Tuesday, May 21, 2024

ಪ್ರಾಯೋಗಿಕ ಆವೃತ್ತಿ

ಸಿ.ಎಂ. ಬಸವರಾಜ ಬೊಮ್ಮಾಯಿ ಮಂಡಿಸಿರುವ ರಾಜ್ಯ ಬಜೆಟ್‌ ನಿರಾಶಾದಾಯಕ : ಶಾಸಕ ದಿನೇಶ ಗೂಳಿಗೌಡ


  • ಸೂಪರ್‌ ಸ್ಪೆಷಾಲಿಟಿ ಟ್ರಾಮಾ ಕೇರ್‌ ಸೆಂಟರಿಲ್ಲ
  • ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ಯಾವುದೇ ಯೋಜನೆಯಿಲ್ಲ
  • ಕಬ್ಬು, ಭತ್ತ, ರಾಗಿ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವ ಬೇಡಿಕೆಗೆ ಸ್ಪಂದನೆಯಿಲ್ಲ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ರಾಜ್ಯ ಬಜೆಟ್‌ ನಿರಾಶಾದಾಯಕವಾಗಿದೆ ಎಂದು ವಿಧಾನ ಪರಿಷತ್‌ ಮಂಡ್ಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಶಾಸಕ ದಿನೇಶ ಗೂಳಿಗೌಡ ಪ್ರತಿಕ್ರಿಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಅಥವಾ ಅತ್ಯಾಧುನಿಕ ಯಂತ್ರೋಪಕರಣಗಳಿರುವ ಟ್ರಾಮಾ ಕೇರ್‌ ಸೆಂಟರ್‌ ನೀಡುವಂತೆ ಮನವಿ ಮಾಡಿದ್ದೆ, ಅದು ಈಡೇರಿಲ್ಲ. ಮಂಡ್ಯದ ಕ್ಯಾನ್ಸರ್‌ ಆಸ್ಪತ್ರೆಗೆ ಹೆಚ್ಚಿನ ಸೌಲಭ್ಯ ನೀಡುವಂತೆ ಮಾಡಿದ ಮನವಿಗೂ ಸ್ಪಂದನೆ ದೊರಕಿಲ್ಲ.

ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ಆಯವ್ಯಯದಲ್ಲಿ ಯಾವುದೇ ಕೊಡುಗೆ ನೀಡಿಲ್ಲ. ಕಬ್ಬು ಬತ್ತ, ರಾಗಿ, ವೈಜ್ಞಾನಿಕ ಬೆಲೆ ಕೊಡುವಂತೆ 100 ದಿನದಿಂದ ಒತ್ತಾಯಿಸುತ್ತಿದ್ದಾರೆ. ಅದಕ್ಕೆ ಕ್ರಮವಹಿಸಿಲ್ಲ. ಇದೊಂದು ನಿರಾಶಾದಾಯಕ ಬಜೆಟ್‌ ಆಗಿದೆ ಎಂದು ಹೇಳಿದರು

ಎಥೆನಾಲ್‌ ಘಟಕ ಕೊಟ್ಟಿದ್ದಕ್ಕೆ ಅಭಿನಂದನೆ

ಮೈಸೂರು ಷುಗರ್ಸ್‌ ಕಂಪನಿಯಲ್ಲಿ ಎಥೆನಾಲ್‌ ಘಟಕ ಪ್ರಾರಂಭಿಸಬೇಕು ಎಂದು ಸಿಎಂ ಅವರನ್ನು ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಭೇಟಿಯಾಗಿ ಮನವಿ ಮಾಡಿದ್ದೆ. ಅಧಿವೇಶನದಲ್ಲೂ ಪ್ರಶ್ನೆ ಎತ್ತಿದ್ದೆ. ಸಿಎಂ ಅವರು ನಮ್ಮ ಮನವಿಯನ್ನು ಪುರಸ್ಕರಿಸಿ ಎಥೆನಾಲ್‌ ಘಟಕ ಮಂಜೂರು ಮಾಡಿದ್ದಾರೆ. ಅದಕ್ಕೆ ಅಭಿನಂದನೆಗಳು. ಶೀಘ್ರ ಅನುದಾನ ಬಿಡುಗಡೆ ಮಾಡಿ ಎಥೆನಾಲ್‌ ಘಟಕ ಪ್ರಾರಂಭಕ್ಕೆ ಕ್ರಮ ವಹಿಸಬೇಕು. ಪ್ರತಿ ಟನ್‌ ಕಬ್ಬಿನಿಂದ 60 ರಿಂದ 70 ಲೀಟರ್‌ ಎಥೆನಾಲ್‌ ತೆಗೆಯಬಹುದು. ಒಂದು ಲೀಟರ್‌ ಎಥೆನಾಲನ್ನು 67 ರೂ.ಗೆ ಬಿಬಿಸಿಎಲ್‌, ಎಚ್‌ಪಿಸಿಎಲ್‌, ಐಒಸಿಎಲ್‌ ಮುಂತಾದ ಕಂಪನಿಗಳು ಕೊಳ್ಳುತ್ತವೆ. ಪ್ರಸ್ತುರ ಕಬ್ಬಿನ ಕಾರ್ಖಾನೆಗಳು ರೈತರ ಪ್ರತಿ ಟನ್‌ ಕಬ್ಬಿಗೆ 2821 ರೂ.ಗಳನ್ನು ನಿಗದಿ ಮಾಡಿವೆ. ಎಥೆನಾಲ್‌ ಮಾರಾಟದ ಲಾಭವನ್ನೂ ರೈತರಿಗೆ ನೀಡಲು ಸರ್ಕಾರ ಈಗಾಗಲೇ ಆದೇಶಿಸಿದೆ. ಎಲ್ಲ ಸೇರಿಸಿದರೆ ರೈತರು ಬೆಳೆದ ಕಬ್ಬಿಗೆ ವೈಜ್ಞಾನಿಕ ದರ ದೊರೆತಂತಾಗುತ್ತದೆ ಎಂದು ಶಾಸಕ ದಿನೇಶ ತಿಳಿಸಿದ್ದಾರೆ.

ಆದರೆ, ಕಾರ್ಖಾನೆಯಲ್ಲಿ ಹಳೆಯದಾದ ಯಂತ್ರೋಪಕರಣಗಳ ದುರಸ್ತಿ ಹಾಗೂ ಬದಲಾವಣೆಗೆ ಒಟ್ಟಾರೆ ಕಾರ್ಖಾನೆಯ ಪುನರೋತ್ಥಾನಕ್ಕೆ 100 ಕೋಟಿ ರೂ. ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂದು ಕೇಳಿದ್ದೆ ಅದನ್ನು ನೀಡಿಲ್ಲ. ಕಳೆದ ವರ್ಷ ಕಾರ್ಖಾನೆಗೆ 50 ಕೋಟಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಅದರಲ್ಲಿ ಇದುವರೆಗೆ 32 ಕೋಟಿ 58 ಲಕ್ಷ ರೂ. ಮಾತ್ರ ಬಿಡುಗಡೆಯಾಗಿದೆ. ಇನ್ನೂ 17.50 ಕೋಟಿ ಕೊಡಬೇಕಾಗಿದೆ. ಅದನ್ನು ಆದಷ್ಟು ಶೀಘ್ರ ಕೊಟ್ಟರೆ ಕಾರ್ಖಾನೆಯಲ್ಲಿ ಶೀಘ್ರ ಕಬ್ಬು ನುರಿಸಲು ಸಿದ್ಧತೆ ಮಾಡಲು ಅನುಕೂಲವಾಗಲಿದೆ ಎಂದಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!