Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಾತಿ ರಾಜಕಾರಣದಿಂದ ಮಂಡ್ಯದ ಅಭಿವೃದ್ಧಿ ಕುಂಠಿತ : ಮಧುಚಂದನ್

ಕೊಡುಗೆ ದಾನಿಗಳಿದ್ದ ಮಂಡ್ಯ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಇಂದು ಅತ್ಯಂತ ದುರ್ಬಲವಾಗಿದ್ದು, ಶೋಚನೀಯ ಸ್ಥಿತಿಯಲ್ಲಿದೆ. ಮಂಡ್ಯದಲ್ಲಿರುವ ಜಾತಿ ರಾಜಕಾರಣದಿಂದ ಅಭಿವೃದ್ಧಿ ಕುಂಠಿತವಾಗಿದ್ದು, ಇದನ್ನು ಬದಲಾಯಿಸಲು ಪಕ್ಷಾತೀತವಾಗಿ ನನಗೆ ಬೆಂಬಲ ನೀಡಬೇಕೆಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಎಸ್.ಸಿ. ಮಧುಚಂದನ್ ಮನವಿ ಮಾಡಿದರು.

ಮಂಡ್ಯ ನಗರದ ಹೊಸಹಳ್ಳಿಯ ಶ್ರೀ ಬಿಸಿಲು ಮಾರಮ್ಮ ದೇವಾಲಯದಲ್ಲಿ ಇಂದು ಮಂಡ್ಯ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿ ಅವರು ಮಾತನಾಡಿದರು. ಒಂದು ಕಾಲದಲ್ಲಿ ಮಂಡ್ಯದಲ್ಲಿ ಅನೇಕ ಕೊಡುಗೈ ದಾನಿಗಳಿದ್ದರು. ಬೇರೆ ಜಿಲ್ಲೆಗಳಿಗೆ ಬರ ಬಂದಾಗ ಮಂಡ್ಯದ ಜನರು ಉಚಿತವಾಗಿ ದವಸ, ಧಾನ್ಯಗಳನ್ನು ಲಾರಿಗಳಲ್ಲಿ ತುಂಬಿ ಕಳುಹಿಸುತ್ತಿದ್ದರು. ಅಂತಹ ಆರ್ಥಿಕ ಪರಿಸ್ಥಿತಿ ಇದ್ದ ಮಂಡ್ಯ ಇಂದು ಜಾತಿ ರಾಜಕಾರಣಕ್ಕೆ ನಲುಗಿ ಆರ್ಥಿಕವಾಗಿ ತುಂಬಾ ಶೋಚನೀಯವಾಗಿದೆ. ಜಿಲೆಯಲ್ಲಿ ಒಂದು ಕೈಗಾರಿಕೆ ಇಲ್ಲ,ಸರಿಯಾದ ಕೆಲಸವೂ ಇಲ್ಲ. ಇದು ಎಲ್ಲರ ಮೇಲೆ ದುಷ್ಪರಿಣಾಮ ಬೀರಿದ್ದು, ಇದನ್ನು ಬದಲಾಯಿಸಲು ನನಗೆ ಪಕ್ಷಾತೀತವಾಗಿ ಎಲ್ಲರೂ ಬೆಂಬಲ ನೀಡಬೇಕು ಎಂದರು.

nudikarnataka.com

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗಿಲ್ಲ. ಆರಕ್ಕೆ ಏರಿಲ್ಲ ಮೂರಕ್ಕಿಂತ ಕಡಿಮೆಯಾಗಿ ಇಳಿದಿದೆ. ಸುಮಾರು ವರ್ಷಗಳಿಂದ ಮಂಡ್ಯದಲ್ಲಿ ಪ್ರಗತಿಯೇ ಆಗಿಲ್ಲ. ಯುವಕ- ಯುವತಿಯರಿಗೆ ಉದ್ಯೋಗವಿಲ್ಲ. ಎಷ್ಟೋ ಮನೆಗಳಿಗೆ ಹಕ್ಕುಪತ್ರ ನೀಡಿಲ್ಲ. ಇಂತಹ ದುಸ್ಥಿತಿ ಮಂಡ್ಯದಲ್ಲಿದೆ. ನಮ್ಮ ನೆರೆಯ ಜಿಲ್ಲೆಗಳಾದ ಹಾಸನ,ತುಮಕೂರು ಅತ್ಯಂತ ಅಗಾಧವಾಗಿ ಬೆಳೆದಿವೆ ಮತ್ತು 12 ವರ್ಷದ ಹಿಂದೆ ಹಾಸನ ಇದ್ದಂತೆಯೇ ಇದ್ದ ಮಂಡ್ಯ ಈಗಲೂ ಹಾಗೆ ಇದ್ದು ಹೀನಾಯ ಸ್ಥಿತಿಯಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೈಪಾಸ್ ರಸ್ತೆಯಿಂದಾಗಿ ಇದ್ದ ಬದ್ದ ಆರ್ಥಿಕ ಪರಿಸ್ಥಿತಿ ಇಳಿದಿದೆ. ಮಂಡ್ಯದ ಮಕ್ಕಳು ಬೆಂಗಳೂರಿನ ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ಹಾಕುತ್ತಿದ್ದಾರೆ. ಡ್ರೈವರ್ ಗಳಾಗಿ ಆಟೋ,ಕ್ಯಾಬ್ ಓಡಿಸುತ್ತಿದ್ದಾರೆ. ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮಂಡ್ಯದ ಮಹಿಳೆಯರು ಅವರಿವರ ಮನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.ಇದನ್ನೆಲ್ಲ ಬದಲಾವಣೆ ಮಾಡಲು ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ಹೊಸಹಳ್ಳಿ ಮುಖಂಡರಾದ ಬೋರೇಗೌಡ, ನಾಗರಾಜು, ಅನಿಲ್, ವಿಜಯಮ್ಮ, ಮನು, ಗೋಪಿ, ಯಶವಂತ್, ಮಹೇಶ್ ಹೊಸಹಳ್ಳಿ ಯುವಕರು ಹಾಗೂ ಕೀರೆಮಡಿ ಮಹಿಳಾ ಒಕ್ಕೂಟದ ಸದಸ್ಯರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!