Friday, November 20, 2026

ಪ್ರಾಯೋಗಿಕ ಆವೃತ್ತಿ

ಪುರಸಭೆಯ ಸಾಮಾನ್ಯ ಸಭೆಗೆ ಸದಸ್ಯರೊಂದಿಗೆ ಗುತ್ತಿಗೆದಾರನೂ ಹಾಜರು !

ವರದಿ : ಪ್ರಭು ವಿ. ಎಸ್.

ಸೋಮವಾರ ನಡೆದ ಮದ್ದೂರು ಪುರಸಭೆಯ ಸಾಮಾನ್ಯ ಸಭೆಗೆ ಚುನಾಯಿತ ಪುರಸಭೆ ಸದಸ್ಯರು, ಚುನಾಯಿತ ಪ್ರತಿನಿಧಿಗಳ ಜೊತೆಗೆ ಗುತ್ತಿಗೆದಾರನೊಬ್ಬ ಹಾಜರಾಗಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಸ್ಥಳೀಯ ಸಂಸ್ಥೆಗಳ ಕಾಯ್ದೆ ಪ್ರಕಾರ ಪುರಸಭೆಯ ಸಾಮಾನ್ಯ ಸಭೆಗೆ ಚುನಾಯಿತ ಪುರಸಭೆ ಸದಸ್ಯರು, ಚುನಾಯಿತ ಜನ ಪ್ರತಿನಿಧಿಗಳು, ಸರ್ಕಾರ ಅಧಿಕಾರಿಗಳು ಹಾಗೂ ಪತ್ರಕರ್ತರನ್ನು ಹೊರತುಪಡಿಸಿದರೆ ಬೇರೆ ಯಾವುದೇ ಖಾಸಗಿ ವ್ಯಕ್ತಿಗೆ ಭಾಗವಹಿಸಲು ಅವಕಾಶವಿಲ್ಲ. ಹಾಗಿದ್ದರೂ ಸಾಮಾನ್ಯ ಸಭೆಯಲ್ಲಿ ನೆಲ ಬಾಡಿಗೆ ಸುಂಕ ವಸೂಲಾತಿ ಟೆಂಡರ್ ಪಡೆದಿರುವ ಮುರುಳಿ ಎನ್ನುವ ಗುತ್ತಿಗೆದಾರ ಹಾಜರಿದ್ದರು. ಇದನ್ನು ಯಾವೊಬ್ಬ ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರಶ್ನೆ ಮಾಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

nudikarnataka.com

ಮದ್ದೂರು ಪಟ್ಟಣ ವ್ಯಾಪ್ತಿಯ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವಾಗ ಒಬ್ಬ ಸಾಮಾನ್ಯ ಗುತ್ತಿಗೆದಾರನು ಕಾಣಿಸಿಕೊಂಡಿರುವುದು, ನೈಜ್ಯ ಜನಪ್ರತಿನಿಧಿಗಳನ್ನು ಅವಮಾನಿಸಿದಂತಾಗಿದೆ. ಟೆಂಡರ್ ನಲ್ಲಿ ಆಗಿರುವ ಸಮಸ್ಯೆಯ ಬಗ್ಗೆ ತಿಳಿಸಬೇಕಿದ್ದರೆ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿಗಳ ಪೂರ್ವಾನುಮತಿ ಪಡೆದು ಮಾತ್ರ ಸಭೆಗೆ ಹಾಜರಾಗಬೇಕಿತ್ತು. ಆದರೆ ಇಡೀ ಸಭೆಯ ಎಲ್ಲಾ ಆಗು ಹೋಗುಗಳನ್ನು ಗುತ್ತಿಗೆದಾರ ಭಾಗಿಯಾಗಿ ಸಭೆ ಅಂತ್ಯವಾಗುವವರೆಗೂ ಹಾಜರಿದ್ದು ಸಭೆಯ ಘನತೆಗೆ ಚುಕ್ಕೆಯಾಗಿದೆ ಎಂದು ಸ್ಥಳೀಯ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಹಲವು ವಿಚಾರಗಳ ಚರ್ಚೆ 

ಮದ್ದೂರು ಪುರಸಭೆಯ ಸಾಮಾನ್ಯ ಸಭೆಯು ಅಧ್ಯಕ್ಷ ಸುರೇಶ್ ಕುಮಾರ್ ಅನುಪಸ್ಥಿತಿಯಲ್ಲಿ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಉಪಾಧ್ಯಕ್ಷೆ ಸುಮಿತ್ರಾ ರಮೇಶ್ ರವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.

ಕೊಪ್ಪ ಸರ್ಕಲ್ ಬಳಿ ರೈಲ್ವೆ ಬಳಿ ಇರುವ ಮೇಲು ಸೇತುವೆ ಪಿಡಬ್ಲ್ಯೂಡಿ ಇಲಾಖೆ ನಿರ್ಮಾಣ ಮಾಡಿದ್ದು, ಅಲ್ಲಿ ಅಳವಡಿಸಿರುವ ಬೀದಿ ದೀಪಗಳನ್ನು ದುರಸ್ತಿ ಮಾಡದೆ ಇರುವ ಕಾರಣ, ರಾತ್ರಿ ವೇಳೆ ಅಪಘಾತಗಳು ಸಂಭವಿಸಿದೆ. ಇದನ್ನು ಪುರಸಭೆಗೆ ಸೇರಿಸಿಕೊಂಡು ಬೀದಿ ದೀಪ ನಿರ್ವಹಣೆ ಮಾಡಲು ಶಾಸಕರು ಹೇಳಿದ್ದು, ಈ ಸಂಬಂಧ ಚರ್ಚೆ ನಡೆದು ಬೀದಿ ದೀಪಗಳನ್ನು ದುರಸ್ತಿ ಮಾಡಲು ಹಾಗೂ ಪಿಡಬ್ಲ್ಯೂ ಇಲಾಖೆ ಜೊತೆ ಪತ್ರ ವ್ಯವಹಾರ ನಡೆಸಲು ಸಭೆ ತೀರ್ಮಾನ ಕೈಗೊಂಡಿತ್ತು.

ನಾಮ ನಿರ್ದೇಶನ ಸದಸ್ಯ ತೀರ್ಥಾಚಾರ್ಯ ಕೊಲ್ಲಿ ವೃತ್ತವವನ್ನು ಅಮರಶಿಲ್ಪಿ ಜಕ್ಕಣಾಚಾರಿ ವೃತ್ತವೆಂದು ಘೋಷಿಸಲು ಮನವಿ ಮಾಡಿದ್ದರು. ಈ ಸಂಬಂಧ ಪ್ರಸನ್ನ ಮಾತನಾಡಿ ಈ ವೃತ್ತವನ್ನು ಜನರಲ್ ಕಾರ್ಯಪ್ಪ ವೃತ್ತ ಎಂದು ಹಿಂದೆ ಘೋಷಣೆ ಮಾಡಿದ್ದು, ಓಲ್ಡ್ ಎಂಸಿ ರೋಡನ್ನು ಈಗಾಗಲೇ ಜನರಲ್ ಜನರಲ್ ಕಾರ್ಯಪ್ಪ ರಸ್ತೆ ಎಂದು ಕರೆಯುತ್ತಿದ್ದು, ಬೇರೆ ವೃತ್ತವನ್ನು ಈ ರಸ್ತೆಯ ಹೆಸರಿಗೆ ಪರಿಶೀಲಿಸಲು ತಿಳಿಸಿದರು.

nudikarnataka.com

ರಾಜ್ಯ ಸರ್ಕಾರದ ಸುತ್ತೋಲೆ ಅನ್ವಯ ಕಟ್ಟಡ ಕಾಮಗಾರಿ ಮಣ್ಣು, ತ್ಯಾಜ್ಯ ನಿರ್ವಹಣೆಗೆ ಸುತ್ತೋಲೆ ಹೊರಡಿಸಿದ್ದು, ಇದರ ಅನ್ವಯ ತ್ಯಾಜ್ಯವನ್ನು ಸಂಗ್ರಹಕ್ಕೆ ಮತ್ತು ಇದರ ದರ ನಿಗದಿಗೆ ಸಂಬಂಧಿಸಿದಂತೆ ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಲು ಮುಖ್ಯ ಅಧಿಕಾರಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಸದಸ್ಯ ಆದಿಲ್ ಈ ಘನ ತ್ಯಾಜ್ಯ ನಿರ್ವಹಣೆಯ ನಂತರ ಮರುಬಳಕೆಗೂ ಚರ್ಚಿಸಲು ಮುಂದಿನ ಸಭೆಗೆ ವಿಷಯ ಪ್ರಸ್ತಾಪಿಸಲು ತಿಳಿಸಿದರು. ಇದಕ್ಕೆ ಸರ್ವಾನುಮತದ ಒಪ್ಪಿಗೆ ದೊರೆಯಿತು.

ಸಭೆಯ ವೇಳೆ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್ ಮಹೇಶ್, ಸದಸ್ಯರಾದ ಬಿ ಸಿ ಸರ್ವಮಂಗಳ,ಪ್ರಿಯಾಂಕ ಅಪ್ಪುಗೌಡ, ಕೊಕ್ಕಿಲ ಅರುಣಕುಮಾರ್, ನಂದೀಶ್, ಸಿದ್ದು, ಸಚಿನ್, ಕಮಲ್ ನಾಥ್ ವನಿತಾ, ಪ್ರಮೀಳಾ, ಎಂ.ಐ. ಪ್ರವೀಣ್ ಅದಿಲ್ ಆಲಿಖಾನ್, ಮ.ನ.ಪ್ರಸನ್ನ ಕುಮಾರ್  ಸೇರಿದಂತೆ ಸಿಬ್ಬಂದಿ ವರ್ಗ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ