Thursday, November 19, 2026

ಪ್ರಾಯೋಗಿಕ ಆವೃತ್ತಿ

ವಜಾಗೊಂಡಿರುವ ಮಿಮ್ಸ್ ಹೊರಗುತ್ತಿಗೆ ಸಿಬ್ಬಂದಿಯ ಹೋರಾಟಕ್ಕೆ ಕದಂಬ ಸೈನ್ಯ ಬೆಂಬಲ

ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಹೊರಗುತ್ತಿಗೆ ಭದ್ರತಾ ಸಿಬ್ಬಂದಿಗಳಾಗಿ ಕೆಲಸ ನಿರ್ವಹಿಸುತ್ತಿದ 10 ಜನ ಶೋಷಿತ ವರ್ಗದ ಸಿಬ್ಬಂದಿಗಳನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಕದಂಬ ಸೈನ್ಯವು ತೆಗೆದುಹಾಕಿರುವ ಹೊರಗುತ್ತಿಗೆ ನೌಕರರನ್ನು ಮತ್ತೇ ಕೆಲಸಕ್ಕೆ ನೇಮಿಸಿಕೊಳ್ಳಲು ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿಗೆ ಬೆಂಬಲ ವ್ಯಕ್ತಪಡಿಸಿದೆ.

ಈ ಕುರಿತು ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಜಾಗೊಂಡ ಸಿಬ್ಬಂದಿಯನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಅಂದಾನಿ ಸೋಮನಹಳ್ಳಿ, ಮಂಡ್ಯ ಜಿಲ್ಲಾ ಸಂಚಾಲಕ ಮದ್ದೂರು ಎಂ.ಶಿವು, ಮಂಡ್ಯ ಜಿಲ್ಲಾ ಸಂ.ಸಂಚಾಲಕ ಉಮ್ಮಡಹಳ್ಳಿ ಉಮೇಶ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದರು.

ಮಾ.6ರಂದು ಸಭೆ 

ವಜಾಗೊಂಡ ಹೊರಗುತ್ತಿಗೆ ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ಆಗ್ರಹಿಸಿ ಮುಂದಿನ ಹೋರಾಟ ರೂಪಿಸಲು ಮಾ.6ರಂದು ಪ್ರಗತಿಪರ ಮುಖಂಡರ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ರೈತ ನಾಯಕಿ ಸುನಂದ ಜಯರಾಮು, ಕೆ.ಬೋರಯ್ಯ ಸೇರಿದಂತೆ ಮುಂತಾದ ಪ್ರಗತಿಪರರು ಭಾಗವಹಿಸಬೇಕೆಂದು ಮನವಿ ಮಾಡಿದರು.

ಮಿಮ್ಸ್ ನಿರ್ದೇಶಕರು 8 ದಿನಗಳಿಂದ ಪ್ರತಿನಿತ್ಯ ಬಂದು ಭರವಸೆ ನೀಡುತ್ತಲೇ ಹೋಗುತ್ತಿದ್ದಾರೆ. ಆದರೆ ನೊಂದ ನೌಕರರಿಗೆ ನ್ಯಾಯ ಒದಗಿಸಿಲ್ಲ. ಆಡಳಿತ ಮಂಡಳಿ ಅನುಮತಿ ಇಲ್ಲದೆ ಕೆಲಸದಿಂದ ತೆಗೆದು ಹಾಕಲಾಗಿದೆ. ಮಿಮ್ಸ್ ಕೆ.ಎಸ್.ಎಫ್.9 ಏಜೆನ್ಸಿ ರವರ ಕಪಿಮುಷ್ಟಿಯಲ್ಲಿದೆ. ಇಲ್ಲಿಯ ಆಡಳಿತ ಮಂಡಳಿಯಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಈ 10 ಜನ ನೌಕರರು ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದರು. ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ 10 ಜನರನ್ನು ಏಕಾಏಕೀ ತೆಗೆದುಹಾಕಿ 7 ಜನ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಚಂದ್ರಶೇಖರ್, ಮುಖಂಡರಾದ ಕೃಷ್ಣ ತಾವರಗೆರೆ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ