Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮಧ್ಯವರ್ತಿಗಳು-ದಲ್ಲಾಳಿಗಳಿಂದ ರೈತರ ಜೀವನಕ್ಕೆ ಸಂಕಷ್ಟ ಬಂದಿದೆ : ಕೆ.ಸಿ.ನಾರಾಯಣಗೌಡ

ಇಂದು ಮಧ್ಯವರ್ತಿಗಳು ಮತ್ತು ದಲ್ಲಾಳಿಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು,ಅವರ ಕೈ ಹಿಡಿಯಲು ಮುಂದಾಗಿರುವ ರಾಜ್ಯ ಸರ್ಕಾರ ಭತ್ತ ಮತ್ತು ರಾಗಿಯನ್ನು ಬೆಂಬಲ ಬೆಲೆ ನೀಡಿ ಖರೀದಿಸುತ್ತಿದ್ದು,ರೈತರ ಇದರ ಪ್ರಯೋಜನ ಪಡೆದು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕೆಂದು ಎಂದು ರೇಷ್ಮೆ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.

ಕೆ.ಆರ್.ಪೇಟೆ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ‌ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಮತ್ತು ರಾಗಿ ಖರೀದಿಸುವ ಕೇಂದ್ರಕ್ಕೆ ಭತ್ತ ಮತ್ತು ರಾಗಿಯ ರಾಶಿಗೆ ಪೂಜೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ 2,799 ರೈತರು ಭತ್ತ ಸರಬರಾಜು ಮಾಡಲು 81,900 ಕ್ವಿಂಟಾಲ್ ನೊಂದಣಿ ಮಾಡಿಸಿಕೊಂಡರೆ, 9,609 ರೈತರು 1,31,608 ಕ್ವಿಂಟಾಲ್ ರಾಗಿಯನ್ನು ಸರಬರಾಜು ಮಾಡಲು ಆನ್‌ಲೈನ್‌ನಲ್ಲಿ ನೊಂದಣಿ ಮಾಡಿಕೊಂಡಿದ್ದಾರೆ.

ಕೆ.ಆರ್.ಪೇಟೆ ಹಾಗೂ ಕಿಕ್ಕೇರಿಯಲ್ಲಿ ರೈತರಿಂದ ಪ್ರತಿಕ್ವಿಂಟಾಲ್ ಭತ್ತಕ್ಕೆ 2040 ರೂ.ಗಳಂತೆ, 3578 ರೂ.ಗಳಂತೆ ರಾಗಿಗೆ ದರ ನಿಗದಿ ಮಾಡಿದ್ದು, ರೈತ ಬಾಂಧವರು ಯಾವುದೇ ದಲ್ಲಾಳಿಗಳು ಮತ್ತು ಮಧ್ಯವರ್ತಿಗಳನ್ನು  ಆಶ್ರಯಿ ಸದೇ ನೇರವಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯ ವತಿಯಿಂದ ಆರಂಭಿಸಿರುವ ಖರೀದಿ ಕೇಂದ್ರಕ್ಕೆ ತಂದು ನೀಡಬೇಕು ಎಂದು ಮನವಿ ಮಾಡಿದರು.

ರೈತಬಾಂಧವರು ದಲ್ಲಾಳಿಗಳ ಬೆರಗು ಮಾತಿಗೆ ಮೋಸ ಹೋಗದೇ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಯಾದ ಬೆಂಬಲ ಬೆಲೆ ಯೋಜನೆಯ ಖರೀದಿ ಕೇಂದ್ರದಲ್ಲಿಯೇ ತಮ್ಮ ವಹಿವಾಟು ನಡೆಸಬೇಕು ಎಂದು  ಕಿವಿ ಮಾತು ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯ ನಿರ್ದೇಶಕ ಎಸ್.ಎಲ್.ಮೋಹನ್ ಮಾತನಾಡಿ, ಪ್ರಸ್ತುತ ನೊಂದಣಿ ಮಾಡಿಕೊಂಡಿರುವ ರೈತರ ಹೊರತಾಗಿಯು ಬೇರೆ ರೈತರು ತಾವು ಬೆಳೆದಿರುವ ರಾಗಿ ಅಥವಾ ಭತ್ತವನ್ನು ಖರೀದಿ ಕೇಂದ್ರಕ್ಕೆ ಮಾರಾಟ ಮಾಡಲು ತಂದರೆ ಪ್ರಸ್ತುತ ನೊಂದಾವಣಿ ಮಾಡಿಕೊಂಡಿರುವ ರೈತರ ಸರಬರಾಜಿನ ನಂತರ ಉಳಿದ ರೈತರಿಗೂ ಅವಕಾಶವನ್ನು ಮಾಡಿಕೊಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎಚ್.ಬಾಲಶೇಖರ್ ಮಾತನಾಡಿ, ಸಚಿವ ನಾರಾಯಣಗೌಡರ ವಿಶೇಷ ಆಸಕ್ತಿಯ ಫಲವಾಗಿ ಭತ್ತ, ರಾಗಿ ಖರೀದಿ ಕೇಂದ್ರ ಆರಂಭವಾಗಿದ್ದು, ಇಲ್ಲಿ ರೈತರ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತದೆ. ಆದ್ದರಿಂದ ರೈತಭಾಂಧವರು ಧೈರ್ಯವಾಗಿ ತಾವು ಬೆಳೆದಿರುವ ಪದಾರ್ಥಗಳನ್ನು ತಂದು ಮಾರಾಟಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಷ್, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಪುರಸಭೆ ಅಧ್ಯಕ್ಷೆ ಮಹಾದೇವಿ, ತಾಲ್ಲೂಕು ಕಛೇರಿಯ ಆಹಾರ ಇಲಾಖೆಯ ಶಿರಸ್ತೇದಾರ್ ಪೂರ್ಣಿಮ, ಎ.ಪಿ.ಎಂ.ಸಿ.ಕಾರ್ಯದರ್ಶಿ ರಫೀಕ್ ಅಹಮದ್, ಸಹಕಾರ್ಯದರ್ಶಿ ಸತೀಶ್, ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯ ಅಧಿಕಾರಿ ಗಳಾದ ಶೀಲಾ, ವೆಂಕಟೇಶ್ ನಾಯಕ್, ತಾಲ್ಲೂಕು ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ವೇಣುಗೋಪಾಲ್, ಕಿಕ್ಕೇರಿ ರಾಜು, ತಾಲ್ಲೂಕು ಬಿಜೆಪಿ ಉಪಾಧ್ಯಕ್ಷ ಭಾರತೀಪುರ ಪುಟ್ಟಣ್ಣ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ