Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಸಮಾನತೆ ವಿರುದ್ಧ ಹೋರಾಡಿದ ಮಹಾನ್ ಮಾನವತಾವಾದಿ ಬಸವಣ್ಣ : ಹೆಚ್.ಡಿ.ಕೆ

ವಿಶ್ವಗುರು ಬಸವಣ್ಣನವರು ಹನ್ನೆರಡನೇ ಶತಮಾನದಲ್ಲೇ ಅಸಮಾನತೆಯ ವಿರುದ್ಧ ಹೋರಾಡಿದ ಮಹಾನ್ ಮಾನವತಾವಾದಿ. ಅವರ ಆದರ್ಶಗಳು ಎಂದೆಂದಿಗೂ ಅನುಕರಣೀಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನುಡಿದರು.

ಮೇಲುಕೋಟೆ ವಿಧಾನಸಭಾ ವ್ಯಾಪ್ತಿಯ ಮಾಚಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ನಿರ್ಮಿಸಿರುವ ಅಶ್ವರೂಢ ಬಸವಣ್ಣನವರ ಪುತ್ಥಳಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ಅಸಮಾನತೆ ತಾಂಡವವಾಡುತ್ತಿದ್ದು ಬಸವೇಶ್ವರರು 900 ವರ್ಷಗಳ ಹಿಂದೆಯೇ ಸಮಾನತಾ ಸಮಾಜ ನಿರ್ಮಾಣಕ್ಕೆ ಕೈಗೊಂಡಿರುವ ಕ್ರಾಂತಿಕಾರಕ ಹಾದಿಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಬೇಕಾದ ಅನಿವಾರ‍್ಯತೆ ಎದುರಾಗಿದೆ ಎಂದರು.

ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ವಿಶ್ವಗುರು ಬಸವಣ್ಣನವರ ಆದರ್ಶ ಹಾಗೂ ತ್ರಿವಿಧ ದಾಸೋಹಮೂರ್ತಿ ಪರಮಪೂಜ್ಯ ಸಿದ್ದಗಂಗಾಶ್ರೀಗಳ ಆದರ್ಶ ಸರ್ವರಿಗೂ ಅನುಕರಣೀವಾಗಿದೆ. ಅಂತಹ ಮಹಾನ್ ಪುರುಷರ ಪುತ್ಥಳಿಯನ್ನು ಸ್ಥಾಪನೆ ಮಾಡಿರುವ ಮಾಚಹಳ್ಳಿ ಗ್ರಾಮಸ್ಥರ ಧಾರ್ಮಿಕ ಶ್ರದ್ಧೆ ಹಾಗೂ ಐಕ್ಯತೆಯನ್ನು ಕಂಡು ನನಗೆ ಅಪಾರ ಸಂತೋಷವಾಗಿದೆ ಎಂದರು.

ಲೋಕಾರ್ಪಣೆ ಕಾರ್ಯಕ್ರಮದ ವೇದಿಕೆಗೆ ಎಚ್‌ಡಿಕೆ ಹಾಗೂ ಶಾಸಕ ಸಿ.ಎಸ್.ಪುಟ್ಟರಾಜು ಆಗಮಿಸುತ್ತಿದ್ದಂತೆಯೇ ಜಯಘೋಷ ಮೊಳಗಿಸಿ ಪುಷ್ಪವೃಷ್ಟಿ ಮಾಡಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕ ಸಿ.ಎಸ್.ಪುಟ್ಟರಾಜು ಅವರನ್ನು ಆತ್ಮೀಯವಾಗಿ ಅಭಿನಂದಿಸಿದರು.

ವೇದಿಕೆಯಲ್ಲಿ ಬೇಬಿಬೆಟ್ಟದ ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ, ಅವ್ವೇರಹಳ್ಳಿ ಪಟ್ಟದ ಹೊಸಮಠದ ಸಿದ್ದಲಿಂಗಶಿವಾಚಾರ್ಯಸ್ವಾಮೀಜಿ, ಮನ್ಮುಲ್ ಅಧ್ಯಕ್ಷ ರಾಮಚಂದ್ರು ಸೇರಿದಂತೆ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!