Friday, November 20, 2026

ಪ್ರಾಯೋಗಿಕ ಆವೃತ್ತಿ

ನಾಡಪ್ರಭು ಕೆಂಪೇಗೌಡರ ದೂರದೃಷ್ಠಿಗೆ ಸರಿಸಾಟಿಯಿಲ್ಲ – ಸಚಿವ ಎನ್.ಚಲುವರಾಯಸ್ವಾಮಿ

ವಿಶ್ವದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಬೆಂಗಳೂರು ನಗರವನ್ನು ಸುಮಾರು 500 ವರ್ಷಗಳ ಹಿಂದೆ ತಮ್ಮ ಬುದ್ದಿಮತ್ತೆಯ ಪ್ರಖರತೆಯಿಂದ ನಿರ್ಮಾಣ ಮಾಡಿರುವ ನಾಡಪ್ರಭು ಕೆಂಪೇಗೌಡರ ದೂರದೃಷ್ಠಿಗೆ ಸರಿಸಾಟಿಯಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಿಸಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ನೇಗಿಲಯೋಗಿ ಪ್ರತಿಷ್ಠಾನ ಹಾಗೂ ಒಕ್ಕಲಿಗರ ಸೇವಾ ಟ್ರಸ್ಟ್ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 514ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಳೇ ಮೈಸೂರು ಭಾಗದ ಸಮಗ್ರ ಅಭಿವೃದ್ದಿಗೆ ತಮ್ಮ ಆಳ್ವಿಕೆಯಲ್ಲಿ ಅಂಕಿತ ಹಾಕಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವ ಮಾನ್ಯತೆ ಪಡೆದಿರುವ ಬೆಂಗಳೂರು ನಿರ್ಮಾಣಕ್ಕೆ ಶ್ರಮಿಸಿದ ನಾಡಪ್ರಭು ಕೆಂಪೇಗೌಡರ ಇತಿಹಾಸವನ್ನು ಅರಿಯದವರು ಈ ನೆಲದಲ್ಲಿ ವಾಸಿಸಲು ಅರ್ಹರಲ್ಲ ಎಂದರು.

ದೆಹಲಿಗೆ ರಾಷ್ಟ್ರ ರಾಜಧಾನಿ ಎಂಬ ಹಿರಿಮೆ, ಮುಂಬೈಗೆ ವಾಣಿಜ್ಯನಗರಿ ಎಂಬ ಖ್ಯಾತಿ ದೊರೆಕಿದರೆ ಬೆಂಗಳೂರಿಗೆ ವಿಶ್ವ ಮಾನ್ಯತೆ ದೊರೆತಿದೆ. ಅದಕ್ಕೆ ಕಾರಣ ಕೆಂಪೇಗೌಡರ ದೂರದೃಷ್ಠಿ ಎಂದು ತಿಳಿಸಿದರು. ನಾಡಿನ ನೆಲ, ಜಲ, ಧರ್ಮ, ಜಾತ್ಯಾತೀತತೆ ಹಾಗೂ ಭಾಷೆಯ ಬೆಳವಣಿಗೆಗೆ ಬುನಾದಿ ಹಾಕಿದ ಕೆಂಪೇಗೌಡರು ಹಲವು ಸಮಾಜದ ವಾಣಿಜ್ಯ ಚಟುವಟಿಕೆಗಳಿಗೆ ಸೀಮಿತವಾಗುವ ರೀತಿಯಲ್ಲಿ ಬೆಂಗಳೂರು ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ಶ್ರೇಷ್ಠ ಸಾಧಕ ಎಂದು ಬಣ್ಣಿಸಿದರು.

ತಮ್ಮ ಆಳ್ವಿಕೆಯಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ದಿಗೆ ಮುನ್ನುಡಿ ಬರೆದ ಕೆಂಪೇಗೌಡರು ನೂರಾರು ಕೆರೆಗಳನ್ನು ನಿರ್ಮಾಣ ಮಾಡಿ, ಕೋಟೆ – ಕೊತ್ತಲಗಳನ್ನು ಕಟ್ಟಿ ಇಂದು ಬೆಂಗಳೂರು ವಿಶ್ವದ ಹಲವರಿಗೆ ಉದ್ಯೋಗ ನೀಡುವ ಕೇಂದ್ರವಾಗಿ ರೂಪುಗೊಳ್ಳಲು ಶ್ರಮಿಸಿರುವ ಕೆಂಪೇಗೌಡರ ಹೆಸರನ್ನು ಶಾಶ್ವತಗೊಳಿಸಲು ಬೆಂಗಳೂರು ಅಂತರರಾಷ್ಟೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕಾಂಗ್ರೆಸ್ ಸರ್ಕಾರ ಶ್ರಮಿಸಿದೆ ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಯ ಅಭಿವೃದ್ದಿಗೆ ಶಕ್ತಿ ಮೀರಿ ಶ್ರಮಿಸುವೆ

ಬೆಂಗಳೂರು -ಮೈಸೂರು ನಡುವಿನ ಮಂಡ್ಯ ಜಿಲ್ಲೆ ನಿರೀಕ್ಷಿತ ಅಭಿವೃದ್ದಿ ಕಂಡಿಲ್ಲ, ಕಳೆದ 15 ವರ್ಷಗಳ ಹಿಂದೆ ನಿರ್ಮಾಣಗೊಂಡ ಚತುಷ್ಪಥ ರಸ್ತೆ ಇಂದು ಷಟ್ಪಥ ರಸ್ತೆಯಾಗಿ ರಾಷ್ಟೀಯ ಹೆದ್ದಾರಿಯಾಗಿ ಬದಲಾಗಿದೆ. ಅದರಂತೆ ಜಿಲ್ಲೆಯ ಅಭಿವೃದ್ದಿಗೆ ನನ್ನ ಕೈಲಾದ ಮಟ್ಟಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಮನವಿ ಮಾಡಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ನೇಗಿಲಯೋಗಿ ಪ್ರತಿಷ್ಠಾನ ಹಾಗೂ ಒಕ್ಕಲಿಗರ ಸೇವಾ ಟ್ರಸ್ಟ್ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 514ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶ, ರಾಜ್ಯ ಸಾಧಕರ ಹಾಗೂ ಹಿರಿಯರ ಇತಿಹಾಸ ಅರಿಯದವರು ಯಾವ ಸಾಧನೆ ಮಾಡಲು ಸಾಧ್ಯವಿಲ್ಲ, ಮುಂದಿನ ಜನಾಂಗ ಬೆಳವಣಿಗೆಯನ್ನು ಅರಿತು ಕೆಂಪೇಗೌಡರು ತಾಳಿದ ದೂರದೃಷ್ಠಿ ನಮ್ಮೆಲ್ಲರಿಗೂ ಮಾರ್ಗದರ್ಶಿಯಾಗಬೇಕಿದೆ ಎಂದರು.

ಸಮಾಜದಲ್ಲಿ ಹೆಚ್ಚುತ್ತಿರುವ ಮೋಸ, ದುರಂಹಕಾರ, ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತಕ್ಕೆ ಕಡಿವಾಣ ಹಾಕಲು ಪ್ರಕೃತಿ ಹಲವು ಮಾರ್ಗಗಳನ್ನು ಕಂಡು ಕೊಂಡಿದೆ. ಅತಿವೃಷ್ಠಿ, ಅನಾವೃಷ್ಠಿ, ಕೋವಿಡ್ ನಂತಹ ಪಿಡುಗುಗಳು ಮನುಷ್ಯರನ್ನು ಎಚ್ಚರಿಸುತ್ತಿದ್ದು, ನಾವು ಇತರರನ್ನು ಪ್ರೀತಿಸುವ, ಗೌರವಿಸುವ ಪ್ರವೃತ್ತಿ ರೂಢಿಸಿಕೊಳ್ಳಬೇಕಿದೆ ಎಂದರು.

ಜಿಲ್ಲೆಯ ಜೀವನಾಡಿಯಾಗಿರುವ ಮೈಷುಗರ್ ಕಾರ್ಖಾನೆಯ ಸಮಗ್ರ ಅಭಿವೃದ್ದಿಗೆ ಸರ್ಕಾರ ಮುಂದಾಗಿದ್ದು ,ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ ಅಭಿವೃದ್ದಿಗೆ ಆಸ್ತೆ ವಹಿಸಿದ್ದೇವೆಂದು ತಿಳಿಸಿದ ಅವರು, ಜಿಲ್ಲೆಯ ಅಭಿವೃದ್ದಿಗೆ ಎಲ್ಲರ ಸಹಕಾರಬೇಕು. ಮೈಷುಗರ್ ಕಾರ್ಖಾನೆಯ ಉಳಿವಿಗೆ ಜಿಲ್ಲೆಯ ರೈತ ಸಹಕಾರ ಅತ್ಯಗತ್ಯವೆಂದು  ಹೇಳಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ವಿಶ್ವಮಾನವ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಮಂಡ್ಯ ಕ್ಷೇತ್ರದ ಶಾಸಕ ರವಿಕುಮಾರ್ ಗಣಿಗ ವಹಿಸಿದ್ದರು.

ವೇದಿಕೆಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತ ಜಯರಾಮ್ ರಾಯಪುರ  ಅವರು ಕೆಂಪೇಗೌಡರ ಬಗ್ಗೆ ಉಪನ್ಯಾಸ ನೀಡಿದರು. ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಮಧು ಮಾದೇಗೌಡ, ದಿನೇಶ್ ಗೂಳೀಗೌಡ, ಜಿಲ್ಲಾಧಿಕಾರಿ ಡಾ.ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಜಿಪಂ ಸಿಇಓ ಶೇಕ್ ತನ್ವೀರ್ ಆಸಿಫ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ವಿವಿಧ ಸಂಘಟನೆಗಳ ಮುಖಂಡರಾದ ಮೀರಾ ಶಿವಲಿಂಗಯ್ಯ, ರಮೇಶ್, ಎಲ್.ಕೃಷ್ಣ, ಸುಜಾತ ಕೃಷ್ಣ, ನಾರಾಯಣ್, ಪ್ರೊ.ಜಯಪ್ರಕಾಶ್ ಗೌಡ, ಸುರೇಶ್, ಕೆ.ಸಿ.ರವೀಂದ್ರ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ