Friday, September 20, 2024

ಪ್ರಾಯೋಗಿಕ ಆವೃತ್ತಿ

ಕನಕದಾಸರು ಶೋಷಿತರ ಧ್ವನಿಯಾಗಿ ಹೋರಾಟ ಮಾಡಿದ್ದರು : ಯತೀಂದ್ರ ಸಿದ್ದರಾಮಯ್ಯ

ಸಮಾಜದಲ್ಲಿ ಕಟ್ಟೆ ಕಡೆಯ ವ್ಯಕ್ತಿಯ ಪರವಾಗಿ ಶೋಷಿತರ ಧ್ವನಿಯಾಗಿ ಹೋರಾಟ ಮಾಡಿದ ಪ್ರತಿಫಲದಿಂದಾಗಿ ಇಂದಿಗೂ ಕನಕದಾಸರನ್ನು ನಡೆಯುತ್ತೇವೆ, ಅವರ ಜಯಂತಿ ಕಾರ್ಯಕ್ರಮವನ್ನು ರಾಷ್ಟ್ರದಾದ್ಯಂತ ಆಚರಣೆ ಮಾಡುತ್ತೇವೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ಅಣಸಾಲೆಯಲ್ಲಿ ಭಕ್ತ ಕನಕದಾಸ ಯುವಕರ ಸಂಘ ವತಿಯಿಂದ ನಡೆದ 535ನೇ ಕನಕಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮೂರು ಮೇಲ್ವರ್ಗದ ಸಮುದಾಯಗಳು ಅಧಿಕಾರ, ಹಣ, ಆಡಳಿತ, ವಿದ್ಯೆ ಪಡೆಯಲು ಅರ್ಹರಾಗಿದ್ದರು, ಬಹುಸಂಖ್ಯಾತವುಳ್ಳ ಶೂದ್ರರು ಹಿಂದಿನಿಂದಲೂ ತುಳಿತಕ್ಕೆ ಒಳಗಾಗಿದ್ದರು, ಶೋಷಣೆ ಹಾಗೂ ಜಾತಿ ವ್ಯವಸ್ಥೆಯ ವಿರುದ್ದ ಕನಕದಾಸರು ತಮ್ಮ ಕೀರ್ತನೆ, ಕವನ ಹಾಡುಗಳ ಮೂಲಕ ಸಮಾನತೆಯ ಬೆಳಕು ಚೆಲ್ಲಲು ಪ್ರಯತ್ನಿಸಿದರು ಎಂದು ಸ್ಮರಿಸಿದರು.

ಹಿಂದಿನಿಂದಲೂ ಅಸ್ಪೃಶ್ಯತೆ ವಿರುದ್ದ ಹೋರಾಟ ನಡೆಯುತ್ತಲೇ ಬರುತ್ತಿದೆ. ಬುದ್ದ, ಬಸವಣ್ಣ, ಕನಕದಾಸರು, ಅಂಬೇಡ್ಕರ್ ಸೇರಿದಂತೆ ಹಲವಾರು ಮಂದಿ ಜಾತಿ ವ್ಯವಸ್ಥೆಯ ವಿರುದ್ದ ಹೋರಾಟ ಮಾಡುತ್ತಿದ್ದು, ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದೆ ಎಂದರು.

1987ರಲ್ಲಿ ಸಿದ್ದರಾಮಯ್ಯ ಅವರು ಸಾರಿಗೆ ಸಚಿವರಾಗಿದ್ದ ಸಂದರ್ಭದಲ್ಲಿ ಸರ್ಕಾರಕ್ಕೆ ಒತ್ತಾಯ ತಂದು ಸರ್ಕಾರ ಮಟ್ಟದಲ್ಲಿ ಕನಕ ಜಯಂತಿ ಆಚರಣೆ ಮಾಡುವಂತೆ ಮಾಡಿದರು. ಅಂದಿನಿಂದ ಇಂದಿನವರೆವಿಗೂ ರಾಜ್ಯಾದ್ಯಂತ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ಕನಕಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ ನರೇಂದ್ರಸ್ವಾಮಿ ಮಾತನಾಡಿ, ದಾಸ ಶ್ರೇಷ್ಠ ಕನಕದಾಸರು ತಮ್ಮ ವಚನಗಳ ಮೂಲಕ ಜನರಲ್ಲಿ ಅರಿವು ಮೂಡಿಸಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಶ್ರಮಿಸಿದರು. ಅವರ ಅದರ್ಶ ಗುಣಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸರಳತೆ ಜನರ ಮನಸ್ಸನ್ನು ಗೆಲ್ಲುತ್ತದೆ, ವಿದ್ಯೆ, ವಿದ್ವತ್ ಯಾರ ಅಪ್ಪನ ಸೊತ್ತಲ್ಲ, ಮೇಲ್ವರ್ಗದ ಆಸ್ತಿಯಲ್ಲ, ನಿರಂತರ ಪರಿಶ್ರಮ ಶ್ರದ್ದೆದೊಂದಿಗೆ ಹೋರಾಟ ಮಾಡಿದ್ದವರಿಗೆ ಸರಳತೆ ಸದ್ಗುಣ ಸಂಪನ್ನರಾಗುತ್ತಾರೆ, ಅಹಿಂದ ಹೋರಾಟದ ಮೂಲಕ ಹಿಂದುಳಿದ ಸಮುದಾಯದ ಅಭಿವೃದ್ದಿಗಾಗಿ ಹೋರಾಟ ಮಾಡುತ್ತಿರುವ ಸಿದ್ದರಾಮಯ್ಯ ಅವರು ಸರ್ಕಾರದ ಮೇಲೆ ಒತ್ತಡ ತಂದು ಕನಕಜಯಂತಿ ಸರ್ಕಾರದ ಕಾರ್ಯಕ್ರಮವಾಗಿ ಆಚರಿಸಲು ಕಾರಣರಾಗಿದ್ದಾರೆ. ಸಿದ್ದರಾಮಯ್ಯ ನಮಗೆ ಗುರುವಾಗಿ ಸಿಕ್ಕಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ಕಾರ್ಯಕ್ರಮಕ್ಕೂ ಮುನ್ನ ಜಾನಪದ ಕಲಾಮೇಳದೊಂದಿಗೆ ಮೆರವಣಿಗೆ ನಡೆಸಲಾಯಿತು. ಕ್ರೇನ್ ಮೂಲಕ ಗಣ್ಯರಿಗೆ ಹೂವಿನ ಹಾರ ಹಾಕಿ ಅಭಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಡಾ. ರಾಮಮನೋಹರಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಬಿಎಸ್ ಶಿವಣ್ಣ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷ ಬಿ. ಪುಟ್ಟಬಸವಯ್ಯ, ಜಿಲ್ಲಾಧ್ಯಕ್ಷ ಸುರೇಶ್, ಯೂತ್ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ನಿಖಿಲ್‌ ವಿ ಶಂಕರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಸ್ ರಾಮಚಂದ್ರಯ್ಯ, ಕೆಪಿಸಿಸಿ ಸದಸ್ಯ ಚನ್ನಪಿಳ್ಳೇಗೌಡ ಸಿದ್ದೇಗೌಡ, ಕಾಂಗ್ರೆಸ್ ಪಕ್ಷದ ಖಜಾಂಚಿ ಪೆಟೋಲ್ ಬಂಕ್ ಮಹದೇವು, ತಾ.ಪಂ ಮಾಜಿ ಅಧ್ಯಕ್ಷ ಚಿಕ್ಕಲಿಂಗಯ್ಯ, ಆರ್‌ಟಿಓ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್, ಮಹದೇವಸ್ವಾಮಿ, ಯೂತ್ ಕಾಂಗ್ರೆಸ್ ಶಿವಮೂರ್ತಿ, ರಮೇಶ್, ಮಾಜಿ ಯೋಧ ಮಹದೇವಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ವಕೀಲ ಜಗದೀಶ್ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!