ವರದಿ : ನ.ಲಿ.ಕೃಷ್ಣ
ವಿಶ್ವದಲ್ಲೆ ಹೆಚ್ಚು ಸದಸ್ಯರನ್ನು ಹೊಂದಿದ ಹಿರಿಮೆ ಕನ್ನಡ ಸಾಹಿತ್ಯ ಪರಿಷತ್ತಿನದು, ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಸಾಹಿತ್ಯ ಪರಿಷತ್ತು ಇಂದು ಅತ್ಯಂತ ಸಮೃದ್ದವಾಗಿ ಸಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರವಿಕುಮಾರ್ ಚಾಮಲಾಪುರ ಅಭಿಮಾನದಿಂದ ನುಡಿದರು.
ಮದ್ದೂರಿನ ಭೂ ಬ್ಯಾಂಕ್ ಸಭಾಂಗಣದಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
87 ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯಲಿದೆ, ಈ ಸಮ್ಮೇಳನಕ್ಕೆ ಜಿಲ್ಲೆಯ ಜನರು ಸಜ್ಜಾಗಬೇಕು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಈ ನಿಟ್ಟಿನಲ್ಲಿ ಜಾಗೃತಿಯನ್ನು ಮೂಡಿಸುವಲ್ಲಿ ಶ್ರಮಿಸಿ. ಜಿಲ್ಲೆಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಎಲ್ಲಾ ಸಾಧಕರನ್ನು ಗಣ್ಯರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಮಾಡೋಣ ಎಂದರು.
ಈ ಸಮ್ಮೇಳನ 2024ರ ಫೆಬ್ರವರಿಯಲ್ಲಿ ಸಮ್ಮೇಳನವನ್ನು ನಿಗಧಿಗೊಳಿಸಿಕೊಡಲು ರಾಜ್ಯಾಧ್ಯಕ್ಷರನ್ನು ಕೇಳಿಕೊಳ್ಳಲಾಗಿದೆ, ಈ ಸಮ್ಮೇಳನದಲ್ಲಿ ಶಾಲಾ ಕಾಲೇಜಿನ ವಿಧ್ಯಾರ್ಥಿ ಗಳನ್ನು ಒಳಗೊಳ್ಳಬೇಕೆಂಬ ಆಶಯ ಹೊಂದಲಾಗಿದೆ. ಮಹಿಳೆಯರು, ರೈತರು ಸೇರಿ ಎಲ್ಲಾ ವರ್ಗದ ಜನರನ್ನು ಒಳಗೊಂಡು ಸಾಹಿತ್ಯದ ತೇರನ್ನು ಯಶಸ್ವಿಗೊಳಿಸೋಣ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪನ್ಯಾಸಕ ಕೃಷ್ಣ,ಕನ್ನಡ ಸಾಹಿತ್ಯದ ತೇರು ಎಳೆಯುವ ಮಹತ್ವದ ಜವಾಬ್ದಾರಿ ಹೊತ್ತಿರುವ ಉಮಾಶಂಕರ್ ಮತ್ತವರ ತಂಡದವರು ಯಶಸ್ವಿಯಾಗಿ ಕಾರ್ಯ ಪ್ರವೃತ್ತರಾಗಲಿ ಎಂದು ಶುಭ ಹಾರೈಸಿದರು.
ಆಶಯ ನುಡಿಯನ್ನಾಡಿದ ನ.ಲಿ.ಕೃಷ್ಣ, ಗೋವಿನ ಹಾಡು ಕವಿಯ ತವರೂರಿನ ಸಾಹಿತ್ಯ ಪರಿಷತ್ತು ಸಮೃದ್ದತೆಯನ್ನು ಕಾಣಲಿ ಎಂದರು.
ಕ್ರಾಂತಿ ಸಿಂಹ ಮಾತನಾಡಿ, ರವಿಕುಮಾರ್ ಅವರ ಅವಧಿಯಲ್ಲಿ ಪ್ರತಿಭಾನ್ವಿತ ಯುವ ಸಾಹಿತಿಗಳಿಗೆ ಪ್ರೋತ್ಸಾಹ ದೊರೆತಿರುವುದು ಶ್ಲಾಘನೀಯ ಎಂದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೊಜನೆಯ ತಾಲ್ಲೂಕು ಸಂಯೋಜಕ ಯೋಗೇಶ್ ಮಾತನಾಡಿ, ಕನ್ನಡದ ಕಂಪನ್ನು ಮಂಡ್ಯದಲ್ಲಿ ಕಾಣುವುದರ ಜೊತೆಗೆ ಮಂಡ್ಯದ ಜನರ ಸಿಹಿ ಮನಸ್ಸಿನ ಪರಿಚಯ ಆಗಿದೆ ಎಂದರು
ವೇದಿಕೆಯಲ್ಲಿ ಪ್ರಣಾಮ್ ಸತೀಶ್, ಬಿ ವಿ ಶಂಕರೇಗೌಡ, ವಳಗೆರೆಹಳ್ಳಿ ಲೊಕೇಶ್, ಅನಂತೇಗೌಡ ಉಪಸ್ಥಿತರಿದ್ದರು.




