Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಜ್ಯ ಬಜೆಟ್ ನಲ್ಲಿ ಶಿಕ್ಷಣಕ್ಕೆ ಶೇ.30 ಹಣ ಮೀಸಲಿಡಲು AIDSO ಆಗ್ರಹ

ರಾಜ್ಯ ಬಜೆಟ್ ನಲ್ಲಿ ಶೇ.30ರಷ್ಟು ಹಣ ಮೀಸಲಿಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಎಲ್ಲಾ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಹಾಸ್ಟೆಲ್ ವ್ಯವಸ್ಥೆ ಖಾತ್ರಿಪಡಿಸಿ, ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿ,  ಸರ್ಕಾರಿ ವೈದ್ಯಕೀಯ ಸೀಟುಗಳನ್ನು ಹೆಚ್ಚಿಸಿ, ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು. ಸರ್ಕಾರಿ ಶಾಲಾ ಕಾಲೇಜುಗಳಲ್ಲಿನ ಸೌಲಭ್ಯಗಳ ಕುಂದು ಕೊರತೆ ನಿವಾರಿಸಿ, ಶಾಲೆ ಮುಚ್ಚುವ ನೀತಿಯನ್ನು ಕೈಬಿಡಬೇಕು, ಉನ್ನತ ಶಿಕ್ಷಣಕ್ಕೆ ಹಣಕಾಸು ಹೆಚ್ಚಿಸಿ, ಶಿಕ್ಷಣದ ಗುಣಮಟ್ಟ ಖಾತ್ರಿಪಡಿಸಬೇಕು ಹಾಗೂ ಸರ್ಕಾರಿ ಶಾಲಾ ಕಾಲೇಜುಗಳಿಗೆ ಖಾಯಂ ಶಿಕ್ಷಕರ ನೇಮಕಾತಿ ಮಾಡಬೇಕೆಂದು AIDSO ಮಂಡ್ಯ ಜಿಲ್ಲಾ ಸಮಿತಿಯ ಮುಖಂಡರಾದ ಚಂದ್ರಕಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದ ವಿದ್ಯಾರ್ಥಿಗಳು ಈ ವರ್ಷ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಸರ್ಕಾರವು ವಿದ್ಯಾರ್ಥಿಗಳಿಗಾಗಿ, ಶಿಕ್ಷಣ ಪರ ಕ್ರಮಗಳನ್ನು ಜಾರಿಗೆ ತರಬೇಕು. ಪ್ರತಿ ವರ್ಷವೂ ಕ್ಷೀಣವಾಗುತ್ತಿರುವ ಶಿಷ್ಯವೇತನವು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸುತ್ತಿದೆ‌. ಹಾಸ್ಟೆಲ್ ಸೌಲಭ್ಯವು ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ದೊರಕಬೇಕಿದೆ. ವಿದ್ಯಾರ್ಥಿಗಳ ಮೇಲೆ ಶೈಕ್ಷಣಿಕ ಕಲಿಕೆಯ ಖರ್ಚನ್ನು ಕಡಿಮೆ ಮಾಡುವುದು ಸರ್ಕಾರದ ಉದ್ದೇಶವಾಗಬೇಕೆಂಬುದು ಅವರು ಆಗ್ರಹಿಸಿದ್ದಾರೆ.

ಶೈಕ್ಷಣಿಕ ಸಂಸ್ಥೆಗಳು ಆರ್ಥಿಕವಾಗಿ ಸ್ವಾಯತ್ತರಾಗಬೇಕೆಂಬ ಪ್ರಸ್ತಾವನೆಯನ್ನು ಸರ್ಕಾರವು ಕೈಬಿಡಬೇಕು. ಸರ್ಕಾರಿ ಶಾಲಾ ಕಾಲೇಜುಗಳು ಇಲ್ಲಿಯವರೆಗೂ ಅನೇಕ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಭವಿಷ್ಯ ಕಲ್ಪಿಸಿದೆ. ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಸರ್ಕಾರಿ ಸಂಸ್ಥೆಗಳ ಮೇಲೆ ಅವಲಂಬಿತರಾಗಿರುವಾಗ ಸರ್ಕಾರ ಹೆಚ್ಚು ಅನುದಾನಗಳನ್ನು ನೀಡಿ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಲು ಸರ್ಕಾರವು ತನ್ನ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ಇತ್ತೀಚಿಗೆ ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗವು ನೀಡಿರುವ ಶಿಫಾರಸ್ಸುಗಳು ಶಿಕ್ಷಣ ಪ್ರಿಯರಲ್ಲಿ ಆತಂಕ ಮೂಡಿಸುವಂತಿದೆ.‌ ಸರ್ಕಾರಿ ಶಾಲೆಗಳನ್ನು ವಿಲೀನಗೋಳಿಸುವ ಪ್ರಕ್ರಿಯೆಯನ್ನು ಸರ್ಕಾರ ತಿರಸ್ಕರಿಸಬೇಕೆಂದು ಒತ್ತಾಯಿಸಿದರು.

ದಾಖಲಾತಿ ಕಡಿಮೆಯಾಗುವುದರ ಹಿಂದೆ ಕ್ಷೀಣಿಸುತ್ತಿರುವ ಸೌಲಭ್ಯಗಳೇ ಕಾರಣವಾಗಿದೆ, ಮಧ್ಯಾಹ್ನದ ಬಿಸಿ ಊಟದಲ್ಲಿ ಮೊಟ್ಟೆಯಂತಹ ಅನೇಕ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಮತ್ತಷ್ಟು ಹಣ ಮಂಜೂರು ಮಾಡಬೇಕು. ಶಾಲೆಯ ಪ್ರಾರಂಭದ ಮೊದಲ ದಿನದಿಂದಲೇ ಮಕ್ಕಳಿಗೆ ಶೂ ಗಳನ್ನು ವಿತರಿಸಬೇಕು. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸುವ ಅವಶ್ಯಕತೆ ಇದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಉನ್ನತ, ವೃತ್ತಿಪರ ಶಿಕ್ಷಣದ ಅವಕಾಶ ಕಲ್ಪಿಸಿ ಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!