Wednesday, April 17, 2024

ಪ್ರಾಯೋಗಿಕ ಆವೃತ್ತಿ

ಬಿ ಫಾರಂ ನೀಡಲು ಹಣ ಪಡೆಯುವ ಜೆಡಿಎಸ್

ಜೆಡಿಎಸ್ ಪಕ್ಷದಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲ. ಪಕ್ಷ ನಿಷ್ಠೆಗಿಂತ ಹಣದ ನಿಷ್ಠೆಗೆ ಹೆಚ್ಚು ಬೆಲೆ.ಬಿ ಫಾರಂ ಪಡೆಯಲು ಹಣ ಪಡೆಯುವ ಪಕ್ಷದ ಅಭ್ಯರ್ಥಿಗೆ ಮತ ನೀಡುವ ಮುನ್ನ ಯೋಚಿಸಿ ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಜೆಡಿಎಸ್ ವರಿಷ್ಠರ ವಿರುದ್ಧ ವಾಗ್ದಾಳಿ ನಡೆಸಿದರು.

ಮಂಡ್ಯದ ಮಂಜುನಾಥ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಕೀಲಾರ ಜಯರಾಮ ಅಭಿಮಾನಿಗಳ ಸಭೆಯಲ್ಲಿ ಅವರು ಮಾತನಾಡಿದರು. ನಾನು ನಾಲ್ಕು ಬಾರಿ ವಿಧಾನಪರಿಷತ್ ಸದಸ್ಯರಾಗಿ, ಉಪಸಭಾಪತಿಯಾಗಿ ಎಂದಿಗೂ ಜಿಲ್ಲೆಯ ಮತದಾರರಿಗೆ ಚ್ಯುತಿ ತರುವ ಕೆಲಸ ಮಾಡಲಿಲ್ಲ.

ಆದರೆ ಕೆ.ಟಿ. ಶ್ರೀಕಂಠೇಗೌಡರು ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ತಪ್ಪಿಸಿ ಅಕ್ರಮವಾಗಿ ಹಣ ಮಾಡಿರುವ ವ್ಯಕ್ತಿಗೆ ಟಿಕೆಟ್ ಕೊಡಿಸುವ ಮೂಲಕ ಪದವೀಧರ ಕ್ಷೇತ್ರದ ಪಾವಿತ್ರ್ಯವನ್ನು ಹಾಳುಮಾಡಿದ್ದಾರೆ ಎಂದು ಕಿಡಿಕಾರಿದರು.

ಕೀಲಾರ ಜಯರಾಮ್ ರವರು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ 35 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು. ಅವರಿಗೆ ಟಿಕೆಟ್ ಕೊಡಿಸುವುದನ್ನು ಬಿಟ್ಟು ಸೈಟು ಕೊಡಿಸುತ್ತೇನೆಂದು1500 ಜನರಿಂದ ಹಣ ಕಟ್ಟಿಸಿಕೊಂಡು, ಹತ್ತು ವರ್ಷವಾದರೂ ನೀಡದೆ ಅಕ್ರಮವಾಗಿ ಹಣ ಮಾಡಿರುವ ವ್ಯಕ್ತಿಗೆ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಜೆಡಿಎಸ್ ಪಕ್ಷ ಹಣಕ್ಕೆ ಮಣೆ ಹಾಕಿದರೆ ಸಜ್ಜನರ ಪಾಡೇನು? ಬಿ ಫಾರಂ ನೀಡೋಕೆ ಹಣ ಪಡೆಯುವ ಪಕ್ಷಕ್ಕೆ ಮತ ಹಾಕಬೇಕೇ ಎಂದು ಮತದಾರರು ಯೋಚಿಸಬೇಕು. ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್.ಕೆ. ರಾಮುಗೆ ಪ್ರಥಮ ಮತ್ತಯ ದ್ವಿತೀಯ ಯಾವುದೇ ಪ್ರಾಶಸ್ತ್ಯದ ಮತ ಕೊಡದೆ ಹಣವೇ ಮುಖ್ಯವಲ್ಲ ಎಂದು ಸಾಬೀತುಪಡಿಸಬೇಕೆಂದು ಪದವೀಧರ ಮತದಾರರಿಗೆ ಕರೆ ಹೇಳಿದರು.

ಮಂಡ್ಯ ಜಿಲ್ಲೆ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ವಿಶಿಷ್ಟ ಸ್ಥಾನ ಪಡೆದಿದೆ. ಆದರೆ ಜಿಲ್ಲೆಯ ರಾಜಕೀಯದಲ್ಲಿ ಅನಾಯಕತ್ವ ಇದೆ.ಕೆ.ವಿ. ಶಂಕರಗೌಡ, ಎಚ್.ಕೆ. ವೀರಣ್ಣಗೌಡ, ಎಚ್‌.ಡಿ. ಚೌಡಯ್ಯ,ಎಸ್.ಎಂ.ಕೃಷ್ಣ,ಜಿ. ಮಾದೇಗೌಡ ಅವರಂತಹ ರಾಜಕಾರಣಿಗಳ ಬದುಕಿನ ಶೈಲಿ, ರಾಜಕೀಯ ನಿಲುವು, ಅವರ ಆದರ್ಶ ಇಂದು ನನ್ನ ಸೇರಿದಂತೆ ಯಾರಲ್ಲೂ ಇಲ್ಲ. ಜಿಲ್ಲೆಯಲ್ಲಿ ರಾಜಕೀಯ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು‌.

ಶ್ರೀಕಂಠೇಗೌಡರು ಐದು ಬಾರಿ ಸ್ಪರ್ಧೆ ಮಾಡಿ ಎರಡು ಬಾರಿ ಗೆದ್ದಿದ್ದಾರೆ. ಆದರೆ ಕಳೆದ ಬಾರಿ ಚುನಾವಣೆಯಲ್ಲಿ ಆತನ ಪರವಾಗಿ ಕೆಲಸ ಮಾಡಲು ನಮಗೆ ಇಷ್ಟವಿರಲಿಲ್ಲ. ಆದರೆ ಜಯರಾಂ, ಶಿವರುದ್ರಪ್ಪ, ಶಿವಣ್ಣಗೌಡ, ಮೈಸೂರಿನ ಮಲ್ಲೇಶ್ ಮೊದಲಾದವರು ಮಾತನಾಡಿ ಮತ್ತೊಂದು ಅವಕಾಶ ನೀಡೋಣ ಎಂದು ಒಪ್ಪಿಸಿದರು. ಆದರೆ ಗೆದ್ದ ನಂತರ ಆತ ನಂಬಿಕೆ ಉಳಿಸಿಕೊಳ್ಳಲಿಲ್ಲ.

ದೇವೇಗೌಡರ ಮನೆ ಕಾದ ಮನುಷ್ಯನಿಗೆ ಕೈಕೊಟ್ಟು ಪಕ್ಷಕ್ಕೆ ಸೇವೆ ಮಾಡದ ಹಣವಂತನಿಗೆ ಟಿಕೆಟ್ ನೀಡಿ ಅವರ ಯೋಗ್ಯತೆಯನ್ನು ಸಾರಿದ್ದಾರೆ ಎಂದು ಜೆಡಿಎಸ್ ವರಿಷ್ಠರಿಗೆ ಕುಟುಕಿದರು.
ನಾನು ನಾಲ್ಕು ಬಾರಿ ಶಿಕ್ಷಕರ ಕ್ಷೇತ್ರದಿಂದ ಸದಸ್ಯನಾಗಲು ನನ್ನ ಮನೆಯಿಂದ ಸ್ವಲ್ಪವೂ ಹಣ ಖರ್ಚು ಮಾಡಿಲ್ಲ.

ಈ ಮನುಷ್ಯ ವಿಧಾನ ಪರಿಷತ್ನಲ್ಲಿ ಇರಬೇಕು ಎಂದು ಬಯಸಿದ ಹಿತೈಷಿಗಳು ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಅವರೇ ನನ್ನ ಚುನಾವಣೆಗೆ ಆರ್ಥಿಕವಾಗಿ ಸಹಾಯ ಮಾಡುತ್ತಾರೆ. ಅವರನ್ನು ನಾನು ಎಂದಿಗೂ ಮರೆಯುವುದಿಲ್ಲ. ಕುಗ್ರಾಮದಿಂದ ಬಂದ ರೈತನ ಮಗನಿಗೆ ರಾಜಕೀಯ ಅಧಿಕಾರ ನೀಡಿದ ಮತದಾರರನ್ನು ಎಂದಿಗೂ ಮರೆಯುವುದಿಲ್ಲ.ನಾನು ಮತದಾರರಿಗೆ ಚ್ಯುತಿ ಬರುವಂತೆ ಯಾವತ್ತೂ ನಡೆದುಕೊಂಡಿಲ್ಲ ಎಂದರು.

ಜಿಲ್ಲೆಯ ಹಿರಿಯ ರಾಜಕೀಯ ಮುತ್ಸದ್ದಿ ಜಿ.ಮಾದೇಗೌಡರ ಮಗ ವಿಧಾನಪರಿಷತ್ ಚುನಾವಣೆಗೆ ನಿಂತಿದ್ದಾರೆ. ಅಂತಹವರ ಪುತ್ರನಿಗೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಕೀಲಾರ ಜಯರಾಂ ಸ್ಪರ್ಧೆ ಮಾಡುತ್ತಿಲ್ಲ ಎಂದ ಮರಿತಿಬ್ಬೇಗೌಡ ಪರೋಕ್ಷವಾಗಿ ಮಧು ಮಾದೇಗೌಡರಿಗೆ ಸಹಕಾರ ನೀಡುವ ಸಂದೇಶ ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!