Thursday, September 19, 2024

ಪ್ರಾಯೋಗಿಕ ಆವೃತ್ತಿ

ಹೊರ ಜಗತ್ತಿನ ಪಾಲಿಗೆ ಫೈರ್ ಬ್ರ್ಯಾಂಡ್ ಆಗಿದ್ದ ಗೌರಿ ಮೇಡಂ ನೆನಪಿನಲ್ಲಿ….

✍️ ಗಿರೀಶ್ ತಾಳಿಕಟ್ಟೆ

ಗೌರಿ ಲಂಕೇಶ್ ಮತ್ತು ನನ್ನ ನಡುವಿನ ಒಡನಾಟ, ಅಷ್ಟು ತೀವ್ರವಾದದ್ದೇನೂ ಆಗಿರಲಿಲ್ಲ. ಹಾಗಂತ ನಾನು ಅಂದುಕೊಂಡಿದ್ದೆ. ಆದರೆ, ಅವರ ಅಗಲಿಕೆಯ ತರುವಾತದಲ್ಲಿ ಅವರು ನನ್ನೊಳಗೆ ಎಷ್ಟು ಗಾಢವಾಗಿ ಬೆರೆತು ಹೋಗಿದ್ದರು ಅನ್ನೋದು ಅರ್ಥವಾಯಿತು. ಸುಮಾರು ಏಳೆಂಟು ವರ್ಷಗಳ ಕಾಲ ಒಂದೇ ಆಫೀಸಿನ ಛಾವಣಿ ಅಡಿಯಲ್ಲಿ ಅವರೊಟ್ಟಿಗೆ ಕೆಲಸ ಮಾಡಿದ್ದ ನನ್ನ ನೆನಪುಗಳಲ್ಲಿ ಗೌರಿ ಮೇಡಂ ಪಡಿಮೂಡಿದ ಬಗೆಯೇ ಬೇರೆ ತೆರನದ್ದು. ಹೊರಜಗತ್ತಿನ ಪಾಲಿಗೆ ಫೈರ್ ಬ್ರ್ಯಾಂಡ್ ಆಗಿದ್ದ ಅವರು ನಮ್ಮ ಪಾಲಿಗೆ ಬೆಚ್ಚನೆಯ ಭಾವವಾಗಿದ್ದರು; ಬೇರೆಯವರ ದೃಷ್ಟಿಯಲ್ಲಿ ಗಂಭೀರ ವದನೆಯಾಗಿದ್ದರೂ, ನಮ್ಮ ನಡುವೆ ತಮಾಷೆಯಲ್ಲಿ ಕಳೆದುಹೋಗಿದ್ದರು; ಅಡುಗೆ ಮಾಡಿ ಬಡಿಸುವ ಅಮ್ಮನಾಗಿದ್ದರು; ಹೊರ ಜಗತ್ತಿನ ಪಾಲಿಗೆ ಅರ್ಥವೇ ಆಗದ ಒಂದು ವ್ಯಕ್ತಿತ್ವವನ್ನು ನಮ್ಮ ಮುಂದೆ ತೆರೆದಿಟ್ಟಿದ್ದರು. ಅವುಗಳನ್ನೆಲ್ಲ ನೆನಪಿಸಿಕೊಂಡಷ್ಟೂ ಮನಸ್ಸು ಭಾರವಾಗುತ್ತದೆ. ಅದಕ್ಕೋಸ್ಕರ ಉದ್ದೇಶಪೂರ್ವಕವಾಗಿ ಆ ನೆನಪುಗಳನ್ನೆಲ್ಲ ಟ್ರಂಕಿಗೆ ತುಂಬಿ ಬೀಗ ಜಡಿದು ಅಟ್ಟದ ಮೇಲೆಸೆದಿದ್ದೆ.

ಆದರೆ ಮೊನ್ನೆ ಬೆಂಗಳೂರಿನಲ್ಲಿ ನಡೆದ ಜನಸಾಹಿತ್ಯ ಸಮ್ಮೇಳನದಲ್ಲಿ ಸಿಕ್ಕ ಹಿರಿ ವಯಸ್ಸಿನ ಪರಿಚಯಸ್ಥರೊಬ್ಬರು ಮಾತಿನ ನಡುವೆ ಗೌರಿಯವರ ಬಗ್ಗೆ ತುಂಬಾ ಹಗುರವಾಗಿ ಮಾತಾಡಿದರು. ತಂದೆ ಲಂಕೇಶರೊಟ್ಟಿಗೆ ಮಗಳು ಗೌರಿಯನ್ನು ತುಲನೆ ಮಾಡಿದ ಅವರು ಪ್ರತಿಭೆಯಿಲ್ಲದ, ಪತ್ರಕರ್ತೆಯಾಗುವ ಸಾಮರ್ಥ್ಯವಿಲ್ಲದ, ಒಟ್ಟಾರೆಯಾಗಿ ವಿಶೇಷತೆಯೇನೂ ಇರದ ಗೌರಿಯನ್ನು ಕೇವಲ ಆಕೆಯ ಸಾವು ಮಾತ್ರ ಎತ್ತರಕ್ಕೆ ತಂದು ನಿಲ್ಲಿಸಿದೆ, ಗೌರಿಗೆ ಸಿಕ್ಕಿರುವ ಈಗಿನ ಖ್ಯಾತಿ ಆಕೆಯ ಹಂತಕರು ಕೊಟ್ಟ ಬಳುವಳಿ ಎನ್ನುವ ಸಾರಾಂಶದಲ್ಲಿ ಮಾತಾಡಿದರು. ಕೇಳಿ ವಿಪರೀತ ಬೇಸರವಾಯಿತು.

ಹೌದು, ಗೌರಿಯೆಂಬ ವ್ಯಕ್ತಿತ್ವ ಅರ್ಥವಾಗುವುದು ಅಷ್ಟು ಸುಲಭದ ಮಾತಲ್ಲ. ಒಂದೊಂದು ದಿಕ್ಕಿನಿಂದ ನೋಡಿದಾಗಲೂ, ಒಂದೊಂದು ರೀತಿಯಲ್ಲಿ ಕಾಣುವ ವೈವಿಧ್ಯಮಯ ಆಯಾಮ ಅವರದ್ದು. ಆ ಪರಿಚಿತರು ಹೇಳಿದ ಅಭಿಪ್ರಾಯದಂತಹುದನ್ನೇ, ಗೌರಿಯವರ ಹತ್ಯೆ ನಡೆದ ಹಸಿ ಗಾಯದ ಮೇಲೆ ವಿಷ ಭಟ್ಟ ವಾಂತಿ ಮಾಡಿಕೊಂಡಿದ್ದ. ’ಹೇ, ರಾಮ್, ಅವನನ್ನು ಕ್ಷಮಿಸಿ ಬಿಡಿ’ ಎಂದ ಒಂದು ಧೀಮಂತ ದನಿಯಾಗಿ ರೂಪಾಂತರವಾದ ಗೌರಿ ಮೇಡಂರನ್ನು ಅಭಿಮಾನಿಸುವ ನಮಗೆ ಇಂತಹ ಕ್ಷುಲ್ಲಕ ವಾಂತಿಗಳೊಟ್ಟಿಗೆ ಸಂಘರ್ಷಕ್ಕೇನು ಕೆಲಸ!

ಹಾಗಂತ ನಿರ್ಲಕ್ಷಿಸಿದ ಪರಿಣಾಮವಾಗಿಯೇ ಇರಬೇಕು, ತೀರಾ ಬಲಪಂಥದ ಕ್ರಿಮಿಗಳಲ್ಲಿ ಹುಟ್ಟಿದ ಅಂತಹ ಅಸಹನೆ ಇವತ್ತು ತಮ್ಮನ್ನು ತಾವು ಎಡಪಂಥೀಯ ಪ್ರಗತಿಪರ ಎಂದು ಕರೆದುಕೊಳ್ಳುವ ವ್ಯಕ್ತಿಯ ಬಾಯಿಯಿಂದಲೂ ಬರುವಂತಾಗಿದೆ.

ಸಾವಿನ ಕಾರಣಕ್ಕಾಗಿ ಗೌರಿಯವರು ಇಷ್ಟೆಲ್ಲ ಖ್ಯಾತಿಯಾದರು ಅಂತ ಮೂದಲಿಸುವ ಜನರಿಗೆ ಗೊತ್ತಿಲ್ಲದಿರುವ ಅಥವಾ ಗೊತ್ತಿದ್ದರೂ ಮುಚ್ಚಿಟ್ಟು ಮರೆತಂತೆ ನಟಿಸುವ ಸಂಗತಿಯೆಂದರೆ, ಆ ಸಾವನ್ನು ಗೌರಿಯವರೇ ಹುಡುಕಿಕೊಂಡು ಹೋದದ್ದು ಅನ್ನೋ ವಾಸ್ತವ! ಸಾವು ನಮ್ಮನ್ನು ಹುಡುಕೊಂಡು ಬಂದಾಗಲೆಲ್ಲ, ಹೆದರಿ ಪುಕ್ಕಲರಂತೆ ಓಡಿಹೋಗುವ ಮಂದಿ ನಾವು. ಆಸ್ಪತ್ರೆಗಳು, ಲ್ಯಾಬ್‌ಗಳು, ಇನ್ಸುರೆನ್ಸ್ ಮಾಫಿಯಾ ಪೊಗರುದಸ್ತಾಗಿ ಬೆಳೆದಿರುವುದೇ ನಮ್ಮ ಈ ಪುಕ್ಕಲುತನದಿಂದ. ಅಂತದ್ದರಲ್ಲಿ ಗೌರಿಯಂತಹ ವ್ಯಕ್ತಿ ತನ್ನ ಸಾವನ್ನು ತಾನೇ ಹುಡುಕಿಕೊಂಡು ಹೋದದ್ದು, ಆಕೆ ನಮ್ಮೆಲ್ಲರಿಗಿಂತ ಭಿನ್ನ ಅನ್ನುವುದನ್ನು ಅರ್ಥ ಮಾಡಿಸುವುದಿಲ್ಲವೇ. ಈ ಮಾತನ್ನು ಒಪ್ಪುವ ಇನ್ನೊಂದಷ್ಟು ಜನ, ’ಹೌದು ಗೌರಿ ತನ್ನ ಸಾವನ್ನು ತಾನೇ ತಂದುಕೊಂಡಳು, ತನ್ನ ಹುಂಬತದಿಂದ’ ಎಂಬ ಷರಾ ಬರೆಯುತ್ತಾರೆ. ಹೀಗೆ ಹೇಳುವವರು ಸಹಾ, ಗೌರಿಯವರನ್ನು ತುಲನೆ ಮಾಡಲು ಮಾನದಂಡವಾಗಿ ಬಳಸೋದು ಮತ್ತದೇ ಲಂಕೇಶರನ್ನು! ಲಂಕೇಶ್ ಕೂಡಾ ಕೋಮುವಾದಿಗಳನ್ನು ವಿರೋಧಿಸುತ್ತಿದ್ದರು, ಟೀಕಿಸುತ್ತಿದ್ದರು, ಆದರೆ ಗೌರಿಯಷ್ಟು ಅತಿರೇಕಕ್ಕೆ ಹೋಗಿರಲಿಲ್ಲ ಎಂದು ತಮ್ಮ ವಾದವನ್ನು ಸಮರ್ಥಿಸಿಕೊಳ್ಳುತ್ತಾರೆ. ಹಾಗೆ ವಾದಿಸುವ ಅವರು ಸಹಾ ಮರೆತುಬಿಡುವ ಒಂದು ವಿಚಾರವೆಂದರೆ, ಲಂಕೇಶರು ಮತ್ತು ಗೌರಿಯವರ ನಡುವೆ ಸರಿದುಹೋದ ಇಪ್ಪತ್ತು ವರ್ಷಗಳ ಕಾಲಘಟ್ಟವನ್ನು. ಈ ಇಪ್ಪತ್ತು ವರ್ಷವೆಂದರೆ ಕೇವಲ ತಿಂಗಳು-ದಿನಗಳು-ವಾರಗಳ ಲೆಕ್ಕವಲ್ಲ ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಈ ಸಮಾಜ ಪತನಗೊಂಡ ಆಳವೂ ಹೌದು.

ಲಂಕೇಶರು ಟೀಕಿಸುತ್ತಿದ್ದ ಕಾಲದಲ್ಲಿ ಕೋಮುವಾದಿಗಳಿಗಿದ್ದ ಶಕ್ತಿ-ವ್ಯಾಪ್ತಿ ಸೀಮಿತವಾದದ್ದು. ವಿಮರ್ಶೆಗಿಂತ ಹೆಚ್ಚೇನನ್ನೇ ಮಾಡಿದರೂ, ನಾವಾಗಿಯೇ ಅವರನ್ನು ದೊಡ್ಡವರನ್ನಾಗಿಸಿಬಿಡುತ್ತಿದ್ದಷ್ಟು ಅವರು ಸಣ್ಣವರಿದ್ದ ಕಾಲವದು. ಆದರೆ ಗೌರಿಯವರ ಕಾಲಕ್ಕಾಗಲೆ ಕೋಮುವಾದಿ ವ್ಯಾಪಿಸಿತ್ತು, ಉಲ್ಬಣಿಸಿತ್ತು. ಈ ಹಂತದಲ್ಲಿ ಅವರನ್ನು ಮುಖಾಮುಖಿಯಾಗಬೇಕಾದ ಮಾರ್ಗವೂ ಬದಲಾಗಿತ್ತು. ಆ ಮಾರ್ಗವನ್ನೇ ಬಹುಶಃ ಗೌರಿಯವರು ತನಗೆ ಸರಿಯೆನ್ನಿಸಿ ಆಯ್ಕೆ ಮಾಡಿಕೊಂಡರು. ‘ರಿಸ್ಕ್’ ಬಯಸದ ನಮ್ಮಂತವರು, ನಾವು ಮಾಡಲಾಗದ ಕೆಲಸವನ್ನು ಮಾಡುತ್ತಿರುವ ಗೌರಿಯ ಹಾದಿಯನ್ನೇ ‘ಹುಂಬತನ’ವೆಂದು ಜರಿದು ಸಮಾಧಾನ ಪಟ್ಟುಕೊಂಡೆವು.

ಕ್ಷಮಿಸಿ, ಬರೆಯುವುದಕ್ಕೆ ತುಂಬಾ ಇದೆ ಅಂತ ಅನ್ನಿಸುತ್ತಿದೆ, ಆದರೆ ಕಣ್ಣುಗಳೇಕೋ ಕಂಬನಿಗಟ್ಟುತ್ತಿವೆ….

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!