Friday, November 20, 2026

ಪ್ರಾಯೋಗಿಕ ಆವೃತ್ತಿ

‘ಒಕ್ಕಲಿಗ’ ಅಸ್ತ್ರ ಬಳಸಲು ‘ಕೈ’ ಪಾಳಯ ಸನ್ನದ್ಧ

ಒಕ್ಕಲಿಗ ಸಮುದಾಯ ಹೆಚ್ಚಾಗಿರುವ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಹೆಚ್ಚು. ಒಕ್ಕಲಿಗ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು ಹಳೇ ಮೈಸೂರು ವ್ಯಾಪ್ತಿಯ ಬಹುತೇಕ ಕ್ಷೇತ್ರಗಳಲ್ಲಿ ಜೆಡಿಎಸ್ ಉತ್ತಮ ಗಳಿಕೆ ಮಾಡುತ್ತಿದೆ. ಒಕ್ಕಲಿಗ ಜಾತಿ ಟ್ರಂಪ್ ಕಾರ್ಡ್ ಬಳಸುವ ದಳಪತಿಗಳು ಭರ್ಜರಿ ಕೊಯ್ಲು ಮಾಡಿಕೊಳ್ಳುತ್ತಾ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಕಳೆದ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಮುಖ ಮುಂದಿಟ್ಟುಕೊಂಡು ಗೆದ್ದವರೇ ಹೆಚ್ಚು. ಜೆಡಿಎಸ್ ಪಕ್ಷಕ್ಕೆ 35-40 ಸ್ಥಾನ ಬಂದರೆ ಸಾಕು,ಅಧಿಕಾರ ಅವರ ಮನೆ ಬಾಗಿಲಿಗೆ ಬರುತ್ತೆ ಅಂತ ದಳಪತಿಗಳಿಗೂ ಗೊತ್ತು.ಈ ಬಾರಿಯೂ ಅದೇ ಆಟ ಆಡಲು ದಳಪತಿಗಳು ಸನ್ನದ್ಧರಾಗಿ,ಪಂಚರತ್ನ ಯಾತ್ರೆ ಅಂತೆಲ್ಲಾ ಮಾಡಿಕೊಂಡು ಅತ್ತ ಓಡಾಡುತ್ತಿದ್ದಾರೆ.ಇತ್ತ ದಳಪತಿಗಳ ನಾಯಕತ್ವಕ್ಕೆ ಬ್ರೇಕ್ ಹಾಕಲು ‘ಕೈ’ ಪಡೆ ಸನ್ನದ್ಧವಾಗಿ ಸಭೆ ನಡೆಸಿದೆ.

ಹಳೇ ಮೈಸೂರು ಭಾಗದ ಎಂಟತ್ತು ಜಿಲ್ಲೆಗಳಲ್ಲಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯಲು ‘ಕೈ’ ಪಾಳಯ ಕಸರತ್ತು ಆರಂಭಿಸಿದೆ.ಇಂದು ಮಂಡ್ಯದ ಅಂಬೇಡ್ಕರ್ ಭವನದಲ್ಲಿ ನಡೆದ ಕೈ ಪಾಳಯದಲ್ಲಿರುವ ಒಕ್ಕಲಿಗರು ನಮ್ಮ ಪಕ್ಷದ ನಾಯಕ ಡಿ.ಕೆ‌.ಶಿವಕುಮಾರ್ ಹಾಗೂ ಚಲುವರಾಯಸ್ವಾಮಿ ಅವರ ನಾಯಕತ್ವಕ್ಕೂ ಒಂದು ಅವಕಾಶ ನೀಡಿ ಎಂದು ಸಭೆಯಲ್ಲಿದ್ದ ಕಾಂಗ್ರೆಸ್ ಪಕ್ಷದ ಒಕ್ಕಲಿಗ ನಾಯಕರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ಅಲ್ಲಿಗೆ ಈ ಬಾರಿಯ ಒಕ್ಕಲಿಗ ಸಮುದಾಯ ಕಾಂಗ್ರೆಸ್ ಪಕ್ಷದ ಬತ್ತಳಿಕೆಯ ಅಸ್ತ್ರವಾಗಬೇಕೆಂದು ಆ ಸಮುದಾಯದ ನಾಯಕರ ಆಸೆ.ಅದಾಗುತ್ತಾ ಇಲ್ಲವೋ ಎಂಬುದನ್ನು ಚುನಾವಣೆಯ ನಂತರವಷ್ಟೇ ತಿಳಿಯಲು ಸಾಧ್ಯ.

ಕೆಪಿಸಿಸಿ ಅಧ್ಯಕ್ಷರಾಗಿ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ      ಡಿ.ಕೆ. ಶಿವಕುಮಾರ್ ಆಯ್ಕೆಗೊಂಡ ನಂತರ 2018ರ ಸೋಲಿನಿಂದ ಮಂಕಾಗಿದ್ದ ಕಾಂಗ್ರೆಸ್ ಪಾಳಯದಲ್ಲಿ ಒಂದಷ್ಟು ಉತ್ಸಾಹದ ವಾತಾವರಣ ಮೂಡತೊಡಗಿತು.ಅದಕ್ಕೆ ಸರಿಯಾಗಿ ಮೇಕೆದಾಟು ಪಾದಯಾತ್ರೆ ಸಂಘಟಿಸಿದ ಡಿ.ಕೆ.ಶಿವಕುಮಾರ್ ದಿಡ್ಡ ಮಟ್ಟದಲ್ಲಿ ಒಕ್ಕಲಿಗ ಸಮುದಾಯದ ಗಮನ ಸೆಳೆದರು‌.

75ರ ಸ್ವಾತಂತ್ರ್ಯ ನಡಿಗೆ, ಭಾರತ್ ಜೋಡೋ ಪಾದಯಾತ್ರೆ, ಬಳಿಕ ಪ್ರಜಾಧ್ವನಿ ಯಾತ್ರೆಯ ಮೂಲಕ ಪಕ್ಷದ ಬಲವರ್ಧನೆಗೆ ಮುಂದಾಗಿರುವ ಕಾಂಗ್ರೆಸ್ಸಿಗರು 2023ರ ವಿಧಾನಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದ ಬಲಿಷ್ಠ ಜನಾಂಗದ ಮತ ಸೆಳೆಯಲು ಹಲವು ತಂತ್ರಗಾರಿಕೆಗೆ ಮುಂದಾಗಿದೆ.

ಪ್ರತಿಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರ ಹಿಂದೆ ಕಾಂಗ್ರೆಸ್ ಪಕ್ಷದ ಪಾರಂಪರಿಕ ಮತ ಬ್ಯಾಂಕ್‌ ಆದ ಅಹಿಂದ ಮತಗಳಿವೆ.ಇದರ ಜೊತೆಗೆ ಒಕ್ಕಲಿಗ ಮತ ಬ್ಯಾಂಕ್ ನ ಶೇ.30-40 ರಷ್ಷು ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಗಣನೀಯವಾಗಿ ಜೆಡಿಎಸ್ ತೆಕ್ಕೆಯಲ್ಲಿರುವ ಕ್ಷೇತ್ರಗಳನ್ನು ಕಿತ್ತುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಭಾಗದಲ್ಲಿ ಒಕ್ಕಲಿಗ ಸಮುದಾಯ ಬಹುತೇಕವಾಗಿ ದಳಪತಿಗಳ ಜೊತೆಗಿದೆ. ಈ ಬಾರಿ ಒಕ್ಕಲಿಗೆ ಸಮುದಾಯದ ಡಿ.ಕೆ.ಶಿವಕುಮಾರ್ ಅವರನ್ನು ಒಕ್ಕಲಿಗ ಟ್ರಂಪ್ ಕಾರ್ಡ್ ಆಗಿ ಬಳಸಲು ಕಾಂಗ್ರೆಸ್ ಪಕ್ಷ ತಯಾರು ಮಾಡಿಕೊಂಡಿದೆ‌.ಒಕ್ಕಲಿಗ ಸಮುದಾಯದ ಡಿ.ಕೆ‌.ಶಿವಕುಮಾರ್ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಆಗುತ್ತಾರೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾ ಒಕ್ಕಲಿಗರ ಮತ ಬ್ಯಾಂಕ್ ಸೆಳೆಯಲು ಮುಂದಾಗಿದ್ದಾರೆ.

ಒಕ್ಕಲಿಗ ಮತಗಳನ್ನು ಪಕ್ಷದತ್ತ ಸೆಳೆಯಲು ಭಾವನಾತ್ಮಕ ನಡೆ ಅನುಸರಿಸಲು ಕಾಂಗ್ರೆಸ್ ಪಾಳಯ ಕಸರತ್ತು ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಬಹಿರಂಗ ಸಭೆಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಾನು ನಿಮ್ಮ ಮನೆ ಮಗನೆಂದು, ನಾನೇ ಅಭ್ಯರ್ಥಿ ಎಂದು ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಹಾಗೂ ಪಕ್ಷ ಅಧಿಕಾರಕ್ಕೆ ಬಂದರೆ ಸಮುದಾಯದ ಪೈಕಿ ಮುಖ್ಯಮಂತ್ರಿಯಾಗುವ ಅವಕಾಶ ನನಗೆ ಒದಗಿ ಬರಲಿದ್ದು, ಅವಕಾಶ ಕಲ್ಪಿಸುವಂತೆ ಬಹಿರಂಗವಾಗಿ ಮನವಿ ಮಾಡಿದ್ದಾರೆ.

ಹಳೇ ಮೈಸೂರು ಭಾಗದ ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ಕೊಡಗು, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ನಿರ್ಣಾಯಕವಾಗಿರುವ ಒಕ್ಕಲಿಗ ಸಮುದಾಯದ ಮತ ಸೆಳೆಯಲು ತಂತ್ರಗಾರಿಕೆ ರೂಪಿಸುತ್ತಿದ್ದಾರೆ.

ಮಂಡ್ಯದಲ್ಲಿ ಇಂದು ನಡೆದ ಒಕ್ಕಲಿಗ ಸಮುದಾಯದ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಜಿಲ್ಲೆಯ ಪ್ರಭಾವಿ ಒಕ್ಕಲಿಗ ಮುಖಂಡ ಎನ್. ಚಲುವರಾಯಸ್ವಾಮಿ, ಒಕ್ಕಲುತನವನ್ನು ನಂಬಿ ಜೀವನ

ನಡೆಸುತ್ತಿರುವ ಒಕ್ಕಲಿಗರು ಹಳೇ ಮೈಸೂರು ಭಾಗದ ಎಂಟತ್ತು ಜಿಲ್ಲೆಗಳಲ್ಲಿ ನಿರ್ಣಾಯಕರಾಗಿದ್ದು, ತಮ್ಮೊಡನೆ ಸಹಬಾಳ್ವೆಯಿಂದಿರುವ ಇತರೆ ಸಮುದಾಯಗಳ ವಿಶ್ವಾಸ ಗಳಿಸಿ ಪಕ್ಷದ ಪರವಾಗಿ ಮತ ಸೆಳೆಯಲು ಪ್ರತಿಯೊಬ್ಬರು ಮುಂದಾಗಬೇಕು.ಒಕ್ಕಲಿಗರು ನಮ್ಮ ಭಾಗಕ್ಕೆ ಅಭಿವೃದ್ಧಿ ವಿಚಾರದಲ್ಲಿ ಆಗಿರುವ ಅನ್ಯಾಯ ಕಂಡು ಒಂದು ಬಾರಿ ನಮಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಆಡಳಿತದಿಂದ ರಾಜ್ಯದ ಜನತೆ ರೋಸಿ ಹೋಗಿದ್ದಾರೆ.ಈ ಬಾರಿ ನಿಶ್ಚಿತ ಸರ್ಕಾರ,ಅದರಲ್ಲೂ ಕಾಂಗ್ರೆಸ್ ಪಕ್ಷ ಬರುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್ಸಿಗರು ಮುಂದಾಗಬೇಕು. ಸರ್ಕಾರ ರಚನೆಯಲ್ಲಿ ಹಳೇ ಮೈಸೂರು ಭಾಗದ ಜನಪ್ರತಿನಿಧಿಗಳು ನಿರ್ಣಾಯಕರಾಗಲಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಕ್ಷದ ನೇತಾರರಾಗಿದ್ದು, ಅವರ ಮುಖಂಡತ್ವದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿದರೆ ಪಕ್ಷ ಅಧಿಕಾರಕ್ಕೆ ಬರಲಿದ್ದು,ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಶೀರ್ವದಿಸುವಂತೆ ಒಕ್ಕಲಿಗ ಸಮುದಾಯವನ್ನು ಕೋರಿದರು.

ಪಕ್ಷ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಪ್ರಮುಖ ಪಾತ್ರದ ಅಧಿಕಾರದಲ್ಲಿದ್ದು, ಸಮುದಾಯದ ಇತರರಿಗೂ ಅಧಿಕಾರ ದೊರೆಯಲಿದೆ. ಈ ಭಾಗದ ಅಭಿವೃದ್ಧಿಗೆ ಸಹಕಾರಿಯಾಗಲಿದ್ದು, ಇದನ್ನು ಸಮುದಾಯದ ಜನರಿಗೆ ಅರ್ಥೈಸಿ ಕಾಂಗ್ರೆಸ್ ಪಕ್ಷದ ಪರವಾಗಿ ಮತ ಸೆಳೆಯಲು ಕಾರ್ಯತಂತ್ರ ರೂಪಿಸುವಂತೆ ಕಿವಿಮಾತು ಹೇಳಿದರು.

ಸಭೆಯಲ್ಲಿ ಶಾಸಕ ಮಧು ಜಿ.ಮಾದೇಗೌಡ, ಮಾಜಿ ಶಾಸಕರಾದ ಎಂ.ಎಸ್.ಆತ್ಮಾನಂದ, ಎಚ್.ಬಿ.ರಾಮು, ರಮೇಶ್ ಬಾಬು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮೈಶುಗರ್ ಮಾಜಿ ಅಧ್ಯಕ್ಷರಾದ ಸಿದ್ದರಾಮೇಗೌಡ, ಹಾಲಹಳ್ಳಿ ರಾಮಲಿಂಗಯ್ಯ, ಬಿ.ಸಿ. ಶಿವಾನಂದ, ಮುಖಂಡರಾದ ರವಿಕುಮಾರ್ ಗಣಿಗ, ವಿಜಯ್ ರಾಮೇಗೌಡ, ಅಂಜನಾ ಶ್ರೀಕಾಂತ್, ಡಾ. ಎಚ್.ಕೃಷ್ಣ, ಅಮರಾವತಿ ಚಂದ್ರಶೇಖರ್, ಚಂದೂಪುರ ಪಾಪಣ್ಣ, ಸಿ.ಕೆ.ನಾಗರಾಜು, ಎಂ.ಎಸ್. ಚಿದಂಬರ್, ಪಲ್ಲವಿ, ಪಾಲಹಳ್ಳಿ ಚಂದ್ರಶೇಖರ್ ಇತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ