Thursday, November 19, 2026

ಪ್ರಾಯೋಗಿಕ ಆವೃತ್ತಿ

ಕುಡಿಯುವ ನೀರಿಗೆ ಅವೈಜ್ಞಾನಿಕ ದರ ವಿಧಿಸಿರುವುದನ್ನು ಹಿಂಪಡೆಯುವಂತೆ ಆಗ್ರಹ : ಕರುನಾಡ ಸೇವಕರು


  • ಮೈಸೂರಲ್ಲಿ 68 ಕಿ.ಲೀ ಬಳಸಿರುವುದಕ್ಕೆ ₹704 ಬಿಲ್ಲು

  • ಮಂಡ್ಯದಲ್ಲಿ 52 ಕಿ.ಲೀ ಬಳಸಿರುವುದಕ್ಕೆ ₹1365 ಬಿಲ್ಲು
  • ಮೈಸೂರಲ್ಲಿ ಇದೇ ತಿಂಗಳು ಒಂದು ಕಿ.ಲೀ ಗೆ ₹8 ರಂತೆ ಬಿಲ್ಲು ಮಾಡಲಾಗಿದೆ
  • ಮಂಡ್ಯದಂತ ಸಾಮಾನ್ಯ ಪಟ್ಟಣಕ್ಕೆ ₹26.25 ರಂತೆ ಬಿಲ್ಲು

ಕುಡಿಯುವ ನೀರಿಗೆ ಅವೈಜ್ಞಾನಿಕ ದರ ವಿಧಿಸಿರುವುದನ್ನು ಹಿಂಪಡೆಯುವಂತೆ ಆಗ್ರಹಿಸಿ ಕರುನಾಡ ಸೇವಕರು ಸಂಘಟನೆಯ ಮುಖಂಡ ಎಂ.ಬಿ.ನಾಗಣ್ಣಗೌಡ ನೇತೃತ್ವದಲ್ಲಿ ಇಂದು  ಮಂಡ್ಯ ನಗರ ಸಭೆಯ ಅಧ್ಯಕ್ಷರಿಗೆ ಆಗ್ರಹ ಪತ್ರವನ್ನು ಸಲ್ಲಿಸಲಾಯಿತು.

ಕುಡಿಯುವ ನೀರು ಬಹಳ ವೇಗವಾಗಿ ಖಾಸಗೀಕರಣವಾಗುತ್ತಿದೆ.ಮಂಡ್ಯ ನಗರದಿಂದ 25ಕಿ.ಮೀ. ದೂರದಲ್ಲಿ ಹರಿಯುವ ಕಾವೇರಿ ನದಿಯಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಜಲಮಂಡಳಿಗೆ ನಿರ್ವಹಣೆ ವಹಿಸಲಾಯಿತು. ಒಂದೆರೆಡು ವರ್ಷಗಳ ಹಿಂದೆ ₹120ರೂ ಇದ್ದ ಕುಡಿಯುವ ನೀರಿನ ಮಾಸಿಕ ದರ ಏಕಾಏಕೀ ₹282ಕ್ಕೆ ಏರಿಸಲಾಯಿತು ಈ ಕುರಿತು ನಾವುಗಳು ಹೋರಾಟ ಶುರು ಮಾಡಿದಾಗ ಜಿಲ್ಲಾಡಳಿತ ದರ ಇಳಿಸುವ ಮಾತನಾಡಿತು.

ನಂತರ ಇಪ್ಪತ್ತು ನಾಲ್ಕು ಗಂಟೆ ನೀರು ಪೂರೈಸುವ ಭರವಸೆ ನೀಡಿ ಮೀಟರ್ ಗಳನ್ನು ಅಳವಡಿಸಿತು. ಈಗ ಒಂದು ಕಿಲೋ ಲೀಟರ್ ಗೆ ತಲಾ ₹26ರೂನಂತೆ ಸುಲಿಯಲು ಆರಂಭಿಸಿದೆ. ಇದರ ಪರಿಣಾಮ ಸಾಮಾನ್ಯ ಕುಟುಂಬವೊಂದು ತಿಂಗಳಿಗೆ ಒಂದು ಸಾವಿರ ರೂಪಾಯಿವರೆಗೆ ನೀರಿನ ಬಿಲ್ ಕಟ್ಟುವಂತಾಗಿದೆ. ಪ್ರತಿ ಕುಟುಂಬಕ್ಕೂ ಕೇವಲ ನೂರು ರೂಪಾಯಿಯಲ್ಲೆ ಅವಶ್ಯವಿದ್ದಷ್ಟು ನೀರು ಪೂರೈಸಲು ಅವಕಾಶವಿದ್ದರು ಜಲಮಂಡಳಿ ಮಂಡ್ಯದ ಜನರ ಲೂಟಿಗೆ ಇಳಿದಿದೆ. ನಗರಸಭೆ ಮೌನಕ್ಕೆ ಶರಣಾಗಿದೆ.

ನಗರದ ಮಗ್ಗುಲಲ್ಲೆ ಕಾವೇರಿ ಹರಿದರೂ ನೀರಿನ ಬಿಲ್ಲು ಮಾತ್ರ ಗಂಗಾ ನದಿಯಿಂದ ಮಂಡ್ಯಕ್ಕೆ ನೀರು ಹರಿಸುವಂತೆ ತೋರುತ್ತದೆ.ದೆ ದಿಲ್ಲಿಯಂತ ದೊಡ್ಡ ನಗರದಲ್ಲಿ ಆಮ್ಆದ್ಮಿ ಪಕ್ಷದ ಸರಕಾರ ಇಪ್ಪತ್ತು ಸಾವಿರ ಲೀಟರ್ ನೀರು ಉಚಿತವಾಗಿ ಕೊಡುತ್ತದೆ. ಆದರೆ ಮಂಡ್ಯದಲ್ಲಿ? ಸರಾಸರಿ ತಿಂಗಳಿಗೆ ₹282ರೂಪಾಯಿ ನೀರಿನ ಬಿಲ್ಲೇ ಜಾಸ್ತಿ ಎಂದ ಮಂಡ್ಯದ ಜನರಿಗೆ ಈಗ ಸರಕಾರ ಬರೆಯನ್ನು ಹಾಕಿದೆ. ಚುನಾವಣೆಗಳಲ್ಲಿ ಪಕ್ಷಗಳು ಕೊಡುವ ಚಿಲ್ಲರೆ ಕಾಸು ಎಲ್ಲಿ..ಇಲ್ಲಿ ನೋಡಿದರೆ ತಿಂಗಳಿಗೆ ಒಂದು ಸಾವಿರ ಹೆಚ್ಚುವರಿ ವಸೂಲಿ ನೋಡಿದರೆ ಐದು ವರ್ಷಕ್ಕೆ ಆರವತ್ತು ಸಾವಿರ ಕಟ್ಟಬೇಕು..ಐದುನೂರು ಕೊಟ್ಟು ಅರವತ್ತು ಸಾವಿರ ಬಾಚುವ ಯೋಜನೆಯಂತೆ ಕಾಣುತ್ತದೆ ಇದು.

ಈ ರೀತಿ ಒಂದು ಹಗಲು ದರೋಡೆ ನಡೆಯುತ್ತಿದೆ. ಕಳೆದ ತಿಂಗಳ ತನಕ ತಿಂಗಳಿಗೆ ₹282 ಗಳನ್ನು ಕಟ್ಟಿಸಿಕೊಳ್ಳುತ್ತಿದ್ದ ಜಲ ಮಂಡಳಿಯವರು, ಈ ತಿಂಗಳು ಏಕಾಏಕಿ ಬಂದು ಒಂದು ಕಿ.ಲೀ ಗೆ 26.25 ರಂತೆ ಬಿಲ್ಲು ಹಾಕಿ ಹೋಗಿರುತ್ತಾರೆ. ಆದರೆ ಮೈಸೂರಲ್ಲಿ ಇದೇ ತಿಂಗಳು ಒಂದು ಕಿ.ಲೀ ಗೆ ₹8 ರಂತೆ ಬಿಲ್ಲು ಮಾಡಲಾಗಿದೆ. ಮಹಾನಗರಪಾಲಿಕೆಯಲ್ಲೇ ₹8 ರಂತೆ ಬಿಲ್ಲು ಹಾಕಿರುವಾಗ ಮಂಡ್ಯದಂತ ಸಾಮಾನ್ಯ ಪಟ್ಟಣಕ್ಕೆ ₹26.25 ರಂತೆ ಬಿಲ್ಲು ಹಾಕಬಹುದೇ??!! ಕಳೆದ ತಿಂಗಳ ಬಿಲ್ಲು ಹಾಕಿದಾಗ ಯಾವುದೇ ರೀತಿ ಸೂಚನೆಯನ್ನು ಮಂಡ್ಯದ ಜನತೆಗೆ ನೀಡದೇ ಹೀಗೆ ಬೇಕಾಬಿಟ್ಟಿಯಾಗಿ ಬಿಲ್ಲು ಹಾಕಲಾಗಿದೆ. ಮೈಸೂರಲ್ಲಿ 68 ಕಿ.ಲೀ ಬಳಸಿರುವುದಕ್ಕೆ ₹704 ಬಿಲ್ಲು ಬಂದರೇ, ಮಂಡ್ಯದಲ್ಲಿ 52 ಕಿ.ಲೀ ಬಳಸಿರುವುದಕ್ಕೆ ₹1365 ಬಿಲ್ಲು ಬಂದಿರುವುದನ್ನು ನೀವು ಫೋಟೋದಲ್ಲಿ ಗಮನಿಸಬಹುದು.

ಎರಡೂ ಬಿಲ್ಲುಗಳು ಫೆಬ್ರವರಿ ತಿಂಗಳಿನದೆ ಆಗಿರುತ್ತದೆ. ಎರಡೂ ಬಿಲ್ಲುಗಳನ್ನು ನೋಡಿದ ಮೇಲೇ ಯಾರಿಗೇ ಆದರೂ ಇದು ಹಗಲು ದರೋಡೆ ಎಂದನಿಸದೇ ಇರದು. ಇಷ್ಟೆಲ್ಲಾ ಬಿಲ್ಲು ಕಟ್ಟಿಸಿಕೊಂಡ ಮೇಲೂ ಸಹ ನೀರು ಸರಬರಾಜನ್ನು, ಅವರಿಗೆ ಇಷ್ಟ ಬಂದ ದಿನದಂದು ಮಾಡುತ್ತಾರೆ. ಇದಕ್ಕೆ ಯಾವುದೇ ರೀತಿಯ ನೀತಿ, ನಿಯಮ, ಹೊತ್ತು ಎನ್ನುವುದಿಲ್ಲ. ಮಂಡ್ಯದ ಜನತೆಗೆ ಆಗುತ್ತಿರುವ ದೊಡ್ಡ ಅನ್ಯಾಯವಿದು. ಇದನ್ನು ತಾವು ದಯಮಾಡಿ ಗಮನಕ್ಕೆ ತೆಗೆದುಕೊಂಡು ಸೂಕ್ತ ಪರಿಹಾರ ಕಲ್ಪಿಸಬೇಕೆಂದು ನಗರ ಸಭಾ ಅಧ್ಯಕ್ಷರಿಗೆ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಮನವಿ ಸ್ವೀಕರಿಸಿದ ನಗರಸಭೆ ಅಧ್ಯಕ್ಷ ಎಚ್ ಎಸ್ ಮಂಜು ಮಾತನಾಡಿ ಸದ್ಯಕ್ಕೆ ಯಾರೂ ಸಹ ನೀರಿನ ಬಿಲ್ ಕಟ್ಟುವುದು ಬೇಡಾ. ಸದ್ಯದಲ್ಲೇ ಕೌನ್ಸಿಲ್ ಸಭೆ ಕರೆದು ದರ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಕರುನಾಡ ಸೇವಕರು ಸಂಘದ ನಗರಾಧ್ಯಕ್ಷ ಎಂ.ಎನ್ ಚಂದ್ರು ,ರಕ್ಷಿ,ತ್ ಮಲ್ಲೇಶ್, ಕೇಶವ, ನಾಗಮಂಗಲ ಸಮಾಜ ಸೇವಕಿ ಪದ್ಮ, ಮಲ್ಲಿಕಾರ್ಜುನ್. ಕರ್ನಾಟಕ ಜನಶಕ್ತಿ ಸಂಘಟನೆಯ ಸಿದ್ದರಾಜು ಸೇರಿದಂತೆ ಮೊದಲಾದವರಿದ್ದರು.

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ