ಇಂದು ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2023-24ನೇ ಸಾಲಿನ ಬಜೆಟ್ ಮಂಡಿಸಿದ್ದು, ಜಿಲ್ಲೆಯ ನಾಯಕರು ಬಜೆಟ್ ಬಗ್ಗೆ ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಮಂಡ್ಯಕ್ಕೆ ಶೂನ್ಯ

ಬಜೆಟ್ ನಲ್ಲಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ನಿರೀಕ್ಷಿತ ಪ್ರಮಾಣದಲ್ಲಿ ಯಾವುದೇ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಇದೊಂದು ಮಂಡ್ಯ ಜಿಲ್ಲೆಯ ಜನರ ಕಿವಿಯ ಮೇಲೆ ಹೂವಿಟ್ಟ ಶೂನ್ಯ ಬಜೆಟ್ ಎಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಟೀಕಿಸಿದ್ದಾರೆ.
ಜಿಲ್ಲೆಯ ಬಗ್ಗೆ ಬಿಜೆಪಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇನ್ನಾದರೂ ಜನರು ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದರು.
ಜಿಲ್ಲೆ ಕಡೆಗಣನೆ
ರಾಜ್ಯ ಬಜೆಟ್ ನಲ್ಲಿ ಮಂಡ್ಯ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣನೆ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಇದುವರೆಗೂ ಯಾವುದೇ ಕೊಡುಗೆಯನ್ನು ನೀಡಿರಲಿಲ್ಲ. ಈ ಬಾರಿಯ ಬಜೆಟ್ ನಲ್ಲೂ ಜಿಲ್ಲೆಯ ವಿರುದ್ಧ ತಾರತಮ್ಯ ಧೋರಣೆ ಮುಂದುವರಿದಿದೆ.

ಜಿಲ್ಲೆಯಲ್ಲಿ ಶೇ. 80ರಷ್ಟು ಕೃಷಿಯೇ ಪ್ರಧಾನವಾಗಿದ್ದು, ಕೃಷಿಗೆ ಪೂರಕವಾಗಿ ವಿಶೇಷ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಬಜೆಟ್ ನಿಂದ ಜಿಲ್ಲೆಗೆ ಯಾವ ಉಪಯೋಗವೂ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಬೂಕನಕೆರೆ ವಿಜಯ್ ರಾಮೇಗೌಡ ಟೀಕಿಸಿದ್ದಾರೆ.
ರೈತ ವಿರೋಧಿ ಬಜೆಟ್
ಇದೊಂದು ರೈತ ಮತ್ತು ಜನ ವಿರೋಧಿ ಬಜೆಟ್ ಆಗಿದೆ. ರೈತರನ್ನು ಸಾಲದಿಂದ ಮುಕ್ತಿ ಮಾಡಿ ಎಂದರೆ, ಅವರ ಸಾಲವನ್ನು ಹೆಚ್ಚಳ ಮಾಡಿ ಸಾಲಗಾರರನ್ನಾಗಿಸಲು ರಾಜ್ಯ ಸರ್ಕಾರ ಹೊರಟಿದೆ. ರೈತರಿಗೆ ನೀಡುತ್ತಿದ್ದ ಸಾಲದ ಪ್ರಮಾಣವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. 
ರೈತರ ಬೆಳೆಗೆ ವೈಜ್ಞಾನಿಕವಾಗಿ ಬೆಂಬಲ ಬೆಲೆ ನೀಡಿ ಅವರನ್ನು ಸಾಲದಿಂದ ಮುಕ್ತಿಗೊಳಿಸುವ ಬದಲು ಅವರು ಮತ್ತಷ್ಟು ಸಾಲ ಪಡೆದು, ಸಾಲದ ಸುಳಿಗೆ ಸಿಲುಕಿ ಒದ್ದಾಡುವಂತೆ ಮಾಡಿದೆ. ರೈತರಿಗೆ ವಿಶೇಷ ಯೋಜನೆಗಳನ್ನು ಘೋಷಣೆ ಮಾಡಿಲ್ಲ ಎಂದು ರೈತನಾಯಕ ಎಸ್. ಸಿ. ಮಧುಚಂದನ್ ಖಂಡಿಸಿದರು.

ಜನಸ್ನೇಹಿ-ಸರ್ವವ್ಯಾಪಿ-ಸರ್ವ ಸ್ಪರ್ಶಿ ಬಜೆಟ್
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನದ ಮುಂದುವರಿದ ಭಾಗದಂತೆ ಎಲ್ಲಾ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಅನುದಾನ ನೀಡಿರುವುದು. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್,ಕೃಷಿಗೆ 40 ಸಾವಿರ ಕೋಟಿ ಅನುದಾನ,ನಗರ ಪ್ರದೇಶಗಳಲ್ಲಿ 4000 ಮಕ್ಕಳ ಆರೈಕೆ ಕೇಂದ್ರ ಸ್ಥಾಪನೆ ಮಾಡಿರುವುದು ಸಂತಸದ ಸಂಗತಿ.
ಹಿಂದುಳಿದ,ಅಲ್ಪಸಂಖ್ಯಾತ, ಎಸ್ಸಿ,ಎಸ್ಟಿ ಜನಾಂಗದ ವಿದ್ಯಾರ್ಥಿಗಳಿಗೆ ಮೀಸಲಾತಿ ಮಾತ್ರವಲ್ಲದೆ, ಕೌಶಲ್ಯಾಭಿವೃದ್ಧಿ ಮತ್ತು ಉಚಿತ ತರಬೇತಿ ಹಾಗೂ ರೈತರು ಸ್ವಾವಲಂಬಿಯಾಗಿ ಕೃಷಿ ಮಾಡಲು ಸಾಲದ ಪ್ರಮಾಣ ಹೆಚ್ಚಿಸಲಾಗಿದೆ.
ಬಜೆಟ್ ಸರ್ವ ಸ್ನೇಹಿ-ಸರ್ವ ವ್ಯಾಪಿ-ಸರ್ವ ಸ್ಪರ್ಶಿ ಎಂದು ಬಿಜೆಪಿ ಯುವ ನಾಯಕ ಅಶೋಕ್ ಜಯರಾಮ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಿರಾಶದಾಯಕ ಬಜೆಟ್
ಮಂಡ್ಯ ಜಿಲ್ಲೆಗೆ ಯಾವುದೇ ವಿಶೇಷ ಯೋಜನೆ ನೀಡದ ರಾಜ್ಯ ಬಜೆಟ್ ನಿರಾಸೆ ಮೂಡಿಸಿದೆ. ಮೈಷುಗರ್ ಕಾರ್ಖಾನೆಯಲ್ಲಿ ಎಥೆನಾಲ್ ಉತ್ಪಾದನಾ ಘಟಕ ನಿರ್ಮಾಣ

ಮಾಡುವುದಾಗಿ ಘೋಷಣೆ ಮಾಡಿದ್ದನ್ನು ಬಿಟ್ಟರೆ, ಕಾರ್ಖಾನೆಗೆ ಮತ್ತಷ್ಟು ಹಣಕಾಸು ನೀಡಿ ಪುನಶ್ಚೇತನ ಗೊಳಿಸುವ ಪ್ರಯತ್ನ ಮಾಡಿಲ್ಲ ಎಂದು ಜೆಡಿಎಸ್ ನಾಯಕ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ್ ತಿಳಿಸಿದರು.




