Saturday, May 18, 2024

ಪ್ರಾಯೋಗಿಕ ಆವೃತ್ತಿ

ಮಾಧ್ಯಮಗಳು ಆಳುವ ಸರ್ಕಾರದ ಕಾವಲುನಾಯಿಗಳಾಗಬೇಕೇ ಹೊರತು ಸಾಕು ನಾಯಿಗಳಾಗಬಾರದು : ಡಾ. ಹೆಚ್.ವಿ. ವಾಸು

ಪ್ರಸ್ತುತ ಸಂದರ್ಭದಲ್ಲಿ ಕೇವಲ ರಾಜಕಾರಣಿಗಳು ಕೆಟ್ಟಿದ್ದಾರೆ ಎಂಬುದು ವಾಸ್ತವವಲ್ಲ, ಪತ್ರಿಕೆಗಳು, ಮಾಧ್ಯಮಗಳು ಅದಕ್ಕಿಂತ ಹೆಚ್ಚಾಗಿ ಕೆಟ್ಟಿವೆ. ಶಿಕ್ಷಕರು ಕೆಟ್ಟಿದ್ದಾರೆ, ಹೋರಾಟಗಾರರು ಕೆಟ್ಟಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಈ ದಿನ.ಕಾಂ ನ ಮುಖ್ಯಸ್ಥ ಡಾ. ಹೆಚ್.ವಿ. ವಾಸು ಅವರು, ಮಾಧ್ಯಮಗಳು ಆಳುವ ಸರ್ಕಾರದ ಕಾವಲುನಾಯಿಗಳಾಗಬೇಕೇ ಹೊರತು ಸಾಕು ನಾಯಿಗಳಾಗಬಾರದು ಎಂದು ಕಿವಿಮಾತು ಹೇಳಿದರು.

ಮಂಡ್ಯನಗರದ ಅಶೋಕನಗರ 4ನೇ ತಿರುವಿನಲ್ಲಿ ಗುರುವಾರ ‘ನುಡಿ ಕರ್ನಾಟಕ.ಕಾಂ’ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಈ ಹಿಂದೆ ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಆ ಸಂದರ್ಭಗಳಲ್ಲಿ ಪತ್ರಿಕೆಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಇಲ್ಲದ ತಂತ್ರಗಳನ್ನು ಮಾಡಿದರು. ಆದರೆ ಕೆಲವು ಪ್ರಾಮಾಣಿಕ ಪತ್ರಕರ್ತರು ಅದಕ್ಕೆ ಮಣಿಯಲಿಲ್ಲ. ಆದರೆ ಕೆಲವು ಪತ್ರಕರ್ತರು ಇಂದಿರಾಗಾಂಧಿಯವರ ಭಜನ ಮಂಡಳಿಯ ಸದಸ್ಯರಂತೆ ಕೆಲಸ ನಿರ್ವಹಿಸಿದರು. ಹೀಗೆ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುವವರು ಪತ್ರಿಕಾ ಕ್ಷೇತ್ರಕ್ಕೆ ಬರಬಾರದು ಎಂಬುದು ಪ್ರೊ.ಹೆಚ್.ಎಲ್.ಕೇಶವಮೂರ್ತಿ ಅವರ ನಿಲುವುವಾಗಿತ್ತು. ಅದು ನನ್ನ ನಿಲುವು ಕೂಡ ಆಗಿದೆ ಎಂದು ಸ್ಪಷ್ಟಪಡಿಸಿದರು.

ಮಾಧ್ಯಮಗಳು ಒಂದು ಪಕ್ಷ, ಸಿದ್ದಾಂತಕ್ಕೆ ಮಾರಿಕೊಂಡಿವೆ

ಪ್ರಸ್ತುತ ಸಂದರ್ಭದಲ್ಲಿ ಕೆಲವು ಪತ್ರಿಕೆಗಳು ಮತ್ತು ಮಾಧ್ಯಮಗಳು ಒಂದು ಪಕ್ಷ ಹಾಗೂ ಸಿದ್ದಾಂತಕ್ಕೆ ತಮ್ಮನ್ನು ತಾವು ಮಾರಿಕೊಂಡಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಹೀಗೆ ಮಾರಾಟವಾದರಿಂದ ಸತ್ಯ ತಿಳಿಸಲು ಸಾಧ್ಯವಿಲ್ಲ. ಇಂತಹವರು ಯಾರೋ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದನ್ನು 3 ದಿನಗಳ ಕಾಲ ಪ್ರಸಾರ ಮಾಡುತ್ತಾರೆ. ಮತ್ಯಾರೋ ಡ್ರಗ್ಸ್ ತೆಗೆದುಕೊಂಡಿದ್ದನ್ನು 9 ದಿನಗಳ ತೋರಿಸುತ್ತಾರೆ. ಕೊರೋನಾದ ಹೆಸರಿನಲ್ಲಿ ಜನರನ್ನು ಭಯಪಡಿಸಿ ಕಿರುಕುಳ ನೀಡುತ್ತಾರೆ, ಇಂತಹವರನ್ನು ಪತ್ರಕರ್ತರೆನ್ನಲು ಹೇಗೆ ಸಾಧ್ಯ ? ಎಂದು ಪ್ರಶ್ನಿಸಿದರು.

ರಾಜಕಾರಣಿಗಳು ಜೊತೆ ಮಾಧ್ಯಮದವರ ಸಂಬಂಧವಿರಬೇಕು ನಿಜ, ಅವರು ಆಳುವವರು, ಅವರನ್ನು ಬಿಟ್ಟು ಏನು ಮಾಡಲು ಸಾಧ್ಯವಿಲ್ಲ ಎಂಬುದು ನಿಜ. ಅಂದ ಮಾತ್ರಕ್ಕೆ ಮಾಧ್ಯಮದವರು ರಾಜಕಾರಣಿಗಳಿಗೆ ಅಡಿಯಾಳಾಗಿ ಮಂಡಿಯೂರುವ ಅಗತ್ಯವಿಲ್ಲ, ಅಲ್ಲದೇ ತಮಗೆ ವ್ಯಕ್ತಿಗತವಾಗಿ ಆಗದ ರಾಜಕಾರಣಗಳನ್ನು ಏಕವಚನದಲ್ಲಿ ಟೀಕಿಸುವುದು, ನಿಂದಿಸುವುದು ಕೂಡ ಪತ್ರಿಕೋದ್ಯಮ ಎನಿಸಿಕೊಳ್ಳುವುದಿಲ್ಲ ಎಂದು ನುಡಿದರು.

ಈ ಹಿಂದೆ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವರ್ಷಗಟ್ಟಲೇ ಹೋರಾಟ ನಡೆಸಿದ 50 ಸಾವಿರ ರೈತರ ಮೇಲೆ ಲಾಠಿ ಚಾರ್ಜ್ ಮಾಡಿ ಒಕ್ಕಲೆಬ್ಬಿಸುವಂತೆ ಕೆಲವು ದೃಶ್ಯ ಮಾಧ್ಯಮಗಳ ಪತ್ರಕರ್ತರು ಸರ್ಕಾರಕ್ಕೆ ಸಲಹೆ ಮಾಡಿದರು ಇಂತಹವರು ನಿಜಕ್ಕೂ ಪತ್ರಕರ್ತರಲ್ಲ, ಆಳುವ ಸರ್ಕಾರದ ಸುಫಾರಿ ಕಿಲ್ಲರ್ ಗಳು ಎಂದು ಆಕ್ರೋಶ ಹೊರ ಹಾಕಿದರು.

ಡಿಜಿಟಲ್ ಮಾಧ್ಯಮ ಹೆಚ್ಚು ಜನರನ್ನು ತಲುಪುತ್ತದೆ 

ಇಂದಿನ ಡಿಜಿಟಲ್ ಯುಗದಲ್ಲಿ ಡಿಜಿಟಲ್ ಮಾಧ್ಯಮಗಳಿಗೆ ಏಕಕಾಲದಲ್ಲಿ ಅತೀ ಹೆಚ್ಚು ವೇಗವಾಗಿ ಹೆಚ್ಚು ಜನರನ್ನು ತಲುಪುವ ಅವಕಾಶಗಳಿವೆ. ಡಿಜಿಟಲ್ ಮಾಧ್ಯಮಗಳು ಬಂದ ನಂತರ ಟಿವಿಗಳನ್ನು ನ್ಯೂಸ್ ನೋಡುವವರ ಪ್ರಮಾಣ ಶೇ.75ರಷ್ಟು ಕಡಿಮೆಯಾಗಿದೆ. ಇಂದು ಡಿಜಿಟಲ್ ಮಾಧ್ಯಮಗಳೇ ಬಹುತೇಕ ಹಗರಣಗಳನ್ನು ಬಯಲು ಮಾಡಿದೆ. ಪೆಗಾಸಸ್ ಹಗರಣ, ಅಮಿತ್ ಶಾ ಮಗನ ಹಗರಣ ಇವುಗಳನ್ನು ಹೊರ ಜಗತ್ತಿಗೆ ಎತ್ತಿ ತೋರಿಸಿದ್ದು ಇಂತಹ ಮಾಧ್ಯಮಗಳೇ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಹೆಚ್ಚು ನ್ಯಾಯ, ನಿಷ್ಠುರವಾಗಿ ಕಾರ್ಯ ನಿರ್ವಹಿಸಬೇಕಾಗದ ಅಗತ್ಯವಿದೆ ಎಂದು ಒತ್ತಿ ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!