Friday, September 20, 2024

ಪ್ರಾಯೋಗಿಕ ಆವೃತ್ತಿ

ಕಾಂಕ್ರೀಟ್ ಮೇಲೆ ಡಾಂಬರು ಹಾಕಿ ರಸ್ತೆ ನಿರ್ಮಾಣ : ಕಳಪೆ ಕಾಮಗಾರಿಯಲ್ಲಿಯೂ ನಗರಸಭೆ ಹೊಸ ದಾಖಲೆ

ಕಾಂಕ್ರೀಟ್ ಮೇಲೆ ಡಾಂಬರೀಕರಣ ಮಾಡುವ ಮೂಲಕ ನಗರಸಭೆ ಕಳಪೆ ರಸ್ತೆ ನಿರ್ಮಾಣದಲ್ಲಿ ಹೊಸ ದಾಖಲೆ ಮಾಡಿದೆ.

ಮಂಡ್ಯನಗರದ ಸುಭಾಷ್ ನಗರ 10ನೇ ವಾರ್ಡ್ ನ ಏಳನೇ ನೇ ಕ್ರಾಸ್ ಶ್ರೀಹುಚ್ಚಮ್ಮ ದೇವಾಲಯದ ರಸ್ತೆಯಲ್ಲಿ ಕಾಂಕ್ರೀಟ್ ಮೇಲೆ ಡಾಂಬರು ಹಾಕಿ ಜನರ ಕಣ್ಣೊರೆಸುವ ತಂತ್ರ ಮಾಡಿದೆ.

ಕಳೆದ ಹಲವು ವರ್ಷಗಳ ಹಿಂದೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿತ್ತು, ಇದೀಗ ಡಾಂಬರು ರಸ್ತೆ ನಿರ್ಮಾಣ ಮಾಡಲು ನಗರಸಭೆ ಮುಂದಾಗಿದ್ದು, ಕಾಂಕ್ರೀಟ್ ತೆರವು ಮಾಡಿ ಅಡಿಪಾಯ (ಮೆಟ್ಲಿಂಗ್) ಭದ್ರಗೊಳಿಸಿ ಕೆಲವು ದಿನಗಳ ನಂತರ ಡಾಂಬರು ಹಾಕಬೇಕಾಗಿತ್ತು. ಆದರೆ ಏಕಾಏಕಿ ಗುತ್ತಿಗೆದಾರರು ಕಾಂಕ್ರೀಟ್ ಮೇಲೆ ಡಾಂಬರು ಹಾಕುವ ಮೂಲಕ ಕಳಪೆ ಮಟ್ಟದ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ.

ಕಾಂಕ್ರೀಟ್ ಮೇಲೆ ಡಾಂಬರು ಹೆಚ್ಚಿನ ದಿನ ನಿಲ್ಲುವುದಿಲ್ಲ, ಇದರಿಂದ ರಸ್ತೆಯ ಡಾಂಬರು ಕಿತ್ತು ಬರುವ ಸಾಧ್ಯತೆ ಹೆಚ್ಚು. ಆಗಿದ್ದರೂ ಸಹ ಕಾಂಕ್ರೀಟ್ ಮೇಲೆ ಡಾಂಬರು ಹಾಕಲಾಗಿದೆ. ಅದರಲ್ಲೂ ಬಹಳ ಕಡಿಮೆ ಪ್ರಮಾಣದಲ್ಲಿ ಡಾಂಬರು ಮಾಡಲಾಗಿದ್ದು, ಗುಣಮಟ್ಟದಿಂದ ಕೂಡಿಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

ನಗರಸಭೆಯ ತಾಂತ್ರಿಕ ವಿಭಾಗ ಸ್ಥಳ ಪರಿಶೀಲಿಸದೆ ಕಾಂಕ್ರೀಟ್ ಮೇಲೆ ಡಾಂಬರು ಹಾಕಲು ಅವಕಾಶ ನೀಡುವ ಮೂಲಕ ಕಳಪೆ ರಸ್ತೆ ನಿರ್ಮಾಣಕ್ಕೆ ಕೈಜೋಡಿಸಿದ್ದು, ಟೆಂಡರ್ ನಿಯಮಾವಳಿ ಉಲ್ಲಂಘಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದರೂ ಮೌನವಾಗಿರುವ ಅಧಿಕಾರಿಗಳ ಭ್ರಷ್ಟಾಚಾರ ಬಯಲು ಮಾಡಿದಂತಿದೆ ಎಂದು ದೂರಿದ್ದಾರೆ.

ಕಾಂಕ್ರೀಟ್ ಮೇಲೆ ಡಾಂಬರು ಹಾಕಲು ಟೆಂಡರ್ ನಲ್ಲಿ ಅವಕಾಶ ಮಾಡಿಕೊಡಲಾಗಿದೆಯಾ ? ಹಾಗೂ ವರ್ಕ್ ಆರ್ಡರ್ ನಲ್ಲಿ ನಮೂದಿಸಿದೆಯೇ ಎಂಬುದನ್ನು ನಗರಸಭೆ ಅಧ್ಯಕ್ಷರು, ವಾರ್ಡಿನ ಸದಸ್ಯರು ಹಾಗೂ ಕಾರ್ಯಪಾಲಕ ಅಭಿಯಂತರರು ಬಹಿರಂಗಪಡಿಸಬೇಕಾಗಿದೆ ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!