ಅಮೆರಿಕದಲ್ಲಿ ಕಂಪನಿ ಮಾರಾಟ ಮಾಡಿ ಜನ ಸೇವೆಗೆ ಬಂದಿದ್ದೇನೆ ಎಂದು ಮಹಾಶಯರೊಬ್ಬರು ವಿಧಾನಸಭಾ ಚುನಾವಣೆ ಹತ್ತಿರವಿದ್ದಾಗ ಬಂದು ಹೇಳುತ್ತಿದ್ದಾರೆ. ಆದರೆ, ನಾನು ಮನಸ್ಸು ಮಾಡಿದ್ದರೆ, ಅವರಂತಹ ಹತ್ತಾರು ಕಂಪನಿಗಳನ್ನು ಸ್ಥಾಪಿಸುತ್ತಿದ್ದೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ರೈತಸಂಘದ ದರ್ಶನ್ ಪುಟ್ಟಣ್ಣಯ್ಯ ಅವರ ಹೆಸರೇಳದೆ ಟಾಂಗ್ ನೀಡಿದರು.
ಪಾಂಡವಪುರ ತಾಲೂಕಿನ ಚಿಕ್ಕಬ್ಯಾಡರಹಳ್ಳಿ ವೃತ್ತದಲ್ಲಿ ಶುಕ್ರವಾರ ಆಯೋಜಿಸಿದ್ದ ಚಿಕ್ಕಾಡೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ವಿದೇಶದಲ್ಲಿ ಶಿಕ್ಷಣ ಪಡೆದ ನನ್ನ ಮಗನಿಗಾಗಿ ಅಲ್ಲೇ ಕಂಪನಿ ತೆರೆಯುವಂತೆ ಅನೇಕರು ಒತ್ತಾಯ ಮಾಡಿದರು. ಆದರೆ, ನನ್ನ ಮಗನ ಸೇವೆ,ಮೇಲುಕೋಟೆ ಕ್ಷೇತ್ರದ ಜನತೆಗೆ ದೊರೆಯಬೇಕು ಎಂಬ ಕಾರಣಕ್ಕೆ ಇಲ್ಲಿಗೆ ಕರೆದುಕೊಂಡು ಬಂದು ನಮ್ಮಪ್ಪ ನೀಡಿದ 25 ಎಕರೆ ಜಮೀನಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಶಿಕ್ಷಣ ಸೇವೆ ಮಾಡುವಂತೆ ಮಾಡಿದ್ದೇನೆ ಎಂದು ತಿಳಿಸಿದರು.
ಜನತೆ ಗಮನಿಸಿದ್ದಾರೆ
‘ಕೋವಿಡ್’ ವೇಳೆ ಮೃತಪಟ್ಟವರ ಅಂತ್ಯ ಸಂಸ್ಕಾರ ಮಾಡಲು ಅವರ ಮಕ್ಕಳೇ ಹಿಂದೆ ಮುಂದೆ ನೋಡುತ್ತಿದ್ದ ಸಂದರ್ಭದಲ್ಲಿ, ನಾನು ನನ್ನ ಆರೋಗ್ಯವನ್ನು ಲೆಕ್ಕಿಸದೆ ಮುಂದೆ ನಿಂತು ಶವ ಸಂಸ್ಕಾರ ನೆರವೇರಿಸಿದ್ದೇನೆ. ಆಮ್ಲಜನಕದ ಕೊರತೆ ಎದುರಾಗದಂತೆ ನೋಡಿಕೊಂಡಿದ್ದೇನೆ.ಕೋವಿಡ್ ಸಂದರ್ಭದಲ್ಲಿ ಯಾರು ಕ್ಷೇತ್ರದಲ್ಲಿದ್ದರು ಎಂಬುದನ್ನು ಜನತೆ ಗಮನಿಸಿದ್ದಾರೆ ಎಂದು ಹೇಳಿದರು.

ಕ್ಷೇತ್ರದ ದುದ್ದ,ಬಳಘಟ್ಟ, ಬಳೇಅತ್ತಿಗುಪ್ಪೆ, ಶಾದನಹಳ್ಳಿ ಬಳಿ ಏತ ನೀರಾವರಿ ಯೋಜನೆ ಅನುಷ್ಠಾನಗೊಂಡಿದೆ. ಕೆಆರ್ಎಸ್ನಿಂದ ನೀರು ಎತ್ತಿ ಈ ಭಾಗದ ಎಲ್ಲ ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಉಳಿಕೆ ಯೋಜನೆಗಳಿಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅವರು ಅನುದಾನ ನೀಡಲಿದ್ದಾರೆ ಎಂದರು.
ಎಸಿ ರೂಂನಲ್ಲಿರಲಿಲ್ಲ
ನಾನು ಸಂಸದನಾಗಿದ್ದಾಗ,ಎಸಿ ರೂಂನಲ್ಲಿ ಕುಳಿತುಕೊಳ್ಳಲಿಲ್ಲ. ಬೆಂಗಳೂರು- ಮೈಸೂರು ಹೆದ್ದಾರಿ ನಿರ್ಮಾಣದಿಂದಾಗಿ ಪಾಂಡವಪುರಕ್ಕೆ ತಿರುವು ಪಡೆಯಲು ಬೈಪಾಸ್ ರಸ್ತೆಗಾಗಿ ಹೋರಾಟ ನಡೆಸಿದ ಫಲವಾಗಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಮಂಜೂರಾತಿ ಪಡೆದುಕೊಂಡಿದ್ದೇನೆ.
ಬಿಜೆಪಿ ಬೆಂಬಲಿಸಿರುವ ಸುಮಲತಾ ಅವರು ಬಿಜೆಪಿ ನಾಯಕರ ಮೇಲೆ ಒತ್ತಡ ತಂದು ದೊಡ್ಡಬ್ಯಾಡರಹಳ್ಳಿ ಮೇಲುಸೇತುವೆ, ಕೆಳ ರಸ್ತೆಯನ್ನು ದುರಸ್ತಿ ಮಾಡಿಸಲಿ.ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಭರವಸೆ ನೀಡಿದ್ದರು. ಆದರೆ, ಅವರು ಮಾಡಿಸಲಿಲ್ಲ.ಆ ಕಾರಣಕ್ಕೆ ಮಂಡ್ಯ ಜಿಲ್ಲೆಗೆ ಬರಲು ಪ್ರತಾಪ್ ಸಿಂಹ ಹೆದರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಮಾವೇಶ ಆರಂಭಕ್ಕೂ ಮುನ್ನ ಡೊಳ್ಳು,ನಗಾರಿ ಸೇರಿದಂತೆ ವಿವಿಧ ಕಲಾಮೇಳಗಳೊಂದಿಗೆ ಎತ್ತಿನಗಾಡಿಯಲ್ಲಿ ಮೆರವಣಿಗೆ ಮೂಲಕ ಸಾವಿರಾರು ಕಾರ್ಯಕರ್ತರು ವೇದಿಕೆಗೆ ಕರೆತಂದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಸಿ.ಅಶೋಕ, ಎಸ್ಟಿಜಿ ಶಿಕ್ಷಣ ಸಂಸ್ಥೆಯ ಸಿಇಓ ಸಿ.ಪಿ.ಶಿವರಾಜು, ಪುರಸಭೆ ಅಧ್ಯಕ್ಷೆ ವಿ.ಕೆ.ಅರ್ಚನಾ ಚಂದ್ರು, ಉಪಾಧ್ಯಕ್ಷೆ ಶ್ವೇತಾ ಉಮೇಶ್, ದೊಡ್ಡಬ್ಯಾಡರಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಮಹದೇವಮ್ಮ, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಜೆಡಿಎಸ್ ಮುಖಂಡರಾದ ಎಸ್.ಎ.ಮಲ್ಲೇಶ್, ಚಿಕ್ಕಾಡ ಚೇತನ್, ಬೊಮ್ಮರಾಜು ಇದ್ದರು.




