ಕಾಂಗ್ರೆಸ್-ಬಿಜೆಪಿಯಿಂದ ಜಿಲ್ಲೆಗೆ ಸಾಕಷ್ಟು ಅನ್ಯಾಯವಾಗಿದ್ದು, ಈ ಎರಡೂ ರಾಷ್ಟ್ರೀಯ ಪಕ್ಜಗಳ ಅಭ್ಯರ್ಥಿಗಳು ಅದ್ಯಾವ ಮುಖ ಹೊತ್ತುಕೊಂಡು ಮತ ಕೇಳಲು ಬರುತ್ತಿದ್ದಾರೋ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವ್ಯಂಗ್ಯವಾಡಿದರು.
ಮಂಡ್ಯದ ಮಂಜುನಾಥ ಕನ್ವೆನ್ಷನ್ ಹಾಲ್ ನಡೆದ ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಮಂಡ್ಯದ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ಘೋಷಿಸಿದ್ದರು. ಆದರೆ ಅದನ್ನು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ತಡೆಹಿಡಿಯಿತು. ಇದಕ್ಕೆ ಕಾಂಗ್ರೆಸ್ ಮುಖಂಡರು ಬಿಜೆಪಿ ನಾಯಕರ ಕೈ ಕಾಲು ಕಟ್ಟಿ ಅನುದಾನ ಬಿಡುಗಡೆ ಮಾಡದಂತೆ ಸಹಕರಿಸಿದರು. ಈಗ ಈ ಎರಡೂ ಪಕ್ಷಗಳ ಅಭ್ಯರ್ಥಿಗಳು ಅದ್ಯಾವ ಮುಖ ಹೊತ್ತು ಕೊಂಡು ಪದವೀಧರರ ಮತ ಕೇಳಲು ಬಂದಿದ್ದಾರೋ, ಪದವೀಧರ ಕ್ಷೇತ್ರದ ಮತದಾರರು ಬುದ್ದಿವಂತರಿದ್ದು ಅವರಿಗೆ ಮತ ಹಾಕುವುದಿಲ್ಲ ಎಂದರು.
ಎರಡೂ ಪಕ್ಷಗಳು ಮಂಡ್ಯ ಜಿಲ್ಲೆಗೆ ಮಾಡಬಾರದ ಅನ್ಯಾಯ ಮಾಡಿರುವುದನ್ನು ಪದವೀಧರ ಮತದಾರರು ಎಂದಿಗೂ ಕ್ಷಮಿಸುವುದಿಲ್ಲ. 12ಕೋಟಿ ಮೈಶುಗರ್ ಕಾರ್ಖಾನೆಗೆ ನೀಡಿದ್ದೇವೆ ಎಂದು ಹೇಳುತ್ತಾರೆ,ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿ 35 ಕೋಟಿ ಯಂತ್ರ ಗಳನ್ನು ಬಿಚ್ಚಿ ಸಾಗಿಸಿದ್ದಾರೆ. ಮಂಡ್ಯ ರೈತರಿಗೆ ಅನ್ಯಾಯ ಮಾಡಿರುವುದು ಪದವೀಧರರಿಗೆ ಗೊತ್ತಾಗಲ್ವಾ? ಕುಮಾರಸ್ವಾಮಿ ಸರ್ಕಾರ ಮಂಡ್ಯ ಜಿಲ್ಲೆ ಭಾರೀ ಅಭಿವೃದ್ಧಿಯಾಗುತ್ತಿತ್ತು ಎಂದರು.
ಕೀಲಾರ ಜಯರಾಮಣ್ಣ ಅವರು ಸುಸಂಸ್ಕೃತರು, ಅವರು ಎರಡೂ ರಾಷ್ಟ್ರೀಯ ಪಕ್ಷಗಳು ಜನರಿಗೆ ಮೋಸ ಮಾಡಿರುವ ಸಂದರ್ಭದಲ್ಲಿ ಜೆಡಿಎಸ್ ಪಕ್ಷಕ್ಕೆ ಮೋಸ ಮಾಡಬಾರದು. ಜೆಡಿಎಸ್ ಪಕ್ಷದಲ್ಲಿ ಉಳಿದು ನಮ್ಮ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ಮಾಡಬೇಕು ಎಂದರು.