವನ್ನು ಪ್ರೋತಾಹಿಸಲು ಸರ್ಕಾರ ಎಂಟನೇ ತರಗತಿ ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್ ವಿತರಿಸಲು ಆರಂಭಿಸಿತ್ತು. ಕ್ರಮೇಣ ವಿದ್ಯಾರ್ಥಿಗಳಿಗೂ ವಿಸ್ತರಿಸಿತ್ತು. ಆದರೆ, ಇದೀಗ ಆ ಮಹತ್ವದ ಯೋಜನೆಯನ್ನು ತೆರೆಮರೆಗೆ ಸರಿಸುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ ಎಂಬ ಆತಂಕ ವ್ಯಕ್ತವಾಗುತ್ತಿದೆ.

ಎರಡು ವರ್ಷ ಅಂದರೆ 2019-20 ಮತ್ತು 2020-21ರಲ್ಲಿ ಕೋವಿಡ್‌ ಕಾರಣಕ್ಕೆ ಎಂಟನೇ ತರಗತಿ ಮಕ್ಕಳಿಗೆ ಸೈಕಲ್‌ ವಿತರಣೆ ಮಾಡಿರಲಿಲ್ಲ. ಸೈಕಲ್‌ ಜೊತೆಗೆ ಶೂ, ಸಾಕ್ಸ್‌ನ್ನೂ ವಿತರಣೆ ಮಾಡಿರಲಿಲ್ಲ. 2022-2023 ಬಜೆಟ್‌ನಲ್ಲಿ ಸೈಕಲ್‌ ವಿತರಣೆಗೆ ಅನುದಾನವನ್ನೇ ಮೀಸಲಿಡಲಾಗಿಲ್ಲ.

ಇತ್ತೀಚೆಗೆ ಶಿಕ್ಷಣ ಸಚಿವರು ‘ಮಕ್ಕಳು ಶಾಲೆಗೆ ಬರುವುದು ಸೈಕಲ್‌, ಶೂ, ಸಾಕ್ಸ್‌ಗಳಿಗಲ್ಲ’ ಎಂದು ಹೇಳಿದ್ದರು. ಶೂ-ಸಾಕ್ಸ್‌ ವಿತರಣೆಯನ್ನು ವಿಳಂಬ ಮಾಡಿದ್ದರು. ಈಗ ಸೈಕಲ್‌ ವಿತರಣೆಗೆ ಶಾಲೆಗಳಿಂದ ವಿದ್ಯಾರ್ಥಿಗಳ ವಿವರಣೆಯನ್ನೂ ಸರ್ಕಾರ ಪಡೆದುಕೊಂಡಿಲ್ಲವೆಂದು ತಿಳಿದುಬಂದಿದೆ. ಇದೆಲ್ಲವೂ ಸರ್ಕಾರ ವಿದ್ಯಾರ್ಥಿಗಳನ್ನು ಕಡೆಗಣಿಸುತ್ತಿದೆ ಎಂಬುದನ್ನು ಸಾಕ್ಷೀಕರಿಸುತ್ತಿವೆ. ವಿದ್ಯಾರ್ಥಿಗಳಿಗೆ ಸೈಕಲ್‌ ದೊರೆಯುವುದೇ ಎಂಬ ಅನುಮಾನ ಹುಟ್ಟುಹಾಕಿವೆ.

ಈ ಬಗ್ಗೆ ಉಡುಪಿ ಜಿಲ್ಲೆಯ 8ನೇ ತರಗತಿಯ ವಿದ್ಯಾರ್ಥಿನಿಯ ತಂದೆ ಶಿವರಾಮ್‌ ಮಾತನಾಡಿ, ”ನಮ್ಮ ಮಕ್ಕಳು ದಿನಾ ಸುಮಾರು ನಾಲ್ಕು ಕಿಲೋಮೀಟರ್ ನಡೆದುಕೊಂಡು ಶಾಲೆಗೆ ಹೋಗುತ್ತಿದ್ದಾರೆ. ಒಮ್ಮೆ ಯಾರೋ ದಾನಿಗಳು ಆಟೋ ವ್ಯವಸ್ಥೆ ಮಾಡಿದ್ದರು. ಸ್ವಲ್ಪ ದಿನಗಳ ಬಳಿಕ ಅದೂ ನಿಂತಿದೆ. ನಮ್ಮ ಊರಿಗೆ ಬಸ್‌ ವ್ಯವಸ್ಥೆಯು ಇಲ್ಲ. ನಮ್ಮ ಮಕ್ಕಳು ನಡೆದುಕೊಂಡು ಹೋಗುವ ದಾರಿಯು ತುಂಬಾ ಹದಗೆಟ್ಟಿದೆ. ಈ ವರ್ಷ ಮಗಳಿಗೆ ಸೈಕಲ್‌ ಸಿಗುತ್ತದೆಂದು ಭಾವಿಸಿದ್ದೇವು. ಈಗ ಅದು ನೆಲಕಚ್ಚಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಪೋಷಕರೊಬ್ಬರು ಮಾತನಾಡಿ, “ನಾವು ಗೋಗರೆದ ಮೇಲೆ ಸಾಕ್ಸ್‌, ಶೂ ಕೊಟ್ಟಿದ್ದಾರೆ. ನಮ್ಮ ಗ್ರಾಮದ ಮಕ್ಕಳು ಕಾಡು ದಾರಿ ದಾಟಿ ನಂತರ ಡಾಂಬಾರು ದಾರಿಯಲ್ಲಿ ನಡೆದು ಶಾಲೆ ತಲುಪಬೇಕು. ಹೆಣ್ಣು ಮಕ್ಕಳನ್ನು ಕಾಡು ದಾರಿಯಲ್ಲಿ ಒಬ್ಬರೇ ಕಳುಹಿಸಲು ಆಗುವುದಿಲ್ಲ. ಸರ್ಕಾರ ಸೈಕಲ್‌ ಕೊಡಬೇಕು ಇಲ್ಲವಾದಲ್ಲಿ ಬೇರೆ ವ್ಯವಸ್ಥೆಯನ್ನಾದರೂ ಮಾಡಬೇಕು” ಎಂದು ಕಿಡಿಕಾರಿದರು.

ತುಮಕೂರು ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯೊಂದರ ಶಿಕ್ಷಕ ರಾಘವೇಂದ್ರ ಮಾತನಾಡಿ, “ಉಚಿತ ಸೈಕಲ್‌ಗಾಗಿ 8ನೇ ತರಗತಿಯ ಮಕ್ಕಳ ಪಟ್ಟಿ ಕೊಟ್ಟು ಸುಮಾರು 4 ತಿಂಗಳು ಕಳೆದಿವೆ. ಇಲಾಖೆಯಿಂದ ಯಾವುದೇ ಮಾಹಿತಿ ಬಂದಿಲ್ಲ. ಡಿಡಿಪಿಐ ಅವರ ಬಳಿ ಕೇಳಿದರೆ ‘ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ’ ಎನ್ನುತ್ತಾರೆ” ಎಂದರು.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಿಕ್ಷಕರೊಬ್ಬರು ಮಾತನಾಡಿ, “ಈ ಬಗ್ಗೆ ನಮಗೆ ಇಲಾಖೆಯಿಂದ ಯಾವುದೇ ಮಾಹಿತಿಯಿಲ್ಲ. ಈ ಹಿಂದೆ ಮುಂಚಿತವಾಗಿಯೇ ಮಕ್ಕಳ ಪಟ್ಟಿ ಪಡೆದಿದ್ದರೂ ಅನುದಾನದ ಕೊರೆತೆಯಿಂದ ಜೂನ್‌ ತಿಂಗಳಲ್ಲಿ ಸೈಕಲ್‌ ವಿತರಣೆ ಮಾಡಿದ್ದರು. ಈ ಬಾರಿ ಮಕ್ಕಳ ಪಟ್ಟಿ ಪಡೆಯದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಸರ್ಕಾರದಿಂದ ಡಿಡಿಪಿಐಗೆ ಮಾಹಿತಿ ಬಂದು, ನಂತರ ನಮಗೆ ಮಾಹಿತಿ ಬರುತ್ತದೆ. ಇಲ್ಲಿಯವರೆಗೆ ಡಿಡಿಪಿಐಯಿಂದ ಯಾವುದೇ ಮಾಹಿತಿ ಬಂದಿಲ್ಲ” ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರು ನುಡಿಕರ್ನಾಟಕ.ಕಾಮ್ ಜೊತೆ ಮಾತನಾಡಿ, “ಸೈಕಲ್‌ ವಿತರಣೆ ಮಾಡುವ ಸಲುವಾಗಿ ಮಕ್ಕಳ ಪಟ್ಟಿ ಕೊಡುವಂತೆ ಇಲಾಖೆ ತಿಳಿಸಿಲ್ಲ. ಸರ್ಕಾರ ಸೈಕಲ್‌ ವಿತರಣೆ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ” ಎಂದರು.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ (ಪ್ರೌಢ ಶಿಕ್ಷಣ) ನಿರ್ದೇಶಕ ಕೃಷ್ಣಾಜಿ ಎಸ್ ಕರಿಚಣ್ಣನವರ್, “ನಾವು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ. ಸರ್ಕಾರ ನಿರ್ಧಾರ ತೆಗೆದುಕೊಂಡು ಕಾರ್ಯರೂಪಕ್ಕೆ ತಂದರೆ ನಾವು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಕೋವಿಡ್‌ನಿಂದ ಎರಡು ವ‍ರ್ಷ ಸೈಕಲ್‌ ವಿತರಣೆ ಮಾಡಿರಲಿಲ್ಲ. ಈ ವರ್ಷ ಸರ್ಕಾರ ಯಾವ ನಿರ್ಧಾರಕ್ಕೆ ಬರಬಹುದು ಎಂಬುವುದರ ಬಗ್ಗೆ ನಮಗೆ ಯಾವ ಮಾಹಿತಿಯಿಲ್ಲ” ಎಂದು ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!