Saturday, May 18, 2024

ಪ್ರಾಯೋಗಿಕ ಆವೃತ್ತಿ

ಅಮೆರಿಕಾದಲ್ಲಿ ರಾಗಿಯ ‘ನ್ಯೂಟ್ರೀಷಿಯನ್ ಜಿನ್’ ಕುರಿತು ಸಂಶೋಧನಾ ಪ್ರಬಂಧ ಮಂಡಿಸಲಿರುವ ಪ್ರೀತಿ ಕಾಂಬಳೆ

ರಾಗಿಯಲ್ಲಿರುವ ಅಪೂರ್ವ ಪೌಷ್ಠಿಕಾಂಶ ಕುರಿತು ಸಂಶೋಧನೆ ನಡೆಸಿರುವ ಮಂಡ್ಯ ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಪ್ರೀತಿ ಕಾಂಬಳೆ ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿ ನಡೆಯಲಿರುವ  ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಆಯ್ಕೆಯಾಗಿ 2023 ಫೆ.12 ರಿಂದ 17 ರವರೆಗೆ ಸಂಶೋಧನಾ ಪ್ರಬಂಧ  ಮಂಡಿಸಲಿದ್ದಾರೆ.

2020-21ನೇ ಸಾಲಿನಲ್ಲಿ ಕೃಷಿ ಮಹಾವಿದ್ಯಾಲಯದ ಮಂಡ್ಯದ ಸ್ನಾತಕೋತ್ತರ ವಿದ್ಯಾರ್ಥಿನಿ ಪ್ರೀತಿ ಕಾಂಬಳೆ ಅವರು ವಿಜ್ಞಾನಿಗಳಾದ ಡಾ.ಹೆಚ್.ಬಿ.ಮಹೇಶ್, ಡಾ.ಎಸ್.ಎಸ್.ಪ್ರಕಾಶ್, ಡಾ.ಎಸ್.ಬಿ.ಯೋಗಾನಂದ ಮತ್ತು ಡಾ.ಪಿ.ಮಹದೇವು ಮಾರ್ಗದರ್ಶನದೊಂದಿಗೆ ಸಂಶೋಧನೆ ನಡೆಸಿ ರಾಗಿಯಲ್ಲಿ ನ್ಯೂಟ್ರೀಷಿಯನ್ ಜಿನ್ ಎಂಬ ಅಂಶವಿರುವುದನ್ನು ಕಂಡುಕೊಂಡಿದ್ದಾರೆ. ತಾವು ನಡೆಸಿರುವ ಸಂಶೋಧನೆಯನ್ನು ಸಮ್ಮೇಳನದಲ್ಲಿ ಮಂಡಿಸಲು ಅಮೆರಿಕಾಗೆ ತೆರಳಿದ್ದಾರೆ.

ಮೂಲತಃ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕು ಕುಡಚಿ ಹೋಬಳಿಯ ಹಾಲಶಿರಗೂರು ಗ್ರಾಮದ ಬಡ ಕುಟುಂಬದಿಂದ ಬಂದಿರುವ ಪ್ರೀತಿ ಕಾಂಬಳೆಗೆ ಕೃಷಿಯ ಬಗ್ಗೆ ಚಿಕ್ಕಂದಿನಿಂದಲೂ ಆಸಕ್ತಿ. ಮೂಡಿಗೆರೆಯಲ್ಲಿ ತೋಟಗಾರಿಕೆಯಲ್ಲಿ ಬಿಎಸ್ಸಿ ಪದವಿ ಪಡೆದು ವಿ.ಸಿ.ಫಾರಂ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಎರಡನೇ ವರ್ಷದ ಎಂಎಸ್ಸಿ (ಅಗ್ರಿ) ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅನುವಂಶೀಯತೆ ಮತ್ತು ಸಸ್ಯ ತಳಿ ಅಭಿವೃದ್ಧಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅದರಲ್ಲೂ ರಾಗಿ ಬೆಳೆಯ ಮೇಲೆ ಸಂಶೋಧನೆ ಮಾಡುವಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಗಿಯಲ್ಲಿ ನ್ಯೂಟ್ರೀಷಿಯನ್ ಜಿನ್ ಪತ್ತೆ 

ಜಗತ್ತಿನಲ್ಲಿ ಪ್ರತಿ ವರ್ಷ ಐದು ಬಿಲಿಯನ್ ಜನರು ಪೌಷ್ಠಿಕಾಂಶ ಮತ್ತು ಲವಣಾಂಶಗಳ ಕುಂದು ಕೊರತೆ ಸಂಬಂಧ ರೋಗಗಳಿಂದ ಬಳಲುತ್ತಿದ್ದಾರೆ. ಅದೇ ರೀತಿ ಪ್ರಾಕೃತಿಕ ವೈಪರೀತ್ಯದಿಂದ ಉಂಟಾದ ಅನಿರೀಕ್ಷಿತ ಮಳೆ ಮತ್ತು ತಾಪಮಾನ ಹೆಚ್ಚಳದಿಂದ ರೈತರು ಬೆಳೆಯುತ್ತಿರುವ ಬೆಳೆಗಳ ಉತ್ಪಾದನೆ ಕ್ಷೀಣಿಸುತ್ತಿದೆ.

ರೈತರ ಆದಾಯ ಮತ್ತು ಜನಸಾಮಾನ್ಯರ ಆರೋಗ್ಯದ ಸಮಸ್ಯೆಗಳನ್ನು ಗಮನಿಸಿದಾಗ ಮಂಡ್ಯ ವಿ.ಸಿ.ಫಾರಂನ ಕೃಷಿ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳು ಸೇರಿ ವಿಚಾರ ಸಂಕಿರಣವನ್ನು ಹಮ್ಮಿಕೊಂಡಾಗ ಹೊಳೆದ ವೈಜ್ಞಾನಿಕ ವಿಚಾರವೆಂದರೆ ಅತಿ ಹೆಚ್ಚು ಲವಣಾಂಶಗಳ ಲಭ್ಯತೆ ಇರುವ, ಹೆಚ್ಚು ತಾಪಮಾನ ಸಹಿಸಿಕೊಳ್ಳಬಲ್ಲ ಹಾಗೂ ಕಡಿಮೆ ನೀರು ಬಳಕೆ ಮಾಡಬಲ್ಲ ವಂಶವಾಹಿ ಧಾತುಗಳನ್ನು ಕಂಡುಹಿಡಿದು ಮುಂದೆ ಅವುಗಳನ್ನು ಜನಪ್ರಿಯ ಮತ್ತು ಲಾಭದಾಯಕ ತಳಿಗಳೊಂದಿಗೆ ಸಂಕೀರ್ಣ ಮಾಡುವುದು ಕಂಡುಬಂದಿತ್ತು.

ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆಯುವ ರಾಗಿ ಸಂಶೋಧನೆ ಮಂಡನೆಗೆ ಮಂಡ್ಯದ ವಿ.ಸಿ.ಫಾರಂ ವಿದ್ಯಾರ್ಥಿನಿ ಪ್ರೀತಿ ಕಾಂಬ್ಳೆ ಆಯ್ಕೆಯಾಗಿರುವುದಕ್ಕೆ ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿ ಅಧ್ಯಕ್ಷ ಕೆ.ಬೋರಯ್ಯ, ಕಾರ್ಯದರ್ಶಿ ಪ್ರೊ.ಗುಬ್ಬಯ್ಯ, ವಿ.ಸಿ.ಫಾರಂ ಕಾಲೇಜಿನ ಡೀನ್ (ಶಿಕ್ಷಣ) ಡಾ.ಎಸ್.ಎಸ್.ಪ್ರಕಾಶ್ ಅಭಿನಂದಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!