Friday, November 20, 2026

ಪ್ರಾಯೋಗಿಕ ಆವೃತ್ತಿ

ಭೂತಾನ್ ಪ್ರಯಣ : ಬೆಟ್ಟದ ಮೇಲಿನ ಬುದ್ಧ ವಿಹಾರ

✍️ ಚೇತನ್ ಕಾಗೇಪುರ

ಅವರೆಲ್ಲಾ ಅದೆಷ್ಟು ಘಂಟೆಗೆ ಮಲಗಿದರೊ….. ನನಗಂತೂ ಒಳ್ಳೆಯ ನಿದ್ರೆ ಜೊತೆಗೆ ತಡೆಯಲಾರದಷ್ಟು ಚಳಿ. ಭೂತಾನ್ ಚಳಿ ರಾತ್ರಿ ಆಗುತ್ತಾ ಆಗುತ್ತಾ ಮೈನೆಸ್ ಉಷ್ಣಾಂಶ ತಲುಪುತ್ತಿತ್ತು. ಎಷ್ಟು ದಪ್ಪ ಹೊದಿಕೆಯನ್ನು ಹೊದ್ದಿದ್ದರೂ ಗಡ ಗಡ ನಡಗುತ್ತಿದ್ದೆ. ಚಳಿ ಹೆಚ್ಚಾದಷ್ಟು ಅದಕ್ಕೆ ಹೊಂದಿಕೆ ಮಾಡಿಕೊಳ್ಳಲು ನಮ್ಮ ದೇಹ ಕೂಡ ಉಷ್ಣತೆ ಹೆಚ್ಚಿಸಿಕೊಳ್ಳುತ್ತಿತ್ತು, ಹಾಗಾಗಿ ಒಮ್ಮೊಮ್ಮೆ ಜ್ವರ ಬಂದಂತೆ ಅನಿಸುತ್ತಿತ್ತು. ಅಂತೂ ಹೇಗೋ ಒಳ್ಳೆಯ ಅನುಭವದ ಜೊತೆಗೆ ರಾತ್ರಿ ನಿದ್ದೆಗೆ ಜಾರಿದೆ.

ಬೆಳಿಗ್ಗೆ ಬೇಗ ಹಾಸಿಗೆ ಬಿಡಲಾಗದ ಚಳಿಯಲ್ಲಿ ಎದ್ದು ಎಲ್ಲರೂ ರೆಡಿಯಾಗಿ ರೂಮಿನಿಂದ ಹೊರಗೆ ನಗರ ಸುತ್ತಲೂ ಹೊರಟೆವು. ನಗರದೊಳಗೆ ಒಂದು ದೇವಲಯದಂತ ಕಟ್ಟಡ ನೋಡಿ ಕಂಪೌಂಡ್ ದಾಟಿ ಒಳಗೆ ಹೋದೆವು, ಹೋದ ತಕ್ಷಣ ಆ ಕಟ್ಟಡದ ಮುಂದೆ ನಿಂತು ಒಂದಷ್ಟು ಸೆಲ್ಫಿ ತೆಗೆದುಕೊಳ್ಳಲು ಆರಂಭಿಸಿದ್ದೆ ಅಷ್ಟರಲ್ಲಿ ಅಲ್ಲಿಯ ಸೆಕ್ಯುರಿಟಿಯವ ನಮ್ಮನ್ನು ಟಿಕೆಟ್ ಕೇಳಿದ,ಇನ್ನೂ ಟಿಕೆಟ್ ಕೌಂಟರ್ ತೆರೆದಿರಲಿಲ್ಲ ಹಾಗಾಗಿ ನಾವು ಟಿಕೆಟ್ ಪಡೆಯದೆ ಹಾಗೆ ಒಳಕ್ಕೆ ಹೋಗಿದ್ದೆವು. ಅಷ್ಟಕ್ಕೂ ಅಲ್ಲಿಗೆ ಟಿಕೆಟ್ ತೆಗೆದುಕೊಳ್ಳುವ ಅಗತ್ಯವಿದ್ದಂತೆ ನಮಗ್ಯಾರಿಗೂ ಅನಿಸಿರಲಿಲ್ಲ. ಒಳಗೆ ಹೋಗದ ನಾವು ಮೈದಾನದಲ್ಲಿ ಒಂದಷ್ಟು ಫೋಟೋಗಳನ್ನು ತೆಗೆದುಕೊಂಡು ಅಲ್ಲಿಂದ ತಿಮ್ಫು ನಗರಕ್ಕೆ ಅಂಟಿಕೊಂಡಿರುವ ಸಣ್ಣ ಗುಡ್ಡದ ಮೇಲೇ 4.5 ಕಿ.ಮೀ. ದೂರದಲ್ಲಿರುವ ಬುದ್ಧನ ಪ್ರತಿಮೆ ನೋಡಲು ಹೊರಟೆವು.

nudikarnataka.com Buddha Vihara

ನಮ್ಮ ಮೈಸೂರಿನಲ್ಲಿರುವ ಚಾಮುಂಡಿ ಬೆಟ್ಟದಂತ ಚಿಕ್ಕ ಗುಡ್ಡವಷ್ಟೇ, ಹೋಗುವ ದಾರಿಯಲ್ಲಿ ರಸ್ತೆ ಉದ್ದಕ್ಕೂ ಅಂದಾಜು ಪ್ರತಿ 100 ಅಡಿಗಳಿಗೆ ಒಂದರಂತೆ ಅರ್ಧ ಲೀಟರ್ ಕುಡಿಯುವ ನೀರಿನ ಬಾಟಲಿಗಳನ್ನು ಇಟ್ಟಿದ್ದರು. ನಮಗೆ ಯಾಕೆ ಹೀಗೆ ಎಂದು ಆಶ್ಚರ್ಯ, ಸ್ವಲ್ಪ ಮುಂದೆ ಹೋದಾಗ ಗೊತ್ತಾಗಿದ್ದು ನಗರದ ಜನರು ನಡೆದುಕೊಂಡು ಬೆಟ್ಟ ಹತ್ತುತ್ತಿದ್ದರು ಅವರಿಗೆ ದಣಿವಾದಗ ಕುಡಿಯಲೆಂದು ಹಾಗೆ ನೀರಿನ ಬಾಟಲಿಗಳನ್ನು ಇಟ್ಟಿದ್ದರು. ಮತ್ತು ಖಾಲಿ ಬಾಟಲಿಗಳನ್ನು ನಮ್ಮ ಹಾಗೆ ಎಲ್ಲೆಂದರಲ್ಲಿ ಬಿಸಾಡದೆ ಒಂದು ಕಡೆ ಸಂಗ್ರಹಿಸುತ್ತಿದ್ದರು. ಇಡೀ ದೇಶದ ಎಲ್ಲಾ ನಗರಗಳು ಸ್ವಚ್ಛವಾಗಿದ್ದವು.

ಬುದ್ಧನನ್ನು ನಾನು ಓದಿಕೊಂಡಿದ್ದಂತೆ, ಬುದ್ಧ ವೈಚಾರಿಕೆ ಪ್ರಜ್ಞೆಯುಳ್ಳವ, ಮೌಢ್ಯವನ್ನು ವಿರೋದಿಸಿದವ, ಯಾವುದೇ ಆಚರಣೆ, ಆರಾಧನೆ ವಿರೋದಿಸಿದವ, ಸಾಮಾಜಿಕ ಸಮಾನತೆ, ವ್ಯಕ್ತಿ ಸಮಾನತೆ ಹೀಗೆ ಹಲವಾರು ರೀತಿಯ ಹೋರಾಟದ ಪ್ರತೀಕ. ಇನ್ನು ಬುದ್ಧ ಧರ್ಮದವರೇ ಇರುವ ದೇಶದಲ್ಲಿ ವೈಚಾರಿಕ ಪ್ರಜ್ಞೆ ಹೇಗಿರಬಹುದೆಂಬ ಕುತೂಹಲವನ್ನು ಹೊಂದಿದ್ದೆ. ಆದರೆ ಬೆಟ್ಟ ಹತ್ತುವಾಗ ಕಂಡ ದೃಶ್ಯ ಬೇರೆ. ಅಲ್ಲಿಯೂ ಪುರೋಹಿತಶಾಹಿ ಆರಾಧನಾ ವಿಧಾನಗಳನ್ನು ಜನರು ರೂಢಿಸಿಕೊಂಡಿದ್ದರು. ಹಚ್ಚಿದ ಗಂಧದ ಕಡ್ಡಿ ಹಿಡಿದುಕೊಂಡು ನಾಲ್ಕು ಹೆಜ್ಜೆ ನಡೆಯುತ್ತಾರೆ ನಂತರ ರಸ್ತೆಯಲ್ಲಿ ಮಲಗಿ ಉದ್ದಂಡ ನಮಸ್ಕಾರ ಮಾಡುತ್ತಾರೆ ಮತ್ತೆ ಏಳುವುದು ನಾಲ್ಕು ಹೆಜ್ಜೆ ನಡೆಯುವುದು ಪುನಃ ಉದ್ದಂಡ ನಮಷ್ಕಾರ, ಹೀಗೆ ಪೂರ್ತಿ ಬೆಟ್ಟ ಹತ್ತಿ ಬುದ್ಧ ವಿಹಾರ ತಲುಪುವವರೆಗೂ ಮಾಡುತ್ತಾರೆ. ನನಗಂತೂ ಈ ಪುರೋಹಿತಶಾಹಿ ಮನಃಸ್ಥಿತಿ ಬುದ್ಧನನ್ನು ಒಪ್ಪಿಕೊಂಡಿರುವ ನಾಡಿನಲ್ಲೂ ಯಾರನ್ನೂ ಬಿಟ್ಟಿಲ್ಲ ಅನಿಸಿಬಿಟ್ಟಿತು.

ಅಷ್ಟಕ್ಕೂ ಭೂತಾನಿನ ಜನತೆ ಬೌದ್ಧ ದಮ್ಮವನ್ನು 1988 ರಲ್ಲಿ ಅಲ್ಲಿಯ ರಾಜ ಆಜ್ಞೆಯಂತೆ, ಅಲ್ಲಿನ ಜನರೆಲ್ಲರೂ ಸಂಪೂರ್ಣವಾಗಿ ಬೌದ್ಧ ಧರ್ಮಕ್ಕೆ ಅನುಯಾಯಿಗಳಾಗಬೇಕೆಂದು ಆದೇಶ ಹೊರಡಿಸಿದಾಗ ಅನಿವಾರ್ಯವಾಗಿ ಒಪ್ಪಿದವರು. ಹೆಚ್ಚಿನ ಸಂಖ್ಯೆಯಲ್ಲಿದ್ದ ನೇಪಾಳಿಗರು ಅದನ್ನು ಒಪ್ಪದೇ ನೇಪಾಳಕ್ಕೆ ಪಲಾಯನ ಮಾಡಿದರು. ಆದರೆ ಅಲ್ಲಿ ಅವರು ನೇಪಾಳಿ ನಾಗರಿಕರಾಗದೆ ಇಂದಿಗೂ (ರೇಫ್ಯೂಜಿ ಕ್ಯಾಮ್ಪ್) ನಿರಾಶ್ರಿತರ ಶಿಭಿರದಲ್ಲಿ ಆಶ್ರಯ ಹೊಂದಿದ್ದಾರೆ.

ಭೂತಾನ್ ದೇಶವು ಉತ್ತರಕ್ಕೆ ಚೀನಾ ಮತ್ತು ದಕ್ಷಿಣ, ಪೂರ್ವ, ಪಶ್ಚಿಮಕ್ಕೆ ಭಾರತ ದೇಶದಿಂದ ಸುತ್ತುವರಿದಿರುವ ಪುಟ್ಟ ದೇಶ. ಚೀನಾ ಟಿಬೆಟ್ ಅನ್ನು ಆಕ್ರಮಿಸಿಕೊಂಡಮೇಲಂತೂ ಭೂತಾನ್ ಅನಿವಾರ್ಯವಾಗಿ ಭಾರತದೊಂದಿಗೆ ಸ್ನೇಹ ಸಂಭಂದ ಹೆಚ್ಚಿಸಿಕೊಂಡಿತು. ಈಗಂತೂ ಭಾರತ ಹಾಗೂ ಚೀನಾ ಎರಡರ ನಡುವೆ ಒಂದು ರೀತಿಯ ಹೊಂದಾಣಿಕೆ ಮಾಡಿಕೊಂಡು ಉಳಿದಿರುವ ದೇಶ. ಅಲ್ಲಿನ ಮುಖ್ಯ ಹೈವೇ ರಸ್ತೆಗಳು, ಬ್ರಿಡ್ಜ್ ಗಳು, ಹೀಗೆ ಹಲವಾರು ಯೋಜನೆಗಳಿಗೆ ಭಾರತದಿಂದ ಎಲ್ಲಾರೀತಿಯ ನೆರವು ಸಿಗುತ್ತಿದೆ.ಭೂತಾನಿನ ಉತ್ತರದ ಚೀನಾ ಬಾರ್ಡರ್ ನಲ್ಲಿ ಭಾರತದ ಸೇನಾಪಡೆ ಕಾರ್ಯನಿರ್ವಹಿಸುತ್ತಿದೆ. ಇದೆಲ್ಲಾ ಬಂಡವಾಳಿಗ ವ್ಯವಸ್ಥೆಯ ಹಿತಾಸಕ್ತಿಗಾಗಿ ಸಂಪನ್ಮೂಲಗಳ ರಕ್ಷಣೆ ಅಷ್ಟೇ ಹೊರತು ಬೇರೇನೂ ಅಲ್ಲ.

ರಾಜ ಆಡಳಿತದಲ್ಲಿರುವ ಈ ದೇಶ ಭಾಗಶಃ ಡೆಮಾಕ್ರಸಿಯನ್ನು ಇತ್ತೀಚೆಗೆ ಅನುಸರಿಸುತ್ತಿದೆ. ರಾಜನ ಆಡಳಿತದ ಅಡಿಯಲ್ಲಿಯೇ ಡೆಮಾಕ್ರಸಿ ವ್ಯವಸ್ಥೆ. ROYAL GOVERNAMENT OF BHUTAN ಎನ್ನುವ ನಾಮಫಲಕ ಎಲ್ಲಾ ಕಛೇರಿಗಳ ಮೇಲು ಕಾಣಸಿಗುತ್ತದೆ.

nudikarnataka.com
ಭೂತಾನಿನ ಸಂಸತ್ತಿನ ಕಛೇರಿಯ ಮುಂದೆ ಹಾರುತ್ತಿರುವ ಅಲ್ಲಿನ ರಾಷ್ಟ್ರ ಧ್ವಜ.

ಬೆಟ್ಟದ ಮೇಲಿನ ಬುದ್ಧ ವಿಹಾರ ಮತ್ತು ಬಯಲಿನಲ್ಲಿರುವ ಬುದ್ಧನ ದೊಡ್ಡ ಪ್ರತಿಮೆ ಅತ್ಯಾಕರ್ಷಕವಾಗಿದೆ. ಪ್ರತಿಮೆ ಎತ್ತರದ ಪೀಠದ ಮೇಲಿದೆ ಅದರ ಕೆಳಗೆ ಬುದ್ಧ ವಿಹಾರ ಹೀಗೆ ಕಟ್ಟಡ ವಿನ್ಯಾಸ ಗೊಳಿಸಲಾಗಿದೆ. ವಿಹಾರದ ಒಳಗೆ ಹಲವು ವಿವಿಧ ಘಾತ್ರದ ಬುದ್ಧ ಮೂರ್ತಿಗಳಿವೆ, ವಿಹಾರದ ಸುತ್ತಲಿನ ಗೋಡೆಗಳೆಲ್ಲವೂ ಅಲ್ಲಿನ ಕಲೆ, ವಸ್ತು ಶಿಲ್ಪದ ವಿವಿಧ ರೀತಿಗಳಿಂದ ಆಕರ್ಷಕವಾಗಿವೆ. ಬಯಲಿನ ಸುತ್ತಲೂ ಹಲವು ಸುಂದರ ಮಹಿಳೆಯರ ಪ್ರತಿಮೆಗಳ ವಿಗ್ರಹಗಳಿವೆ. ಎಲ್ಲವೂ ಕಂಚಿನಿಂದ ಮಾಡಲ್ಪಟ್ಟಿದ್ದು ಅದರಮೇಲೆ ಚಿನ್ನದ ಲೇಪನ ಮಾಡಲಾಗಿದೆ, ಬುದ್ಧನ ಪ್ರತಿಮೆಯ ಎತ್ತರ 54 ಮೀಟರ್ಗಳು. ಇಲ್ಲಿ ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿದ್ದಂತೂ ಆಯಿತು.

ಅಲ್ಲಿಂದ ಹೊರಟು ಬೆಟ್ಟವಿಳಿದು ಬಂದು ರಸ್ತೆ ಬದಿಯ ಪುಟ್ಟ ಹೋಟೆಲ್ನಲ್ಲಿ ಬೆಳಗಿನ ಉಪಹಾರ ಸೇವಿಸಿದೆವು. ಭೂತನಿನಲ್ಲಿ ಎಲ್ಲಿಯೇ ಹೋದರು ದೊರಕುತ್ತಿದ್ದದ್ದು ಮಮ್ಮೂಸ್ ಎನ್ನುವ ತಿನಿಸು ಅದರಲ್ಲಿ ವೆಜ್ ಮತ್ತು ನಾನ್ ವೆಜ್ ಎರಡು ರೀತಿಯದು, ಅದನ್ನು ಬಿಟ್ಟರೆ ನೂಡಲ್ಸ್, ಮತ್ತು ಇನ್ನಿತರೆ ಚೈನೀಸ್ ಆಹಾರ ದೊರಕುತ್ತಿದ್ದದ್ದು.

ಉಪಹಾರ ಮುಗಿಸಿ ನಮ್ಮ ಕಾರನ್ನು ಹೋಟೆಲ್ ಬಳಿಯೇ ನಿಲ್ಲಿಸಿ ಎಲ್ಲರೂ ನಡೆದುಕೊಂಡು thimphu ನಗರದಲ್ಲಿರುವ ಭೂತಾನ್ ಅಸೆಂಬ್ಲಿ ಕಛೇರಿ, ಸೇಕ್ರಿಯೇಟರಿ ಕಛೇರಿ ಗಳಸುತ್ತಲೂ ಸುತ್ತಾಡಿದೆವು ಒಂದಷ್ಟು ಫೋಟೋ ತೆಗೆದೆವು. ದಿನೇಶ್ ಮತ್ತು ಯೋಗಿ ಹೆಚ್ಚು ಬೆರೆಯಾಗಿಯೇ ಸುತ್ತುತ್ತಿದ್ದರು ಕಾರಣ ಅವರಿಬ್ಬರು ಪಕ್ಷಿ ಪ್ರೇಮಿಗಳು. ಹಾಗಾಗಿ ಅಲ್ಲಿನ ಪರಿಸರದಲ್ಲಿ ವಾಸಿಸುವ ಪಕ್ಷಿಗಳಿಗಾಗಿ ತಮ್ಮ ದೈತ್ಯ ಕ್ಯಾಮೆರಾ ಗಳನ್ನು ಹೊತ್ತು ತಿರುಗುತ್ತಿದ್ದರು.ಇನ್ನು ನಾನು, ಹೇಮಂತ್ ಮತ್ತು ಕೀರ್ತನ ಮೂವರೂ ಒಟ್ಟಿಗೆ ಸುತ್ತುತ್ತಿದ್ದೆವು, ಮಧ್ಯ ಮದ್ಯ ಈ ಯೋಗಿ ಮತ್ತು ದಿನೇಶ ಬಂದು ನಮ್ಮನ್ನು ಸೇರಿಕೊಳ್ಳುತ್ತಿದ್ದರು ಹಾಗೆಯೇ ಬೇರೆಯಾಗಿಬಿಡುತ್ತಿದ್ದರು.

ತಿಮ್ಫು ನಗರ ನಿರ್ಮಾಣವಾಗಿರುವುದು ತಿಮ್ಫು ನದಿ ದಡದಮೇಲೆ, ಇಲ್ಲಿ ಹರಿಯುವ ನೀರು ನೋಡಲು ತುಂಬಾ ಶುಭ್ರವಾಗಿದೆ, ಅದರ ಬಣ್ಣ ಒಂದುರಿತಿಯ ನೀಲಿಯಂತೆ ಕಾಣುತ್ತದೆ. ನೀರಿನ ತಲದಲ್ಲಿರುವ ಸಣ್ಣ ಸಣ್ಣ ಕಲ್ಲುಗಳು(pebbels) ನೋಡಲು ಅಷ್ಟೇ ಆಕರ್ಷಕ. ಅಲ್ಲಿನ ಕಟ್ಟಡ ವಿನ್ಯಾಸಗಳು ಟಿಬೆಟ್ ಮಾದರಿಯ ವಾಸ್ತು ಶಿಲ್ಪದಿಂದ ಕೂಡಿವೆ , ಅಲ್ಲಿನ ಜನರ ಉಡುಗೆಗಳು ಒಂದೇ ರೀತಿಯ ಸಾಂಪ್ರದಾಯಿಕವಾಗಿವೆ.

ಎಲ್ಲರೂ ಒಟ್ಟಿಗೆ ಒಂದೆಡೆ ಸೇರಿ ಫೋಟೋಗಳನ್ನು ತೆಗೆದುಕೊಂಡು, ಅಲ್ಲಿಂದ ಹೊರಟು, ನಮ್ಮ ಕಾರು ನಿಲ್ಲಿಸಿದ್ದ ಹೋಟೆಲ್ ಬಳಿಗೆ ಬಂದು ಕಾರಿನಲ್ಲಿ ಎಲ್ಲರೂ ಒಟ್ಟಿಗೆ ನಗರದ ಮಧ್ಯಕ್ಕೆ ಬಂದು ಖಾಲಿ ಇದ್ದ ಕಡೆ ಕಾರ್ ಪಾರ್ಕ್ ಮಾಡಿದೆವು.ಇಡೀ ಭೂತಾನಿನ ನಗರಗಳಲ್ಲಿ ಎಲ್ಲಿಯೇ ಕಾರು ನಿಲ್ಲಿಸಬೇಕೆಂದರೆ ಪಾರ್ಕಿಂಗ್ ಚಾರ್ಜ್ ಕೊಡಬೇಕು, ಅದನ್ನು ಸಂಗ್ರಹಿಸುತ್ತಿದ್ದವರೂ ಸಹ ಮಹಿಳೆಯರು. ಗಂಡಸರು ಹೆಚ್ಚು ಟ್ಯಾಕ್ಸಿ ಓಡಿಸುವ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಾರ್ ಪಾರ್ಕ್ ಮಾಡಿ ರಸೀದಿ ಪಡೆದು ಉತ್ತಮವಾದ ಹೋಟೆಲ್ ನ ಒಳಹೊಕ್ಕು ಐದೂ ಜನರೂ ಭೂತಾನಿನ ಒಂದು ರೀತಿಯ ವಿಚಿತ್ರವಾದ ಆದರೆ ಹೊಸದಾದ ರುಚಿಯಿದ್ದ ತುಕ್ಪಾ(tukpa)ಎನ್ನುವ ಖಾದ್ಯ ಸವಿದೆವು.

nudikarnataka.com
ಅಂಗಡಿಯೊಂದರಲ್ಲಿ ಮಾರಾಟಕ್ಕೆ ಇಟ್ಟಿದ್ದ ಮುಖವಾಡದೊಂದಿಗೆ ನಾನು. ಹೀಗೆ ನಿಲ್ಲಲು ಸಲಹೆ ನೀಡಿದ್ದು ಕೀರ್ತನ.

ಊಟದ ನಂತರ ನಾವು ಉಳಿದುಕೊಂಡಿದ್ದ ಲಾಡ್ಜ್ ತಲುಪಿದೆವು. ನಮ್ಮ ಎಲ್ಲ ಲಗೇಜುಗಳನ್ನು ಪ್ಯಾಕ್ ಮಾಡಿಕೊಂಡು ತಿಮ್ಫು ನಗರದಿಂದ ಫೋಬ್ಜಿಕ (phobjika valley) ವ್ಯಾಲಿ ಕಡೆಗೆ ನಮ್ಮ ಮುಂದಿನ ಪಯಣದ ಯೋಜನೆ ಮಾಡಿಕೊಂಡಿದ್ದೆವು. ಕೀರ್ತನ ಇನ್ನೂ ಒಂದು ದಿನ ತಿಮ್ಫು ವಿನಲ್ಲೇ ಉಳಿಯುವ ಯೋಜನೆ ಹಾಕಿಕೊಂಡಿದ್ದಳು. ಹಾಗಾಗಿ ಅವಳನ್ನು ಬಿಳ್ಕೊಟ್ಟು ನಾವು ನಾಲ್ಕೂ ಜನ ಮುಂದೆ ಪ್ರಯಾಣ ಆರಂಭಿಸಿದೆವು. ಅಂದಹಾಗೆ ಒಂದು ವಿಷಯ ಕೇಳಿಸಿಕೊಳ್ಳಿ, ಇಲ್ಲಿ ಅಪರಿಚಿತಳಾಗಿ, ಅಪರಿಚಿತ ದೇಶದಲ್ಲಿ ಸಿಕ್ಕ ಕೀರ್ತನ ನಮ್ಮಿಂದ ಬೀಳ್ಗೊಳ್ಳುತ್ತಿದ್ದರೆ, ಅಲ್ಲಿಂದ ಮುಂದೆ ಪ್ರಯಾಣ ಆರಂಭಿಸಿದ ನಾವು ನಾಲ್ಕು ಜನರು ಒಬ್ಬರಿಗೊಬ್ಬರು ತುಂಬಾ ಹಳೆಯ ಪರಿಚಯದ ವ್ಯಕ್ತಿಗಳೇನು ಆಗಿರಲಿಲ್ಲ. ಅದನ್ನು ಮುಂದಿನ ಲೇಖನದಲ್ಲಿ ಹೇಳುತ್ತೇನೆ.

ನಮ್ಮ ಮುಂದಿನ ಪ್ರಯಾಣ ಫೋಬ್ಜಿಕಾ ಕಣಿವೆ ಕಡೆಗೆ…..

ಫೋಬ್ಜಿಕಾ ಕಣಿವೆಯ ಅಪರಿಚಿತ ಕಾಡಿನಲ್ಲಿ, ಕಗ್ಗತ್ತಲಲ್ಲಿ, ಊಟವಿಲ್ಲದೆ, ಮೈನಸ್ ಉಷ್ಣಾಂಶ ದಲ್ಲಿ ಉಳಿಯಲು ಸ್ಥಳವಿಲ್ಲದೆ, ಅಬ್ಬಾ…….! ಅನುಭವ ಇನ್ನೂ ಸ್ವಾರಸ್ಯಕರವಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ