Thursday, September 19, 2024

ಪ್ರಾಯೋಗಿಕ ಆವೃತ್ತಿ

ಪೊಲೀಸ್ ಅಧಿಕಾರಿ ಶಿವಕುಮಾರ್ ಆರ್. ದಂಡಿನ ಅವರ ಸಾಹಿತ್ಯ ಪ್ರೀತಿ

✍️ ನಾಗೇಶ್ ಎನ್


  • ಕೆಲಸದ ಒತ್ತಡದ ಮಧ್ಯೆಯೂ ಸಾಹಿತ್ಯದ ಪ್ರೀತಿ ಜೀವಂತ 

  • ಕೆಎಎಸ್‌ ಮಾಡಿ ಪೊಲೀಸ್‌ ಇಲಾಖೆಯ ಡಿವೈಎಸ್ಪಿ ಹುದ್ದೆಗೆ ಆಯ್ಕೆ

ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಸಾಕಷ್ಟು ಒತ್ತಡವಿರುತ್ತದೆ. ಇಂತಹ ಒತ್ತಡ ಕೆಲಸದ ಮಧ್ಯೆಯೂ ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಆ ಪೋಲಿಸ್ ಅಧಿಕಾರಿಗೆ ಇರುವ ಪ್ರೀತಿ ಮತ್ತು ಆಸಕ್ತಿ ಸ್ವಲ್ಪ ಹೆಚ್ಚೇ ಎಂದರೂ ತಪ್ಪಾಗಲಾರದು. ಅವರೇ ಕವಿ ಮನಸ್ಸಿನ ಪೊಲೀಸ್ ಅಧಿಕಾರಿ ಡಾ. ಶಿವಕುಮಾರ್ ಆರ್  ದಂಡಿನ.

ಪ್ರಸ್ತುತ ಶಿವಕುಮಾರ್ ದಂಡಿನ ಅವರು ಹೆಚ್ಚುವರಿ ಪೋಲಿಸ್ ವರಿಷ್ಟಾಧಿಕಾರಿಯಾಗಿ ರಾಯಚೂರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ತಮಲೇಹಳ್ಳಿ ಗ್ರಾಮದವರಾದ ಇವರ ತಂದೆ ರಾಜಪ್ಪ ಮತ್ತು ತಾಯಿ ಗಿರಿಜಮ್ಮ.

ಪಿಎಚ್‌.ಡಿ ಪದವಿ

ಆರಂಭಿಕ ಶಿಕ್ಷಣವನ್ನು ಸ್ವಗ್ರಾಮದಲ್ಲೇ ಪೂರೈಸಿದ ಶಿವಕುಮಾರ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಹಾಗೂ ಮೈಸೂರಿನ ಮುಕ್ತ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕಿ ಡಾ.ಎನ್.ಕೆ. ಲೋಲಾಕ್ಷಿ ಅವರ ಮಾರ್ಗದರ್ಶನದಲ್ಲಿ ಶಿವಕುಮಾ‌ರ್ ದಂಡಿನ ಅವರು ಮಂಡಿಸಿದ ‘ಆಧುನಿಕ ಕನ್ನಡ ನಾಟಕಗಳು: ಶೋಷಣೆ ಮತ್ತು ವಿಮೋಚನಾ ನೆಲೆಗಳು’ ಎಂಬ ಮಹಾಪ್ರಬಂಧಕ್ಕೆ ಪಿಎಚ್‌.ಡಿ ಪದವಿ ದೊರೆತಿದೆ.

ಡಿವೈಎಸ್ಪಿ ಹುದ್ದೆಗೆ ಆಯ್ಕೆ

2010 ನೇ ಸಾಲಿನಲ್ಲಿ ಕೆಎಎಸ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಪೊಲೀಸ್‌ ಇಲಾಖೆಯ ಡಿವೈಎಸ್ಪಿ ಹುದ್ದೆಗೆ ಆಯ್ಕೆಯಾಗಿ ಮಂಡ್ಯ ಜಿಲ್ಲೆಯ ಮಳವಳ್ಳಿ ಉಪವಿಭಾಗದಲ್ಲಿ ಸೇವೆಗೆ ಸೇರಿದರು. ನಂತರದಲ್ಲಿ ಬೆಳಗಾವಿ, ಬೆಂಗಳೂರು, ವಿಜಯಪುರ ಮತ್ತು ಧಾರವಾಡಗಳಲ್ಲಿ ಪೊಲೀಸ್ ಇಲಾಖೆಯ ವಿವಿಧ ಉನ್ನತ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ರಾಯಚೂರು ಜಿಲ್ಲೆಯ ಎಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕನ್ನಡ ಭಾಷೆ ಮತ್ತು ಸಾಹಿತ್ಯ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡಿರುವ
ಶಿವಕುಮಾರ ಅವರು ತಮ್ಮ ಇಲಾಖೆಯ ಜವಾಬ್ದಾರಿ ನಿರ್ವಹಿಸುತ್ತಲೇ ಸಾಹಿತ್ಯ, ಸಂಗೀತ, ರಂಗಭೂಮಿ ಸೇರಿದಂತೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮನ್ನು ರಚನಾತ್ಮಕವಾಗಿ ತೊಡಗಿಸಿಕೊಂಡಿದ್ದಾರೆ. ‘ರಂಗಚಿತ್ತಾರ’ ತಂಡದೊಂದಿಗೆ ಸೇರಿ ಕುವೆಂಪು ಅವರ ‘ಶೂದ್ರ ತಪಸ್ವಿ’ , ವೈದೇಹಿಯವರ ‘ಸತ್ತು ಅಂದ್ರೆ ಸಾಯ್ತಾರ’ ನಾಟಕಗಳು ಸೇರಿದಂತೆ ಅನೇಕ ನಾಟಕಗಳಲ್ಲಿ ಮುಖ್ಯ ನಟರಾಗಿಯೂ ಅಭಿನಯಿಸಿದ್ದಾರೆ. ಅವರ ಹಲವಾರು ಕವಿತೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಲ್ಲದೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಸಮ್ಮೇಳನಗಳಲ್ಲಿ ಅವರು ತಮ್ಮ ಕವಿತೆಗಳನ್ನು ವಾಚಿಸಿದ್ದಾರೆ. ಪ್ರೊ.ಕೆ.ಎಸ್.ನಿಸಾರ್ ಅಹಮ್ಮದ್, ಡಾ.ಸಿದ್ದಲಿಂಗಯ್ಯ ಅವರಂತಹ ಹಿರಿಯ ಕವಿಗಳು ಇವರ ಕವಿತೆಗಳ ಕುರಿತು ಭರವಸೆಯ ಮಾತುಗಳನ್ನಾಡಿದ್ದಾರೆ.

ಕನ್ನಡ ಸಾಹಿತ್ಯಕ್ಕೆ ಪೊಲೀಸ್ ಸಂವೇದನೆಯ ಸ್ಪರ್ಶ

ಇವರ ‘ಮೋಹದ ಪಥವೂ ಇಹಲೋಕದ ರಿಣವೂ’ ಎನ್ನುವ ಕವನ ಸಂಕಲನದ ಮೂಲಕ ಕವಿಯಾಗಿ ಗುರುತಿಸಿಕೊಂಡಿರುವ ಶಿವಕುಮಾರ್ ದಂಡಿನ ಅವರು,ತಮ್ಮ ಕವಿತೆಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಪೊಲೀಸ್ ಸಂವೇದನೆಯ ಸ್ಪರ್ಶ ನೀಡಿದ್ದಾರೆ. ಅವರ ಕಾವ್ಯದ ಕುರಿತು ಬಂಡಾಯ ಸಾಹಿತಿ, ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಪ್ರತಿಕ್ರಯಿಸಿ,ಶಿವಕುಮಾರ್ ದಂಡಿನ ಅವರ ಕವಿತೆಗಳು ವೈಯಕ್ತಿಕ ವೈಪರೀತ್ಯಗಳಲ್ಲಿ, ಮೋಹದ ಪಥದಲ್ಲಿ ಮಾದಕಗೊಳ್ಳುವುದಿಲ್ಲ.ಬದಲಾಗಿ ಸಾಮಾಜಿಕಗೊಳ್ಳುವ ಸಮ ಸಂಯೋಜನೆಯಿದೆ‌, ಏಕಮುಖಿಯಾಗುವ ಸಂಯಮವಿದೆ,ಶೋಧದ ಗುಣವಿದೆ,ಆಕಾರಕ್ಕೊಂದುಹದವಿದೆ. ಕವಿಯು ನಿರ್ವಹಿಸಿದ ವಸ್ತುಗಳಲ್ಲಿ ಮಾನವಮುಖಿ ಆಶ್ರಯ ಮುಖ್ಯವಾಗಿದೆ ಎಂದಿರುವುದು ಅವರ ಕಾವ್ಯ ಕೃಷಿಗೆ ಹಿಡಿದ ಕನ್ನಡಿಯಾಗಿದೆ.

ಈಗಾಗಲೇ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಬಿ.ಕಾಂ. ಮೂರನೇ ಸೆಮಿಸ್ಟರ್‌ನಲ್ಲಿ ‘ಬಣ್ಣದ ಬದುಕು’ ಪಠ್ಯಕ್ರಮಕ್ಕೆ ಶಿವಕುಮಾರದ ದಂಡಿನ ಅವರ ‘ಮೋಹದ ಪಥವೂ, ಇಹಲೋಕದ ರಿಣವೂ ಕವನ ಸಂಕಲನದಿಂದ ‘ಕವಿತೆ ಮತ್ತು ನಾನು’ ಆಯ್ಕೆ ಮಾಡಿಕೊಳ್ಳಲಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.

ಕವಿತೆ ಮತ್ತು ನಾನು

ಕವಿತೆ ಬರೆಯಲೆಂದು ಕೂತಾಗಲೆಲ್ಲಾ ಪೆನ್ನು ಹಾಳೆಗಳು ಶತ್ರುಗಳಂತೆ ನೋಡುತ್ತವೆ
ಎಷ್ಟು ಸಾರಿ ಬರೆಯಲಿ ಹೆಣ್ಣು ಹೊನ್ನು ಪ್ರಕೃತಿ ಪ್ರೇಮ ಕಾಮದಾಟಗಳ ಹೊಯ್ದಾಟ.

ಠಾಣೆಯನ್ನು ಎಡತಾಕುವವರ ಮುಖಗಳಲ್ಲಿ ದ್ವೇಷ, ಅಸೂಯೆ, ಜಿಗುಪ್ಸೆ, ತಾತ್ಸಾರ, ಅಸಹಾಯಕತೆಗಳ ಅನಾವರಣ ಠಾಣೆಯ ಒಳಗೂ ಹೊರಗೂ ಲಾಠಿ ಬೂಟಿನ ಸದ್ದುಗದ್ದಲ ಅಸಹಾಯಕರ ಆಕ್ರಂದನ

ಬುದ್ಧ ಬಸವರ ಅಂತರಂಗದ ತಪ್ಪು ಒಪ್ಪುಗಳ ಅರಿವಿದ್ದಿದ್ದರೆ ಯಾರಿಗೆ ಬೇಕಿತ್ತು ಸ್ವಾಮಿ ಕೋರ್ಟು ಕಛೇರಿ ಅಲೆಯುವ ಪಾಡು ? ಕೆಲವರಿಗೆ ಆ ಪಾಡಿನಲ್ಲೇ ಬದುಕ ಕಟ್ಟಿ ಭದ್ರಗೊಳಿಸುವ ಹುನ್ನಾರ. ಗರಿಗರಿ ಬಟ್ಟೆಯೊಳಗಣ ಹೊಟ್ಟೆಗಳಿಗೆ ಕಾಣಿಸದು ನೋಡಾ ಹಸಿದವನ ಅನ್ನದ ಲೋಕ,

ಮತ್ತದೇ ಲಾಠಿ ಬೂಟಿನ ಸದ್ದು ! ಇಲ್ಲಿ ಹುಟ್ಟಲಾರದು ಕವಿತೆ ಹುಡುಕ ಹೊರಟೆ ಎಳೆಯ ಸಿದ್ಧಾರ್ಥನಂತೆ ಬೆಟ್ಟ ಕಾಡು ನದಿ ಹಳ್ಳ-ಕೊಳ್ಳ ಝರಿ, ಜಲಪಾತಗಳ ಮಡಿಲಿನಲ್ಲಿ ಮತ್ತೆ ;

ಹೆಣ್ಣು ಹೊನ್ನು ಪ್ರಕೃತಿ ಪ್ರೇಮ, ಕಾಮದಾಟಗಳ ಮೇಲಾಟ ಬರೆಯಲೆತ್ನಿಸಿದೆ ಮರೆಯಲೆತ್ನಿಸಿದೆ ಅಕ್ಷರಗಳೇ ಮೂಡಲೊಲ್ಲವು ಬರೆವ ಲೇಖನಿಯೇ ಭಾರವೆಂದೆನಿಸಿತು.

ಸಾವು ನೋವು ಹಸಿವು ದ್ವೇಷ ಅಸೂಯೆ ತುಂಬಿದ ಮತ್ತದೇ ಮುಖಗಳು ಗಹಗಹಿಸಿ ನಗುತ್ತಿದ್ದವು ಲಾಠಿ ಬೂಟಿನ ಸದ್ದಿಗೆ ಜತೆಯಾಗಿ, ಸುಖಕೆ ರಾಶಿ ರಾಶಿ ದುಃಖ ಹಗಲಲ್ಲೇ ಮರೆಯಾಗುವಂತೆ ಬೆಳಕ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!