Thursday, November 19, 2026

ಪ್ರಾಯೋಗಿಕ ಆವೃತ್ತಿ

ಬಿಜೆಪಿ ಸರ್ಕಾರದಿಂದ ಸಂವಿಧಾನದ ಆಶಯಕ್ಕೆ ಧಕ್ಕೆ : ತಮಟೆ ಚಳವಳಿ

ದೇಶದ ಹಲವು ಕಡೆ, ದಲಿತರು, ಶೋಷಿತರು ಆದಿವಾಸಿಗಳು ಧಾರ್ಮಿಕ ಅಲ್ಪ ಸಂಖ್ಯಾತರ ಮೇಲೆ ಹಲ್ಲೆ,  ದೌರ್ಜನ್ಯ ನಡೆಯುತ್ತಿದೆ, ಮತ್ತೊಂದೆಡೆ ದಲಿತರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುವ ಹುನ್ನಾರ ನಡೆದಿದ್ದು, ಕೋಮುವಾದಿ ಬಿಜೆಪಿಯು ಸಂವಿಧಾನದ ಆಶಯಕ್ಕೆ ಚ್ಯುತಿ ತರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಡ್ಯದಲ್ಲಿ ತಮಟೆ ಚಳವಳಿ ನಡೆಸಿದರು.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮಂಡ್ಯ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಚೇರಿ ಆವರಣದಿಂದ ಮೆರವಣಿಗೆ ಹೊರಟ ಕಾರ್ಯಕರ್ತರು ತಮಟೆ ಸದ್ದಿನೊಂದಿಗೆ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಮನವಿ ಸಲ್ಲಿಸಿದರು

ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಸಂವಿಧಾನದ ಮೂಲ ಉದ್ದೇಶಕ್ಕೆ ಭಂಗ ತರುವ ದುಷ್ಟ ಪ್ರಯತ್ನ ನಡೆಸಿದೆ. ಸರ್ಕಾರದ ಸಂಪುಟದಲ್ಲಿರುವ ಸಚಿವರು ಸಂವಿಧಾನದ ಆಶಯಕ್ಕೆ ಚ್ಯುತಿ ಬರುವಂಥ ಮಾತುಗಳನ್ನು ಆಡುತ್ತಿದ್ದಾರೆ. ಧಾರ್ಮಿಕ ಭಾವನೆಗಳನ್ನು ಕೆರಳಿಸುವಂಥ ಸಂಚು ನಡೆದಿದೆ. ಬಿಜೆಪಿ ಸರ್ಕಾರಕ್ಕೆ ಬೆನ್ನೆಲುಬು ಆಗಿರುವ ಆರ್ ಎಸ್ ಎಸ್ ಜಾತಿವಾದಿ, ಕೋಮುವಾದಿ ಮತ್ತು ಕಾರ್ಪೋರೇಟ್ ಶಕ್ತಿಗಳ ಹಿತರಕ್ಷಕವಾಗಿದ್ದು ಇಂತಹ ಜನವಿರೋಧಿ ಶಕ್ತಿಗಳ ಕೈ ಯಲ್ಲಿ ಅಧಿಕಾರದ ಚುಕ್ಕಾಣಿ ಇರುವುದು ಆತಂಕಕಾರಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ದೇಶದಲ್ಲಿ ರಾಜಕೀಯ ಸಮಾನತೆಯ ದುರುಪಯೋಗ ನಡೆದಿದೆ. ಆಧಿಕಾರವನ್ನು, ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಕೋಮುವಾದೀಕರಿಸುವುದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಅಧಿಕಾರದಲ್ಲಿ ಇರುವವರು ಜಾತೀಯ, ಮತೀಯ ಭಾವನೆಗಳನ್ನು ಕೆರಳಿಸುತ್ತಿದ್ದಾರೆ. ಜನರನ್ನು ವಿಭಜಿಸಿ, ಮತ ಗಳಿಕೆಗಾಗಿ ಅಡ್ಡ ದಾರಿಯನ್ನು ಹಿಡಿಯುತ್ತಿದ್ದಾರೆ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ತರುವ ವಿಷಯವನ್ನು ಮೂಲೆಗೆ ತಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಪರಿಶಿಷ್ಟ ಜಾತಿ ,ಪಂಗಡದ ಸ್ತ್ರೀ ಶಕ್ತಿ ಸಂಘಗಳಿಗೆ 25 ಲಕ್ಷ ಸಹಾಯಧನ ನೀಡಬೇಕು. ಪರಿಶಿಷ್ಟ ರ ಅಭಿವೃದ್ಧಿ ನಿಗಮಗಳಲ್ಲಿ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಎಲ್ಲರಿಗೂ ಕನಿಷ್ಠ 10 ಲಕ್ಷ ಸಹಾಯ ಧನ ನೀಡಬೇಕು. ವಿವಿಧ ನಿಗಮಗಳಲ್ಲಿ ನಡೆದಿರುವ ಗಂಗಕಲ್ಯಾಣ ಯೋಜನೆ ಹಗರಣವನ್ನು ತ್ವರಿತ ಗತಿಯಲ್ಲಿ ತನಿಖೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು 2019-20ನೇ ಸಾಲಿನಿಂದ 2022-23ನೇ ಸಾಲಿನ ಗಂಗಕಲ್ಯಾಣ ಯೋಜನೆಯ ಕೊಳವೆ ಬಾವಿಗಳನ್ನು ಕೊರೆಯಲು ಕೂಡಲೇ ಆದೇಶ ಮಾಡಿ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದರು

ಪರಿಶಿಷ್ಟ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಮಂಡ್ಯ ನಗರದ ಅಂಬೇಡ್ಕರ್ ರಸ್ತೆಗೆ ಪರ್ಯಾಯ ಹೆಸರು ನಾಮಕರಣ ಮಾಡಬಾರದು, ಅಂಬೇಡ್ಕರ್ ಅವರ ಹೆಸರನ್ನು ಮುಂದುವರೆಸಬೇಕು. ಅಂಬೇಡ್ಕರ್ ವಸತಿ ಯೋಜನೆ ಫಲಾನುಭವಿಗಳಿಗೆ 10 ಲಕ್ಷ ರೂ. ನಿಗಧಿ ಮಾಡಬೇಕು. ಕುಳುವಾಡಿ ತೋಟಿಇನಾಂ ಜಮೀನುಗಳಲ್ಲಿ ಪರಿಶಿಷ್ಟರು ಅನುಭವದಲ್ಲಿರುವ ವಾರಸುದಾರರಿಗೆ ಖಾತೆ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಸಮಿತಿಯ ಜಿಲ್ಲಾ ಸಂಚಾಲಕ ಎಂ.ವಿ. ಕೃಷ್ಣ, ಎಚ್. ಪಿ.ಜವರಯ್ಯ, ಎಂ. ನಾಗರಾಜಯ್ಯ, ಎಂ.ಎ.ಶೋಭಾ, ಪವನ್. ಧರ್ಮಾತ್ಮ,ಯತೀಶ್,ಸೋಮರಾಜ್, ಎಂ. ಸುದರ್ಶನ್. ಗುಡಿಗೆರೆ ಬಸವರಾಜ್, ನೀಲಯ್ಯ ನೇತೃತ್ವ ವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ