ಕೆ.ಆರ್.ಪೇಟೆ ವಿಧಾನಸಭೆಯ ಜೆಡಿಎಸ್ ಅಭ್ಯರ್ಥಿ ಹೆಚ್.ಟಿ.ಮಂಜು ಅವರು 2018ರಲ್ಲಿ ನನ್ನ ಮನೆಗೆ ತಮ್ಮ ಬೆಂಬಲಿಗರನ್ನು ಕರೆತಂದು ಕಲ್ಲು ತೂರಾಟ ಮಾಡಿಸಿ, ನನ್ನ ಕುಟುಂಬಕ್ಕೆ ಸಾಕಷ್ಟು ನೋವುಂಟು ಮಾಡಿದ್ದರು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ರಾಜಾಹುಲಿ ದಿನೇಶ್ ಗಂಭೀರ ಆರೋಪ ಮಾಡಿದರು.
ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬಿಲ್ಲೇನಹಳ್ಳಿ ಬಳಿ ಶ್ರೀ ಗವಿರಂಗನಾಥ ಶ್ರೀ ಕ್ಷೇತ್ರದಲ್ಲಿ ಬಿ.ಎನ್.ದಿನೇಶ್(ರಾಜಾಹುಲಿ) ಅಭಿಮಾನಿಗಳ ಬಳಗದ ವತಿಯಿಂದ ಬೃಹತ್ ಸ್ವಾಭಿಮಾನಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ನಾನು 2018ರಲ್ಲಿ ಜೆಡಿಎಸ್ ತಾಲ್ಲೂಕು ಪಂಚಾಯಿತಿ ಚುನಾಯಿತ ಜನಪ್ರತಿನಿಧಿಯಾಗಿದ್ದೆ, ಜೊತೆಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೆ ಆದರೆ ಅಂದಿನ ಶಾಸಕರಾಗಿದ್ದ ನಾರಾಯಣಗೌಡರ ಕಟ್ಟಾ ಬೆಂಬಲಿಗರಾಗಿದ್ದ ಹೆಚ್.ಟಿ.ಮಂಜು, ಮಲ್ಲೇನಹಳ್ಳಿ ಮೋಹನ್, ಜಾನಕೀರಾಂ ಅವರು ಶಾಸಕರ ಅಧಿಕಾರ ದುರ್ಬಳಕೆ ಮಾಡಿಕೊಂಡು ಬಿಲ್ಲೇನಹಳ್ಳಿ ಗ್ರಾಮದಲ್ಲಿರುವ ನನ್ನ ಮನೆಗೆ ಜನರನ್ನು ಕರೆತಂದು ಕಲ್ಲು ತೂರಾಟ ಮಾಡಿ ನನ್ನ ಕುಟುಂಬವನ್ನು ಕೊಲೆ ಮಾಡಲು ಪ್ರಯತ್ನಿಸಿದ್ದರು ಎಂದರು.
ಆ ದಿನಗಳಲ್ಲಿ ನಾರಾಯಣಗೌಡರಿಗೆ ಪರ್ಯಾಯವಾಗಿ ಜೆಡಿಎಸ್ ಟಿಕೆಟ್ ಕೇಳುವ ಅರ್ಹತೆ ಬೆಳೆಸಿಕೊಳ್ಳುತ್ತಾನೆ ಎಂಬ ಕಾರಣಕ್ಕಾಗಿ ನನ್ನ ಮೇಲೆ ಇಲ್ಲ ಸಲ್ಲದ ಪಿತೂರಿ ನಡೆಸಿ ನನ್ನ ಮೇಲೆ ಸುಳ್ಳು ಕೇಸು ದಾಖಲಿಸಿ ತೊಂದರೆ
ನೀಡಿದರು. ನಾರಾಯಣಗೌಡರು ಒಳ್ಳೆಯವರಾಗಿದ್ದರೂ ಸಹ ಹೆಚ್.ಟಿ.ಮಂಜು ಅವರು ನನ್ನ ಮನೆಗೆ ಕಲ್ಲು ತೂರಾಟ ಮಾಡಿಸುವ ಮೂಲಕ ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ತೊಂದರೆ ನೀಡಿದ್ದರು. ಕೊಲೆ ಮಾಡುವಂತಿದ್ದರೆ ನನ್ನನ್ನು ಮಾಡಬೇಕಿತ್ತು ಆದರೆ ನನ್ನ ಕುಟುಂಬ ಇವರಿಗೆ ಏನು ತೊಂದರೆ ಮಾಡಿತ್ತು ಎಂದು ಪ್ರಶ್ನಿಸಿದರು.
ಅಂದು ನನಗೆ ತೊಂದರೆ ನೀಡದೇ ಇದ್ದರೆ ನಾನು ಇಷ್ಟರಲ್ಲಿ ಜೆಡಿಎಸ್ ಪ್ರಬಲ ನಾಯಕನಾಗಿ ಬೆಳೆದು 2023ರ ವಿಧಾನಸಭೆಯ ಜೆಡಿಎಸ್ ಟಿಕೆಟ್ ಪಡೆದುಕೊಳ್ಳುತ್ತಿದ್ದೆನು. ಇಂತಹ ಅವಕಾಶ ತಪ್ಪಿದೆ ಎಂದರೆ ಅದಕ್ಕೆ ನೇರ ಕಾರಣ ಹೆಚ್.ಟಿ.ಮಂಜು ಅವರೇ ಎಂದು ರಾಜಾಹುಲಿ ದಿನೇಶ್ ದೂರಿದರು.
ಕಾರ್ಯಕ್ರಮದಲ್ಲಿ ವಕೀಲ ಕೆರೆಮೇಗಳಕೊಪ್ಪಲು ಶಂಕರೇಗೌಡ, ಬಿ.ಎನ್.ದಿನೇಶ್ ಅಭಿಮಾನಿ ಬಳಗದ ಪ್ರಮುಖರಾದ ಬೇಲದಕೆರೆ ಹರೀಶ್, ಕೊರಟೀಕೆರೆ ಕೃಷ್ಣೇಗೌಡ, ಬಿಲ್ಲೇನಹಳ್ಳಿ ಮಹಾದೇವ್, ಎಪಿಎಂಸಿ ಮಾಜಿ ಅಧ್ಯಕ್ಷೆ ಮಂಜಮ್ಮ, ಶ್ಯಾರಹಳ್ಳಿ ಗೋವಿಂದರಾಜು, ಕೊರಟೀಕೆರೆ ಧರ್ಮರತ್ನಾಕರ್, ಭಾರತೀಪುರ
ಸಂತೋಷ್, ಮಂಜು, ಬಳ್ಳೇಕೆರೆ ನಂದೀಶ್, ಅಕ್ಕಿಹೆಬ್ಬಾಳು ಸಂತೋಷ್, ಸಿಂಗನಹಳ್ಳಿ ಪ್ರಕಾಶ್, ಪ್ರಸನ್ನ, ಮನು, ಸಂತೇಬಾಚಹಳ್ಳಿ ಶಿವು, ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಂದ್ರಗೌಡ, ನಂದೀಶ್, ಸಾವಿತ್ರಮ್ಮ, ಶಾಂತಮ್ಮ ಸೇರಿದಂತೆ ಸುಮಾರು 3ಸಾವಿರಕ್ಕೂ ಅಧಿಕ ಅಭಿಮಾನಿಗಳು ಭಾಗವಹಿಸಿದ್ದರು.




