Friday, September 20, 2024

ಪ್ರಾಯೋಗಿಕ ಆವೃತ್ತಿ

ಸಾಮರಸ್ಯ- ಸಹಬಾಳ್ವೆ ಸರ್ವ ಧರ್ಮಗಳ ಸಂದೇಶ : ನಿರ್ಮಲಾನಂದಶ್ರೀ

ಸರ್ವ ಧರ್ಮಗಳ ಸಂದೇಶ ಒಂದೇ ಆಗಿದೆ, ಅದು ಸಾಮರಸ್ಯ- ಸಹಬಾಳ್ವೆಯಾಗಿದೆ, ಇದನ್ನು ನಾವು ಭಾವೈಕ್ಯತೆ ನೀತಿ ನೆಲಕಟ್ಟಿನಲ್ಲಿ ನೋಡಬೇಕಾಗಿದೆ ಎಂದುಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ನಾಗಮಂಗಲ ತಾಲೂಕಿನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಗಂಗಾಧರೇಶ್ವರ ಸ್ವಾಮಿ ರಥೋತ್ಸವದ ಮುನ್ನಾ ದಿನ ನಡೆದ ಸರ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ  ಮಾತನಾಡಿದ ಅವರು,  ಇಂದಿನ ದಿನಗಳಲ್ಲಿ ಎಲ್ಲಾ ಧರ್ಮಗಳನ್ನೂ ನಾವು ಸರಿಯಾದ ರೀತಿಯಲ್ಲಿ ಗ್ರಹಿಸಿ ಅರ್ಥೈಸಿಕೊಳ್ಳುವ ಕೆಲಸ ಮಾಡಬೇಕಾಗಿದೆ ಎಂದರು.

ಆದಿಚುಂಚನಗಿರಿ ಸಂಸ್ಥಾನ ಶಾಖಾ ಮಠ ಶೃಂಗೇರಿಯ ಶ್ರೀ ಗುಣನಾಥ ಸ್ವಾಮೀಜಿ ಮಾತನಾಡಿ, ಹಿಂದೂ ಧರ್ಮವು  ಕೇವಲ ಒಂದು ಕಾಲಘಟ್ಟ ಅಥವಾ ಒಂದು ಗ್ರಂಥದ ಮೂಲಕ ಹೇಳಲು ಸಾಧ್ಯವಿಲ್ಲ, ಇದೊಂದು ಶ್ರೇಷ್ಠ ಸನಾತನ  ಧರ್ಮವಾಗಿದೆ. ಶ್ರೇಷ್ಠ ಮಾನವೀಯ ಗುಣಗಳು ಕೇವಲ  ಆಚರಣೆಗೆ ಸೀಮಿತವಾಗಿರದೆ ವಿಜ್ಞಾನ ಸಹಿತವಾದ ಸಂಪ್ರದಾಯ ಎಂದು ಅನೇಕ ಶ್ಲೋಕಗಳನ್ನು ಉಲ್ಲೇಖಿಸಿ ಭಾರತೀಯ ಸಂಸ್ಕೃತಿಯ ಹಿಂದೂ ಧರ್ಮವನ್ನು ಬಣ್ಣಿಸಿದರು.

ಮಂಗಳೂರು ಕ್ರೈಸ್ತ ವಿದ್ಯಾಪೀಠದ ಮುಖ್ಯಸ್ಥ ಫಾದರ್ ಐವನ್ ಡಿಸೋಜಾ ಕ್ರೈಸ್ತ ಧರ್ಮವನ್ನು ಕುರಿತು ಮಾತನಾಡಿ, ಸರ್ವ ಜನಾಂಗದ ಶಾಂತಿಯ ತೋಟವಾದ ಸಕ್ಕರೆ ನಾಡಿನ ಆದಿಚುಂಚನಗಿರಿಯಲ್ಲಿ ಸರ್ವಧರ್ಮ ಸಮನ್ವಯದ, ಶಾಂತಿಯನ್ನು ಪ್ರತಿಷ್ಠಾಪಿಸುವ ಸಮಾರಂಭವೊಂದು ನಡೆಯುತ್ತಿದೆ. ಹೋಗುವುದು ಯಾತ್ರೆ, ಮಾಡುವುದು ಜಾತ್ರೆ, ತರುವುದು ಪಾತ್ರೆ, ಅದೇ ಈ ಕ್ಷೇತ್ರದ ಅಕ್ಷಯ ಪಾತ್ರೆ. ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶವಾಗಿದೆ, ಈ ಕ್ಷೇತ್ರ ಕೂಡಾ ಒಂದು ಚಿಕ್ಕ ಭಾರತದಂತೆ ಭಾಸವಾಗುತ್ತಿದೆ, ಎಲ್ಲರ ಆತ್ಮದಲ್ಲಿ ಪರಮಾತ್ಮ ನೆಲೆಸಿದ್ದಾನೆ ಎಂದರು.

ಇದೇ ವೇದಿಕೆಯಲ್ಲಿ ಮೈಸೂರಿನ ಸಾಹಿತಿ ಡಾ. ಸುಮಾ ಆರ್ ವಿರಚಿತ ಲೇಖನಗಳ ಮಾಲೆ ‘ನೆಲದ ಗಂಗಾಳದಲ್ಲಿ ಹಸಿರು ಹೊನ್ನು’ ಮತ್ತು ಸಂಪಾದಿತ ಕೃತಿ ‘ಶೋಧಗಿರಿ’ಎಂಬ ಎರಡು ಕೃತಿಗಳನ್ನು ಲೋಕಾರ್ಪಣೆ ಗೊಳಿಸಲಾಯಿತು.

ಶ್ರವಣಬೆಳಗೊಳದ ಬಾಹುಬಲಿ ವಿದ್ಯಾಪೀಠ, ರಾಷ್ಟ್ರೀಯ ಪ್ರಾಕೃತಿಕ ಮತ್ತು ಸಂಶೋಧನಾ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಡಾ.ಜಯಕುಮಾರ್ ಉಪಾಧ್ಯೆ ಜೈನ ಧರ್ಮವನ್ನು ಕುರಿತು ಮಾತನಾಡಿ, ಸರ್ವಧರ್ಮ ಸಮನ್ವಯವನ್ನು ಸಾರುವ ಈ ಸಮ್ಮೇಳನವು ಮಾನವ ಕುಲಕ್ಕೆ ಸನ್ಮಂಗಳವನ್ನುಂಟು ಮಾಡಲಿ ಎಂದು ಶುಭ ಹಾರೈಸಿದರು.

ಧರ್ಮಗುರು ಡಾ. ಕಲ್ಯಾಣ ಸಿರಿ ಭಂತೇಜಿ, ವಿಶ್ವ ಮೈತ್ರಿ ಬುದ್ಧ ವಿಹಾರ ಮೈಸೂರು ಇವರು 84,000 ನಮ್ಮ ಬೋಧನೆಗಳಿಂದ ಕೂಡಿದ ಬೌದ್ಧ ಧರ್ಮದ ಸಾರವನ್ನು ತಿಳಿಸುತ್ತಾ ಜಗತ್ತಿನ ಎಲ್ಲಾ ಧರ್ಮಗಳಲ್ಲೂ ವಿಲೀನವಾಗುವ ಸರ್ವ ಧರ್ಮಗಳಲ್ಲೂ ಪಾಲಿಸಬೇಕಾದ ಶಾಂತಿ ನ್ಯಾಯಗಳ ಸಮೀಚಿನಗೊಳಿಸುತ್ತಾ ಸಕಲ ನಿಷ್ಠೆಗಳ ಅನುಷ್ಠಾನಗಳ ಬಗ್ಗೆ ವಿವರಿಸಿದರು.

ಇಡೀ ದೇಶದ ಸೌಂದರ್ಯ ಇಂತಹ ವಿವಿಧ ಧರ್ಮಗಳ ಸಾರದಲ್ಲಿ ಅಡಗಿದೆ. ಆ ಸೌಂದರ್ಯ ಇಂದು ಒಂದೇ ವೇದಿಕೆಯಲ್ಲಿ ಒಗ್ಗೂಡಿದೆ ಎಂದು ಇಸ್ಲಾಂ ಧರ್ಮಗುರು ಹಾಫಿಝ್ ಮೊಹಮ್ಮದ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ನುಡಿದರು. ಭಾರತದ ಮಹತ್ವವನ್ನು ತಿಳಿಯಬೇಕಾದರೆ ಹೊರ ದೇಶಗಳನ್ನು ಸುತ್ತಿ ಬರಬೇಕು ಕರ್ನಾಟಕದ ಮಹತ್ವವನ್ನು ತಿಳಿಯಬೇಕಾದರೆ ಭಾರತದ ವಿವಿಧ ರಾಜ್ಯಗಳನ್ನು ಸುತ್ತಿ ಬರಬೇಕು, ಇಸ್ಲಾಂ ಧರ್ಮದ ಅರ್ಥವೇ ಶಾಂತಿ ಎಂದು. ಪ್ರತಿಯೊಂದು ಧರ್ಮದ ಸಾರವು ಶಾಂತಿ ದಯೆ ನ್ಯಾಯ ನಿಷ್ಠೆ‌. ಇದನ್ನು ಪಾಲಿಸುವ ಸಾಮರಸ್ಯ ಐಕ್ಯತೆ ನಮ್ಮೆಲ್ಲರನ್ನು ಒಂದೆ ವೇದಿಕೆಯಲ್ಲಿ ಒಗ್ಗೂಡಿಸಿದೆ ಕುವೆಂಪು ಬಸವಣ್ಣ ನವರ ಸಾಹಿತ್ಯವನ್ನು ಉಲ್ಲೇಖಿಸಿ ಮಾತನಾಡಿದರು.

ಸಮಾರಂಭದಲ್ಲಿ ಶಿಕ್ಷಣ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದ ನಾಥ ಸ್ವಾಮೀಜಿ, ಶ್ರೀ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಬೆಂಗಳೂರಿನ ಗೋಸಾಯಿ ಮಠದ ಶ್ರೀ ಮಂಜುನಾಥ ಸ್ವಾಮೀಜಿ, ಶಾಸಕರಾದ ಸಿ ಎಸ್ ಪುಟ್ಟರಾಜು, ಕೆ ಸುರೇಶ್ ಗೌಡ, ಅಮೆರಿಕಾದ ಕನ್ನಡಿಗ ಚಿಕ್ಕಸ್ವಾಮಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಡಾ.ಎ ಟಿ ಶಿವರಾಮು, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಅಧಿಕಾರಿಗಳು, ಪ್ರಾಂಶುಪಾಲರು ಹಾಜರಿದ್ದರು.

ನಂತರ ಬೆಟ್ಟದ ಕೆಳಭಾಗದ ಪುಷ್ಕರಣಿಯಲ್ಲಿ ತೆಪ್ಪೋತ್ಸವ, ಭೈರವೇಶ್ವರನ ತಿರುಗಣಿ ಉತ್ಸವ ಹಾಗೂ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಗಂಗಾಧರೇಶ್ವರ ಸ್ವಾಮಿಯ ಮಹಾರಥೋತ್ಸವ ಮತ್ತು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಅಡ್ಡಪಾಲಕಿ ಉತ್ಸವಗಳು ಅಪಾರ ಜನಸ್ತೋಮದ ಸಮ್ಮುಖದಲ್ಲಿ ನೆರವೇರಿದವು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!