ಭತ್ತ ಮತ್ತು ರಾಗಿ ಖರೀದಿ ಕೇಂದ್ರಗಳಲ್ಲಿ ದಲ್ಲಾಳಿಗಳ ಹಾವಳಿ ಮಿತಿಮೀರಿದೆ. ಖರೀದಿ ಕೇಂದ್ರಗಳಲ್ಲಿ ಅಧಿಕಾರಿಗಳು ಖರೀದಿ ಮಾಡದಿರುವ ದೂರುಗಳು ಬಂದಿದ್ದು ಅವುಗಳನ್ನು ಕೂಡಲೇ ಪರಿಹರಿಸುವಂತೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಅತಿವೃಷ್ಟಿ, ಅನಾವೃಷ್ಟಿ ಸಹಿತ ಇನ್ನಿತರ ಕಾರಣಗಳಿಗೆ ರೈತರು ಹೈರಾಣಾಗಿದ್ದಾರೆ. ಎಲ್ಲ ಸಂಕಷ್ಟ, ಸಂಘರ್ಷಗಳ ನಡುವೆ ಕಷ್ಟಪಟ್ಟು ಬೆಳೆದ ಬೆಳೆಗೆ ಕೊನೆಗೆ ಉತ್ತಮ ಬೆಲೆ ಸಿಗದೆ ನಷ್ಟ ಅನುಭವಿಸುತ್ತಲೇ ಬಂದಿದ್ದಾರೆ. ಈ ನಡುವೆ ರೈತರಿಗೆ ನೆರವಾಗಲಿ ಎಂದು ಭತ್ತ ಮತ್ತು ರಾಗಿ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಸರ್ಕಾರ ಅನುವು ಮಾಡಿಕೊಟ್ಟರೂ ಅದರ ಲಾಭ, ಪ್ರಯೋಜನ ಅರ್ಹ ರೈತರನ್ನು ತಲುಪುತ್ತಿಲ್ಲ ಎಂದು ಅವರು ದೂರಿದ್ದಾರೆ.
ಮಂಡ್ಯ ಜಿಲ್ಲೆಯ ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಭತ್ತ ಹಾಗೂ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದರೂ ಹಲವು ಕಡೆ ಕಾರ್ಯ ನಿರ್ವಹಣೆ ಮಾಡಲಾಗುತ್ತಿಲ್ಲ.ಇನ್ನು ಖರೀದಿ ಕೇಂದ್ರಗಳ ಬಳಿ ದಲ್ಲಾಳಿಗಳ ಹಾವಳಿ ಮಿತಿಮೀರಿದೆ. ಜಿಲ್ಲೆಯ ಕೆಲವು ಕಡೆ ಭತ್ತ ಮತ್ತು ರಾಗಿ ಖರೀದಿ ಕೇಂದ್ರಕ್ಕೆ ಕಳೆದ 2 ದಿನಗಳಿಂದ ರೈತರು ಟ್ರ್ಯಾಕ್ಟರ್, ಲಾರಿ ಸೇರಿದಂತೆ ಇನ್ನಿತರ ವಾಹನಗಳ ಮೂಲಕ ಬೆಳೆದ ಭತ್ತ ಮತ್ತು ರಾಗಿಯನ್ನು ಹೊತ್ತು ತರುತ್ತಿದ್ದಾರೆ. ವಿಪರ್ಯಾಸವೆಂದರೆ ಕಳೆದೆರಡು ದಿನಗಳಿಂದ ಅಲ್ಲಿ ಖರೀದಿಯನ್ನೇ ಮಾಡಲಾಗುತ್ತಿಲ್ಲ ಎಂದು ರೈತರು ಆಕ್ರೋಶಗೊಂಡಿದ್ದಾರೆ. ಇನ್ನು ಅಲ್ಲಿ ದಲ್ಲಾಳಿಗಳಿಂದ ತೀವ್ರ ಸಮಸ್ಯೆಯಾಗುತ್ತಿದೆ ಎಂದು ರೈತರು ದೂರು ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಲೋಡುಗಟ್ಟಲೆ ಭತ್ತ ಹಾಗೂ ರಾಗಿಯನ್ನು ತರುವ ಮಂದಿ ಖರೀದಿ ಕೇಂದ್ರಗಳಿಗೆ ನೀಡುತ್ತಿದ್ದಾರೆ. ಖರೀದಿ ಕೇಂದ್ರದ ಸಿಬ್ಬಂದಿ ನೀಡುವ ಟೋಕನ್ ಪಡೆದು ಹೋಗುತ್ತಿದ್ದಾರೆ. ಹೀಗೆ ತಂದು ಹಾಕುವವರು ರೈತರು ಹೌದೋ ಅಲ್ಲವೋ ಎಂಬುದನ್ನೂ ಪರಿಶೀಲನೆ ಮಾಡುತ್ತಿಲ್ಲ. ಆಧಾರ್ ಕಾರ್ಡ್, ಪಹಣಿ ಸೇರಿದಂತೆ ಯಾವುದನ್ನೂ ಪರಿಶೀಲನೆ ಮಾಡುತ್ತಿಲ್ಲ. ಹಾಗಾದರೆ ಇದನ್ನು ಯಾವ ಲೆಕ್ಕದಲ್ಲಿ ಮಾಡಲಾಗುತ್ತಿದೆ? ಈ ಮೂಲಕ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಅವರು ದೂರಿದ್ದಾರೆ.
ರೈತರಿಗೆ ಅನುಕೂಲವಾಗಲಿ ಎಂದು ಸರ್ಕಾರದ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಇಂತಹ ಕಡೆ ದಲ್ಲಾಳಿಗಳು ಲಾಭ ಪಡೆಯುವುದಾದರೆ ಇಂಥ ಯೋಜನೆಗಳು ಇದ್ದು ಪ್ರಯೋಜನವಾದರೂ ಯಾರಿಗೆ ಆಗುತ್ತದೆ? ಇನ್ನು ಮದ್ದೂರಿನಲ್ಲಿಯೂ ಖರೀದಿ ಕೇಂದ್ರವು ಕಾರ್ಯನಿರ್ವಹಣೆ ಮಾಡುತ್ತಿಲ್ಲ. ಇನ್ನು ಹಲವು ಕಡೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದನೆ ಮಾಡುತ್ತಿಲ್ಲ. ದಿನಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಕೂಡಲೇ ಸಂಬಂಧಿಸಿದವರಿಗೆ ಸೂಕ್ತ ಆದೇಶ ನೀಡಿ ಕ್ರಮ ಕೈಗೊಳ್ಳಲು ಜಿಲ್ಲೆಯ ರೈತರ ಪರವಾಗಿ ಮನವಿ ಮಾಡುತ್ತೇನೆ ಎಂದು ದಿನೇಶ್ ಗೂಳಿಗೌಡ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.




