Thursday, September 19, 2024

ಪ್ರಾಯೋಗಿಕ ಆವೃತ್ತಿ

ತುಂಬಾ ನೊಂದಿದ್ದೇನೆ… ನನಗೆ ಅನ್ಯಾಯ ಮಾಡಬೇಡಿ : ಬಿ‌.ಎಲ್‌.ದೇವರಾಜ್

ನಾನು ಕಳೆದ 40 ವರ್ಷಗಳಿಂದ ಜೆಡಿಎಸ್ ಪಕ್ಷಕ್ಕೆ ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇನೆ. ತುಂಬಾ ನೊಂದಿರುವ ನನಗೆ ಅನ್ಯಾಯ ಮಾಡಬೇಡಿ,ಇದು ನನ್ನ ಕೊನೆಯ ಚುನಾವಣೆ.ದಯಮಾಡಿ ಈ ಬಾರಿ ಬಿ ಫಾರಂ ಕೊಡಲೇಬೇಕು ಎಂದು ಹಿರಿಯ ಜೆಡಿಎಸ್ ಮುಖಂಡ ಬಿ.ಎಲ್.ದೇವರಾಜು ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದರು.

ಕೆ.ಆರ್.ಪೇಟೆ ಪಟ್ಟಣದ ಎಂ.ಕೆ.ಬೊಮ್ಮೇಗೌಡ ಸಹಕಾರ ಭವನದ ಆವರಣದಲ್ಲಿ ತಮ್ಮ ಅಭಿಮಾನಿಗಳು ಹಾಗೂ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರು ಆಯೋಜಿಸಿದ್ದ ಬೃಹತ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಕೇವಲ ನಾಲ್ಕೂವರೆ ಸಾವಿರ ಅಲ್ಪ ಮತಗಳ ಅಂತರದಿಂದ ಪರಾಭವಗೊಂಡಿರುವ ನನಗೆ ಪಕ್ಷವು ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧೆಮಾಡಲು ಕೊನೆಯ ಅವಕಾಶ ಮಾಡಿಕೊಡಬೇಕು ಎಂಬುದಷ್ಟೇ ನನ್ನ ಆಗ್ರಹಪೂರ್ವಕ ಮನವಿಯಾಗಿದೆ. ನನ್ನ ಮನವಿಗೆ ಇಲ್ಲಿ ನೆರದಿರುವ ಹತ್ತು ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ದನಿಯಾಗಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಕೆ.ಆರ್.ಪೇಟೆ ತಾಲ್ಲೂಕಿನ ವಾಸ್ತವ ಚಿತ್ರಣದ ವರದಿಯನ್ನು ತರಿಸಿಕೊಂಡು ನೂರಕ್ಕೇ ನೂರು ಗೆಲ್ಲುವ ಸಾಮರ್ಥ್ಯ ಹಾಗೂ ಅವಕಾಶ ಹೊಂದಿರುವ ನನಗೆ ಬಿ.ಫಾರಂ ನೀಡಬೇಕೆಂದು ಕೈ ಮುಗಿದು ಮನವಿ ಮಾಡಿದರು.

ಎಚ್.ಟಿ.ಮಂಜು ವಿರುದ್ಧ ವಾಗ್ದಾಳಿ

ನಾನು ಎಂದಿಗೂ ಪ್ರಚಾರಕ್ಕೆ ಆಸೆ ಪಟ್ಟವನಲ್ಲ, ತಾಲ್ಲೂಕಿನಲ್ಲಿ ಕಟೌಟ್, ಫ್ಲೆಕ್ಸ್ ಹಾಕಿಸಿಕೊಂಡು , ಯಾರಿಂದಲೂ ಜೈಕಾರ ಹಾಕಿಸಿಕೊಳ್ಳಲಿಲ್ಲ. ಯಾರಿಗೂ ಜೈಕಾರ, ಧಿಕ್ಕಾರವನ್ನು ಕೂಗಿಸಿಲ್ಲ. ನಾನು ಪ್ರತಿದಿನ ಮೂರು ಬಾರಿ ತಾಲೂಕು ಆಫೀಸ್ ಗೆ ಹೋಗುತ್ತೇನೆ ಅಲ್ಲಿ ಜನರ ಕೆಲಸವನ್ನು ಮಾಡಿಕೊಡುತ್ತೇನೆ. ಆದರೆ ಯಾರಿಂದಲೂ ಒಂದು ರೂಪಾಯಿ ಹಣ ಪಡೆದಿಲ್ಲ. ಜನರ ಸೇವೆ ಮಾಡಿದ್ದೇನೆ. ಆದರೆ ನಮ್ಮಣ್ಣ ವಜ್ರ, ನಮ್ಮಣ್ಣ ಸಿಂಹ, ಆನೆ ಎಂದೆಲ್ಲಾ ಹೊಗಳಿಸಿಕೊಳ್ಳುವ, ನಮ್ಮಣ್ಣ ಬಂದ್ರೆ ಈ ತಾಲೂಕು ಉದ್ದಾರ ಆಗುತ್ತೆ ಎಂದೆಲ್ಲಾ ಹೇಳುವ ಇವರಣ್ಣ ಆನೆ, ಸಿಂಹ ಎಲ್ಲಾದ್ರೂ ಒಂದೇ ಒಂದು ದಿನ ತಾಲೂಕು ಆಫೀಸ್ ಹತ್ರ ನೋಡಿದ್ದೀರಾ ಎಂದು ಎಚ್.ಟಿ.ಮಂಜು ಹೆಸರೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಆತ ಜೆಡಿಎಸ್ ಪಕ್ಷಕ್ಕೆ ಬಂದೊಡನೆ ಹಾಲಿನ ಡೈರಿ ನಿರ್ದೇಶಕನಾದ, ನಂತರ ಜಿಲ್ಲಾ ಪಂಚಾಯತ್ ಸದಸ್ಯ, ಮನ್ಮುಲ್ ನಿರ್ದೇಶಕ ಎಲ್ಲಾ ಆಗಿದ್ದಾನೆ. ಆತ ಪಕ್ಷಕ್ಕೆ ಬಂದು ಕೇವಲ ಒಂಬತ್ತು ವರ್ಷಕ್ಕೆ ವಿಧಾನಸಭಾ ಟಿಕೆಟ್ ನೀಡಿದ್ದಾರೆ. ನಾನು 1983 ರಲ್ಲಿ ಜೆಡಿಎಸ್ ಪಕ್ಷ ಸೇರಿದೆ. ನಾನು ಕೆಲಸ ಮಾಡಿದ 16 ವರ್ಷ ಆದ ಮೇಲೆ ನನಗೆ ಬಿ.ಫಾರಂ ಕೊಟ್ಟಿದ್ದು, ಕಳೆದ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ಯಥೇಚ್ಚವಾಗಿ ಹಣ ಖರ್ಚು ಮಾಡಿತು. ಯಡಿಯೂರಪ್ಪನವರ ಮಗ ವಿಜಯೇಂದ್ರನೆ ಬಂದು ಚುನಾವಣೆ ಮಾಡಿದ್ದರು. ಆದರೂ ಕ್ಷೇತ್ರದ ಜನತೆ 57,000 ಮತಗಳನ್ನು ನೀಡಿದರು. ನಾನು ಹತ್ತಿರ ಬಂದು ಸೋತು ಹೋದೆ. ಆದರೆ 9 ವರ್ಷದಲ್ಲಿ ಮೂರು ಅಧಿಕಾರ ನೀಡಿರುವ ಆತನಿಂದ ಈಗಾಗಲೇ ತಾಲೂಕಿನಲ್ಲಿ ಆರ್ಭಟ ಹೆಚ್ಚಾಗಿದೆ. ಇನ್ನು ಎಂಎಲ್ಎ ಆದ್ರೆ, ತಾಲ್ಲೂಕಿನ ಕಥಯೇನು ಎಂದು ಜನರೇ ಹೇಳುತ್ತಿದ್ದಾರೆಂದು ಕಿಡಿಕಾರಿದರು.

ನಾನು ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ ದೇವೇಗೌಡರ ವಿರುದ್ಧ ಎಂದಿಗೂ ನಾನು ಮಾತನಾಡಿಲ್ಲ, ನನಗೆ 2013ರ ಚುನಾವಣೆಯಲ್ಲಿ ಬಿ ಫಾರಂ ಕೊಟ್ಟಾಗ ನಾರಾಯಣಗೌಡನ ಕಡೆಯವರು ದೇವೇಗೌಡರಿಗೆ ಧಿಕ್ಕಾರ ಕೂಗಿದರು. ಇದು ಎಲ್ಲ ಮಾಧ್ಯಮಗಳಲ್ಲೂ ಬಂತು. ನಂತರ ನಾರಾಯಣಗೌಡ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ ಎಂದು ಮಾಧ್ಯಮಗಳಲ್ಲಿ ಪ್ರಚಾರ ಮಾಡಿಸಿದರು. ನಂತರ ನಾನು ವರಿಷ್ಠರು ಹೇಳಿದಂತೆ ಆತನ ಗೆಲುವಿಗೆ ಕೆಲಸ ಮಾಡಿದೆ. ನಾನು ಎಂದಿಗೂ ಧಿಕ್ಕಾರ ಹಾಕಿಸಿಲ್ಲ, ಜೈಕಾರ ಕೂಡ ಹಾಕಿಸಿಲ್ಲ. ಇವೆಲ್ಲಾ ನಮ್ಮ ಸಂಸ್ಕೃತಿಯಲ್ಲ. ನಮ್ಮ ತಾಲೂಕಿನಲ್ಲಿ ಕೆಲವರು ಇದ್ದಾರೆ ಅವರು ಮಾಡಿಕೊಳ್ಳಲಿ, ಅವರೇ ಒಂದು ಊರಿಗೆ ಹೋಗಿ ಕೇಕ್ ಕೊಡ್ತಾರೆ, ಪಟಾಕಿ ಕೊಡ್ತಾರೆ, ಹೂವಿನ ಹಾರವನ್ನೂ ಕೊಟ್ಟು ಹಾಕಿಸಿ ಕೊಳ್ತಾರೆ ಎಂದು ಎಚ್.ಟಿ.ಮಂಜು ವಿರುದ್ಧ ವ್ಯಂಗ್ಯವಾಡಿದರು.

ಒಂದು ರೂಪಾಯಿ ಲಂಚ ಪಡೆದಿಲ್ಲ

ನಾನು ಸಾಮಾನ್ಯ ಕುಟುಂಬದಿಂದ ಬಂದವನು. ನಾನೇನು ಕೋಟ್ಯಾಧಿಪತಿಯಲ್ಲ, ನಾನು ಬಹಳ ದುಃಖದಿಂದ ಹೇಳುತ್ತಿದ್ದೇನೆ. ದಯಮಾಡಿ ವರಿಷ್ಠರು ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಬಿ.ಫಾರಂ ಅನ್ನು ಮತ್ತೊಮ್ಮೆ ಮರು ಪರಿಶೀಲನೆ ಮಾಡಬೇಕು. ನಾನು ನನ್ನ ಜೀವನದಲ್ಲಿ ಒಂದೇ ಒಂದು ರೂಪಾಯಿಯನ್ನು ಲಂಚ ಪಡೆದಿಲ್ಲ. ಈ ಬಗ್ಗೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮೇಲೆ ಆಣೆ ಮಾಡಿ ಹೇಳುತ್ತೇನೆ.
ನನಗೆ ಇದೇ ಕೊನೆ ಚುನಾವಣೆ, ಟಿಕೆಟ್ ಕೊಟ್ರೂ, ಕೊಡದೆ ಇದ್ರೂ ಇದೇ ನನ್ನ ಕೊನೆ ಚುನಾವಣೆ. ಮತ್ತೆಂದೂ ರಾಜಕಾರಣಕ್ಕೆ ಬರುವುದಿಲ್ಲ ಎಂದರು.

ಸಭೆಯಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಪ್ರಸ್ತುತ ಬಿ.ಎಲ್.ದೇವರಾಜು ಅವರನ್ನು ಬೆಂಬಲಿಸುತ್ತಿರುವ ಮುಖಂಡರಾದ ಬಸ್‌ ಕೃಷ್ಣೇಗೌಡ, ಪುರಸಭೆಯ ಸದಸ್ಯ ಬಸ್ ಸಂತೋಷ್‌ಕುಮಾರ್, ಕೆ.ಆರ್.ಪೇಟೆ ತಾಲ್ಲೂಕಿನ ಮೈಸೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೆಂಕಟೇಶ್, ಕುರುಬ ಸಮಾಜದ ಮುಖಂಡ ಕಡಹೆಮ್ಮಿಗೆ ಧನಂಜಯ, ವಕೀಲ ಬಳ್ಳೇಕೆರೆ ಯೋಗೇಶ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಹಿರಿಕಳಲೆ ರಾಮದಾಸ್ ಮಾತನಾಡಿ, ಎಲ್ಲರೂ ಹಿರಿಯ ಮುಖಂಡರಾಗಿರುವ ಬಿ.ಎಲ್.ದೇವರಾಜು ಅವರಿಗೆ ಆಗಿರುವ ಆನ್ಯಾಯವನ್ನು ವರಿಷ್ಠರು ಸರಿಪಡಿಸಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ತಾ.ಪಂ.ಮಾಜಿ ಸದಸ್ಯ ರಾಜಾಹುಲಿ ದಿನೇಶ್, ಕಿಕ್ಕೇರಿ ಕಾಯಿ ಸುರೇಶ್, ಟಿಎಪಿಸಿಎಂಎಸ್ ನಿರ್ದೇಶಕ ಶಶಿಧರ್ ಸಂಗಾಪುರ, ಮುಖಂಡರಾದ ರಾಮಕೃಷ್ಣೇಗೌಡ, ಈರಪ್ಪಗೌಡ, ಅಂಬಿಗರಹಳ್ಳಿ ಶಿವರಾಂ, ಎಪಿಎಂಸಿ ಮಾಜಿ ಅದ್ಯಕ್ಷ ಕೋಡಿಮಾರನಹಳ್ಳಿ ಮಂಜೇಗೌಡ, ಮಡುವಿನ ಕೋಡಿ ಲೋಕೇಶ್, ಪ್ರಗತಿಪರ ಕೃಷಿಕ ವಿಠಲಾಪುರ ಸುಬ್ಬೇಗೌಡ, ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!