✍️ ಪೂರ್ಣಿಮಾ ಜಿ. ರಾಜ್ಯ ಸಮಿತಿ ಸದಸ್ಯರು, ಕರ್ನಾಟಕ ಜನಶಕ್ತಿ

-
ಮಂಡ್ಯದ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಿ ಕಬ್ಬಿಗೆ ಬೆಂಬಲ ಬೆಲೆ ಜಾಸ್ತಿ ಮಾಡಲು ಸಾಧ್ಯವಾಗಿಲ್ಲ.
- 75 ವರ್ಷಗಳೆ ಕಳೆದರೂ ಸೂರಿಗಾಗಿ ಹಕ್ಕುಪತ್ರಗಳಿಗಾಗಿ ಹೋರಾಟ ನಡೆಯುತ್ತಲೆ ಇವೆ.
- ರೈತರಿಗಿಲ್ಲದೆ ಇರುವ ಸಹಾಯಧನ ಮಠ ಮಂದಿರಗಳಿಗೇಕೆ !!
ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಮಂಡ್ಯ ಜಿಲ್ಲೆಗೆ ಕೇಂದ್ರ ಸಚಿವ ಅಮಿತ್ ಶಾ, ಸಿಎಂ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ್ ಸೇರಿದಂತೆ ಹಲವು ನಾಯಕರು ಬಂದು ಭಾಷಣ ಮಾಡಿ ಆಶ್ವಾಸನೆ ನೀಡಿದ್ದೆ ನೀಡಿದ್ದು, ಆದರೆ ಬಜೆಟ್ ನಲ್ಲಿ ಮಾತ್ರ ಮಂಡ್ಯ ಜಿಲ್ಲೆಗೆ ಯಾವುದೇ ಹೇಳಿಕೊಳ್ಳುವಂತ ಯೋಜನೆಯನ್ನು ಘೋಷಣೆ ಮಾಡದೇ ಎಂದಿನಂತೆ ವಂಚಿಸಲಾಗಿದೆ.
ರೈತರಿಗೆ ಬಂಪರ್, ಮಹಿಳೆಯರಿಗೆ ಬಂಪರ್, ವಿದ್ಯಾರ್ಥಿಗಳಿಗೆ ವಿದ್ಯಾವಾಹಿನಿಯ ಯೋಜನೆಯಿಂದ ಸುವರ್ಣಾವಕಾಶ, ಯುವಸ್ನೇಹಿ ಎಂಬ ಹೊಸ ಯೋಜನೆಯೊಂದಿಗೆ ನಿರುದ್ಯೋಗಿ ಯುವಕರಿಗೆ 2000 ಆರ್ಥಿಕ ನೆರವು. 5 ಲಕ್ಷ ಮನೆಗಳ ನಿರ್ಮಾಣ, ಹೀಗೆ ಸಾಲು ಸಾಲು ಬಂಪರ್ ಪಟ್ಟಿಯನ್ನು ನಮ್ಮ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರೂ ಆದ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಎಲ್ಲವನ್ನೂ ವಿಮರ್ಶಿಸಿ, ಪಾರದರ್ಶಕತೆಯಿಂದ ನೋಡಬೇಕು. ಮೊದಲಿಗೆ ಮಂಡ್ಯ ಜಿಲ್ಲೆಗೆ ಸಿಕ್ಕಿರುವ ಕೊಡುಗೆಯ ಬಗ್ಗೆ ವಿಶ್ಲೇಷಣೆ ಮಾಡಬೇಕು.
ಕಾರ್ಖಾನೆ ಪ್ರಾರಂಭಿಸಿದರೂ ಮತ್ತೆ ಸ್ಥಗಿತ
ಮಂಡ್ಯದಲ್ಲಿ ಮೈಷುಗರ್ ಕಾರ್ಖಾನೆಯಲ್ಲಿ ಎಥೆನಾಲ್ ಉತ್ಪಾದನಾ ಘಟಕ ನಿರ್ಮಾಣ ಮಾಡುವ ಯೋಜನೆಯನ್ನು ಜಾರಿಗೆ ತರುವುದಾಗಿ ತಿಳಿಸಿದ್ದಾರೆ. ಆದರೆ ಮಂಡ್ಯದಲ್ಲಿ ಮೈಷುಗರ್ ಕಾರ್ಖಾನೆಯನ್ನು ಪ್ರಾರಂಭಿಸಿ ಅದರಲ್ಲಿರುವ ಲೋಪ ದೋಷಗಳನ್ನು ಸರಿಪಡಿಸಿ ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಖಾನೆ ನಡೆಸಲು ಹಲವು ಹೋರಾಟಗಳಾದರೂ ಪ್ರಯೋಜನವಾಗಿಲ್ಲ, ಕಾರ್ಖಾನೆ ಪ್ರಾರಂಭಿಸಿದರೂ ಮತ್ತೆ ಸ್ಥಗಿತಗೊಂಡಿದೆ.
100 ದಿನ ದಾಟಿದ ರೈತರ ಹೋರಾಟ
ಮಂಡ್ಯದ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಿ ಕಬ್ಬಿಗೆ ಬೆಂಬಲ ಬೆಲೆ ಜಾಸ್ತಿ ಮಾಡಲು ಸಾಧ್ಯವಾಗಿಲ್ಲ, ರೈತರ ಧರಣಿ 100 ದಿನ ದಾಟಿದೆ. ಸಮಸ್ಯೆಯನ್ನು ಬಗೆಹರಿಸಿ ಮಂಡ್ಯದ ಜೀವನಾಡಿಯಾದ ಮೈಷುಗರ್ ಉಳಿವಿಕೆಗೆ ಬೇಕಾದ ಅಗತ್ಯ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗದವರು ಮುಚ್ಚಿರುವ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ನಿರ್ಮಾಣ ಮಾಡಲು ಬಜೆಟ್ ಘೋಷಣೆ ಮಾಡಿರುವುದು ಹಾಸ್ಯಾಸ್ಪದವಲ್ಲವೇ ?. ಮಂಡ್ಯದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ವಿಮ್ಸ್ )ನಲ್ಲಿ ಮೊದಲೇ ಸ್ನಾತಕೋತ್ತರ ವೈದ್ಯಕೀಯ ಪದವಿ ಈಗಾಗಲೇ ಆರಂಭವಾಗಿದೆ ಅದನ್ನು ಪುನಃ ಸೇರಿಸಿಕೊಳ್ಳಲಾಗಿದೆ. ಆದರೆ ಮಂಡ್ಯದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಪ್ರತ್ಯೇಕ ಘಟಕಬೇಕು ಅದನ್ನು ಪ್ರಾರಂಭಿಸಿ ಇಲ್ಲಿಂದ ಬೇರೆಡೆ ಹೋಗುವ ರೋಗಿಗಳಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಬೇಕೆಂಬ ಒತ್ತಾಯ ಇದೆ.
ಅಭಿವೃದ್ಧಿಪಡಿಸುವ ಯಾವ ಯೋಜನೆಯೂ ಇಲ್ಲ
ಗರ್ಭಿಣಿ ಮಹಿಳೆಯರಿಗೆ ಹೆರಿಗೆ ವಾರ್ಡ್ ನ ಸೌಲಭ್ಯಗಳು ಅಗತ್ಯವಾಗಿದೆ. ಈಗಿರುವ ಕೊಠಡಿಗಳು ಸಾಲುತ್ತಿಲ್ಲ ಇರುವ ವೈದ್ಯಕೀಯ ಸೌಲಭ್ಯಗಳು ಕೊರತೆಯಾಗಿವೆ, ಶಿಥಿಲಗೊಂಡ ರೂಮ್ಗಳು ಆಸ್ಪತ್ರೆಗೆ ಬೇಕಾದ ವೈದ್ಯಕೀಯ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ ಅದನ್ನು ಸರಿಪಡಿಸುವ ಬಗ್ಗೆ ಯಾವ ಪ್ರಸ್ತಾಪವು ಇಲ್ಲ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಇರುವ ಮನಮುನ್ ಹಾಲಿನ ಡೈರಿಯೂ ಈಗಾಗಲೆ 9 ಲಕ್ಷ ಲೀಟರ್ ಹಾಲಿನ ಸಂಸ್ಕರಣೆ ಮಾಡುತ್ತಿದ್ದು ಸುತ್ತಮುತ್ತಲ ರೈತರ ಹೈನುಗಾರಿಕೆ ಸಹಕಾರಿಯಾಗಿದೆ. ಆದರೆ ಇದನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸುವ ಯಾವ ಯೋಜನೆಯೂ ಇಲ್ಲ, ಬದಲಿಗೆ ಗುಜರಾತ್ ಅಮೂಲ್ ಜೊತೆಗೆ ಸೇರಿಸಿ ಖಾಸಗೀಕರಣ ಮಾಡುವ ಹುನ್ನಾರ ನಡೆದಿದೆ. ಆದರೆ ಬಳ್ಳಾರಿಯಲ್ಲಿ 100 ಕೋಟಿ ರೂಗಳ ವೆಚ್ಚದಲ್ಲಿ ಪ್ರತಿ ದಿನ 2 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಮೆಗಾ ಡೈರಿಯನ್ನು ತೆರೆಯುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ. ಇದರ ಉದ್ದೇಶ ಒಳ್ಳೆಯದಾಗಿದ್ದರೆ ಅನುಕೂಲ. ಇದಲ್ಲದೆ ಮಂಡ್ಯ ಜಿಲ್ಲೆಗೆ ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿಯೂ ಇಲ್ಲಿಯ ತನಕ ಸಿಕ್ಕಿರುವ ಪಾಲು ಕಡಿಮೆಯೇ ಇದೆ. ಆದರೆ ಚುನಾವಣೆಯ ಪ್ರಚಾರ ಹಾಗೂ ಜಟಾಪಟಿ ಜೋರಾಗಿದೆ.
ಸಾಲ ಮನ್ನಾ ಮಾತ್ರ ಇಲ್ಲ
ರೈತರಿಗೆರಿಗೆ ಸಾಲದ ಬಂಪರ್ 3 ಲಕ್ಷಕಿಂತ 5 ಲಕ್ಷದವರೆಗೂ ಹೆಚ್ಚಳ ಮಾಡಿದ್ದಾರೆ, ಆದರೆ ಸಾಲ ಮನ್ನಾ ಮಾತ್ರ ಇಲ್ಲ. ಇನ್ನೂ ಹೆಚ್ಚಿಗೆ ಸಾಲ ಮಾಡಿ ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲದೆ ರೈತರು ಹೆಚ್ಚು ನೇಣಿಗೆ ಶರಣಾಗುವುದಕ್ಕೆ ಸರಾಗವಾಗ ದಾರಿ ಮಾಡಿಕೊಟ್ಟಂತಾಗಿದೆ. ಮಠ ಮಂದಿರಗಳಿಗೆ ಮಾತ್ರ 1000 ಕೋಟಿ ರೂ. ದೇಣಿಗೆ ನೀಡಲಾಗಿದೆ. ಯಾವ ಮಠಗಳೆಂಬುದು ಸದ್ಯಕ್ಕೆ ಗೌಪ್ಯ. ರೈತರಿಗಿಲ್ಲದೆ ಇರುವ ಸಹಾಯಧನ ಮಠ ಮಂದಿರಗಳಿಗೇಕೆ ?
ಸಣ್ಣ, ಅತಿಸಣ್ಣ ರೈತರಿಗೂ ಜೀವನ ಜ್ಯೋತಿ ವಿಮಾ ಯೋಜನೆಯನ್ನು ಕೊಡುತ್ತಾರೆ. ಹಾಗೆ ಸಣ್ಣ, ಅತಿಸಣ್ಣ ರೈತರ ಪಂಪ್ ಸೆಟ್ ಗಳಿಗೂ ವಿದ್ಯುತ್ ಕಾಯ್ದೆಯನ್ನು ಜಾರಿಮಾಡಿ ಮೀಟರ್ ಗಳನ್ನು ಅಳವಡಿಸುತ್ತಾರೆ. ಹಾಗೆ ಕೊಳಗೇರಿ ನಿವಾಸಿಗಳಿಗೆ ಸುಮಾರು 3.36 ಲಕ್ಷ ಕುಟುಂಬಗಳಿಗೆ ಭೂ ಮಾಲಿಕತ್ವದ ಹಕ್ಕನ್ನು ವರ್ಗಾವಣೆ ಮಾಡಲಾಗುವುದು. ಜೊತೆಗೆ 5 ಲಕ್ಷ ಮನೆಗಳ ನಿರ್ಮಾಣ ಮಾಡುವ ಯೋಜನೆಯನ್ನು ಘೋಷಣೆ ಮಾಡಲಾಗಿದೆ. ಕಳೆದ ಬಾರಿಯ ಬಜೆಟ್‌ನಲ್ಲಿಯೂ ಘೋಷಣೆಯಾಗಿತ್ತು, ಆದರೆ ಪರಿಣಾಮಕಾರಿಯಾಗಿ ಜಾರಿಯಾಗದೆ ಸ್ವಾತಂತ್ರ್ಯ 75 ವರ್ಷಗಳೆ ಕಳೆದರೂ ಸೂರಿಗಾಗಿ ಹಕ್ಕುಪತ್ರಗಳಿಗಾಗಿ ಹೋರಾಟ ನಡೆಯುತ್ತಲೆ ಇವೆ. ಕನಿಷ್ಠ ಮೂಲಭೂತ ಸೌಲಭ್ಯಗಳು ದೊರೆತಿಲ್ಲ. ಬಂದಂತಹ ಅನುದಾನವು ಕೂಡಾ ಸರಿಯಾಗಿ ಬಳಕೆಯಾಗದೆ ವಾಪಾಸ್ ಹೋಗಿರುವ ಉದಾಹರಣೆಗಳಿವೆ.
ಕೂಲಿಯೇ ಹೆಚ್ಚಳವಾಗಿಲ್ಲ
ಹೆಣ್ಣು ಮಕ್ಕಳಿಗೆ ಶ್ರಮಶಕ್ತಿ ಯೋಜನೆಯಡಿ ತಿಂಗಳಿಗೆ 500 ರೂ ಎಂದು ಘೋಷಿಸಲಾಗಿದೆ. ನಾವು ಕೇಳುತ್ತಿರುವುದು ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಸಹಾಯಧನದ ಭಿಕ್ಷೆಯಲ್ಲ, ನರೇಗಾದಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳ ಕೂಲಿಯೇ ಹೆಚ್ಚಳವಾಗಿಲ್ಲ, ನಾನ್ ಕ್ಲಿನಿಕಲ್ ಡಿಪಾರ್ಟ್ ಮೆಂಟ್ ನ ಹೆಣ್ಣು ಮಕ್ಕಳ ಬೇಡಿಕೆಗಳು ಈಡೇರಿಲ್ಲ. ಇನ್ನೂ ಅಭಿವೃದ್ಧಿ ಆಕಾಂಕ್ಷೆಯಿಂದ 50 ಕೋಟಿ ವೆಚ್ಚದಲ್ಲಿ 250 ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸುವ ಹೊಸ ಭರವಸೆ ನೀಡಿದ್ದಾರೆ. ಆದರೆ ಈಗಿರುವ ಅಂಗನವಾಡಿಗಳನ್ನು ಸರಿಯಾಗಿ ನಡೆಸಲು ಬೇಕಾದ ಸೌಲಭ್ಯಗಳಿಲ್ಲ, ಅಂಗನವಾಡಿ ಬಿಸಿಯೂಟ ನೌಕರರ ಬೇಡಿಕೆಗಳಿಗಾಗಿ ಹೋರಾಟ ನಡೆಯುತ್ತಿದೆ. ಅದ್ಯಾವುದನ್ನು ಬಗೆಹರಿಸದೆ ಹೊಸ ಅಂಗನವಾಡಿಗಳನ್ನು ಕಟ್ಟುವ ಯೋಜನೆ ಹಾಸ್ಯಾಸ್ಪದವಲ್ಲದೆ ಮತೇನು ಅಲ್ಲ.
ಪೌಷ್ಟಿಕ ಆಹಾರದಲ್ಲಿಯೂ ಮಡಿ ಮೈಲಿಗೆ
ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ಕೊಡಬೇಕಿತ್ತು. ಈಗಾಗಲೆ ಖಾಸಗಿ ಶಾಲೆಗಳ ಹಾವಳಿಯಿಂದ ಮುಚ್ಚುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸಿ ಅಗತ್ಯ ಸೌಲಭ್ಯಗಳ ಪೂರೈಕೆ. ಗುಣಮಟ್ಟದ ಸಮವಸ್ತ್ರ, ಕ್ವಾಲಿಟಿಯ ಶೂಗಳನ್ನು ಕೊಡಲು ಸಾಧ್ಯವಾಗಲಿಲ್ಲ. ಮಕ್ಕಳಿಗೆ ಕೊಡುವ ಪೌಷ್ಟಿಕ ಆಹಾರದಲ್ಲಿಯೂ ಮಡಿ ಮೈಲಿಗೆ ತಂದು ಶಾಲೆಯಲ್ಲಿ ಮಕ್ಕಳಿಗೆ ಕೊಡುವ ಮೊಟ್ಟೆಯನ್ನು ಚರ್ಚೆಗೆ ತಂದು ಮಕ್ಕಳ ಆಹಾರ ಸರಿಯಾಗಿ ಪೂರೈಕೆಯಾಗದೆ, ಈಗ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸೌಲಭ್ಯ, ಶಿಷ್ಯವೇತನದಂತಹ ಯೋಜನೆಗಳ ಘೋಷಣೆ ಮೂಗಿಗೆ ತುಪ್ಪ ಸವರುವ ಕೆಲಸವಲ್ಲವೆ…?
ಉದ್ಯೋಗವು ಇಲ್ಲ- ಭದ್ರತೆಯೂ ಇಲ್ಲ
ಪದವಿ ಮುಗಿಸಿ ಹೊರ ಬರುವ ಯುವ ಜನರಿಗೆ ಉದ್ಯೋಗ ಸೃಷ್ಠಿಯ ಭರವಸೆ ನೀಡಿ, ಉದ್ಯೋಗವು ಇಲ್ಲದೆ ಭದ್ರತೆಯೂ ಇಲ್ಲದೆ. ನಿರುದ್ಯೋಗಗಳ ಸಂಖ್ಯೆಯನ್ನು ಹೆಚ್ಚಿಸಿ ಈಗ ಯುವ ಸ್ನೇಹಿ ಎಂಬ ಯೋಜನೆಯಡಿಯಲ್ಲಿ 2000 ಆರ್ಥಿಕ ನೆರವನ್ನು ಯುವ ಜನತೆಗಾಗಿ ಬಹಳ ಕಾಳಜಿಯಿಂದ ಘೋಷಿಸಿರುವುದು, ಉದ್ಯೋಗ ಕೊಡಲ್ಲ ಬದಲಿಗೆ 2000 ರೂ.ಗಳ ಭಿಕ್ಷೆ ನೀಡುತ್ತೇವೆ ತೆಗೆದುಕೊಂಡು ತೆಪ್ಪಗಿರಿ ಎಂದು ಬಾಯಿ ಮುಚ್ಚಿಸುವ ಕುತಂತ್ರವಲ್ಲದೆ ಮತೇನೂ ಅಲ್ಲ. ನಮಗೆ ಬೇಕಿರುವುದು ಉದ್ಯೋಗವೆ ಹೊರತು ಭಿಕ್ಷೆಯಲ್ಲ.
ಇನ್ನೂ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ 5 ಸಾವಿರ ಕೋಟಿ ಖರ್ಚಾಗುವ ಸಾಧ್ಯತೆ ಇದೆ. ಜಿಲ್ಲಾ ಕೇಂದ್ರಗಳಲ್ಲಿ ಸಂಪರ್ಕಜಾಲವನ್ನು ಹೆಚ್ಚಿಸಲು 1500 ಕೋಟಿ ರೂ. ಬಿಡುಗಡೆ ಮಾಡಿ ರಸ್ತೆಗಳ ಹೊಸ ಕಾಮಗಾರಿ ಪ್ರಾರಂಭ ಮಾಡಲು ಘೋಷಿಸಿದ್ದಾರೆ. ಈಗಾಗಲೆ ಗುಂಡಿ ಬಿದ್ದ ರಸ್ತೆಗಳಿಂದ ಹಲವಾರು ಅವಘಡಗಳು ಸಂಭವಿಸಿ ನೂರಾರು ಪ್ರಾಣಗಳು ಹೋಗಿವೆ. ಆ ಗುಂಡಿಗಳನ್ನು ಮುಚ್ಚಲು ತೇಪೆ ಕೆಲಸಗಳು ನಡೆಯುತ್ತಿವೆ ಇದರ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಒತ್ತು ಎಂಬುದು ನಗೆ ಪಾಟಲು. ಅಲ್ಲದೆ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ಹಂತದಲ್ಲಿ ರೈತರಿಂದ ಬಡಜನರಿಂದ ಪಡೆದುಕೊಳ್ಳುವ ಭೂಮಿಗೆ ಬದಲಾಗಿ ಅವರಿಗೆ ಸಿಗಬೇಕಾದ ಪರಿಹಾರದ ಹಣ ಬಜೆಟ್ ನಲ್ಲಿ ಎಲ್ಲಿಯೂ ಪ್ರಸ್ತಾಪವಾಗಿಲ್ಲ. ಇದರಿಂದ ನಾಶವಾಗುವ ಸಣ್ಣ ಪುಟ್ಟ ವ್ಯಾಪಾರ ವಹಿವಾಟುವಿನ ಪರಿಹಾರದ ಬಗ್ಗೆ ಎಲ್ಲಿಯೂ ಪ್ರಸ್ತಾಪವಾಗಿಲ್ಲ. ಆದರೆ ಹೆದ್ದಾರಿಗಳು ನಿರ್ಮಾಣವಾದ ನಂತರ ಕಟ್ಟುವ ಟೋಲ್ ನ ಅಂದಾಜು ಈಗಲೆ ನಿಗದಿಯಾಗಿದೆ.
ಚುನಾವಣೆಯ ಗಿಮಿಕ್
ಆರೋಗ್ಯ ಕ್ಷೇತ್ರದ ಬಜೆಟ್ ಕೂಡಾ ಚುನಾವಣೆಯ ಪಾಲಿಟಿಕ್ಸ್ ನಿಂದ ಕೂಡಿರುವುದೆ ವಿನಹಃ ಅಕ್ಷರ ಸಹ ಜಾರಿಗುವುದಿಲ್ಲ. ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ರೋಗಿಗಳಿಗೆ ಬೆಡ್ ಗಳು ಸಾಲದೆ ಹೊರಗೆ ನೆಲದ ಮೇಲೆ ಮಲಗಿಸುತ್ತಿರುವ ದೃಶ್ಯಗಳನ್ನು ಯಾರಾದರೂ ನೊಡಬಹುದು, ಅದನ್ನು ಸರಿಪಡಿಸುವ ಅಗತ್ಯವಿದೆ. ಪಡಿತರ ಚೀಟಿಯಲ್ಲಿ ಒಂದು KG ಅಕ್ಕಿಯನ್ನು ಹೆಚ್ಚಳ ಮಾಡಿ ತಿನ್ನುವ ಆಹಾರ ಪದಾರ್ಥಗಳ ಬೆಲೆಗಳನ್ನು ಹೆಚ್ಚಿಸಲಾಗಿದೆ. ಹೀಗೆ ವಿಶ್ಲೇಷಣೆಗೆ ಕೂತರೆ ಮುಗಿಯದ ಸಮಸ್ಯೆಗಳನ್ನು ದಾಖಲೆ ಸಮೇತ ಚರ್ಚಿಸಬಹುದು. ಚುನಾವಣೆಯ ಗಿಮಿಕ್ ಗಾಗಿ ಮಂಡನೆಯಾಗಿರುವ ಬಜೆಟ್ ಯಾವ ರೀತಿಯಲ್ಲಿಯೂ ಪರಿಣಾಮಕಾರಿ ಅಲ್ಲ. 2022 -2023 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬರುತ್ತಿದ್ದ ಸಹಾಯಧನ 1 ರೂಪಾಯಿಯಲ್ಲಿ 6 ಪೈಸೆಗಳಷ್ಟು, ಅದಕ್ಕಿಂತ 2023-2024 ನೇ ಸಾಲಿನಲ್ಲಿ ಇದು 4 ಪೈಸೆಗೆ ಇಳಿದಿದೆ ಅಂದರೆ ಕಡಿಮೆಯಾಗಿದೆ ಎಂದೇ ಅಲ್ಲವೇ ?
ತೆರಿಗೆ ರಾಜ್ಯ ಸರ್ಕಾರಗಳಿಂದ ಕೇಂದ್ರ ಸರ್ಕಾರಕ್ಕೆ ಜಮೆಯಾಗುತ್ತದ್ದ 1 ರೂಪಾಯಿಯಲ್ಲಿ 50 ಪೈಸೆಗಳಷ್ಟು ಇದ್ದದ್ದು ಈಗ 54 ಪೈಸೆಗಳಷ್ಟು ಜಾಸ್ತಿಯಾಗಿದೆ. ಸಾಲ ಮರುಪಾವತಿಗೆ 17 ಪೈಸೆ ಇದ್ದ ತೆರಿಗೆ 19 ಪೈಸೆಗೆ ಹೇರಿಕೆ ಯಾಗಿದೆ. ಆರ್ಥಿಕ ಸೇವೆಗಳ ಮೇಲಿನ ತೆರಿಗೆ 14 ಪೈಸೆ ಇದ್ದದ್ದು 15 ಕ್ಕೆ ಹೇರಿಕೆಯಾಗಿದೆ. ಒಟ್ಟಾರೆಯಾಗಿ ಕೊಟ್ಟಂತೆ ಮಾಡಿ ಕಸಿಯುವ ಹುನ್ನಾರ ಇದರಲ್ಲಿ ಅಡಗಿದೆ. ಜನರನ್ನು ಮೆಚ್ಚಿಸಲು ಚುನಾವಣೆಯ ತಂತ್ರ ಹೂಡಲು ಜನತೆಯ ಮೇಲೆ ಬಹಳ ಪ್ರೀತಿ ಇದ್ದಂತೆ ನಟಿಸಿ ಸೌಲಭ್ಯ ನೀಡುವ ನಾಟಕದ ಮುಂದುವರಿದ ಭಾಗವೆ ಈ ‘ಅಕ್ಕಿ ಮೇಲಿನ ಆಸೆ ನೆಂಟರ ಮೇಲಿನ ಪ್ರೀತಿ’ಯ ಕಥೆಯಂತಿದೆ. ಇದು ಚುನಾವಣೆಯಲ್ಲಿ ಒಳ್ಳೆಯ ಫಲಿತಾಂಶ ನಿರೀಕ್ಷೆಗೆ ಹಾಗೂ ಮತ ಕೇಳಲು ಮಾಡಿಕೊಂಡ ತಯಾರಿ ಎಂದೆ ಹೇಳಬಹುದು.




