Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರೇಮಕವಿ ಕೆ.ಎಸ್.ನ ಮೇಲೆ ವಿಶೇಷವಾದ ಪ್ರೀತಿ : ಬಿ.ಆರ್.ಲಕ್ಷ್ಮಣರಾವ್

ಕನ್ನಡ ಸಾಹಿತ್ಯ ಲೋಕದಲ್ಲಿ ಕೆ.ಎಸ್.ನರಸಿಂಹಸ್ವಾಮಿ ಅವರು ಪ್ರೇಮಕವಿಯು ಹೌದು, ಕೌಟುಂಬಿಕ ಪ್ರೇಮಕವಿಯು ಹೌದು. ಹಾಗಾಗಿ ನನಗೆ ನರಸಿಂಹ ಸ್ವಾಮಿ ಅವರ ಮೇಲೆ ವಿಶೇಷವಾದ ಪ್ರೀತಿ ಇದೆ ಎಂದು ಸಾಹಿತಿ ಬಿ ಆರ್ ಲಕ್ಷ್ಮಣರಾವ್ ತಿಳಿಸಿದರು.

ಮಂಡ್ಯನಗರ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಕೆ.ಎಸ್.ನ ಸಾಹಿತ್ಯ ಪ್ರಶಸ್ತಿ ಹಾಗೂ ಕಾವ್ಯ ಗಾಯನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕೆ.ಎಸ್ ನರಸಿಂಹಸ್ವಾಮಿ ಅವರು ನನಗೆ ಅತ್ಯಂತ ಪ್ರಿಯವಾದ ಮತ್ತು ತುಂಬಾ ಪ್ರಭಾವ ಬೀರಿದಂತಹ ಕವಿಯಾಗಿದ್ದಾರೆ ಎಂದರು.

ನರಸಿಂಹಸ್ವಾಮಿ ಅವರು ಮೈಸೂರು ಮಲ್ಲಿಗೆ ಭಾವಗೀತೆಯಿಂದ ಬಹಳ ಜನಪ್ರಿಯವಾಗಿದ್ದಾರೆ. ಅಷ್ಟೇ ಅಲ್ಲದೆ ಕನ್ನಡದ ಅತ್ಯಂತ ಪ್ರಮುಖ ಕವಿಗಳಲ್ಲಿಯೂ ಒಬ್ಬರಾಗಿದ್ದಾರೆ. ಗೋಪಾಲಕೃಷ್ಣ ಅಡಿಗರವರ ಕಾಲದಲ್ಲಿ ನವ್ಯ ಕಾವ್ಯದ ಚಳವಳಿಯ ಕಾಲದಲ್ಲಿಯೇ ದೊಡ್ಡ ಹೆಸರು ಮಾಡಿದಂತವರು ಎಂದು ತಿಳಿಸಿದರು.

ನರಸಿಂಹಸ್ವಾಮಿ ಅವರು ಭಾವಗೀತೆಗಳ ಜೊತೆಯಲ್ಲಿ ಗಂಭೀರ ಕವಿತೆಗಳು ಬಹಳ ಇದೆ. ಅವರ ಮೊಮ್ಮಗಳು ಅವರ ಅನೇಕ ಗಂಭೀರವಾದ ಕವಿತೆಗಳನ್ನು ಕನ್ನಡದಿಂದ ಇಂಗ್ಲೀಷ್‍ಗೆ ಅನುವಾದಿಸಿ ಅದರ ಮಹತ್ವವನ್ನ ಬೇರೆ ಬೇರೆ ಭಾಷೆಗಳಿಗೆ ವಿಶ್ವದಾದ್ಯಂತ ಪ್ರಚಾರಪಡಿಸುತ್ತಿದ್ದಾರೆ ಇದು ಬಹಳ ಸಂತೋಷಕರ ವಿಷಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ 2021-22 ನೇ ಸಾಲಿನ  ಕೆ.ಎಸ್.ನ ಸಾಹಿತ್ಯ ಪ್ರಶಸ್ತಿಯನ್ನು ಕವಯತ್ರಿ ಸವಿತಾ ನಾಗಭೂಷಣ್ ಅವರಿಗೆ, 2022-23 ನೇ ಸಾಲಿನ ಸಾಹಿತ್ಯ ಪ್ರಶಸ್ತಿಯನ್ನು ಕವಿ ಸರಜೂ ಪಾಟ್ಕರ್ ಅವರಿಗೆ, 2021-22 ನೇ ಸಾಲಿನ ಕಾವ್ಯಗಾಯನ ಪ್ರಶಸ್ತಿಯನ್ನು ಗಾಯಕಿ ಎಂ.ಕೆ ಜಯಶ್ರೀ, 2022-23 ನೇ ಸಾಲಿನ ಕಾವ್ಯಗಾಯನ ಪ್ರಶಸ್ತಿಯನ್ನು ಗಾಯಕರಾದ ಗರ್ತಿಕೆರೆ ರಾಘಣ್ಣ ಅವರಿಗೆ ಪ್ರದಾನ ಮಾಡಲಾಯಿತು.

ಇದಕ್ಕೂ ಮುನ್ನ ಗಾಯಕರಾದ ಜೋಗಿ ಸುನೀತಾ, ಅರ್ಚನ ಉಡುಪ, ಶ್ರೀನಿವಾಸ ಉಡುಪ, ಮಂಡ್ಯದ ಡೇವಿಡ್, ವಿದ್ಯಾಶಂಕರ್, ಶ್ರೀಧರ್ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಕೆ.ಎಸ್.ನ ಗೀತೆಗಳಿಗೆ ಚಿದಂಬರ ನಟೇಶ್ ನೃತ್ಯ ಶಾಲೆ ಹಾಗೂ ಸುನೀತಾ ಮತ್ತು ತಂಡದಿಂದ ನೃತ್ಯ ರೂಪಕ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಕೆ ಎಸ್ ನರಸಿಂಹಸ್ವಾಮಿ ಟ್ರಸ್ಟ್ ಆಡಳಿತಾಧಿಕಾರಿ ವಿ ಎನ್ ಮಲ್ಲಿಕಾರ್ಜುನಸ್ವಾಮಿ, ಪ್ರದಾನ ಕಾರ್ಯದರ್ಶಿ ಕಿಕ್ಕೀರಿ ಕೃಷ್ಣಮೂರ್ತಿ, ಕನ್ನಡ ಮತ್ತು ಸಂಸ್ಕಂತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಉದಯಕುಮಾರ್, ಹಿರಿಯ ಸಾಹಿತಿಗಳಾದ ಜಯಪ್ರಕಾಶ್ ಗೌಡ, ಪ್ರದೀಪ್ ಕುಮಾರ್ ಹೆಬ್ರಿ, ಜಿ.ಟಿ ವೀರಪ್ಪ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!